ಸಚಿವರು ಕೈಗೆ ಸಿಗುತ್ತಿಲ್ಲ, ಸಿಎಂಗೆ ಶಾಸಕರ ಪತ್ರ: ಜಿಲ್ಲಾವಾರು ಸಭೆ ಮೂಲಕ ಎಂಎಲ್ಎಗಳ ಅಸಮಾಧಾನ ಶಮನ
ಸಚಿವರು ಕೈಗೆ ಸಿಗುತ್ತಿಲ್ಲ ಎಂದು ಕಾಂಗ್ರೆಸ್ನ ಕೆಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಿನ್ನೆಲೆ ಶಾಸಕಾಂಗ ಸಭೆ ನಡೆದಿದ್ದು, ಕೆಲ ಶಾಸಕರು ಅಸಮಾಧಾನಗೊಂಡಿರುವ ಸಂಗತಿ ನಿಜ ಅನ್ನೋದು ಬಯಲಿಗೆ ಬಂದಿದೆ. ಅಂಥ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದರಿದ ಪ್ರಸಂಗವೂ ನಡೆದಿತ್ತು. ಈ ವಿಚಾರವಾಗಿ ಸಚಿವರು ಪ್ರತಿಕ್ರಿಯಿಸಿ ಆಲ್ ಇಸ್ ವೆಲ್, ಆ ರೀತಿ ಏನು ನಡೆದಿಲ್ಲ ಎನ್ನುವ ಮೂಲಕ ಜಾರಿಕೊಂಡಿದ್ದಾರೆ.
ಬೆಂಗಳೂರು: ಸಚಿವರು ಕೈಗೆ ಸಿಗುತ್ತಿಲ್ಲ ಎಂದು ಕಾಂಗ್ರೆಸ್ನ ಕೆಲ ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ (CM Siddaramaiah) ಪತ್ರ ಬರೆದಿದ್ದಾರೆ. ಈ ಸಂಬಂಧ ನಿನ್ನೆ (ಜು.27) ರಂದು ನಡೆದ ಶಾಸಕಾಂಗ ಸಭೆಯಲ್ಲಿ ಕೆಲ ಶಾಸಕರು ಅಸಮಾಧಾನಗೊಂಡಿರುವ ಸಂಗತಿ ನಿಜ ಅನ್ನೋದು ಬಯಲಿಗೆ ಬಂದಿದೆ. ಅಂಥ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗದರಿದ ಪ್ರಸಂಗವು ನಡೆದಿತ್ತು. ಈ ವಿಚಾರವಾಗಿ ಸಚಿವರು ಪ್ರತಿಕ್ರಿಯೆ ನೀಡಿದ್ದು, ಆಲ್ ಇಸ್ ವೆಲ್, ಆ ರೀತಿ ಏನು ನಡೆದಿಲ್ಲ ಎಂದಿದ್ದಾರೆ. ಸಿಪಿಎಲ್ (CPL Meeting) ಸಭೆಯಲ್ಲಿ ಯಾವುದೇ ಶಾಸಕರು ಅಸಮಾಧಾನ ಹೊರಹಾಕಿಲ್ಲ. ಈ ಹಿಂದೆ ನಡೆದಿದ್ದ ಶಾಸಕಾಂಗ ಪಕ್ಷದ ಸಭೆ ಅರ್ಧದಲ್ಲೇ ನಿಂತಿತ್ತು. ಹೀಗಾಗಿ ಕೆಲ ಶಾಸಕರು ಸಭೆ ಕರೆಯುವಂತೆ ಸಿಎಂಗೆ ಕೇಳಿಕೊಂಡಿದ್ದರು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸಿಎಂಗೆ ಪತ್ರ ಬರೆದು ಶಾಸಕಾಂಗ ಪಕ್ಷದ ಸಭೆ ಕರೆಯಲು ಹೇಳಿದ್ದರು. ಪತ್ರ ಬರೆಯೋದು ಅಷ್ಟೊಂದು ಸೂಕ್ತವಲ್ಲ ಎಂದು ಶಾಸಕರಿಗೆ ಸಿಎಂ ಸೂಚಿಸಿದ್ದಾರೆ. ಮೌಖಿಕವಾಗಿ ಹೇಳಿದ್ದರೆ ನಾನು ಸಿಎಲ್ಪಿ ಸಭೆ ಕರೆಯುತ್ತಿದ್ದೆ ಅಂದಿದ್ದಾರೆ. ಪತ್ರ ಬರೆದು ಸಹಿ ಅಭಿಯಾನ ಮಾಡುವ ಸಂಪ್ರದಾಯ ಬೇಡ ಎಂದಿದ್ದಾರೆ. ಪತ್ರ ಬರೆದಿದ್ದ ಶಾಸಕರಿಗೆ ಸಭೆಯಲ್ಲಿ ಸಿಎಂ ತಾಕೀತು ಮಾಡಿದ್ದಾರೆ. ತಿಳಿಯದೇ ಪತ್ರ ಬರೆದಿದ್ದಾಗಿ ಶಾಸಕರು ಸಭೆಯಲ್ಲಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: BR Patil: ಸಿಎಂ ಸಿದ್ದರಾಮಯ್ಯಗೆ ಬರೆದಿದ್ದು ಎನ್ನಲಾದ ಪತ್ರ ನಕಲಿ; ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಸ್ಪಷ್ಟನೆ
