ಬಿಜೆಪಿಯಿಂದಲೇ ಸ್ಪರ್ಧೆಗೆ ತೀರ್ಮಾನ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್‌ ನೀಡಿದ್ರೆ ರಾಜಕೀಯವೇ ಬೇಡವೆಂದ ಸುಮಲತಾ

ಮುಂದಿನ ಲೋಕಸಭೆ ಚುನಾವಣೆಗೆ ಎರಡೂ ಪಕ್ಷಗಳು ಕರ್ನಾಟಕದಲ್ಲಿ ಜಂಟಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದು, ಜೆಡಿಎಸ್ ಮಂಡ್ಯ ಸೇರಿದಂತೆ ಇನ್ನೂ ಮೂರ್ನಾಲ್ಕು ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಮೂಲಗಳ ಪ್ರಕಾರ ಮಂಡ್ಯವನ್ನು ಜೆಡಿಎಸ್​ಗೆ ಬಿಟ್ಟು ಕೊಡಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಬಿಜೆಪಿ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇಂದು ಜಿಲ್ಲೆಯ ಬಿಜೆಪಿ ನಾಯಕರು ಸುಮಲತಾ ಅಂಬರೀಶ್ ಜೊತೆ ಮಹತ್ವದ ಚರ್ಚೆ ನಡೆಸಿದ್ದಾರೆ.

ಬಿಜೆಪಿಯಿಂದಲೇ ಸ್ಪರ್ಧೆಗೆ ತೀರ್ಮಾನ, ಮಂಡ್ಯ ಬಿಟ್ಟು ಬೇರೆ ಕಡೆ ಟಿಕೆಟ್‌ ನೀಡಿದ್ರೆ ರಾಜಕೀಯವೇ ಬೇಡವೆಂದ ಸುಮಲತಾ
ಸಂಸದೆ ಸುಮಲತಾ ಅಂಬರೀಶ್​
Follow us
| Updated By: ರಮೇಶ್ ಬಿ. ಜವಳಗೇರಾ

Updated on:Jan 25, 2024 | 6:27 PM

ಬೆಂಗಳೂರು, (ಜನವರಿ 25):  ಮಂಡ್ಯ ಲೋಕಸಭಾ (Mandya Loksabha) ಕ್ಷೇತ್ರ ಸಂಬಂಧ ಇಂದು (ಜನವರಿ 25) ಜಿಲ್ಲೆಯ ಬಿಜೆಪಿ ನಾಯಕರು ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದು, ಈ ವೇಳೆ ಬಿಜೆಪಿಯಿಂದ (BJP) ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ತೀರ್ಮಾನ ತೆಗೆದುಕೊಂಡಿದ್ದಾರೆ. ಅಲ್ಲದೇ ಮಂಡ್ಯ ಬಿಟ್ಟು ನನಗೆ ಬೇರೆ ಕಡೆ ಟಿಕೆಟ್‌ ನೀಡಿದ್ರೆ ರಾಜಕೀಯವೇ ಬೇಡ ಎಂದಿದ್ದಾರೆ. ಈ ಮೂಲಕ ಮಂಡ್ಯ ಬಿಜೆಪಿ ಟಿಕೆಟ್ ಬೇಕೆಂದು ಸಂದೇಶ ರವಾನಿಸಿದ್ದಾರೆ.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುಮಲತಾ ಅಂಬರೀಶ್, ಎಲ್ಲೂ ನನ್ನ ಬಗ್ಗೆ ಕಳಂಕ ಕಪ್ಪು ಚುಕ್ಕೆ ಇಲ್ಲ. ಪಾರ್ಲಿಮೆಂಟ್ ನಲ್ಲಿ ಮಾತಾಡಿರುವುದು ಎಲ್ಲರಿಗೂ ಗೊತ್ತಿದೆ. ಬಿಜೆಪಿನೇ ಮಂಡ್ಯ ಸೀಟು ಉಳಿಸಿಕೊಳ್ಳುತ್ತೆ ಅನ್ಸುತ್ತೆ ಎಂದು ಹೇಳಿದರು. ಇದರೊಂದಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ.

