Kerala Thrikkakara bypoll results ತೃಕ್ಕಾಕ್ಕರ ವಿಧಾನಸಭಾ ಉಪಚುನಾವಣೆಯಲ್ಲಿ ಯುಡಿಎಫ್ ಅಭ್ಯರ್ಥಿ ಉಮಾ ಥಾಮಸ್ಗೆ ಗೆಲುವು
ಕೇರಳ ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಗಮನ ಸೆಳೆದ ಉಪಚುನಾವಣೆ ಆಗಿದೆ ತೃಕ್ಕಾಕ್ಕರ ವಿಧಾನಸಭಾ ಕ್ಷೇತ್ರದ ಈ ಚುನಾವಣೆ.ಉಮಾ ಥಾಮಸ್ ಅವರು ಎಲ್ಡಿಎಫ್ ಅಭ್ಯರ್ಥಿ ಡಾ ಜೋ ಜೋಸೆಫ್ ಅವರನ್ನು 25016 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ
ಕೊಚ್ಚಿ: ತೃಕ್ಕಾಕ್ಕರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಯುಡಿಎಫ್ (UDF) ಅಭ್ಯರ್ಥಿ ಉಮಾ ಥಾಮಸ್ (Uma Thomas) ಗೆಲುವು ಸಾಧಿಸಿದ್ದಾರೆ.ಕೇರಳ ರಾಜ್ಯ ರಾಜಕೀಯದಲ್ಲಿ ಅತೀ ಹೆಚ್ಚು ಗಮನ ಸೆಳೆದ ಉಪಚುನಾವಣೆ ಆಗಿದೆ ತೃಕ್ಕಾಕ್ಕರ ವಿಧಾನಸಭಾ ಕ್ಷೇತ್ರದ ಈ ಚುನಾವಣೆ. ಉಮಾ ಥಾಮಸ್ ಅವರು ಎಲ್ಡಿಎಫ್ ಅಭ್ಯರ್ಥಿ (LDF) ಡಾ ಜೋ ಜೋಸೆಫ್ (Dr Jo Joseph) ಅವರನ್ನು 25016ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಆರು ಸುತ್ತುಗಳ ಮತ ಎಣಿಕೆಯಾದಾಗಲೂ ಸಿಪಿಐ(ಎಂ) ಪಕ್ಷವು ಹಿನ್ನಡೆಯಲ್ಲೇ ಇತ್ತು. ಈ ತೀರ್ಪು ಅನಿರೀಕ್ಷಿತ ಎಂದು ಸಿಪಿಐ(ಎಂ) ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಸಿ ಎನ್ ಮೋಹನನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. “ಪಕ್ಷವು ಚುನಾವಣಾ ಫಲಿತಾಂಶವನ್ನು ಪರಿಶೀಲಿಸುತ್ತದೆ” ಎಂದು ಅವರು ಹೇಳಿದ್ದಾರೆ. ಉಪಚುನಾವಣೆಯಲ್ಲಿ ಗೆಲ್ಲಲು ಕೋಮುವಾದಿಗಳನ್ನು ಓಲೈಸಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಈ ತೀರ್ಪು ತಕ್ಕ ಉತ್ತರವಾಗಿದೆ ಎಂದು ಕಾಂಗ್ರೆಸ್ ಎರ್ನಾಕುಲಂ ಜಿಲ್ಲಾಧ್ಯಕ್ಷ ಮಹಮ್ಮದ್ ಶಿಯಾಸ್ ಹೇಳಿದ್ದಾರೆ. ಒಟ್ಟು 1,96,805 ಮತದಾರರಿರುವ ಈ ಕ್ಷೇತ್ರದಲ್ಲಿ ಮೇ 31ರಂದು ಮತದಾನ ನಡೆದಿದೆ. 