ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ; ಶಾಸಕ ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ

| Updated By: sandhya thejappa

Updated on: Oct 24, 2021 | 3:23 PM

ನಾನು ಕಾಲೇಜಿನಲ್ಲಿ ಓದುತ್ತಿರುವಾಗ ನಾಲ್ಕು ವಾರ್ಡ್​ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ.

ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ; ಶಾಸಕ ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ
ಎಚ್ ​ಡಿ ಕುಮಾರಸ್ವಾಮಿ
Follow us on

ಮೈಸೂರು: ಕುಮಾರಸ್ವಾಮಿ ಸೂಟ್ಕೇಸ್ ರಾಜಕಾರಣ ಮಾಡ್ತಿದ್ದಾರೆ ಎಂಬ ಜಮೀರ್ ಹೇಳಿಕೆಗೆ ಹೆಚ್ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆಗಳಿಗೆ ನಾವು ಉತ್ತರ ಕೊಡುವುದಕ್ಕೆ ಆಗುತ್ತಾ? ಬೀದಿಯಲ್ಲಿ ಆನೆ ಹೋಗುತ್ತಿದ್ದಾಗ ನಾಯಿಗಳು ಬೊಗಳುತ್ತವೆ. ನಾನು ಕಂಡವರ ಸೂಟ್ಕೇಸ್​ಗೆ ಕೈಹಾಕಿದ್ದೇನೆ ಅಂದ್ಕೊಳ್ಳೋಣ. ಆದ್ರೆ ದೇವೆಗೌಡರ ಸೂಟ್ಕೇಸ್ ತರಲು ಬಂದಿದ್ದಾರೆ ಅಂದ್ರು. ನಾಲಿಗೆ ಇದೆ ಅಂತ ಹೊಲಸು ಮಾತನಾಡಿದ್ರೆ ಉತ್ತರಿಸಬೇಕಾ? ಅಂತ ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ನಾನು ಕಾಲೇಜಿನಲ್ಲಿ ಓದುತ್ತಿರುವಾಗ ನಾಲ್ಕು ವಾರ್ಡ್​ಗಳಲ್ಲಿ ಕಸದ ಟೆಂಡರ್ ತೆಗೆದುಕೊಂಡೆ. ಕಸದ ಟೆಂಡರ್ ತೆಗೆದುಕೊಂಡು ವೃತ್ತಿ ಮಾಡುತ್ತಿದ್ದೆ. ದೇವೆಗೌಡರು ಬೇಡ ಅಂದಾಗ ಅದನ್ನು ಬಿಟ್ಟೆ. ಮೈಸೂರಿನಲ್ಲಿ ಚಿತ್ರದ ಹಂಚಿಕೆದಾರನಾಗಿ ಕೆಲಸ ಮಾಡಿದೆ. ನಾನು ನನ್ನ ತಂದೆ ನೆರಳಲ್ಲಿ ಬೆಳೆಯಲಿಲ್ಲ. ಬಡ್ಡಿ ದುಡ್ಡು ತೆಗೆದುಕೊಂಡು ದುಡಿದಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಜೆಡಿಎಸ್​​​ ಪಕ್ಷ ಮುಗಿಸಲು ಯಾರಿಂದಲೂ ಆಗಲ್ಲ. ಉಪಚುನಾವಣೆಯಲ್ಲಿ 5 ದಿನಗಳ ಕಾಲ ಪ್ರಚಾರ ಮಾಡಿದ್ದೇನೆ. ಸಾಲ ಮನ್ನಾ ಮಾಡುವುದಕ್ಕೆ ಕಾಂಗ್ರೆಸ್ ಬೆಂಬಲ ಕೊಡಲಿಲ್ಲ. ಭಾಗ್ಯ ಕಾರ್ಯಕ್ರಮಗಳನ್ನ ನಿಲ್ಲಿಸಬಾರದು, ಬಜೆಟ್​ ಬೇಡ, ಬಜೆಟ್ ಮಂಡನೆ ಮಾಡಬಾರದು ಎಂದೆಲ್ಲಾ ಹೇಳಿದರು. ಕಾಂಗ್ರೆಸ್​​ ಜೊತೆ ಮೈತ್ರಿಯಿಂದ ಪಕ್ಷಕ್ಕೆ ಬಹಳ ಹಾನಿ ಆಗಿದೆ. ನಮಗೆ ಶಕ್ತಿ ಇದ್ದ ಕಡೆ ಹಿನ್ನಡೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮಳೆಯಿಂದ ಜನ ಸಂಕಷ್ಟದಲ್ಲಿದ್ದಾರೆ. ಬೂತ್​ಗೊಬ್ಬರು ಸಚಿವರನ್ನು ಬಿಜೆಪಿ ನಿಯೋಜನೆ ಮಾಡಿದೆ.  ಆಡಳಿತಾರೂಢ ಬಿಜೆಪಿಗೆ ಜನರ ಕಷ್ಟಕ್ಕಿಂತ ಎಲೆಕ್ಷನ್​ ಮುಖ್ಯ. ಉಪಚುನಾವಣೆಯಲ್ಲಿ ಗೆಲ್ಲುವುದೇ ಬಿಜೆಪಿಗೆ ಪ್ರಮುಖವಾಗಿದೆ. ಕಾಂಗ್ರೆಸ್​ ನಾಯಕರು ಸರ್ಕಾರದ ವಿರುದ್ಧ ಆರೋಪ ಮಾಡ್ತಾರೆ. ಜೆಡಿಎಸ್​ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿ ಹಾಕಿದ್ದಾರೆಂದು ಹೇಳ್ತಾರೆ. ದೇವೇಗೌಡರು ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ನಾಳೆ ಹಾನಗಲ್​ ಕ್ಷೇತ್ರದಲ್ಲಿ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದು ಹೆಚ್​ಡಿಕೆ ತಿಳಿಸಿದರು.

