ಬೆಂಗಳೂರು, (ಡಿಸೆಂಬರ್ 27): ಬಾಯಿಗೆ ಬಂದಂತೆ ಮಾತಾಡುವವರ ಬಾಯಿಗೆ ಬೀಗ ಹಾಕಬೇಕಾದ ಅವಶ್ಯಕತೆ ಇದೆ. ಪಕ್ಷದ ಚಟುವಟಿಕೆಗಳನ್ನು ಹೇಗೆ ಮುಂದುವರಿಸುವುದು ಎಂದು ನನಗೆ ಅನ್ನಿಸುತ್ತಿದೆ. ಆಶಿಸ್ತು ಅಂತಾ ಗೊತ್ತಿದ್ದೂ ಮಾತಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ರಾಜ್ಯ ನಾಯಕರಿಗೆ ತಾಕತ್ ಇಲ್ಲ ಎನ್ನುವ ರೀತಿ ಇದೆ ಎಂದು ಮಾಜಿ ಸಿಎಂ, ಸಂಸದ ಸದಾನಂದಗೌಡ ಮಾರ್ಮಿಕವಾಗಿ ನುಡಿದಿದ್ದಾರೆ. ಈ ಮೂಲಕ ಬಹಿರಂಗವಾಗಿ ಮಾತನಾಡುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳಬೇಕೆನ್ನುವ ಅರ್ಥದಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಡಝನ್ ಗಟ್ಟಲೇ ನಾಯಕರು ಪಕ್ಷದ ವಿರುದ್ಧ ಮಾತಾಡುತ್ತಿದ್ದಾರೆ ನಾನು ರಾಜ್ಯಾಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ ಸಹ ಈ ಹಿಂದೆ ಸಿಎಂ ಆಗಿದ್ದ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡಿದ್ದರು. ಆಗ ನಾನು ಒಂದೇ ಗಂಟೆಯಲ್ಲಿ ಅವರಿಗೆ ನೋಟೀಸ್ ಕೊಟ್ಟು ಸಸ್ಪೆಂಡ್ ಮಾಡಿದ್ದೆ. ಯತ್ನಾಳ್ ರನ್ನು ನಾನು ಸಸ್ಪೆಂಡ್ ಮಾಡಿ ಬಳಿಕ ಯಡಿಯೂರಪ್ಪನವರು ಮತ್ತೆ ಒತ್ತಡ ಹಾಕಿ ಮತ್ತೆ ಪಕ್ಷಕ್ಕೆ ಸೇರಿಸಿಕೊಂಡು ಈಗ ನಾನು ಅನುಭವಿಸುತ್ತಿದ್ದೇವೆ ಎಂದರು.
ರೇಣುಕಾಚಾರ್ಯರನ್ನು ನಾನು ಸಸ್ಪೆಂಡ್ ಮಾಡಿದ್ದಾಗ ಸಿದ್ದೇಶ್ವರ ನನ್ನ ಬಳಿ ಬಂದು ಯಡಿಯೂರಪ್ಪ ಹೇಳಿ ಮತ್ತೆ ಸೇರಿಸಿಕೊಂಡಿದ್ದೆ. ನನ್ನ ಕಾಲದಲ್ಲಿ ಇದನ್ನು ನಾನು ಮಾಡಿದ್ದೆ, ಆದ್ದರಿಂದ ನಾನು ಹೇಳುತ್ತಿದ್ದೇನೆ. ಈಗ ಯಾಕೆ ಅದನ್ನು ಮಾಡುತ್ತಿಲ್ಲ? ಎಂದು ಪ್ರಶ್ನಿಸಿದ ಡಿವಿಎಸ್, ನಾನು ಅಂದು ಜನಾರ್ದನ ರೆಡ್ಡಿಗೆ ನೋಟಿಸ್ ವಿಚಾರದಲ್ಲಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಗಮನಕ್ಕೆ ತಂದು ಸಸ್ಪೆಂಡ್ ಮಾಡಿದ್ದೆ, ಆಗ ಯಡಿಯೂರಪ್ಪ ಯಾಕಪ್ಪಾ ಸರ್ಕಾರ ಇರುವುದು ನಿನಗೆ ಇಷ್ಟಇಲ್ವಾ ಎಂದು ನನ್ನ ಮೇಲೆ ಸಿಡಿಮಿಡಿಯಾಗಿದ್ದರು ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:24 pm, Wed, 27 December 23