AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆ: ದಿಢೀರ್ ಕುಸಿದ ಈರುಳ್ಳಿ ಬೆಲೆ, ರೈತರು ಕಂಗಾಲು

ಈರುಳ್ಳಿ ಬೆಲೆ ಕುಸಿತ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಸಾರಿಗೆ ವೆಚ್ಚ ಸಹ ಸಿಗದ ಸ್ಥಿತಿ ಇರುವುದರಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸುವುದೇ ವ್ಯರ್ಥ. ಹೀಗಾಗಿ ಹೊಲದಲ್ಲಿಯೇ ಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.

ದಾವಣಗೆರೆ: ದಿಢೀರ್ ಕುಸಿದ ಈರುಳ್ಳಿ ಬೆಲೆ, ರೈತರು ಕಂಗಾಲು
ಸಾಂದರ್ಭಿಕ ಚಿತ್ರ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma|

Updated on: Jan 26, 2024 | 12:39 PM

Share

ದಾವಣಗೆರೆ, ಜನವರಿ 26: ಕೆಲವು ತಿಂಗಳ ಹಿಂದೆ ಬೆಲೆ ಏರಿಕೆ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿದ್ದ ಈರುಳ್ಳಿ (Onion Price) ಇದೀಗ ಬೆಲೆ ಕುಸಿತದ ಮೂಲಕ ರೈತರು ಕಣ್ಣೀರು ಹಾಕುವಂತೆ ಮಾಡಿದೆ. ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದು, ಸಣ್ಣ ಗಾತ್ರದ ಈರುಳ್ಳಿಗೆ ಕೆಜಿಗೆ ಒಂದು ರೂಪಾಯಿಗೆ ಇಳಿಕೆಯಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾವಣಗೆರೆ ಎಪಿಎಂಸಿಯಲ್ಲಿ (Davanagere APMC) 31 ಲಾರಿ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಸುಮಾರು 6200 ಚೀಲ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಗರಿಷ್ಠ ದರ 1400 ರೂಪಾಯಿ ಇದೆ.

ಅತ್ಯುತ್ತಮ ದಪ್ಪ ಈರುಳ್ಳಿಗೆ 1200 – 1300 ರೂಪಾಯಿ ಇದೆ. ಉತ್ತಮ ದಪ್ಪ ಈರುಳ್ಳಿಗೆ 1000 – 1100 ರೂ. ಇದೆ. ಮಧ್ಯಮ ಗಾತ್ರದ ಈರುಳ್ಳಿಗೆ 600 – 800 ರೂ, ಸಣ್ಣ ಗಾತ್ರದ ಈರುಳ್ಳಿಗೆ 100 ರಿಂದ 300 ರೂ. ದರ ಇದೆ.

ಬೆಲೆ ಕುಸಿತದಿಂದಾಗಿ ಬೇಸತ್ತ ರೈತರು ಜಮೀನಿನಲ್ಲಿಯೇ ಈರುಳ್ಳಿ ಬಿಡಲು ನಿರ್ಧಿಸಿದ್ದಾರೆ. ಸಾರಿಗೆ ವೆಚ್ಚ ಸಹ ಸಿಗದ ಸ್ಥಿತಿ ಇರುವುದರಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸುವುದೇ ವ್ಯರ್ಥ. ಹೀಗಾಗಿ ಹೊಲದಲ್ಲಿಯೇ ಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.

ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ಬೆಲೆ, ರೈತರಿಗೆ ದೊರೆಯುತ್ತಿಲ್ಲ ಪ್ರಯೋಜನ: ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ

ಕಳೆದ ಅಕ್ಟೋಬರ್​ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ಸುಮಾರು 80 ರೂಪಾಯಿ ತಲುಪಿತ್ತು. ಪರಿಣಾಮವಾಗಿ ಗ್ರಾಹಕರು ಕಣ್ಣೀರುಹಾಕುವಂತಾಗಿತ್ತು. ನಂತರ ಸರ್ಕಾರ ಕೂಡ ಈರುಳ್ಳಿ ಬೆಲೆ ಇಳಿಕೆಗೆ ಮಧ್ಯ ಪ್ರವೇಶ ಮಾಡಿ ಹಲವು ಕ್ರಮ ಕೈಗೊಂಡಿತ್ತು. ಈರುಳ್ಳಿ ಬೆಲೆ ಹೆಚ್ಚಳವಾದ ಕಾರಣ ಕೇಂದ್ರ ಸರ್ಕಾರ ಕೂಡ ಎರಡು ಎನ್​ಸಿಸಿಎಫ್ ಹಾಗೂ ಎನ್​ಎಎಎಫ್​ಡಿ ಜೊತೆ ಸೇರಿ ಜನರಿಗೆ ಅನಕೂಲ ಆಗಲಿ ಎನ್ನುವ ಕಾರಣಕ್ಕೆ ಈರುಳ್ಳಿಯನ್ನು ಸಬ್ಸಿಡಿ ಮೂಲಕ ವಿತರಣೆ ಮಾಡಿತ್ತು. ಇದೀಗ ಈರುಳ್ಳಿ ಬೆಲೆ ತೀವ್ರ ಕುಸಿತದಿಂದ ರೈತರು ಕಂಗಾಲಾಗಿದ್ದು, ಬೆಳೆಗಾರರ ರಕ್ಷಣೆಗೆ ಸರ್ಕಾರ ಧಾವಿಸಬೇಕಿದೆ.

ಇದಕ್ಕೂ ಮುನ್ನ ಟೊಮೆಟೊ ಬೆಲೆಯಲ್ಲಿ ವಿಪರೀತ ಏರಿಕೆಯಾಗಿ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