ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

| Updated By: ganapathi bhat

Updated on: Sep 04, 2021 | 4:47 PM

Karnataka Congress: ಕಾಂಗ್ರೆಸ್​ಗೆ ಪದಾಧಿಕಾರಿಗಳ ನೇಮಕದ ಬಗ್ಗೆ ಸೂಚಿಸಿದ್ದೇನೆ. ಮಾಸಾಂತ್ಯದಲ್ಲಿ ಎಲ್ಲಾ ಘಟಕಗಳಿಗೆ ನೇಮಕಾತಿ ಮಾಡುತ್ತೇವೆ. ಕಾಂಗ್ರೆಸ್​ನಿಂದ ಸಾಂಸ್ಕೃತಿಕ, ಸಾರಿಗೆ ವಿಭಾಗ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ.

ಪಂಚಾಯತ್ ಚುನಾವಣೆಗೆ ಕಾಂಗ್ರೆಸ್ ಸಿದ್ಧತೆ; ಕಾರ್ಯಕರ್ತರ ಜೊತೆ ಸಭೆ, ಪ್ರತಿಭಟನೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್
ಡಿ.ಕೆ. ಶಿವಕುಮಾರ್
Follow us on

ಬೆಂಗಳೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ನಾವು ಸಿದ್ಧತೆ ನಡೆಸುತ್ತಿದ್ದೇವೆ. ಜಿಲ್ಲಾ ಕಾಂಗ್ರೆಸ್​ ನಾಯಕರ ಅಭಿಪ್ರಾಯವನ್ನು ಕೇಳಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಶನಿವಾರ (ಸಪ್ಟೆಂಬರ್ 4)​ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್​ ಪೂರ್ತಿ ಗಾಂಧಿ ಗ್ರಾಮ ಸ್ವರಾಜ್ಯ ಕಾರ್ಯಕ್ರಮ ನಡೆಸುತ್ತೇವೆ. 2 ದಿನಗಳಿಗೊಮ್ಮೆ ನಾಯಕರು ತೆರಳಿ ಸಭೆ, ಧರಣಿ ನಡೆಸ್ತೇವೆ. ಕಾಂಗ್ರೆಸ್ ಕಾರ್ಯಕರ್ತರ ಜತೆ ಸಭೆ, ಪ್ರತಿಭಟನೆ ಮಾಡ್ತೇವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ಗೆ ಪದಾಧಿಕಾರಿಗಳ ನೇಮಕದ ಬಗ್ಗೆ ಸೂಚಿಸಿದ್ದೇನೆ. ಮಾಸಾಂತ್ಯದಲ್ಲಿ ಎಲ್ಲಾ ಘಟಕಗಳಿಗೆ ನೇಮಕಾತಿ ಮಾಡುತ್ತೇವೆ. ಕಾಂಗ್ರೆಸ್​ನಿಂದ ಸಾಂಸ್ಕೃತಿಕ, ಸಾರಿಗೆ ವಿಭಾಗ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್​ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತಿ, ಎಂಎಲ್​ಸಿ ಚುನಾವಣೆಗೆ ತಯಾರಿ ಮಾಡುತ್ತಿದ್ದೇವೆ. ಜಿಲ್ಲಾ ನಾಯಕರ ಅಭಿಪ್ರಾಯ ಕೇಳಿದ್ದೇವೆ. ಪ್ರತಿ ದಿನ ಎರಡು ಗ್ರಾಮಕ್ಕೆ ನಾಯಕರು ತೆರಳಿ ಕಾರ್ಯಕರ್ತರ ಸಭೆ ಅಥವಾ ಪ್ರತಿಭಟನೆ ಮಾಡುತ್ತೇವೆ. ಎಲ್ಲಾ ಮುಂಚೂಣಿ ಘಟಕಗಳ ನೇಮಕಾತಿ ತಿಂಗಳಾಂತ್ಯದಲ್ಲಿ ಮಾಡುತ್ತೇವೆ ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ.

