Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಎಸ್​ವೈ ಮನೆಯಲ್ಲಿ ಮೈತ್ರಿಕೂಟದ ಮೊದಲ ಸಭೆ: ಈ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಓಕೆ ಎಂದ ಬಿಜೆಪಿ

ಮೊನ್ನೇ ಅಷ್ಟೇ ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಹಾಗೂ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಚರ್ಚೆ ಮಾಡಿದ್ದರು. ಇದರ ಬೆನ್ನಲ್ಲೇ ಇದೀಗ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಬಿಜೆಪಿ ನಾಯಕರ ಜೊತೆ ಸಭೆ ನಡೆಸಿದ್ದಾರೆ. ಮೈತ್ರಿಕೂಟದ ಈ ಮೊದಲ ಸಭೆಯಲ್ಲಿ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಡಲು ಬಿಜೆಪಿ ತೀರ್ಮಾನಿಸಿದೆ. ಯಾವ ಕ್ಷೇತ್ರ? ಇಲ್ಲಿದೆ ವಿವರ.

ಬಿಎಸ್​ವೈ ಮನೆಯಲ್ಲಿ ಮೈತ್ರಿಕೂಟದ ಮೊದಲ ಸಭೆ: ಈ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ಓಕೆ ಎಂದ ಬಿಜೆಪಿ
ಬಿಜೆಪಿ, ಜೆಡಿಎಸ್ ನಾಯಕರ ಸಭೆ
Follow us
ರಮೇಶ್ ಬಿ. ಜವಳಗೇರಾ
|

Updated on: Jan 21, 2024 | 12:27 PM

ಬೆಂಗಳೂರು (ಜನವರಿ 21): ಲೋಕಸಭೆ ಚುನಾವಣೆಗೆ (Loksabha Elections 2024) ಎನ್‌ಡಿಎ ಜತೆ ಮೈತ್ರಿ ಮಾಡಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ರಾಜ್ಯ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದಾರೆ. ಇಂದು (ಜನವರಿ 21) ಬೆಳಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ಬಿಜೆಪಿ ಹಾಗೂ ಜೆಡಿಎಸ್​ ನಾಯಕರು ಮೊದಲ ಮೈತ್ರಿ ಸಭೆ ಮಾಡಿದರು. ಈ ಸಭೆಯಲ್ಲಿ ಉಪ ಚುನಾವಣೆ ನಡೆಯಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರವನ್ನು ಜೆಡಿಎಸ್​ಗೆ ಕ್ಷೇತ್ರ ಬಿಟ್ಟುಕೊಡುವ ಬಗ್ಗೆ ಸಭೆಯಲ್ಲಿ ನಿರ್ಧಾರವಾಗಿದ್ದು, ಈ ಬಗ್ಗೆ ಪಕ್ಷದ ವರಿಷ್ಠರ ಭೇಟಿ ನಂತರ ಅಂತಿಮ ಘೋಷಣೆಯಾಗಲಿದೆ.

ಕಳೆದ ಬಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಆದ್ರೆ, ಇದೀಗ ಉಪಚುನಾವಣೆ ನಡೆಯುತ್ತಿರುವುದರಿಂದ ಈ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲು ತೀರ್ಮಾನಿಸಿದೆ. ಇದರೊಂದಿಗೆ ಮೊದಲ ಸಭೆಯಲ್ಲೇ ತಮ್ಮ ಮಿತ್ರ ಪಕ್ಷಕ್ಕೆ ಬಿಜೆಪಿ ನಾಯಕರು ಜೈ ಎಂದಿದ್ದು, ಅದನ್ನು ಹೈಕಮಾಂಡ್​ ಗಮನಕ್ಕೆ ತಂದು ಅಧಿಕೃತ ಘೋಷಣೆ ಮಾಡಲಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ, ಜೆಪಿ ನಡ್ಡಾ ಭೇಟಿಯಾದ ಕುಮಾರಸ್ವಾಮಿ: ಲೋಕಸಭೆ ಸೀಟು ಹಂಚಿಕೆ ಯಾವಾಗ ಫೈನಲ್?

ಎನ್ ಡಿಎ ಮೈತ್ರಿಕೂಟದ ಮೊದಲ ಮೈತ್ರಿ ಸಭೆಯಲ್ಲಿ ಸದ್ಯದ ರಾಜ್ಯ ರಾಜಕೀಯಯದ ಬಗ್ಗೆ ಮಹತ್ವದ ಚರ್ಚೆಗಳು ಆಗಿವೆ. ಮುಂಬರುವ ವಿಧಾನಪರಿಷತ್ ಹಾಗೂ ಲೋಕಸಭಾ ಚುನಾವಣೆ ಕುರಿತು ಮಾತುಕತೆಗಳು ನಡೆದಿವೆ. ಆದ್ರೆ, ಕ್ಷೇತ್ರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ ಎನ್ನಲಾಗಿದೆ.

