ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2022 | 7:37 PM

ಮತ್ತೊಂದೆಡೆ ಶಿವಸೇನಾ ಕೂಡ ಬಿಜೆಪಿ ಪ್ಲ್ಯಾನ್ ಗೆ ಕೌಂಟರ್ ಪ್ಲ್ಯಾನ್ ಮಾಡುತ್ತಿದೆ. ಬಂಡಾಯ ಎದ್ದ ಶಿವಸೇನೆಯ ಶಾಸಕರನ್ನು ಸಂಪರ್ಕಿಸಿ, ಮನವೊಲಿಸಿ, ವಾಪಸ್ ಕರೆ ತರಲು ಇಬ್ಬರು ನಾಯಕರನ್ನು ಸೂರತ್ ಗೆ ಕಳಿಸಿದೆ. ಏಕನಾಥ್ ಶಿಂಧೆ ಜೊತೆಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಸುವ ಪ್ರಯತ್ನ ನಡೆಸಿದೆ

ಮಧ್ಯಪ್ರದೇಶ, ಕರ್ನಾಟಕದ ಬಳಿಕ ಮಹಾರಾಷ್ಟ್ರದಲ್ಲಿ ಅಪರೇಷನ್ ಕಮಲ; ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು
ಉದ್ಧವ್ ಠಾಕ್ರೆ- ಏಕನಾಥ್ ಶಿಂಧೆ
Follow us on

ಮಧ್ಯಪ್ರದೇಶ, ಕರ್ನಾಟಕ ರಾಜ್ಯದಲ್ಲಿ ಅಪರೇಷನ್ ಕಮಲದ ಮೂಲಕ ಬಿಜೆಪಿ (BJP) ರಾಜ್ಯ ಸರ್ಕಾರಗಳನ್ನು ರಚಿಸಿದೆ. ಈಗ ಮಹಾರಾಷ್ಟ್ರದ ಸರದಿ. ಮಹಾರಾಷ್ಟ್ರದಲ್ಲೂ(Maharashtra) ಈಗ ಅಪರೇಷನ್ ಕಮಲಕ್ಕೆ ವೇದಿಕೆ ಸಜ್ಜಾಗಿದೆ. ಮಹಾ ವಿಕಾಸ್ ಅಘಾಡಿಯ ನೇತೃತ್ವ ವಹಿಸಿರುವ ಶಿವಸೇನಾ (Shiv Sena) ಪಕ್ಷದ 22 ಮಂದಿ ಶಾಸಕರೇ ಈಗ ಸಿಎಂ ಉದ್ದವ್ ಠಾಕ್ರೆ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದಾರೆ. ಪಕ್ಕದ ಗುಜರಾತ್ ರಾಜ್ಯದ ಸೂರತ್ ನಲ್ಲಿ ಶಿವಸೇನೆಯ 22 ಶಾಸಕರು ಠಿಕಾಣಿ ಹೂಡಿ ದಾಳ ಉರುಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ಮುಂದೇನಾಗುತ್ತೆ ಎಂಬ ಕುತೂಹಲ ಮೂಡಿದೆ.

