ಡಿಕೆಶಿ-ಸಿದ್ದು ಒಂದಾಗುವಂತೆ ನಾಯಕರ ತಾಕೀತು, ಒಂದಾಗಿದ್ದೇವೆಂದು ಸಂದೇಶ ನೀಡಲು ಫೋಟೋ ಬಿಡುಗಡೆ

| Updated By: Rakesh Nayak Manchi

Updated on: Jun 02, 2022 | 8:33 PM

ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಸಿದ್ದು ಮತ್ತು ಡಿಕೆಶಿ ಒಂದಾಗುವಂತೆ ನಾಯಕರು ತಾಕೀತು ಮಾಡಿದ ಪ್ರಸಂಗ ನಡೆದಿದೆ. ಅದರಂತೆ ಗೌಪ್ಯ ಸ್ಥಳದಲ್ಲಿ ಮಾತುಕತೆ ನಡೆಸಿ ನಾವಿಬ್ಬರು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲು ನಾಯಕರು ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಡಿಕೆಶಿ-ಸಿದ್ದು ಒಂದಾಗುವಂತೆ ನಾಯಕರ ತಾಕೀತು, ಒಂದಾಗಿದ್ದೇವೆಂದು ಸಂದೇಶ ನೀಡಲು ಫೋಟೋ ಬಿಡುಗಡೆ
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ಇವರೇ ಎಂಬ ಚರ್ಚೆಗಳು ನಡೆಯತ್ತಲೇ ಇದೆ. ಇದರ ಜೊತೆಗೆ ಪಕ್ಷದೊಳಗೆ ಸಿದ್ದರಾಮಯ್ಯ ಬಣ ಮತ್ತು ಡಿಕೆ ಶಿವಕುಮಾರ್ ಬಣದ ನಡುವೆ ಕೋಲ್ಡ್ ವಾರ್ ಆಗುತ್ತಲೇ ಇರುತ್ತದೆ. ಆದರೆ, ಇಂದು ನಡೆದ ನವ ಸಂಕಲ್ಪ ಶಿಬಿರದಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (D.K.Shivakumar) ಒಂದಾಗುವಂತೆ ನಾಯಕರು ತಾಕೀತು ಮಾಡಿದ ಪ್ರಸಂಗವೊಂದು ನಡೆದಿದೆ. ಪಕ್ಷದ ಬಲವರ್ಧನೆಗೆ ಇದು ಸಹಕಾರಿಯಾಗಲಿದೆ ಎಂದೂ ನಾಯಕರು ಸಲಹೆ ನೀಡಿದ್ದಾರೆ. ಇದಕ್ಕೆ ಇಬ್ಬರು ನಾಯಕರು ನಾವಿಬ್ಬರು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಲು ಫೋಟೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಆಗಸ್ಟ್ 8ರಿಂದ ರಾಜ್ಯಾದ್ಯಂತ ‘ಕೈ’ ಪಾದಯಾತ್ರೆ: ಬಿಜೆಪಿಯವರ ಬಗ್ಗೆ ಮಾತನಾಡಿ ಕಾಲಹರಣ ಮಾಡೋದು ಬೇಡ ಎಂದ ಡಿಕೆಶಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ನವ ಸಂಕಲ್ಪ ಶಿಬಿರದಲ್ಲಿ ಅಧ್ಯಕ್ಷರು ಹಾಗೂ ವಿಪಕ್ಷ ನಾಯಕರು ಒಗ್ಗಟ್ಟನ್ನು ತೋರಿಸಿದ್ದಾರೆ. ಶಿಬಿರದಲ್ಲಿ ಪಕ್ಷವನ್ನು ಬಲಪಡಿಸುವ ಹಾಗೂ ಮುಂಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಈ ನಡುವೆ ಕೆಲವು ನಾಯಕರು, ನೀವು ಒಂದಾಗುವಂತೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ನೀವಿಬ್ಬರು ಒಂದಾದರೆ ಕಾಂಗ್ರೆಸ್ ಪಕ್ಷ ಸರಿ ಹೋಗುತ್ತದೆ. ನೀವು ಒಳ ರಾಜಕೀಯ ಮಾಡಿದರೆ ಪಕ್ಷ ನಿರ್ಣಾಮ ಆಗಲಿದೆ. ಪಕ್ಷಕ್ಕಾಗಿ ನಾವು, ಕಾರ್ಯಕರ್ತರು, ನಿಷ್ಪಕ್ಷಪಾತವಾಗಿ ಪ್ರತಿಷ್ಠೆಯಿಂದ ಹೋರಾಡುತ್ತೇವೆ, ಎಲ್ಲವನ್ನೂ ಮಾಡುತ್ತೇವೆ. ಆದರೆ ನೀವು ನಿಮ್ಮ ಬೆಂಬಲಿಗರಿಗೆ ಸ್ಥಾನಮಾನ ಕೊಡುತ್ತೀರಿ. ನಾವೇಕೆ ನಿಮ್ಮ ಒಳರಾಜಕೀಯಕ್ಕೆ ಬೆಲೆ ಕೊಡಬೇಕು? ನೀವಿಬ್ಬರು ಒಂದಾಗಿ ಎಂದು ಸಭೆಯಲ್ಲಿ ನಾಯಕರ ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕುವೆಂಪು, ನಾರಾಯಣ ಗುರು ಮತ್ತು ಭಗತ್ ಸಿಂಗ್ ಅವರಿಗೆ ಮಸಿ ಬಳಿಯುವ ಕೆಲಸ ರೋಹಿತ್ ಚಕ್ರತೀರ್ಥ ಮಾಡಿದ್ದಾನೆ: ಸಿದ್ದರಾಮಯ್ಯ

