ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ: ಸುಧಾಕರ್ ವಿರುದ್ಧ ಜೆಡಿಎಸ್ ಟ್ವೀಟ್

|

Updated on: Feb 27, 2023 | 5:34 PM

ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತವಾಗಿದ್ದು, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೆ ಜನರು ಪರದಾಡುತ್ತಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ. ಅಲ್ಲದೆ, ಸರಣಿ ಟ್ವೀಟ್ ಮಾಡಿ, ಆರೋಗ್ಯ ಸಚಿವ ಕೆ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದೆ.

ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ: ಸುಧಾಕರ್ ವಿರುದ್ಧ ಜೆಡಿಎಸ್ ಟ್ವೀಟ್
ಡಾ.ಕೆ.ಸುಧಾಕರ್ (ಎಡಚಿತ್ರ) ಮತ್ತು ಟ್ವಿಟರ್​ನಲ್ಲಿ ಜೆಡಿಎಸ್ ಹಂಚಿಕೊಂಡ ಫೋಟೋ (ಬಲ ಚಿತ್ರ)
Follow us on

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ (Ambulances Shortage in Doddaballapura) ಸೇವೆ ಅಸ್ತವ್ಯಸ್ತವಾಗಿದ್ದು, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೆ ಜನರು ಪರದಾಡುತ್ತಿದ್ದಾರೆ ಎಂದು ಜೆಡಿಎಸ್ (JDS) ಆರೋಪಿಸಿದೆ. ಈ ಬಗ್ಗೆ ಸರಣಿ ಟ್ವೀಟ್ (JDS Tweet) ಮಾಡಿ, ಆರೋಗ್ಯ ಸಚಿವ ಡಾ. ಕೆ.ಸುಧಾಕರ್ (Dr. K. Sudhakar) ವಿರುದ್ಧ ವಾಗ್ದಾಳಿ ನಡೆಸಿದ್ದು, ಆರೋಗ್ಯ ಸಚಿವರನ್ನು ‘ಮೋಜುಗಾರ-ಸೊಗಸುಗಾರ’ ಎಂದು ಜರಿದಿದೆ. ಅಲ್ಲದೆ, ದೊಡ್ಡಬಳ್ಳಾಪುರ ಉತ್ಸವವನ್ನು ಮುಂದಿಟ್ಟುಕೊಂಡು ಟೀಕಿಸಿದ ದಳ ಪಕ್ಷ, ಉತ್ಸವಗಳನ್ನು ಮಾಡಲು ಸಮಯ-ಶಕ್ತಿ ಮೀಸಲಿಟ್ಟು ಆರೋಗ್ಯ ಸೇವೆ ಮರೆತಿದ್ದಾರೆ ಎಂದು ಹೇಳಿದೆ.

“ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ದೊಡ್ಡಬಳ್ಳಾಪುರದಲ್ಲಿ ಆ್ಯಂಬುಲೆನ್ಸ್ ಸೇವೆ ಅಸ್ತವ್ಯಸ್ತವಾಗಿದ್ದು, ತುರ್ತು ಚಿಕಿತ್ಸೆಗಾಗಿ ಜನ ಪರದಾಡುವ ಸ್ಥಿತಿ ಎದುರಾಗಿದೆ. ರಾಜ್ಯ ಆರೋಗ್ಯ ಸಚಿವ, ‘ಮೋಜುಗಾರ-ಸೊಗಸುಗಾರ’ ಡಾ.ಕೆ.ಸುಧಾಕರ್ ಅವರೇ, ಉತ್ಸವಗಳನ್ನು ಮಾಡಲು ಸಮಯ-ಶಕ್ತಿ ಮೀಸಲಿಟ್ಟು, ಆರೋಗ್ಯ ಸೇವೆ ಮರೆತಿದ್ದೀರಿ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

“ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರೂ ತಾವೇ ಆಗಿರುವಾಗ, ಆ್ಯಂಬುಲೆನ್ಸ್ ಸೇವೆ ಸರಿಯಾಗಿ ದೊರೆಯದೇ ಇರುವುದು ದುರಂತವಲ್ಲದೆ ಇನ್ನೇನು? ರಾಜ್ಯದ ‘ಪ್ರಭಾವಿ’ ಸಚಿವರಾಗಿ ಕನಿಷ್ಠ ಆರೋಗ್ಯ ಸೇವೆ ಒದಗಿಸಲು ಸಾಧ್ಯವಿಲ್ಲದಿರುವುದು ನಾಚಿಕೆಗೇಡು. ರಾಜ್ಯ ಬಿಜೆಪಿ ಸರ್ಕಾರಕ್ಕಂತೂ ಮರ್ಯಾದೆ ಇಲ್ಲ” ಎಂದು ಜೆಡಿಎಸ್ ಟ್ವೀಟ್ ಮಾಡಿ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದಾಗಿ ಹೆಚ್​ಡಿಕೆ ಪ್ರಣಾಳಿಕೆಯಲ್ಲಿ ಘೋಷಿಸಲಿ: ಸುಧಾಕರ್ ಸವಾಲು

“ವಾರದ ಹಿಂದೆ ದೊಡ್ಡವೆಂಗಲದಲ್ಲಿ ನಡೆದ ಜೋಡಿ ಕೊಲೆ ಸಂದರ್ಭದಲ್ಲಿ ಸೂಕ್ತ ಸಮಯಕ್ಕೆ ಆ್ಯಂಬುಲೆನ್ಸ್ ಸೇವೆ ದೊರೆತಿದ್ದರೆ ಚಾಕು ಇರಿತಕ್ಕೆ ಒಳಗಾದವರನ್ನು ಉಳಿಸಿಕೊಳ್ಳಬಹುದಿತ್ತು. ಇದು ಸೇರಿ ತಾಲ್ಲೂಕಿನಲ್ಲಿ ಆ್ಯಂಬುಲೆನ್ಸ್ ಸೇವೆ ಇದ್ದೂ ಇಲ್ಲದಂತಾಗಿರುವುದು ಆರೋಗ್ಯ ಸಚಿವಾಯಲದ ನಿಷ್ಕ್ರಿಯತೆ ಎದ್ದು ಕಾಣುವಂತಿದೆ” ಎಂದು ಜೆಡಿಎಸ್ ಟ್ವೀಟ್​ನಲ್ಲಿ ಟೀಕಿಸಿದೆ.

“ಇದ್ದ ಆ್ಯಂಬುಲೆನ್ಸ್​ಗಳಲ್ಲಿ ಕೆಲವು ದುರಸ್ತಿಗಾಗಿ ಗ್ಯಾರೇಜ್ ಸೇರಿದ್ದವು. ತಿಂಗಳುಗಳ ನಂತರವೂ ಅವೆಲ್ಲ ಸೇವೆಗೆ ವಾಪಸ್ಸಾಗಿಲ್ಲ. ಈ ಸಂಗತಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ನೌಕರರೇ ತಿಳಿಸಿದ್ದಾರೆ. ಜನರ ಪ್ರಾಣ ರಕ್ಷಣೆ ಇಷ್ಟು ಲಘುವಾದ ವಿಷಯವೆ? ಲಜ್ಜೆಗೆಟ್ಟ ಸರ್ಕಾರಕ್ಕೆ ಆತ್ಮಸಾಕ್ಷಿ ಇಲ್ಲದ ಆರೋಗ್ಯ ಸಚಿವ ಎಂಬಂತಾಗಿದೆ” ಎಂದು ಸಚಿವ ಸುಧಾಕರ್ ವಿರುದ್ಧ ಜೆಡಿಎಸ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