ಶಿವಸೇನಾ ವಿರುದ್ಧ ಬಂಡಾಯ ಎದ್ದ 22 ಶಾಸಕರು

ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸಮ್ಮಿಶ್ರ ಸರ್ಕಾರದಲ್ಲಿ ಮಹಾ ಬಂಡಾಯ ಎದ್ದಿದೆ. ಸಿಎಂ ಉದ್ದವ್ ಠಾಕ್ರೆ ಸರ್ಕಾರದಲ್ಲಿ ನಗರಾಭಿವೃದ್ದಿ ಸಚಿವರಾಗಿರುವ ಏಕನಾಥ್ ಶಿಂಧೆ ನೇತೃತ್ವದಲ್ಲಿ 22 ಮಂದಿ ಶಿವಸೇನೆಯ ಶಾಸಕರು ಬಂಡಾಯ ಎದ್ದಿದ್ದಾರೆ. ಸೋಮವಾರ ಮಹಾರಾಷ್ಟ್ರದಲ್ಲಿ ವಿಧಾನಪರಿಷತ್ ನ 10 ಸ್ಥಾನಗಳಿಗೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ಕೂಡ ನಡೆದು ಮೈತ್ರಿ ಪಕ್ಷಗಳ ಓರ್ವ ಅಭ್ಯರ್ಥಿ ಸೋತಿದ್ದಾರೆ. ಇದಾಗುತ್ತಿದ್ದಂತೆ, ರಾತ್ರಿಯೇ ಶಿವಸೇನಾದ 22 ಶಾಸಕರು ಸಚಿವ ಏಕನಾಥ್ ಶಿಂಧೆ ನೇತೃತ್ವದಲ್ಲಿ ಮುಂಬೈನಲ್ಲಿ ಪಕ್ಕದ ಗುಜರಾತ್ ರಾಜ್ಯದ ಸೂರತ್ ಗೆ ಪ್ರಯಾಣ ಬೆಳೆಸಿದ್ದಾರೆ. ರಾತ್ರಿ 2 ಗಂಟೆ ಸುಮಾರಿಗೆ ಸೂರತ್ ನ ಲೀ ಮೆರಿಡಿಯನ್ ಹೋಟೇಲ್ ತಲುಪಿದ್ದಾರೆ. ಸೂರತ್ ಪೊಲೀಸರಿಗೆ ತಮಗೆ ಸೂಕ್ತ ಭದ್ರತೆ ನೀಡುವಂತೆ ಕೇಳಿದ್ದಾರೆ. ಹೀಗಾಗಿ ಸೂರತ್ ಪೊಲೀಸರು ಮಹಾರಾಷ್ಟ್ರದ ಶಿವಸೇನೆಯ ಸಚಿವರು, ಶಾಸಕರು ತಂಗಿರುವ ಹೋಟೇಲ್ ಗೆ ಭದ್ರತೆ ನೀಡಿದ್ದಾರೆ.

ಇದನ್ನೂ ಓದಿ
Maharashtra Political Crisis ಏಕನಾಥ್ ಶಿಂಧೆಗೆ ಕೊಕ್ ನೀಡಿದ ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ
Maharashtra Political Crisis: ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಏಕನಾಥ್ ಶಿಂಧೆ ಯಾರು
Maharashtra Political Crisis: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿವಸೇನೆ ಶಾಸಕರ ಬಂಡಾಯ

ಬಂಡಾಯಕ್ಕೆ ಕಾರಣಗಳೇನು?

* ಸಚಿವ ಏಕನಾಥ್ ಶಿಂಧೆಗೆ ತಾವೇ ಮಹಾರಾಷ್ಟ್ರದ ಸಿಎಂ ಆಗಬೇಕೆಂಬ ಮಹತ್ವಾಕಾಂಕ್ಷೆ

* ತಮ್ಮ ನಗರಾಭಿವೃದ್ದಿ ಇಲಾಖೆಯಲ್ಲಿ ಸಿಎಂ ಪುತ್ರ ಆದಿತ್ಯ ಠಾಕ್ರೆ ಹಸ್ತಕ್ಷೇಪಕ್ಕೆ ಆಕ್ರೋಶ

* ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಜೊತೆಗೆ ಇತ್ತೀಚೆಗೆ ಆಪ್ತತೆ ಬೆಳೆಸಿಕೊಂಡಿರುವ ಏಕನಾಥ ಶಿಂಧೆ

* ಪರಿಷತ್ ಚುನಾವಣೆಯ ಪ್ಲ್ಯಾನಿಂಗ್ ನಲ್ಲಿ ಏಕನಾಥ ಶಿಂಧೆ ದೂರವಿಟ್ಟಿದ್ದ ಶಿವಸೇನೆ ಪಕ್ಷ, ಇದರಿಂದ ಆಕ್ರೋಶಗೊಂಡ ಏಕನಾಥ್ ಶಿಂಧೆ

* ಬಿಜೆಪಿ ರಾಜ್ಯ, ರಾಷ್ಟ್ರ ನಾಯಕರ ಭರವಸೆಯಿಂದ ಬಂಡಾಯ ಎದ್ದ ಏಕನಾಥ್ ಶಿಂಧೆ

ಬಿಜೆಪಿಯ ಸೀಕ್ರೆಟ್ ಅಪರೇಷನ್ ಪರಿಣಾಮ?

ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಬೆಂಬಲಕ್ಕೆ ಮೂರು ನಾಲ್ಕು ಶಾಸಕರೂ ಕೂಡ ಇರಲಿಲ್ಲ. ಇಂಥದ್ದರಲ್ಲಿ 22 ಮಂದಿ ಶಾಸಕರು ಜೊತೆಯಾಗಿ ಶಿಂಧೆ ನಾಯಕತ್ವದಲ್ಲಿ ಸೂರತ್ ಗೆ ಹೋಗಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ. ಬಿಜೆಪಿಯ ಸೀಕ್ರೆಟ್ ಅಪರೇಷನ್ ಪರಿಣಾಮವಾಗಿಯೇ ಇದು ಸಾಧ್ಯವಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಜೊತೆಗೆ ಸಿಎಂ ಉದ್ದವ್ ಠಾಕ್ರೆಗೆ ತಮ್ಮದೇ ಪಕ್ಷದ ಶಾಸಕರ ರಹಸ್ಯ ಕಾರ್ಯಾಚರಣೆಯ ಬಗ್ಗೆ ಯಾವುದೇ ಸುಳಿವು ಸಿಗದೇ ಇರೋದು ಅಚ್ಚರಿಗೂ ಕಾರಣವಾಗಿದೆ.
ಇನ್ನೂ ಶಿವಸೇನೆಯ ಮಿತ್ರ ಪಕ್ಷ ಎನ್‌ಸಿಪಿ ನಾಯಕ ಶರದ್ ಪವಾರ್, ತಮ್ಮ ಎನ್‌ಸಿಪಿ ಪಕ್ಷದ ಯಾವುದೇ ಶಾಸಕರೂ ಬಂಡಾಯ ಎದ್ದಿಲ್ಲ. ಇದು ಶಿವಸೇನಾದ ಅಂತರಿಕ ವಿಚಾರ. ನಾಯಕತ್ವದ ಬಗ್ಗೆ ಶಿವಸೇನಾ ತೀರ್ಮಾನ ಕೈಗೊಳ್ಳಬೇಕು. ಉದ್ಧವ್ ಠಾಕ್ರೆ ಉತ್ತಮ ನಾಯಕತ್ವ ನೀಡಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸಂಖ್ಯಾಬಲ 288. ಬಹುಮತದ ಮ್ಯಾಜಿಕ್ ನಂಬರ್ 145. ವಿಪಕ್ಷ ಬಿಜೆಪಿಗೆ ಸದ್ಯ 145ರ ಮ್ಯಾಜಿಕ್ ನಂಬರ್ ಶಾಸಕರ ಬೆಂಬಲ ಕ್ರೋಡೀಕರಿಸುವುದು ಕಷ್ಟ. ಆದರೇ, ಬಿಜೆಪಿಯದ್ದು ಬೇರೆಯದ್ದೇ ಪ್ಲ್ಯಾನ್ ಇದೆ. ಶಿವಸೇನೆಯ ಶಾಸಕರೇ ಉದ್ದವ್ ಠಾಕ್ರೆ ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂತೆಗೆದುಕೊಳ್ಳುವಂತೆ ಮಾಡಬಹುದು. ಮಹಾ ವಿಕಾಸ್ ಅಘಾಡಿ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಬಳಿಕ ರಾಜ್ಯಪಾಲರಿಗೆ ದೂರು ನೀಡಬಹುದು. ರಾಜ್ಯಪಾಲರು ಸಿಎಂ ಉದ್ದವ್ ಠಾಕ್ರೆಗೆ ಸದನದಲ್ಲಿ ವಿಶ್ವಾಸಮತ ಸಾಬೀತುಪಡಿಸುವಂತೆ ಸೂಚಿಸಬಹುದು. ಸಿಎಂ ಉದ್ದವ್ ಠಾಕ್ರೆ ಬಹುಮತ ಸಾಬೀತುಪಡಿಸಲು ವಿಫಲವಾದರೇ, ಬಳಿಕ ಬಿಜೆಪಿ ಸರ್ಕಾರ ರಚಿಸುವ ಪ್ಲ್ಯಾನ್ ಹಾಕಿಕೊಂಡಿದೆ. ಬಳಿಕ ಬಂಡಾಯ ಎದ್ದಿರುವ ಶಾಸಕರಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ ಉಪಚುನಾವಣೆ ನಡೆಯುವ ಕ್ಷೇತ್ರಗಳಲ್ಲಿ ಬಂಡಾಯಗಾರರನ್ನು ಬಿಜೆಪಿ ಅಭ್ಯರ್ಥಿಗಳಾಗಿ ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಪ್ಲ್ಯಾನ್ ರೂಪಿಸಿದೆ. ಇದೇ ರೀತಿಯ ಪ್ಲ್ಯಾನ್ ಅನ್ನು ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಯಶಸ್ವಿಯಾಗಿ ಜಾರಿಗೊಳಿಸಿದೆ.

