ಗಗನಕ್ಕೇರಿದ ಈರುಳ್ಳಿ ಬೆಲೆ, ರೈತರಿಗೆ ದೊರೆಯುತ್ತಿಲ್ಲ ಪ್ರಯೋಜನ: ಮಧ್ಯವರ್ತಿಗಳು, ವ್ಯಾಪಾರಿಗಳಿಗಷ್ಟೇ ಲಾಭ
ನಮ್ಮಿಂದ ಕೆಜಿಗೆ 40 ರೂ.ಗೆ ಈರುಳ್ಳಿ ಖರೀದಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ ನಾವು ಮಾಡಿದ ಸಾಲ ತೀರಿಸುವಷ್ಟು ಆದಾಯ ಬರುತ್ತಿಲ್ಲ ಎಂದು ಬೆಂಗಳೂರಿನ ಯಶವಂತಪುರ ಎಎಂಪಿಸಿ ಮಾರುಕಟ್ಟೆಯಲ್ಲಿ ರೈತರೊಬ್ಬರು ತಿಳಿಸಿದರು.
ಬೆಂಗಳೂರು, ಅಕ್ಟೋಬರ್ 31: ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ (Onion Prices Hike) ಉತ್ತಮ ಆದಾಯ ಬರುತ್ತಿಲ್ಲ ಎಂದು ಈರುಳ್ಳಿ ಬೆಳೆದ ರೈತರು ಆರೋಪಿಸಿದ್ದಾರೆ. ಬೆಂಗಳೂರಿನ (Bengaluru) ಯಶವಂತಪುರ ಎಪಿಎಂಸಿ ಮಾರುಕಟ್ಟೆಯಲ್ಲಿ (APMC Market) ಮಧ್ಯವರ್ತಿಗಳು ಮಾರುಕಟ್ಟೆಯ ಅರ್ಧದಷ್ಟು ಬೆಲೆಗೆ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ ಎಂದು ಮಧ್ಯವರ್ತಿಗಳು ಮತ್ತು ಮಾರಾಟಗಾರರ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ಈರುಳ್ಳಿ ಕೆಜಿಗೆ 80 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ಆದರೆ, ರೈತರಿಗೆ ಕೇವಲ ಕೆಜಿಗೆ 40ರಿಂದ 50 ರೂ. ದೊರೆಯುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಕಡಿಮೆ ದರದಿಂದಾಗಿ ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿಲ್ಲ. ಮಾರಾಟಗಾರರು ಮತ್ತು ಮಧ್ಯವರ್ತಿಗಳು ನಮ್ಮಿಂದ ಕೆಜಿಗೆ 40 ರೂ.ಗೆ ಈರುಳ್ಳಿ ಖರೀದಿಸುತ್ತಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೇರಿದ್ದರೂ ನಾವು ಮಾಡಿದ ಸಾಲ ತೀರಿಸುವಷ್ಟು ಆದಾಯ ಬರುತ್ತಿಲ್ಲ ಎಂದು ಬೆಂಗಳೂರಿನ ಯಶವಂತಪುರ ಎಎಂಪಿಸಿ ಮಾರುಕಟ್ಟೆಯಲ್ಲಿ ರೈತರೊಬ್ಬರು ತಿಳಿಸಿದರು ಎಂದು ‘ನ್ಯೂಸ್ 9’ ವರದಿ ಮಾಡಿದೆ.
ಈರುಳ್ಳಿ ಪೂರೈಕೆಯ ಕಡಿಮೆಯಾದ ನಂತರ ಕಳೆದ ಒಂದು ವಾರದಲ್ಲಿ ಈರುಳ್ಳಿ ಬೆಲೆ ದ್ವಿಗುಣಗೊಂಡಿದೆ. ವರದಿಗಳ ಪ್ರಕಾರ, ಚಿಕ್ಕೋಡಿ ಮತ್ತು ಬಾಗಲಕೋಟೆಯಂತಹ ಜಿಲ್ಲೆಗಳಲ್ಲಿ ಮಧ್ಯವರ್ತಿಗಳು ಈರುಳ್ಳಿ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲು ಈರುಳ್ಳಿಯನ್ನು ದಾಸ್ತಾನು ಮಾಡಿದ್ದಾರೆ. ಮಳೆಯಿಂದಾಗಿ ಬಾಗಲಕೋಟೆ, ಗದಗ, ವಿಜಯಪುರ ಭಾಗದಲ್ಲಿ ಈರುಳ್ಳಿ ಉತ್ಪಾದನೆಗೆ ಧಕ್ಕೆಯಾಗಿದೆ. ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಿಂದಾಗಿ ನಾಸಿಕ್, ಪುಣೆ ಮತ್ತು ಇತರ ರಾಜ್ಯಗಳಿಂದ ಈರುಳ್ಳಿ ಸರಬರಾಜಿನ ಮೇಲೆ ಪರಿಣಾಮ ಬೀರಿದೆ.
ಇದನ್ನೂ ಓದಿ: Onion Price: ಬೆಂಗಳೂರಿನಲ್ಲಿ ಒಂದೇ ವಾರದಲ್ಲಿ 2 ಪಟ್ಟು ಹೆಚ್ಚಾದ ಈರುಳ್ಳಿ ಬೆಲೆ; ಮುಂದಿದೆ ಇನ್ನಷ್ಟು ಏರಿಕೆ ಅಪಾಯ
ಗ್ರಾಹಕರ ವ್ಯವಹಾರಗಳ ಇಲಾಖೆಯು ದೇಶದಿಂದ ಈರುಳ್ಳಿ ರಫ್ತು ಕಡಿಮೆ ಮಾಡಲು ಮತ್ತು ದೇಶದ ಮಾರುಕಟ್ಟೆಗಳಲ್ಲಿ ಬೆಲೆ ನಿಯಂತ್ರಿಸುವುದಕ್ಕಾಗಿ ಅಕ್ಟೋಬರ್ 29 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಟನ್ ಈರುಳ್ಳಿಗೆ 800 ಡಾಲರ್ ಕನಿಷ್ಠ ರಫ್ತು ಬೆಲೆಯನ್ನು (MEP) ವಿಧಿಸಿದೆ. ದೆಹಲಿ, ಮುಂಬೈ ಮತ್ತು ದೇಶದ ಇತರ ಭಾಗಗಳಲ್ಲಿ ಈರುಳ್ಳಿ ಬೆಲೆ ಹಠಾತ್ ಏರಿಕೆಯಾದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈರುಳ್ಳಿ ರಫ್ತಿನ ಮೇಲೆ ಎಂಇಪಿ ಹೇರಿದ ನಂತರ ಈರುಳ್ಳಿ ಬೆಲೆ ಶೇ 5ರಿಂದ 9ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