1,35,320 ಜನರು ಮತ ಚಲಾಯಿಸಿದ್ದಾರೆ. ಶೇ70.48 ಪುರುಷ ಮತದಾರರು ಮತ್ತು ಶೇ 67.13 ಮಹಿಳಾ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಪಟ್ಟಿಯಲ್ಲಿರುವ ಏಕೈಕ ಟ್ರಾನ್ಸ್ ಜೆಂಡರ್ ಕೂಡಾ ಮತದಾನ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತೃಕ್ಕಾಕ್ಕರ ಪ್ರತಿಷ್ಠೆಯ ಕಣವಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ ಡಿಎಫ್ ಮುಂದೆ ಪರಾಭವಗೊಂಡಿದ್ದ ಕಾಂಗ್ರೆಸ್ ತೃಕ್ಕಾಕ್ಕರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿತ್ತು. ಎಲ್ಡಿಎಫ್ಗೆ ಟಫ್ ಫೈಟ್ ನೀಡುವುದಕ್ಕಾಗಿಯೇ ಯುಡಿಎಫ್ನ ದಿವಂಗತ ಶಾಸಕ ಪಿಟಿ ಥಾಮಸ್ ಅವರ ಪತ್ನಿ ಉಮಾಥಾಮಸ್ ಅವರನ್ನು ಕಣಕ್ಕಿಳಿಸಿತ್ತು. ಕಳೆದ ವರ್ಷ 59,839 ಮತಗಳೊಂದಿಗೆ ಗೆದ್ದಿದ್ದ ಕಾಂಗ್ರೆಸ್ ಶಾಸಕ ಪಿಟಿ ಥಾಮಸ್ 2021 ಡಿಸೆೆಂಬರ್ ತಿಂಗಳಲ್ಲಿ ನಿಧನರಾಗಿದ್ದರು. ಇತ್ತ ಬಿಜೆಪಿ ಎಎನ್ ರಾಧಾಕೃಷ್ಣನ್ ಅವರನ್ನು ಕಣಕ್ಕಿಳಿಸಿತ್ತು.
ಮತ ಎಣಿಕೆ
ಇಂದು(ಶುಕ್ರವಾರ) 8 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ಬೆಳಗ್ಗೆ 7.30ಕ್ಕೆ ಮಹಾರಾಜ ಕಾಲೇಜಿನ ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರಗಳನ್ನು ತೆರೆಯಲಾಗಿತ್ತು. ಮತ ಎಣಿಕೆಗೆ 21 ಮತ ಎಣಿಕೆ ಟೇಬಲ್‌ಗಳಿರುತ್ತವೆ. ಪ್ರತಿ ಟೇಬಲ್‌ಗೆ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು ಮತ್ತು ಸೂಕ್ಷ್ಮ ವೀಕ್ಷಕರು ಇರುತ್ತಾರೆ. ಎಲ್ಲಾ ಎಣಿಕೆ ಟೇಬಲ್‌ಗಳು ಅಭ್ಯರ್ಥಿಗಳ ಎಣಿಕೆ ಏಜೆಂಟ್‌ಗಳನ್ನು ಹೊಂದಿರುತ್ತಾರೆ. ಮತ ಎಣಿಕೆ ಸಭಾಂಗಣದಲ್ಲಿ ನೂರು ಅಧಿಕಾರಿಗಳನ್ನು ಇತರೆ ಕೆಲಸಗಳಿಗೂ ನಿಯೋಜಿಸಲಾಗಿದೆ. ಅಭ್ಯರ್ಥಿಗಳು, ಅವರ ಚುನಾವಣಾ ಏಜೆಂಟ್‌ಗಳು ಮತ್ತು ಎಣಿಕೆ ಏಜೆಂಟರಿಗೆ ಮಾತ್ರ ಮತ ಎಣಿಕೆ ಸಭಾಂಗಣಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ. ಮತ ಎಣಿಕೆ ಸಭಾಂಗಣದಲ್ಲಿ ಮೊಬೈಲ್ ಫೋನ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪ್ರಚಾರದ ಹೊತ್ತಲ್ಲಿ ಭುಗಿಲೆದ್ದ ವಿವಾದಗಳು