ಬಿಜೆಪಿ ಪ್ಲ್ಯಾನ್ ಗೆ ಕೌಂಟರ್ ಪ್ಲ್ಯಾನ್

ಮತ್ತೊಂದೆಡೆ ಶಿವಸೇನಾ ಕೂಡ ಬಿಜೆಪಿ ಪ್ಲ್ಯಾನ್ ಗೆ ಕೌಂಟರ್ ಪ್ಲ್ಯಾನ್ ಮಾಡುತ್ತಿದೆ. ಬಂಡಾಯ ಎದ್ದ ಶಿವಸೇನೆಯ ಶಾಸಕರನ್ನು ಸಂಪರ್ಕಿಸಿ, ಮನವೊಲಿಸಿ, ವಾಪಸ್ ಕರೆ ತರಲು ಇಬ್ಬರು ನಾಯಕರನ್ನು ಸೂರತ್ ಗೆ ಕಳಿಸಿದೆ. ಏಕನಾಥ್ ಶಿಂಧೆ ಜೊತೆಗೆ ದೂರವಾಣಿ ಮೂಲಕ ಮಾತನಾಡಿ ಮನವೊಲಿಸುವ ಪ್ರಯತ್ನ ನಡೆಸಿದೆ. ಏಕನಾಥ್ ಶಿಂಧೆರನ್ನು ಶಿವಸೇನೆ ಮನವೊಲಿಸಿದೆ ಎಂದು ಶಿವಸೇನೆಯ ನಾಯಕರು ಹೇಳಿದ್ದಾರೆ. ಏಕನಾಥ್ ಶಿಂಧೆಗೆ ಡಿಸಿಎಂ ಹುದ್ದೆ ನೀಡುವ ಆಫರ್ ಅನ್ನು ಶಿವಸೇನೆ ನೀಡಿದೆ. ಹೀಗಾಗಿ ಬಂಡಾಯದ ಬಿಕ್ಕಟ್ಟು ಶಮನವಾಗುವ ವಿಶ್ವಾಸದಲ್ಲಿ ಶಿವಸೇನೆಯ ನಾಯಕರಿದ್ದಾರೆ. ಇಂದು ಮಧ್ಯಾಹ್ನ ಸಿಎಂ ಉದ್ದವ್ ಠಾಕ್ರೆ ನಡೆಸಿದ ಶಿವಸೇನೆಯ ಶಾಸಕರ ಸಭೆಗೆ ಒಟ್ಟು 56 ಶಿವಸೇನೆಯ ಶಾಸಕರ ಪೈಕಿ 35 ಮಂದಿ ಹಾಜರಾಗಿದ್ದರು. ವಿಧಾನಸಭೆಯಲ್ಲಿ ಶಿವಸೇನೆಯ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಏಕನಾಥ್ ಶಿಂಧೆರನ್ನು ತೆಗೆದುಹಾಕುವ ತೀರ್ಮಾನವನ್ನು ಶಿವಸೇನೆ ತೆಗೆದುಕೊಂಡಿದೆ. ಈ ಬಗ್ಗೆ ಡೆಪ್ಯುಟಿ ಸ್ಪೀಕರ್ ಗೆ ಪತ್ರ ನೀಡಿದೆ. ಏಕನಾಥ್ ಶಿಂಧೆ ಮಹಾರಾಷ್ಟ್ರ ವಿಧಾನಸಭೆಗೆ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಇಂದು ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, ನಾವು ಬಾಳಾಸಾಹೇಬ್ ಠಾಕ್ರೆಯವರ ನಿಷ್ಠಾವಂತ ಸೈನಿಕರು. ಬಾಳಾಸಾಹೇಬ್ ನಮಗೆ ಹಿಂದುತ್ವದ ಭೋಧನೆ ಮಾಡಿದ್ದಾರೆ. ಬಾಳಾ ಸಾಹೇಬ್ ಆಲೋಚನೆಗಳಿಗೆ ನಾವು ಎಂದೂ ಮೋಸ ಮಾಡಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಈಗ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಮುಂದೇನಾಗುತ್ತೋ ಎಂಬ ಕುತೂಹಲ ಇದೆ. ಈ ರಾಜಕೀಯ ಹೈಡ್ರಾಮಾ ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ಪಡೆಯಲಿದೆ.

ವರದಿ:ಚಂದ್ರ ಮೋಹನ್

Published On - 7:36 pm, Tue, 21 June 22