ಬಾಗಲಕೋಟೆ, ಡಿಸೆಂಬರ್ 25: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರ ಮಾತನ್ನು ಯಾರೂ ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ. ಹಾದಿ ಬೀದಿಯಲ್ಲಿ ಹೋಗೋರು ಮಾತನಾಡಿದರೆ ಉತ್ತರ ಕೊಡಲ್ಲ. ಏನು ಮಾತಾಡ್ತಿದ್ದೀನಿ ಅಂತಾ ಅವರಿಗೆ ಅರ್ಥ ಆಗುತ್ತೋ ಇಲ್ವೋ ಗೊತ್ತಿಲ್ಲ. ದೀಪ ಆರುವಾಗ ಗಾಳಿಗೆ ಜಾಸ್ತಿ ಉರಿಯುತ್ತೆ ಎಂದು ಬಿಜೆಪಿ (BJP) ನೂತನ ಪದಾಧಿಕಾರಿಗಳ ಬಗ್ಗೆ ಯತ್ನಾಳ್ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿದ ವಿಚಾರವಾಗಿ ಮಾಜಿ ಸಚಿವ ಮುರುಗೇಶ್ ನಿರಾಣಿ (Muragesh Nirani) ಪರೋಕ್ಷವಾಗಿ ತಿರುಗೇಟು ನೀಡಿದರು.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಇನ್ನು ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದುಹೋಗುತ್ತೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ. ಈ ಸರ್ಕಾರ ಹಿಂದೂಗಳಿಗೆ ತಾರತಮ್ಯ ಮಾಡುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯಲು ಜನ ಎದುರು ನೋಡುತ್ತಿದ್ದಾರೆ. ಈ ಸರ್ಕಾರ ತಾನಾಗೆ ಬಿದ್ದು ಹೋಗುತ್ತೆ. ಈಗಾಗಲೇ ಕಾಂಗ್ರೆಸ್ ಸರ್ಕಾರ ಕೋಮಾದಲ್ಲಿದೆ. ಅದರ ಬಗ್ಗೆ ಮಾತನಾಡಿ ನಾವೇಕೆ ಪಾಪ ಕಟ್ಟಿಕೊಳ್ಳುವ ಕೆಲಸ ಮಾಡಬೇಕು ಎಂದು ಹೇಳಿದರು.
ಇದನ್ನೂ ಓದಿ: ನಾನೀಗ ಸರ್ವ ಸ್ವತಂತ್ರ, ಲೋಕಸಭೆ ಚುನಾವಣೆ ಬಳಿಕ ಬದಲಾವಣೆಯಾಗುತ್ತೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
ಹಿಜಾಬ್ ನಿಷೇಧ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡುತ್ತೇನೆ, ಬೆಳಿಗ್ಗೆ ಒಂದು, ಮದ್ಯಾಹ್ನ ಒಂದು ಮತ್ತು ಸಂಜೆ ಒಂದು ಹೇಳಿಕೆ ನೀಡುತ್ತಾರೆ. ಹಿಜಾಬ್ ಪ್ರಕರಣ ಸುಪ್ರೀಂಕೋರ್ಟ್ನಲ್ಲಿದ್ದರೂ ಹೇಳಿಕೆ ನೀಡಿದ್ದಾರೆ. ಶಾಲೆಗೆ ಮಕ್ಕಳು ಯಾವ ಬೇಕಾದರೂ ಡ್ರೆಸ್ನಲ್ಲಿ ಬರಬಹುದು. ಸಿರಿವಂತರು, ಬಡವರು, ಮೇಲ್ಜಾತಿ-ಕೆಳಜಾತಿ ಎಂಬ ಬೇದ-ಭಾವ ಬರಬಾರದೆಂದು ಸಮವಸ್ತ್ರ ಮಾಡಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಾನತೆ ಬೇಕಾಗಿಲ್ಲ. ಬಡವರು ಬಡವರಾಗಿ ಇರಬೇಕು. ಶ್ರೀಮಂತರು ಶ್ರೀಮಂತರಾಗಿ ಇರಬೇಕು ಎಂಬ ಆಸೆ ಇದೆ ಎಂದು ವಾಗ್ದಾಳಿ ಮಾಡಿದರು.
ಇಡೀ ಜಗತ್ತಿನಲ್ಲಿ ನಮ್ಮದು ಹಿಂದೂ ರಾಷ್ಟ್ರ. ಅಂತಹ ಭಾರತ ದೇಶದಲ್ಲಿ ಯಾರನ್ನು ಓಲೈಸುತ್ತಾರೆ ಅನ್ನೋದು ನಿತ್ಯ ನೋಡುತ್ತಿದ್ದೇವೆ. ಮುಸ್ಲಿಂ ಬಾಂಧವರಿಗೆ 10 ಸಾವಿರ ಕೋಟಿ ಮೀಸಲು ಇಡುತ್ತೇನೆ ಅಂತ ಹೇಳುತ್ತಿದ್ದಾರೆ. ಹಿಂದೂಗಳು ಏನು ಪಾಪ ಮಾಡಿದ್ದಾರೆ. ಹಿಂದೂಗಳಿಗೆ ಒಂದು ರೂಪಾಯಿನೂ ಘೋಷಣೆ ಮಾಡದ ಈ ಸರ್ಕಾರವನ್ನ ಕಿತ್ತು ಒಗೆಯಲು ಜನರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