ಇದಕ್ಕೆ ವೇದಿಕೆಯಲ್ಲೇ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ನಮಗೇನಾಗಿದೆ? ನಾವಿಬ್ಬರೂ ಚೆನ್ನಾಗಿದ್ದೇವೆ ಎಂದ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಪರಸ್ಪರ ಆಲಂಗಿಸಿಕೊಂಡರು. ಬಳಿಕ ಪ್ರತಿನಾಯಕರ ಒತ್ತಾಯದಿಂದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಗೌಪ್ಯ ಸ್ಥಳದಲ್ಲಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ನಾವಿಬ್ಬರು ಒಂದಾಗಿದ್ದೇವೆ ಎಂದು ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಸಂದೇಶ ರವಾನಿಸಲು ಫೋಟೋ ಬಿಡುಗಡೆ ಮಾಡಿದ್ದಾರೆ.

ದೇವನಹಳ್ಳಿ ಬಳಿಯ ಕ್ಲಾರ್ಕ್ ಏಕ್ಸೋಟಿಕ್ ರೆಸಾರ್ಟ್​ನಲ್ಲಿ ನಡೆಯುತ್ತಿರುವ ನವ ಸಂಕಲ್ಪ ಶಿಬಿರದಲ್ಲಿ ಎಐಸಿಸಿ ಸೂಚನೆಯಂತೆ 2023ರ ವಿಧಾನಸಭೆ ಚುನಾವಣೆ ಮತ್ತು 2024ರ ಲೋಕಸಭೆ ಚುನಾವಣೆಗೆ ಸಜ್ಜಾಗಲು ಆ.8ರಿಂದ ರಾಜ್ಯಾದ್ಯಂತ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಸಮಿತಿ ಸಭೆಗಳಲ್ಲಿ ನಡೆಯುವ ಹಾಗೂ ಆಗುವ ತೀರ್ಮಾನಗಳನ್ನು ಮಾಧ್ಯಮದವರಿಗೆ ಹೇಳುವಂತಿಲ್ಲ. ಯಾರು ಕೂಡ ರೆಕಾರ್ಡ್ ಮಾಡುವಂತಿಲ್ಲ. ಆಫ್ ದಿ ರೆಕಾರ್ಡ್, ಆನ್ ದಿ ರೆಕಾರ್ಡ್ ಅಂತ ಏನು ಸಹ ಹೇಳುವಂತಿಲ್ಲ. ಒಂದು ವೇಳೆ ಹೇಳಿದ್ದು ಗೊತ್ತಾದಾರೆ ಯಾವ ಕಣ್ಣಿನಲ್ಲಿ ನೋಡಬೇಕೋ ಆ ಕಣ್ಣಿನಲ್ಲಿ ನೋಡುತ್ತೇವೆ. ಸಮಸ್ಯೆಗಳಿದ್ದರೆ ನಾಯಕರ ಬಳಿ ಹೇಳಿಕೊಳ್ಳಿ ಎಂದು ಡಿಕೆಶಿ ಖಡಕ್ ಸೂಚನೆ ನೀಡಿದ್ದರು.

ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:32 pm, Thu, 2 June 22