ಬೆಂಗಳೂರು: ಪ್ರಹ್ಲಾದ್ ಜೋಶಿಯವರು ಮುಖ್ಯಮಂತ್ರಿ ಆಗಬಾರದು ಎಂದಿಲ್ಲ. ಆದರೆ ಅವರ ಡಿಎನ್‌ಎ, ಅವರ ಹಿನ್ನೆಲೆ ಏನು ಅಂತ ನಾನು ಹೇಳಿದ್ದೇನೆ. ನಾನು ಯಾವತ್ತು ಜಾತಿ ರಾಜಕಾರಣಕ್ಕೆ ಪ್ರಾಶಸ್ತ್ಯ ನೀಡಿದವನಲ್ಲ. ಯಾವುದೇ ಸಮುದಾಯದಕ್ಕೂ ನಾನು ಅವಮಾನ ಮಾಡಿಲ್ಲ. ಈ ಬಗ್ಗೆ ಈಗಾಗಲೇ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ರಾಜ್ಯದ ಬ್ರಾಹ್ಮಣರು ಸುಸಂಸ್ಕೃತಿಯಿಂದ ಜೀವನ ಮಾಡುತ್ತಿದ್ದಾರೆ. ಯಾವುದೇ ಸಮಾಜದ ಮನಸ್ಸಿಗೆ ನೋವಾಗಬೇಕೆಂದು ಹೇಳಿಕೆ ಕೊಟ್ಟಿಲ್ಲ. ರಾಜ್ಯದಲ್ಲಿ ಬೆಂಕಿ ಹಚ್ಚಬೇಕೆಂದು ನಾನು ಹೇಳಿಕೆ ನೀಡಿಲ್ಲ ನಮ್ಮ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಿಜೆಪಿ ನಾಯಕರ ಟೀಕೆಯನ್ನು ನಾನು ಗಮನಿಸಿದ್ದೇನೆ. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ಸಾರ್ವಜನಿಕರಿಂದ ಅಹವಾಲು ಕೇಳುವಾಗಲೂ ಜಾತಿ ಕೇಳಿಲ್ಲ. ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ನೋಡಿ, ಕರ್ನಾಟಕಕ್ಕೂ ಸ್ವಾತಂತ್ರ್ಯ ವೀರ್ ಸಾರ್ವಕರ್ಗೂ ಸಂಬಂಧವೇನು? ಕರ್ನಾಟಕಕ್ಕೂ ಗೋಡ್ಸೆಗೂ ಸಂಬಂಧವೇನು. ಸಮಾಜ ಒಡೆಯುವ ಕೆಲಸಕ್ಕೆ ಬಿಜೆಪಿಯವರು ಕೈಹಾಕಿದ್ದಾರೆ ಎಂದು ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಕುಟುಂಬದಲ್ಲಿ ಹೊತ್ತಿಕೊಂಡ ಟಿಕೆಟ್ ಕಿಡಿ ಹಾರಿಸಲೆಂದೇ ‘ಬ್ರಾಹ್ಮಣ ಸಿಎಂ’ ಬಾಂಬ್ ಸಿಡಿಸಿದ್ರಾ ಕುಮಾರಸ್ವಾಮಿ?
ಈ ಬಾರಿ ಲಿಂಗಾಯತರು ಬಿಜೆಪಿಗೆ ವೋಟ್ ಹಾಕುವುದಿಲ್ಲ. ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಪಕ್ಕಾ. ನಮ್ಮ ಪಕ್ಷಕ್ಕೆ ಬಹುಮತ ಬರದಿದ್ದರೂ 2 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ನನಗೆ ರಾಷ್ಟ್ರೀಯ ಪಕ್ಷಗಳ ಸರ್ಟಿಫಿಕೇಟ್ ಬೇಕಿಲ್ಲ. ಈ ಬಾರಿ ಜೆಡಿಎಸ್ 123 ಸ್ಥಾನ ಗೆದ್ದೇ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಿಜೆಪಿಯಲ್ಲಿರುವ ಎಲ್ಲ ಶಾಸಕರು ಪರಿಶುದ್ಧವಾಗಿದ್ದಾರಾ. ಮೀಸಲಾತಿ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದರು ಯಾರು? ಅಶ್ವಥ್ ನಾರಯಣ್ ಏನೋ ತಿಂದಿದ್ದಾರೆ ಅಂದ್ರು. ಸಾರ್ವಜನಿಕರ ಟ್ರಸ್ಟ್ ಅನ್ನು ಬೇಕಾದವರಿಗೆ ಕೊಟ್ಟಿದ್ದು, ಇದಕ್ಕಿಂತ ಹೇಳಬೇಕಾ? ಮಹಾನುಭಾವ ಎಲ್ಲಿ ಕೂತು ಆಸ್ತಿ ಬರೆದುಕೊಟ್ಡಿದ್ದಾನೆ ನೋಡ್ಕೊಳಿ ಎಂದು ಬಿಎಂಎಸ್ ಟ್ರಸ್ಟಿ ಜೊತೆಗೆ ಸಚಿವ ಅಶ್ವಥ್ ನಾರಾಯಣ ಊಟ ಮಾಡುತ್ತಿರುವ ಫೋಟೊವನ್ನು ಕುಮಾರಸ್ವಾಮಿ ತೋರಿಸಿದರು. ಇದರ ಬಗ್ಗೆ ಮೋದಿಯವರು ಉತ್ತರ ಕೊಡುತ್ತಾರಾ..? ಈ ಹಿಂದೆ ಅಧಿವೇಶನದಲ್ಲೂ ಕುಮಾರಸ್ವಾಮಿ ಬಿಎಂಎಸ್ ಟ್ರಸ್ಟ್ನ ಅಕ್ರಮದ ಬಗ್ಗೆ ಪ್ರಸ್ತಾಪಿಸಿದ್ದರು.
ನಾನು ಸಿ.ಟಿ.ರವಿ ವಿಚಾರಕ್ಕೆ ಹೋಗಿಲ್ಲ, ಆದರೂ ಟೀಕೆ ಮಾಡುತ್ತಾರೆ. ಸಿ.ಟಿ.ರವಿ ಇತಿಹಾಸ ಏನು ಅಂತಾ ರಾಜ್ಯದ ಜನರಿಗೆ ಗೊತ್ತಿದೆ. ಶಿಕ್ಷಕನೋರ್ವ KRSನಿಂದ ಬಿದ್ದು ಯಾಕೆ ಸತ್ತ ಎಂದು ಹೇಳ್ತಿರಾ? ನನ್ನ ಬಗ್ಗೆ ಹೇಳಿಕೆ ಕೊಡುವಾಗ ಎಚ್ಚರಿಕೆ ಇರಲಿ ಎಂದು ಕಿಡಿಕಾರಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:23 pm, Tue, 7 February 23