ಕೇರಳದ ತೃಕ್ಕಾಕ್ಕರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟಕೊಂಡು ನಾವುಮತಯಾಚಿಸುತ್ತೇವೆ ಎಂದು ಎಲ್ ಡಿಎಫ್ ಹೇಳಿತ್ತು. ಆದರೆ ಧರ್ಮದ ಹೆಸರಲ್ಲಿ ಮತಗಳಿಸುವುದಕ್ಕಾಗಿಯೇ ಜೋ ಜೋಸೆಫ್ ಅವರನ್ನು ಕಣಕ್ಕಿಳಿಸಿದ್ದು ಎಂದು ವಿಪಕ್ಷಗಳ ದೂರಿವೆ. ಅಲ್ಪಸಂಖ್ಯಾತರ ಮತಗಳು ನಿರ್ಣಾಯಕವಾಗಿರುವುದರಿಂದ ರಾಜಕೀಯ ಪಕ್ಷಗಳು ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದವು. ಕೆ-ರೈಲು ಮುಖ್ಯ ಅಜೆಂಡಾ ಎಂದು ಎಲ್ಡಿಎಫ್ ಹೇಳಿದ್ದರೂ ಅದರ ಬಗ್ಗೆ ಚರ್ಚೆಯಾಗಿದ್ದೇ ಕಡಿಮೆ. ಜೋ ಜೋಸೆಫ್ ಎಡ ಅಭ್ಯರ್ಥಿಯಾಗಿ ಬಂದಾಗ, ಅವರನ್ನು ಚರ್ಚ್ ಅಭ್ಯರ್ಥಿ ಎಂದು ಟೀಕಿಸಲಾಯಿತು. ಕಾಂಗ್ರೆಸ್ ತೊರೆದು ಎಲ್ಲೂ ಕಾಣದ ಕೆ.ವಿ. ಥಾಮಸ್ ಅವರನ್ನು ಎಡರಂಗ ಸಮಾವೇಶಕ್ಕೆ ಕರೆತಂದಿದ್ದು ಹೊಸ ಚರ್ಚೆಗೂ ಕಾರಣವಾಯಿತು.
ಎಡಪಕ್ಷಗಳ ಸಮಾವೇಶದಲ್ಲಿ ಪಿಣರಾಯಿ ವಿಜಯನ್ ಈ ಚುನಾವಣೆ ಸೌಭಾಗ್ಯ ಎಂದಿದ್ದು ಕೂಡಾ ವಿವಾದಕ್ಕೀಡಾಗಿತ್ತು. ನಟಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸಂತ್ರಸ್ತೆಯ ದೂರು ನ್ಯಾಯಾಲಯಕ್ಕೆ ಬಂದಿತ್ತು. ಸರ್ಕಾರದ ವಿರುದ್ಧ ಕಾಂಗ್ರೆಸ್ ಟೀಕಿಸಿದಾಗ ಸಿಪಿಎಂ ನಾಯಕರು ನಟಿ ಬಗ್ಗೆಯೂ ಈಕೆಯ ಪರ ವಿರೋಧ ನಿಂತವರ ಬಗ್ಗೆಯೂ ಹೇಳಿದ್ದು ಭಾರೀ ಚರ್ಚೆಯಾಯಿತು. ಇದರ ನಡುವೆ ಎಡಪಕ್ಷದ ಅಭ್ಯರ್ಥಿ ಜೋ ಜೋಸೆಫ್ ಅವರ ನಕಲಿ ಅಶ್ಲೀಲ ವೀಡಿಯೊ ಹರಿದಾಡಿತು.ಕಾಂಗ್ರೆಸ್ ಪಕ್ಷದವರು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದೇ ವೈಯಕ್ತಿಕ ದಾಳಿಗೆ ಮುಂದಾಗಿದ್ದಾರೆ ಎಂದು ಎಲ್ ಡಿಎಫ್ ಆರೋಪಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಉಮಾ ಥಾಮಸ್ ಪ್ರತಿಕ್ರಿಯಿಸಿದ್ದು ಬಿಟ್ಟರೆ ಕಾಂಗ್ರೆಸ್ ನಾಯಕತ್ವ ಈ ಬಗ್ಗೆ ಮಾತನಾಡಲಿಲ್ಲ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 1:03 pm, Fri, 3 June 22