ಸಭೆ ಬಳಿಕ ಕುಮಾರಸ್ವಾಮಿ ಹೇಳಿದ್ದಿಷ್ಟು

ಇನ್ನು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇವತ್ತು ಎರಡೂ ಪಕ್ಷಗಳ ನಾಯಕರು ಸಭೆ ಮಾಡಿದ್ದೇವೆ. ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಮುಂಬರುವ ಪರಿಷತ್ ಚುನಾವಣೆಗಳ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಸಭೆಯ ಮಾಹಿತಿಗಳನ್ನು ಬಿಜೆಪಿ ಹೈಕಮಾಂಡ್ ಗೆ ತಿಳಿಸಲಾಗುವುದು. ಇಲ್ಲಿಂದಲೇ ಒಟ್ಟಾಗಿ ಹೋಗುವ ಸಂದೇಶ ಕೊಟ್ಟಿದ್ದೇವೆ ಎಂದರು.

ಎರಡೂ‌ಪಕ್ಷಗಳೂ ಲೋಕಸಭೆಯಲ್ಲಿ ಜತೆಗೂಡಿ ಈ ಕೆಟ್ಟ ಸರ್ಕಾರದ ವಿರುದ್ಧ ಕೆಲಸ ಮಾಡಲು ತೀರ್ಮಾನಿಸಿದ್ದೇವೆ. ನಾಳೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ಕುಟುಂಬ ಸಮೇತ ಹೋಗ್ತಿದ್ದೇವೆ. ಹಲವು ರಾಜ್ಯಗಳು ನಾಳೆ ರಜೆ ಘೋಷಿಸಿವೆ. ಇದು ದೇಶದ ಹಬ್ಬ,ಪ್ರತೀ ಕುಟುಂಬದ ಹಬ್ಬ. ನಾಳೆಯ ಕಾರ್ಯಕ್ರಮವನ್ನು ಮನೆಯಲ್ಲಿದ್ದು‌ ಖುದ್ದು ನೋಡಲು ನಾಳೆ ಸಿದ್ದರಾಮಯ್ಯ ರಜೆ ಘೋಷಿಸಬೇಕೆಂದು ಆಗ್ರಹಿಸಿದರು.

ಮೊನ್ನೇ ಹೈಕಮಾಂಡ್ ಭೇಟಿಯಾಗಿದ್ದ ಎಚ್​ಡಿಕೆ

ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಅವರು ಮೊನ್ನೇ ದೇಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಆದ್ರೆ, ಜೆಡಿಎಸ್ ಕೆಲ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿರುವುದರಿಂದ ಬಿಜೆಪಿ ಹೈಕಮಾಂಡ್ ಇನ್ನೂ ಯಾವುದೇ ಸೀಟು ಹಂಚಿಕೆ ಬಗ್ಗೆ ತೀರ್ಮಾನ ಕೈಗೊಂಡಿಲ್ಲ. ರಾಜ್ಯ ಬಿಜೆಪಿ ನಾಯಕರ ಜೊತೆ ಜೆಡಿಎಸ್​ ಕೇಳಿರುವ ಕ್ಷೇತ್ರಗಳ ಬಗ್ಗೆ ಚರ್ಚಿಸಿ ಬಳಿಕ ಹೈಕಮಾಂಡ್​ ಅಧಿಕೃತವಾಗಿ ಪ್ರಕಟಿಸಲಿದೆ ಎಂದು ತಿಳಿದುಬಂದಿದೆ.

ಇನ್ನು ಮೈತ್ರಿ ಸಭೆಯಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್ ಅಶೋಕ್, ಮಾಜಿ ಸಿಎಂಗಳಾದ ಡಿವಿ ಸದಾನಂದಗೌಡ, ಬಸವರಾಜ ಬೊಮ್ಮಾಯಿ ಇದ್ದರು. ಇನ್ನು ಇತ್ತ ಜೆಡಿಎಸ್​ ಕಡೆಯಿಂದ ಎಚ್​ಡಿ ಕುಮಾರಸ್ವಾಮಿ, ಭೋಜೇಗೌಡ, ಬಂಡೆಪ್ಪ ಕಾಶಂಪೂರ್, ನಿಖಿಲ್ ಕುಮಾರಸ್ವಾಮಿ, ಜೆಟಿ ದೇವೇಗೌಡ ಸೇರಿದಂತೆ ಹಲವು ನಾಯಕರ ಹಾಜರಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