ಬೆಂಗಳೂರು, ಜ.20: ಕರ್ನಾಟಕ ಲೋಕಸೇವಾ ಆಯೋಗದ (KPSC) ಸದಸ್ಯ ಸ್ಥಾನಕ್ಕೆ ಶಿರಗಾನಹಳ್ಳಿ ಶಾಂತನಾಯಕ್ ಎನ್ ಅವರ ನೇಮಕಾತಿಯನ್ನು ರಾಜ್ಯ ಸರ್ಕಾರ ತಡೆ ನೀಡಿದೆ. ಇದಕ್ಕೆ ಕಾರಣ, ಮಾಜಿ ಶಾಸಕರಾದ ಭೀಮಾನಾಯ್ಕ್ (Bhimanaik) ಮತ್ತು ಪಿ.ಟಿ.ಪರಮೇಶ್ವರ್ ನಾಯ್ಕ್ (PT Parameshwar Naik) ನಡುವಿನ ಜಟಾಪಟಿ. ಶಾಂತನಾಯ್ಕ್ ಅವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸುವಂತೆ ಪರಮೇಶ್ವರ್ ಮನವಿ ಮಾಡಿದರೆ, ಇತ್ತ, ಶಾಂತನಾಯ್ಕ್ ನೇಮಕ ಮಾಡದಂತೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೋಟ್ರೇಶ್ ಮೂಲಕ ಭಿಮಾನಾಯ್ಕ್ ದೂರು ನೀಡಿದ್ದಾರೆ.
ಶಿರಗಾನಹಳ್ಳಿ ಶಾಂತನಾಯ್ಕ್ ಪರ ನಿಂತಿರುವ ಮಾಜಿ ಶಾಸಕ ಪಿಟಿ ಪರಮೇಶ್ವರ್ ನಾಯ್ಕ್ ಅವರು ಶಾಂತನಾಯಕ್ ಅವರನ್ನು ಕರ್ನಾಟಕ ಲೋಕಸೇವಾ ಆಯೋಗದ ಸದ್ಯಸರನ್ನಾಗಿ ನೇಮಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದ್ದರು. ಅದರಂತೆ ರಾಜ್ಯ ಸರ್ಕಾರ ಶಾಂತನಾಯ್ಕ್ ಅವರನ್ನು ಕೆಪಿಎಸ್‌ಸಿ ಸದಸ್ಯರನ್ನಾಗಿ ನೇಮಿಸಲು ಮುಂದಾಗಿತ್ತು.
ಈ ನಡುವೆ, ಹರಪನಹಳ್ಳಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎನ್.ಕೊಟ್ರೇಶ್ ಅವರು ಶಾಂತನಾಯಕ್ ನೇಮಕಾತಿ ತಡೆಯುವಂತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ದೂರು ನೀಡಿದ್ದಾರೆ. ಇದರ ಹಿಂದೆ ಮಾಜಿ ಶಾಸಕ ಭೀಮಾನಾಯ್ಕ್ ಇದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಭೀಮಾನಾಯ್ಕ್ ದೂರು ನೀಡಿದ್ದಾರೆ.
ಇದನ್ನೂ ಓದಿ: ವಲಸಿಗ ನಾಯಕರು ನೀತಿಗೆಟ್ಟವರಲ್ಲ, ಅವರಿಂದಾಗೇ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಾಗಿದ್ದು: ಕೆಎಂ ಶಿವಲಿಂಗೇಗೌಡ, ಶಾಸಕ
ಶಾಂತನಾಯಕ್ ನೇಮಕಾತಿ ತಡೆಯಬೇಕು ಎಂದು ದೂರಿನಲ್ಲಿ ಮನವಿ ಮಾಡಿದ ಭೀಮಾನಾಯ್ಕ್, ಶಾಂತನಾಯಕ್ ವಿರುದ್ಧ ವಿವಿಧ ಕ್ರಿಮಿನಲ್ ಆರೋಪಗಳಿವೆ. ಮೂಲತಃ ಬಿಜೆಪಿ ಹಾಗೂ ಸಂಘ ಪರಿವಾರದ ಹಿನ್ನೆಲೆಯಿದೆ. ಕಾಂಗ್ರೆಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋಲಲು ಪರೋಕ್ಷವಾಗಿ ಶಾಂತನಾಯಕ್ ಕಾರಣ ಎಂದು ಆರೋಪಿಸಿದ್ದಾರೆ.
ಶಾಂತನಾಯಕ್ ವಿರುದ್ಧ ಆರೋಪಿಸಿ ಸರ್ಕಾರದ ಕಾರ್ಯದರ್ಶಿ ಅಜಯ್ ನಾಗಭೂಷಣ್ ಅವರಿಗೆ ದೂರು ಸಲ್ಲಿಸಿದ್ದಾರೆ. ಭೀಮಾನಾಯ್ಕ್ ಮತ್ತು ಪರಮೇಶ್ವರ್ ನಾಯ್ಕ್ ನಡುವಿನ ಜಟಾಪಟಿಯಿಂದಾಗಿ ಕೆಪಿಎಸ್‌ಸಿ ಸದಸ್ಯರ ನೇಮಕಾತಿಯಲ್ಲಿ ಮತ್ತಷ್ಟು ಗೊಂದಲ ಉಂಟಾಗಿದ್ದು, ಇದೇ ಕಾರಣಕ್ಕೆ ಶಾಂತನಾಯಕ್ ಅವರ ನೇಮಕಾತಿಯನ್ನು ತಡೆಹಿಡಿಯಲು ಸರ್ಕಾರ ಸೂಚನೆ ನೀಡಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