ಪರಿಷತ್​ನ 29 ಸ್ಥಾನಗಳ ಚುನಾವಣೆಗೆ ಅರ್ಜಿ ಕರೆದಿದ್ದೇವೆ. ಮುಂದಿನ 10 ದಿನಗಳ ಕಾಲ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಮಾಸಾಂತ್ಯದಲ್ಲಿ 29 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳನ್ನು ಘೋಷಿಸುತ್ತೇವೆ ಎಂದು ಶಿವಕುಮಾರ್​ ಹೇಳಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಡಿ.ಕೆ ಶಿವಕುಮಾರ್ ಆಕ್ಷೇಪ
‘ಎನ್​ಇಪಿ ಅಂದ್ರೆ ನಾಗ್ಪುರ್ ಎಜುಕೇಷನ್ ಪಾಲಿಸಿ’ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಡಿ.ಕೆ. ಶಿವಕುಮಾರ್​ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಹೊಸ ಎನ್​ಇಪಿ ಸರಿಕಾಣುತ್ತಿಲ್ಲ. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸುತ್ತೇನೆ, ಟ್ರಸ್ಟಿಯಾಗಿದ್ದೇನೆ. ಆದರೂ ರಾಷ್ಟ್ರೀಯ ಶಿಕ್ಷಣ ನೀತಿ ಅರ್ಥೈಸಿಕೊಳ್ಳಲಾಗುತ್ತಿಲ್ಲ. ಎನ್​ಇಪಿ ಬಗ್ಗೆ ಸಂಸತ್, ವಿಧಾನಸಭೆಯಲ್ಲಿ ಚರ್ಚೆಯಾಗಿಲ್ಲ. ಯಾರ ಅನುಕೂಲಕ್ಕಾಗಿ ಎನ್​ಇಪಿ ಜಾರಿಗೆ ಹೊರಟಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಎನ್​ಇಪಿ ಬಗ್ಗೆ ಶಿಕ್ಷಕರು, ಉಪನ್ಯಾಸಕರಿಗೆ ಮಾಹಿತಿಯಿಲ್ಲ. ಯಾರಿಗೂ ಮಾಹಿತಿ ನೀಡದೆ ಎನ್​ಇಪಿ ಜಾರಿಗೆ ತರಾತುರಿ ಮಾಡಲಾಗುತ್ತಿದೆ. ರಾಜ್ಯದ ಉನ್ನತ ಶಿಕ್ಷಣ ಸಚಿವರು ಆಸಕ್ತಿ ತೋರುತ್ತಿದ್ದಾರೆ. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಮ್ಮ ವಿರೋಧವಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಎನ್​ಇಪಿ ಜಾರಿಯಾಗಿಲ್ಲ. ಆದರೆ, ಕರ್ನಾಟಕದಲ್ಲಿ ಮಾತ್ರ ಎನ್​ಇಪಿ ಜಾರಿಗೆ ಒತ್ತಡ ಹೇರಲಾಗುತ್ತಿದೆ. ಹಿಂಬಾಗಿಲ ಮೂಲಕ ಹಿಂದಿ ಹೇರಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಎನ್​ಇಪಿ ವಿಸ್ತೃತ ಅರ್ಥ ನಾಗ್ಪುರ್ ಎಜುಕೇಷನ್ ಪಾಲಿಸಿ: ಡಿ.ಕೆ ಶಿವಕುಮಾರ್
ಸಿಎಂ ಬಸವರಾಜ ಬೊಮ್ಮಾಯಿ ಬೇರೆ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಆದರೆ, ಶಿಕ್ಷಣ ಸಚಿವರು ಮಾತ್ರ ಎನ್​ಇಪಿ ಜಾರಿಗೆ ಆಸಕ್ತಿ ವಹಿಸಿದ್ದಾರೆ. ಅಧಿಕಾರಿಗಳ ಜತೆ ಸಚಿವರು ಸಭೆ ಮೇಲೆ ಸಭೆ ನಡೆಸ್ತಿದ್ದಾರೆ. ಈ ಮಧ್ಯೆ, ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜನರು ಗಾಬರಿಯಾಗಿದ್ದಾರೆ. ಎನ್​ಇಪಿ ಜಾರಿ ಬಗ್ಗೆ ಸಾರ್ವಜನಿಕವಾಗಿ ಚರ್ಚೆಯಾಗಬೇಕು. ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಜತೆ ಚರ್ಚೆ ನಡೆಯಬೇಕು. ವಿಧಾನಸಭೆ, ವಿಧಾನಪರಿಷತ್​ನಲ್ಲಿ ಚರ್ಚೆಯಾಗಬೇಕು. ಏನಾದ್ರೂ ಆಕ್ಷೇಪಗಳಿದ್ದರೆ ರಾಜ್ಯ ಸರ್ಕಾರ ಆಲಿಸಬೇಕು ಎಂದು ಶಿವಕುಮಾರ್ ತಿಳಿಸಿದ್ದಾರೆ.

ಶಿಕ್ಷಣ ಸಚಿವರಿಗೆ ಸಾಮಾನ್ಯ ಜ್ಞಾನವಿಲ್ಲದಂತೆ ಕಾಣಿಸುತ್ತಿದೆ. ಎನ್​ಇಪಿ ಜಾರಿಯಾದರೆ ನಗರವಾಸಿಗಳಿಗಷ್ಟೇ ಅನುಕೂಲ ಆಗಲಿದೆ. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಎನ್​ಇಪಿಯಿಂದ ಸಮಸ್ಯೆ ಆಗಲಿದೆ. ಸರ್ಕಾರ ಎಲ್ಲಾ ಮಕ್ಕಳಿಗೂ ಮೂಲಸೌಕರ್ಯ ಕಲ್ಪಿಸಿದೆಯಾ ಎಂದು ಹಾಗೂ ಎನ್​ಇಪಿ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಆಗ್ರಹ ವ್ಯಕ್ತಪಡಿಸಿದ್ದಾರೆ. ಅಲ್ಲಿಯವರೆಗೆ ಎನ್​ಇಪಿ ಜಾರಿಮಾಡಬಾರದು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯಗೆ ಪರ್ಯಾಯವಾಗಿ ಹಿಂದುಳಿದ ವರ್ಗಗಳ ಮನ ಗೆಲ್ಲಲು ತಂತ್ರ ಹೂಡಿದ ಡಿಕೆ ಶಿವಕುಮಾರ್!

ಇದನ್ನೂ ಓದಿ: ಬೆಳಗಾವಿಯನ್ನು 2ನೇ ರಾಜಧಾನಿ ಎಂದು ಘೋಷಣೆ ಮಾಡಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ: ಡಿಕೆ ಶಿವಕುಮಾರ್

Published On - 4:37 pm, Sat, 4 September 21