Yashwant Sinha ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ

| Updated By: ರಶ್ಮಿ ಕಲ್ಲಕಟ್ಟ

Updated on: Jun 21, 2022 | 4:31 PM

President Of India Election 2022 ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ.

Yashwant Sinha ರಾಷ್ಟ್ರಪತಿ ಚುನಾವಣೆ: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿ
ಯಶವಂತ್ ಸಿನ್ಹಾ
Follow us on

ದೆಹಲಿ: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ (President polls) ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ (Yashwant Sinha) ಕಣಕ್ಕಿಳಿಯಲಿದ್ದಾರೆ. ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ, “ಟಿಎಂಸಿಯಲ್ಲಿ(TMC) ಮಮತಾ ಜೀ ಅವರು ನನಗೆ ನೀಡಿದ ಗೌರವ ಮತ್ತು ಪ್ರತಿಷ್ಠೆಗೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ವಿರೋಧ ಪಕ್ಷಗಳ ಏಕತೆಗಾಗಿ ಕೆಲಸ ಮಾಡಲು ಈಗ ಒಂದು ದೊಡ್ಡ ರಾಷ್ಟ್ರೀಯ ಉದ್ದೇಶಕ್ಕಾಗಿ ನಾನು ಪಕ್ಷದಿಂದ ದೂರ ಸರಿಯಬೇಕಾದ ಸಮಯ ಬಂದಿದೆ. ಅವರು ಈ ಹೆಜ್ಜೆಯನ್ನು ಅನುಮೋದಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ”ಎಂದಿದ್ದಾರೆ. ಭಾರತದ ಹಣಕಾಸು ಮತ್ತು ವಿದೇಶಾಂಗ ಸಚಿವರಾಗಿ ಸೇವೆ ಸಲ್ಲಿಸಿರುವ ಯಶವಂತ್ ಸಿನ್ಹಾ ಅವರು ತೃಣಮೂಲ ಕಾಂಗ್ರೆಸ್‌ನ ಉಪಾಧ್ಯಕ್ಷರಾಗಿದ್ದಾರೆ. 2018ರಲ್ಲಿ ಬಿಜೆಪಿ ತೊರೆದಿದ್ದರು. ಪಶ್ಚಿಮ ಬಂಗಾಳದ ಮಾಜಿ ಗವರ್ನರ್ ಮತ್ತು ಮಹಾತ್ಮ ಗಾಂಧಿಯವರ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರು ರಾಷ್ಟ್ರಪತಿ ಹುದ್ದೆಗೆ ನಾಮನಿರ್ದೇಶನಗೊಳ್ಳಲು ನಿರಾಕರಿಸಿದ ಒಂದು ದಿನದ ನಂತರ, ಮಂಗಳವಾರದಂದು ಶರದ್ ಪವಾರ್ ಅವರ ನಿವಾಸದಲ್ಲಿ ವಿಪಕ್ಷ ನಾಯಕರು ರಾಷ್ಟ್ರಪತಿ ಚುನಾವಣೆಯ ಕುರಿತು ಚರ್ಚೆ ನಡೆಸಲು ಸಭೆ ನಡೆಸುತ್ತಿರುವ ಹೊತ್ತಲ್ಲೇ ಸಿನ್ಹಾ ಅವರು ಈ ರೀತಿ ಟ್ವೀಟ್ ಮಾಡಿದ್ದರು. ಈ ಹಿಂದೆ, ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಕೂಡಾ ವಿಪಕ್ಷಗಳ ಮನವಿ ನಿರಾಕರಿಸಿದ್ದರು.


ಮುಂಬರುವ ರಾಷ್ಟ್ರಪತಿ ಚುನಾವಣೆಯಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಮೋದಿ ಸರ್ಕಾರ ಮಾಡುತ್ತಿರುವ ಹಾನಿಗಳನ್ನು ತಡೆಯಲು ನಿರ್ಧರಿಸಿದ್ದೇವೆ. ಇಂದು ನಡೆದ ಸಭೆಯಲ್ಲಿ ಯಶವಂತ್ ಸಿನ್ಹಾ ಅವರನ್ನು ನಮ್ಮ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದೇವೆ. ಯಶವಂತ್ ಸಿನ್ಹಾ ಅವರಿಗೆ ಮತ ನೀಡುವಂತೆ ನಾವು ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇವೆ ಎಂದು ಕಾಂಗ್ರೆಸ್ ಸಂವಹನ ಮುಖ್ಯಸ್ಥ ಜೈರಾಮ್ ರಮೇಶ್ ಹೇಳಿದ್ದಾರೆ.

ತೃಣಮೂಲ ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳ ನಂತರ ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳು ಘೋಷಣೆ ಮಾಡಿವೆ.ಭಾರತದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವದ ರಚನೆಯನ್ನು ಎತ್ತಿಹಿಡಿಯಲು ಯಶವಂತ್ ಸಿನ್ಹಾ ಅವರು ಅರ್ಹರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.


ರಾಷ್ಟ್ರಪತಿ ಅಭ್ಯರ್ಥಿಯ ಬಗ್ಗೆ ಒಮ್ಮತ ಮೂಡಿಸಲು ಮೋದಿ ಸರ್ಕಾರ ಯಾವುದೇ ಗಂಭೀರ ಪ್ರಯತ್ನ ಮಾಡಿಲ್ಲ ಎಂದು ವಿಷಾದಿಸುತ್ತೇವೆ. ನಾವು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗೆ ಸಿನ್ಹಾ ಅವರನ್ನು ಬೆಂಬಲಿಸುವಂತೆ ನಾವು ಮನವಿ ಮಾಡುತ್ತೇವೆ, ಇದರಿಂದ ನಾವು ಅರ್ಹ ‘ರಾಷ್ಟ್ರಪತಿ’ಯನ್ನು ಅವಿರೋಧವಾಗಿ ಆಯ್ಕೆ ಮಾಡಬಹುದು ಎಂದು ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳನ್ನೊಳಗೊಂಡ ವಿರೋಧ ಪಕ್ಷಗಳ ಜಂಟಿ ಹೇಳಿಕೆಯಲ್ಲಿ ಹೇಳಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 21 June 22