ಮತ್ತೆ ಮುನ್ನೆಲೆಗೆ ಬಂದ ಡಿಕೆ ಶಿವಕುಮಾರ್-ಸಿದ್ದರಾಮಯ್ಯ ಅಧಿಕಾರ ಹಂಚಿಕೆ: ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು
ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿ ವಾರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಕುರಿತಾಗಿ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ದಾವಣಗೆರೆ: ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುಂಚೆ ಘೋಷಿಸಿದ್ದ 5 ಗ್ಯಾರಂಟಿಗಳನ್ನು ಒಂದೊಂದೇ ಆಗಿ ಜಾರಿಗೆ ತರುತ್ತಿದೆ. ಇದರ ಮಧ್ಯೆ ಸಿದ್ದರಾಮಯ್ಯ (Siddaramaiah)-ಡಿಕೆ ಶಿವಕುಮಾರ್ (DK Shivakumar) ನಡುವೆ ಮುಖ್ಯಮಂತ್ರಿ ಕುರ್ಚಿ ವಾರ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಸದ್ಯ ಈ ವಿಚಾರವಾಗಿ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು, ತಲಾ ಎರಡೂವರೆ ವರ್ಷ ಅಂತಾ ಇದುವರೆಗೂ ಯಾರೂ ಹೇಳಿಲ್ಲ. ಹೀಗಾಗಿ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ. ಅದು ಪಕ್ಷದ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿ ಮೋದಿ ವಿರುದ್ಧ ಸತೀಶ್ ಜಾರಕಿಹೊಳಿ ಗುಡುಗು
ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಅವರು, ಅಕ್ಕಿ ಖರೀದಿ ಬಗ್ಗೆ ಎಲ್ಲವನ್ನು ಸರಿಪಡಿಸುತ್ತೇವೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅದು ಬಿಜೆಪಿಯವರಿಗೆ ಸಂಬಂಧಪಟ್ಟ ವಿಚಾರವಲ್ಲ. ಪ್ರಧಾನಿ ಮೋದಿ 15 ಲಕ್ಷ ಕೊಡುತ್ತೇವೆ ಅಂದಿದ್ದರಲ್ಲ ಅದು ಬರಲಿಲ್ಲ. ಅವರ 10 ಭರವಸೆಗಳು ಹಾಗೇ ಇದೆ. ಇನ್ನು ಕಾಲಾವಕಾಶ ಬೇಕು ಎಲ್ಲಾವನ್ನು ಸರಿ ಮಾಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಸಾರಿಗೆ ಇಲಾಖೆಗೆ ಲಾಸ್ ಹೇಗಾಗುತ್ತೆ, ನಷ್ಟದ ಪ್ರಶ್ನೆಯೇ ಬರಲ್ಲ ಎಂದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ
ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಪಠ್ಯ ಪುಸ್ತಕ ಶಿಕ್ಷಣ ವಿರುದ್ದವಾಗಿದೆ ಅದನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದೇವೆ. ಅದನ್ನು ನಾವು ಬದಲಾವಣೆ ಮಾಡುತ್ತೇವೆ. ಇದರಲ್ಲಿ ಗೊಂದಲ ಇಲ್ಲ ಎಂದರು.
ಮುಂದಿನ 5 ವರ್ಷವೂ ಸಿಎಂ ಆಗಿ ಸಿದ್ದರಾಮಯ್ಯ ಇರುತ್ತಾರೆ: ಸಚಿವ ಕೆ.ಎನ್.ರಾಜಣ್ಣ
ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಿದ್ದರಾಮಯ್ಯ ಮುಂದಿನ 5 ವರ್ಷವೂ ಸಿಎಂ ಆಗಿ ಅವರೇ ಇರುತ್ತಾರೆ ಎಂದು ಹೇಳಿದರು. ಅಧಿಕಾರ ಹಂಚಿಕೆ ಬಗ್ಗೆ ಎಐಸಿಸಿ ನಾಯಕರು ಚರ್ಚೆ ಮಾಡುತ್ತಾರೆ. ರಾಜ್ಯದ ಜನರ ವಿಶ್ವಾಸ ಏನಿದೆಯೋ ನನ್ನದು ಸಹ ಅದೇ ವಿಶ್ವಾಸ. ಮುಖ್ಯಮಂತ್ರಿ ಆಗಿ ಬಡವರ ಕಣ್ಣೀರು ಹೊರೆಸುವ ನಂಬಿಕೆ ಇಟ್ಟಿದ್ದಾರೆ. ನಂಬಿಕೆಗೆ ಅನುಗುಣವಾಗಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುತ್ತಾರೆ. ಇಂತಹವರು ಸಿಎಂ ಆಗಿ ಹೆಚ್ಚು ಕಾಲ ಇರಬೇಕೆನ್ನುವುದು ನಮ್ಮ ಆಸೆ ಎಂದು ಹೇಳಿದರು.
ಇದನ್ನೂ ಓದಿ: ಪುತ್ರಿ ಸಾವಿಗೆ ನ್ಯಾಯಕೊಡಿಸುವಂತೆ ಮಾಜಿ ಸಿಎಂ ಬೊಮ್ಮಾಯಿ ಕಾಲಿಗೆ ಬಿದ್ದ ಪೋಷಕರು
ಎಐಸಿಸಿಯವರು ನಾಳೆಯೇ ಸಿಎಂ ಸ್ಥಾನ ಬಿಡಿ ಅಂದರೆ ಬಿಡುತ್ತಾರೆ. ಅವರು ಏನು ನಿರ್ಧಾರ ತೆಗೆದುಕೊಂಡಿದ್ದಾರೋ ಅದರಂತೆ ನಡೆಯುತ್ತಾರೆ ಎಂದು ತಿಳಿಸಿದರು.
ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಡಿಕೆ
ವಾಲ್ಮೀಕಿ ಸಮುದಾಯಕ್ಕೆ ಸಿಎಂ ಸ್ಥಾನ ಬೇಡಿಕೆ ವಿಚಾರವಾಗಿ ಮಾತನಾಡಿದ ಅವರು, ಮಗು ಅತ್ತರೆ ತಾನೇ ತಾಯಿ ಹಾಲು ಕೊಡೋದು. ಹಾಗೇ ನ್ಯಾಯಯುತ ವಾದ ಬೇಡಿಕೆಯನ್ನು ಏಕೆ ಕೇಳಬಾರದು, ಕೇಳಿದರೆ ತಪ್ಪೇನಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಪಡೆದುಕೊಂಡು ಸಮಾಜವನ್ನು ಬೆಳವಣಿಗೆ ಸಹಕಾರಿಯಾಗಬೇಕು. ಮುಂದಿನ ದಿನಮಾನಗಳಲ್ಲಿ ನಾವು ಕೂಡ ವಾಲ್ಮೀಕಿ ಸಮುದಾಯದಿಂದ ಸಿಎಂ ಬೇಡಿಕೆ ಇಡುತ್ತೇವೆ. ಇದು ಇಡೀ ರಾಜ್ಯದ ಸಮುದಾಯದ ಮಹಾದಾಸೆಯಾಗಿದೆ. ಅದನ್ನು ಬಿಟ್ಟು ನನಗೆ ಮಾಡಿ ಎಂದು ಕೇಳುತ್ತಿಲ್ಲ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.