ಆದಾದ ಮೇಲೆ ಶಾಸಕರ ಸಮಸ್ಯೆಗಳು ಚರ್ಚೆಯಾದವು. ಸಚಿವರುಗಳು ಇನ್ನೂ ಹೆಚ್ಚಿನದಾಗಿ ಶಾಸಕರಿಗೆ ಸ್ಪಂದಿಸಬೇಕು ಎಂದು ಪ್ರಸ್ತಾಪ ಮಾಡಿದರು. ಪ್ರತಿ ಜಿಲ್ಲೆಯ ಶಾಸಕರು ಮತ್ತು ಉಸ್ತುವಾರಿ ಸಚಿವರ ಸಭೆ ಪ್ರತ್ಯೇಕವಾಗಿ ಕರೆಯುವ ಭರವಸೆ ಸಿಎಂ ಕೊಟ್ಟಿದ್ದಾರೆ. ಸಿಎಲ್ಪಿ ಸಭೆಯಲ್ಲಿ ಬಿ.ಆರ್.ಪಾಟೀಲ್ ರಾಜೀನಾಮೆ ಕೊಡುತ್ತೇನೆ ಎಂದಿದ್ದು ಸುಳ್ಳು ವಿಚಾರ ಎಂದು ಸ್ಪಷ್ಟನೆ ನೀಡಿದರು.
ನಾವು ಕೈಗೆ ಸಿಗುತ್ತಿದ್ದೇವೆ, ಯಾವುದೋ ಸಂದರ್ಭದಲ್ಲಿ ಪತ್ರ ಬರೆದಿರಬಹುದು
ನಾವು ಕೈಗೆ ಸಿಗುತ್ತಿದ್ದೇವೆ. ಯಾವುದೋ ಸಂದರ್ಭದಲ್ಲಿ ಪತ್ರ ಬರೆದಿರಬಹುದು. ಬೇರೆ ಬೇರೆ ಕಾರಣಗಳಿಂದ ಅನುದಾನ ಹಂಚಿಕೆ ವಿಳಂಬ ಆಗಿದೆ. ಕೆಲವರು ಶಾಸಕರು, ಮಂತ್ರಿಗಳು ಕೂಡಿ ವರ್ಗಾವಣೆಗೆ ಪತ್ರ ಕೊಟ್ಟಿದ್ದಾರೆ. ಜಿಲ್ಲಾವಾರು ಸಭೆ ಮಾಡುತ್ತೆನೆ ಎಂದು ಸಿಎಂ ಹೇಳಿದ್ದಾರೆ. ಹೀಗಾಗಿ ನಿನ್ನೆಯ ಸಭೆಯಲ್ಲಿ ಎಲ್ಲಾ ಸರಿಯಾಗಿದೆ. ಅಸಮಾಧಾನ ಬರುತ್ತದೆ ಅಸಮಾಧಾನ ಹೋಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಶಾಸಕರು ಪತ್ರ ಬರೆಯುವುದರಲ್ಲಿ ತಪ್ಪಿಲ್ಲ, ಅದು ಶಾಸಕರ ಹಕ್ಕು
ನಿನ್ನೆಯ ಸಿಎಂ ಸಭೆಯಲ್ಲಿ ಎರಡು ಪತ್ರಗಳ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿಯ ನಕಲಿ ಪತ್ರ, ನಮ್ಮ ಶಾಸಕರ ಪತ್ರದ ಬಗ್ಗೆ ಚರ್ಚೆ ನಡೆದಿದೆ. ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ. ತಿಂಗಳು, 2 ತಿಂಗಳಿಗೊಮ್ಮೆ ಸಚಿವರ ಸಭೆ ಕರೆಯಲಾಗುತ್ತಿತ್ತು. ಈ ಬಾರಿ ಜಿಲ್ಲಾ ಮಟ್ಟದಲ್ಲಿ ಸಭೆ ನಡೆಸೋಣ ಎಂದು ಸಿಎಂ ಹೇಳಿದ್ದಾರೆ. ಶಾಸಕರು ಪತ್ರ ಬರೆಯುವುದರಲ್ಲಿ ತಪ್ಪಿಲ್ಲ, ಅದು ಶಾಸಕರ ಹಕ್ಕು. ಆದರೆ ಬಿಜೆಪಿಯವರು ಪತ್ರ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಹಾಗಾಗಿ ನೇರವಾಗಿ ಹೇಳಿ ಎಂದು ಸಿಎಂ, ಡಿಸಿಎಂ ಹೇಳಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:55 pm, Fri, 28 July 23