ನಾನು ಕಾಂಗ್ರೆಸ್ ನಿಂದ ಸ್ಪರ್ಧಿಸಲು ಪ್ರಯತ್ನ ಪಟ್ಟಿಲ್ಲ. ನನ್ನ ಬೆಂಬಲಿಗರಲ್ಲಿ ಸುಮಾರು ಜನ ಕಾಂಗ್ರೆಸ್ ಕಾರ್ಯಕರ್ತರು ಇದ್ದಾರೆ. ಅವರು ಕಾಂಗ್ರೆಸ್ ಗೆ ಬನ್ನಿ ಎಂದು ಹೇಳುತ್ತಿದ್ದಾರೆ. ಆದ್ರೆ, ನಾನು ಒಂದು ಕಮಿಟ್ ಮೆಂಟ್ ಇದೆ. ಮೋದಿ ನೇತೃತ್ವ ಕರೆಕ್ಟ್ ಅನ್ನಿಸುತ್ತಿದೆ ಎಂದು ಬಿಜೆಪಿಯಿಂದ ಸ್ಪರ್ಧೆ ಬಗ್ಗೆ ಖಚಿತ ಪಡಿಸಿದರು.

ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡಲ್ಲ

ಇದೇ ವೇಳೆ ಕುಮಾರಸ್ವಾಮಿ ಮೃದತ್ವದ ಹೇಳಿಕೆಗೆ ಸುಮಲತಾ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಅವರು ಬಂದು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅವರು ಭೇಟಿ ಮಾಡಿದ್ರೆ ನಾನು ಮಾತಾಡುತ್ತೇನೆ. ನಾನು ಮಂಡ್ಯ ವಿಚಾರದಲ್ಲಿ ಮಾತ್ರ ಮಾತಾಡುತ್ತೇನೆ. ನಾನು ರಾಜಕೀಯಕ್ಕೆ ಬಂದಿರುವುದು ಅಂಬರೀಶ್ ಅವರ ಹೆಸರಿಗೆ. ನಾನು ಸ್ವತಂತ್ರವಾಗಿ ನಿಂತು ಗೆದ್ದು ಬಂದಿರುವುದು. ಅಂತ ಅಭಿಮಾನ ಬಿಟ್ಟು ಬೇರೆ ಕಡೆ ಹೋಗುವುದಿಲ್ಲ. ಬೇರೆ ಕಡೆ ಆದ್ರೆ ರಾಜಕೀಯವೇ ಬೇಡ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಮಂಡ್ಯ ಬಿಟ್ಟು ಬೇರೆ ಕಡೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಬಿಜೆಪಿ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು. ನಾವೇನು ಮಾಡಬೇಕು ಅನ್ನೋದರ ಚರ್ಚೆ ಮಾಡಿದ್ದೇವೆ. ಎಲ್ಲಾ ಕಡೆ ಮೊದಲಿಗೆ ಹಾಲಿ ಸಂಸದರಿಗೆ ಆದ್ಯತೆ ಇರುತ್ತೆ. ಮೊದಲಿಂದ‌ ಇದೆ. ಅದೇ ತರ ನಮ್ಮ ಜಿಲ್ಲೆಯ ಕಾರ್ಯಕರ್ತರು ಇಷ್ಟ ಪಡೋದು ಅದನ್ನೇ. ಮಂಡ್ಯದಲ್ಲಿ ಬಿಜೆಪಿ ಓಟ್ ಶೇರ್ ಚೆನ್ನಾಗಿದೆ. ಬಿಜೆಪಿನ ಮಂಡ್ಯದಲ್ಲಿ ಉಳಿಸಬೇಕು. ಉಳಿಸಿಕೊಂಡ್ರೆ ಗೆದ್ದೆ ಗೆಲ್ಲುತ್ತೀರಿ ಎನ್ನುವ ಮಾತು ಕೊಟ್ಟಿದ್ದಾರೆ. ಅಧಿಕೃತವಾಗಿ ಮಂಡ್ಯದ ಬಿಜೆಪಿಗೆ ಅಥವಾ ಜೆಡಿಎಸ್ ಗೆ ಬಿಟ್ಟು ಕೊಡುತ್ತೇವೆ ಎಂದು ಎಲ್ಲೂ ಮಾತು ಬಂದಿಲ್ಲ ಎಂದು ಹೇಳಿದರು.

ಒಂದು ವೇಳೆ ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್​ಗೆ ಬಿಟ್ಟು ಕೊಟ್ಟರೆ ಮುಂದಿನ ನಡೆ ಏನು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಗೇನಾದರೂ ಆದರೆ ಆಗ ನೋಡೋಣ. ನನ್ನ ಕ್ಷೇತ್ರ ಮಂಡ್ಯ ಅಷ್ಟೇ ಎಂದು ಕಡ್ಡಿ ಮುರಿದಂತೆ ಹೇಳಿದರು.

ಸುಮಲತಾ ಅಂಬರೀಶ್ ಅವರ ಈ ಹೇಳಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಂದು ವೇಳೆ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ ಸುಮಲತಾ ಅಂಬರೀಶ್ ಮತ್ತೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಿಲ್ಲ.

Published On - 6:19 pm, Thu, 25 January 24