ಗ್ಯಾರೆಂಟಿ ಸಮಾವೇಶ: ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

ಒಂದು ವರ್ಷದಿಂದ ನಿಮ್ಮ ಇಡೀ ಸರಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ 'ಜಾಹೀರಾತು ಜಾತ್ರೆ'ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಗ್ಯಾರೆಂಟಿ ಸಮಾವೇಶ: ಸಿದ್ದರಾಮಯ್ಯ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ
Updated By: ವಿವೇಕ ಬಿರಾದಾರ

Updated on: Mar 10, 2024 | 11:17 AM

ಬೆಂಗಳೂರು, ಮಾರ್ಚ್​ 10: ರಾಜ್ಯ ಇತಿಹಾಸದಲ್ಲಿ ಕಂಡೂ ಕೇಳರಿಯದ ಬರವಿದೆ (Drought). ಜಲಕ್ಷಾಮ ಬಿಗಡಾಯಿಸಿದೆ. ಹನಿ ನೀರಿಗೂ ತತ್ವಾರ, ಜನ ಜಾನುವಾರುಗಳ ಹಾಹಾಕಾರ. ಪರಿಸ್ಥಿತಿ ಹೀಗಿದ್ದರೂ ಕಾಂಗ್ರೆಸ್​ ಸರ್ಕಾರ ಕೋಟಿ ಕೋಟಿ ರೂ. ಜನರ ತೆರಿಗೆ ಹಣ ಸುರಿದು ಗ್ಯಾರಂಟಿ ಸಮಾವೇಶಗಳನ್ನು ಮಾಡುತ್ತಿದೆ. ಲಜ್ಜೆಗೇಡು!! ಅಂತ ಹ್ಯಾಶ್​ಟ್ಯಾಗ್​ ಕರ್ನಾಟಕದ_ಝೀರೋ, ಸಿದ್ದನಾಮಿಕ್ಸ್ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumarswamy) ವಾಗ್ದಾಳಿ ಮಾಡಿದ್ದಾರೆ.

ಸರಣಿ ಟ್ವೀಟ್​ ಮಾಡಿದ ಅವರು “ರೋಮ್ ಹೊತ್ತು ಉರಿಯುತ್ತಿದ್ದರೆ ನೀರೋ ಪಿಟೀಲು ಬಾರಿಸುತ್ತಿದ್ದ! ಸಿದ್ದರಾಮಯ್ಯನವರೇ ನೀವೇ ನಮ್ಮ ನೀರೋ!! ರಾಜ್ಯದ ಪಾಲಿನ ಝೀರೋ!! ನಿಮಗೆ ಜನರ ಚಿಂತೆ ಇಲ್ಲ, ಚುನಾವಣೆ ಚಿಂತೆಯಷ್ಟೇ. ಆ ಚಿಂತೆಯೇ ನಿಮ್ಮ ಪಕ್ಷ, ಸರಕಾರಕ್ಕೆ ಚಿತೆಯಾಗಲಿದೆ. ಇದು ಜನರೇ ನುಡಿಯುತ್ತಿರುವ ಭವಿಷ್ಯ. ಪ್ರಜೆಗಳ ಮಾತು, ಆ ಪರಮೇಶ್ವರನ ಮಾತು ಒಂದೇ! ಸುಳ್ಳಾಗದು” ಎಂದರು.

“ಬರಪೀಡಿತ ರೈತರಿಗೆ ಕೊಡಲು ಈ ನಿಮ್ಮ ಸರಕಾರಕ್ಕೆ 2000 ರೂ. ಗತಿ ಇಲ್ಲ. ಆದರೆ, ಗ್ಯಾರಂಟಿ ಸಮಾವೇಶಗಳಿಗೆ ಬೇಕಾದಷ್ಟು ಹಣವಿದೆ. ತುರ್ತು ಉದ್ದೇಶಕ್ಕೆ ಇರಿಸಿರುವ ಜಿಲ್ಲಾಧಿಕಾರಿ, ತಹಸೀಲ್ದಾರುಗಳ ಪಿಡಿ ಖಾತೆಗೆ ನಿಮ್ಮ ಸರಕಾರ ಕನ್ನ ಹಾಕಿದೆ. ಜನರ ಹಾಹಾಕಾರವೇ ನಿಮಗೆ ಭರ್ಜರಿ ಆಹಾರ!! ಹೌದಲ್ಲವೇ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್​ಗೆ ಫಿಕ್ಸ್; ಹೆಚ್​ಡಿ ಕುಮಾರಸ್ವಾಮಿ, ಅಮಿತ್ ಶಾ ಮಾತುಕತೆ

“ಈ ಗ್ಯಾರಂಟಿ ಸಮಾವೇಶಗಳಿಗೆ, ಜಾಹೀರಾತು ಜಾತ್ರೆಗಳಿಗೆ ವರ್ಷದಿಂದ ಎಷ್ಟು ಸಾವಿರ ಕೋಟಿ ಸುರಿದಿದ್ದಿರಿ ಸಿದ್ದರಾಮಯ್ಯನವರೇ? ಜನರ ಮುಂದೆ ಲೆಕ್ಕ ಇಡಿ. ಬೇಕಾದರೆ ‘ಗ್ಯಾರಂಟಿ ಪ್ರಚಾರ ಸಮಾವೇಶ ಖರ್ಚು ಬಾಬತ್ತಿನ ಶ್ವೇತಪತ್ರ’ ಹೊರಡಿಸಿ. ನಿಮ್ಮ ಸರಕಾರದ ಅಸಲಿ ಬಣ್ಣ ಏನೆಂಬುದು ಜನರಿಗೆ ಗೊತ್ತಾಗಲಿ ಎಂದು ವಾಗ್ದಾಳಿ ಮಾಡಿದರು.

“ಒಂದು ವರ್ಷದಿಂದ ನಿಮ್ಮ ಇಡೀ ಸರಕಾರದ ಬದುಕು ಜಾಹೀರಾತು ಮೇಳದಲ್ಲೇ ಮುಗಿದು ಹೋಗಿದೆ. ನಿಮ್ಮ ಹಿಂದೆ ಮುಂದೆ ಸುತ್ತುವ ಪಟಾಲಂಗಳ ಏಜೆನ್ಸಿಗಳ ಮೂಲಕ ‘ಜಾಹೀರಾತು ಜಾತ್ರೆ’ಯನ್ನು ಎಗ್ಗಿಲ್ಲದೆ ಮಾಡುತ್ತಿದ್ದೀರಿ. ಬರದಲ್ಲಿ ಬೆಂದು ಕಣ್ಣೀರು ಹಾಕುತ್ತಿರುವ ಜನರ ಹಣವನ್ನು ಹೀಗೆ ಪ್ರಚಾರದ ತೆವಲಿಗೆ ಸುರಿಯುತ್ತಿರುವ ನಿಮಗೆ ನಾಚಿಕೆ ಆಗುವುದಿಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