ಡಿಸಿಎಂ ಡಿಕೆ ಶಿವಕುಮಾರ್​ ಬಳಿ ಇದೆ 42 ಜನರ ಲಿಸ್ಟ್: ಆಪರೇಷನ್ ಹಸ್ತದ ಸುಳಿವು ನೀಡಿದ ಜಗದೀಶ್ ಶೆಟ್ಟರ್

| Updated By: Ganapathi Sharma

Updated on: Oct 17, 2023 | 5:39 PM

Karnataka Politics: ನಾವು ಯಾರನ್ನೂ ಸೆಳೆಯುತ್ತಿಲ್ಲ, ತಾವಾಗಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡಿದ್ದರು. ಆದರೆ, ಇದೀಗ ಡಿಕೆ ಶಿವಕುಮಾರ್ ಬಳಿ 42 ಜನರ ಪಟ್ಟಿ ಇದೆ ಎನ್ನುವ ಮೂಲಕ ಶೆಟ್ಟರ್ ಅವರು ಬಹಿರಂಗವಾಗಿ ಆಪರೇಷನ್ ಹಸ್ತದ ಬಗ್ಗೆ ಸುಳಿವು ನೀಡಿದಂತಾಗಿದೆ.

ಡಿಸಿಎಂ ಡಿಕೆ ಶಿವಕುಮಾರ್​ ಬಳಿ ಇದೆ 42 ಜನರ ಲಿಸ್ಟ್: ಆಪರೇಷನ್ ಹಸ್ತದ ಸುಳಿವು ನೀಡಿದ ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್
Follow us on

ಬೆಂಗಳೂರು, ಅಕ್ಟೋಬರ್ 17: ಆಪರೇಷನ್ ಹಸ್ತದ ವಿಚಾರವಾಗಿ ಕಾಂಗ್ರೆಸ್ ಎಂಎಲ್​ಸಿ ಜಗದೀಶ ಶೆಟ್ಟರ್ (Jagadish Shettar) ಮತ್ತೆ ಸುಳಿವು ನೀಡಿದ್ದು, ಡಿಸಿಎಂ ಡಿಕೆ ಶಿವಕುಮಾರ್​ (DK Shivakumar) ಬಳಿ 42 ಜನರ ಲಿಸ್ಟ್ ಇದೆ ಎಂದು ಮಂಗಳವಾರ ಹೇಳಿದ್ದಾರೆ. ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್​ಗೆ (Congress) ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ಡಿಸಿಎಂಗೆ ನನ್ನನ್ನು ಭೇಟಿ ಮಾಡಿದವರ ಮಾಹಿತಿ ನೀಡಿದ್ದೇನೆ. ನನ್ನ ಕಡೆ ಬಂದವರನ್ನು ನಾಯಕರಿಗೆ ಪರಿಚಯ ಮಾಡಿಸ್ತೇನೆ ಅಷ್ಟೇ. ನನ್ನನ್ನು ಹಾಲಿ ಶಾಸಕರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.

ಆಪರೇಷನ್ ಹಸ್ತಕ್ಕೆ ಸಂಬಂಧಿಸಿ ಕಳೆದ ಕೆಲವು ದಿನಗಳಿಂದಲೂ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಮಧ್ಯೆ, ನಾವು ಯಾರನ್ನೂ ಸೆಳೆಯುತ್ತಿಲ್ಲ, ತಾವಾಗಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎಂದು ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡಿದ್ದರು. ಆದರೆ, ಇದೀಗ ಡಿಕೆ ಶಿವಕುಮಾರ್ ಬಳಿ 42 ಜನರ ಪಟ್ಟಿ ಇದೆ ಎನ್ನುವ ಮೂಲಕ ಶೆಟ್ಟರ್ ಅವರು ಬಹಿರಂಗವಾಗಿ ಆಪರೇಷನ್ ಹಸ್ತದ ಬಗ್ಗೆ ಸುಳಿವು ನೀಡಿದಂತಾಗಿದೆ.

ಬಿಜೆಪಿ ವಿರುದ್ಧ ಶೆಟ್ಟರ್ ವಾಗ್ದಾಳಿ

ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿ ಇರುವವರು ಸತ್ಯಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹತ್ತಾರು ಹಗರಣಗಳ ಬಗ್ಗೆ ಕೇಳಿ ಬಂತು. ಇವರ ಹೇಳಿಕೆಯಿಂದ ಇಡೀ ರಾಜಕೀಯ ಅಸಹ್ಯ ಪಡುವಂತೆ ಆಗುತ್ತಿದೆ. ತಾವು ಸತ್ಯಹರಿಶ್ಚಂದ್ರರು ಎಂದು ಬಿಜೆಪಿಯವರು ಹೇಳಲಿ ನೋಡೋಣ ಎಂದು ಶೆಟ್ಟರ್ ಸವಾಲು ಹಾಕಿದ್ದಾರೆ.

ಬಿಜೆಪಿಗೆ ಈವರೆಗೆ ಒಬ್ಬ ವಿರೋಧ ಪಕ್ಷದ ನಾಯಕನನ್ನೇ ಆಯ್ಕೆ ಮಾಡಲು ಆಗಿಲ್ಲ. ಬಿಜೆಪಿ ಕಾರ್ಯಕರ್ತರೆಲ್ಲ ನೊಂದಿದ್ದಾರೆ. ಮೊದಲು ಬಿಜೆಪಿ ನಾಯಕರು ತಮ್ಮ ಮನೆಯನ್ನು ಸರಿ ಮಾಡಿಕೊಳ್ಳಲಿ ಎಂದು ಶೆಟ್ಟರ್ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ರಮೇಶ್ ಜಾರಕಿಹೊಳಿ ಆಯ್ತು ಈಗ ಸತೀಶ್ ಜಾರಕಿಹೊಳಿ ಸರದಿ: ಅನಿಲ್ ಬೆನಕೆ ಹೊಸ ಬಾಂಬ್

ರಮೇಶ್ ಜಾರಕಿಹೊಳಿ ಭೇಟಿಯಾಗಿಲ್ಲ: ಶೆಟ್ಟರ್ ಸ್ಪಷ್ಟನೆ

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಂಗಳವಾರ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಶೆಟ್ಟರ್, ರಮೇಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ ಎಂದು ಯಾರು ಹೇಳಿದ್ದು ಎಂಬುದಾಗಿ ಮರುಪ್ರಶ್ನೆ ಹಾಕಿದರು. ಈ ಹಿಂದೆ ಹಲವು ಭೇಟಿಯಾಗಿದ್ದಾರೆ, ಆದರೆ, ಇವತ್ತು ಭೇಟಿಯಾಗಿಲ್ಲ. ರಮೇಶ್ ಜಾರಕಿಹೊಳಿ ಜತೆ ಯಾವತ್ತೂ ರಾಜಕೀಯ ಚರ್ಚೆ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