ಎಲ್ಲರ ಮನೆ ದೋಸೆನೂ ತೂತೆ; ಹೆಚ್​ಡಿಕೆ
ಅಲ್ಪಸಂಖ್ಯಾತರಿಗೆ ಟಿಕೆಟ್​ ನೀಡಬೇಕಿತ್ತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ವರುಣಾ ಕ್ಷೇತ್ರದಲ್ಲಿ ಮಗನ ಬದಲು ಬೇರೆಯವರಿಗೆ ಕೊಡಬೇಕಿತ್ತು. ಬೇರೆ ಕಾರ್ಯಕರ್ತರಿಗೆ ಸಿದ್ದರಾಮಯ್ಯ ಟಿಕೆಟ್​ ಕೊಡಬೇಕಿತ್ತು. ವರುಣಾ ಕ್ಷೇತ್ರದಲ್ಲಿ ಯಾರೂ ಕಾರ್ಯಕರ್ತರೇ ಇರಲಿಲ್ಲವಾ? ಸಿದ್ದರಾಮಯ್ಯನವರಿಗೆ ಕ್ಷೇತ್ರದಲ್ಲಿ ಕಾರ್ಯಕರ್ತರು ಕಾಣಲಿಲ್ವಾ? ನಮ್ಮದು ಫ್ಯಾಮಿಲಿ ಪಾರ್ಟಿ ಅಂತೀರಾ, ನಿಮ್ಮದು ಯಾವುದು? ಎಲ್ಲರ ಮನೆ ದೋಸೆನೂ ತೂತೆ, ಇದನ್ನ ತಿಳಿದುಕೊಳ್ಳಬೇಕು ಅಂತ ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್‌ಡಿಕೆ, ಜೆಡಿಎಸ್ ಪಕ್ಷ ಕಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಬ್ಯಾನರ್​ನಲ್ಲಿ ಫೋಟೋ ಇಲ್ಲವೆಂದು ಕಾರ್ಯಕ್ರಮಕ್ಕೆ ಬಂದಿಲ್ಲ. ಅವರು ಸಿಎಂ ಸ್ಥಾನವನ್ನ ಬೇರೆಯವರಿಗೆ ಬಿಟ್ಟುಕೊಡುತ್ತಾರಾ? ಕಾಲಿನ ಮೇಲೆ ಕಾಲುಹಾಕಿ ದೇವೆಗೌಡರನ್ನು ಒದ್ದುಕೊಂಡು ಕುಳಿತಿದ್ದರು. ಇದನ್ನೆಲ್ಲ ನಾವು ನೋಡಿದ್ದೇವೆ ಎಂದು ಹೇಳಿದರು.

ಹೋಗೋರನ್ನ ಹಿಡಿದುಕೊಳ್ಳುವುದಕ್ಕೆ ಆಗುತ್ತಾ?
ಪಕ್ಷ ಬಿಟ್ಟು ಹೋಗುವವರನ್ನ ಹಿಡಿದುಕೊಳ್ಳಲು ಸಾಧ್ಯವಿಲ್ಲ. ಇರುತ್ತೇನೆ ಅನ್ನೋರನ್ನ ಹೋಗು ಅಂದ್ರೆ ಹುಚ್ಚ ಅಂತಾರೆ. ಆದರೆ ಹೋಗೋರನ್ನ ಹಿಡಿದುಕೊಳ್ಳುವುದಕ್ಕೆ ಆಗುತ್ತಾ? ಗುಬ್ಬಿ ಶಾಸಕರು ಹೆಚ್​ಡಿಕೆ ಇಮೇಜ್ ಹಾಳಾಗಿದೆ ಅಂತಾರೆ. ಇಮೇಜ್ ಇಲ್ಲದವನಿಂದ ಏನ್ ಅನುಕೂಲ ಇರುತ್ತೆ. ಇಮೇಜ್ ಇರುವವರ ಹತ್ತಿರ ಹೋಗುತ್ತಾರೆ ಬಿಡಿ. ಪಕ್ಷ ಬಿಡುತ್ತೇನೆ ಅನ್ನೋರ ಬಗ್ಗೆ ನಾನು ಮಾತನಾಡಲ್ಲ ಅಂತ ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನಾನು ಬಸ್ ಮಾಲೀಕ, ಸ್ಕೂಟರ್ ಇಟ್ಟುಕೊಂಡು ಕಸ ಗುಡಿಸ್ತಿರಲಿಲ್ಲ; ಕುಮಾರಸ್ವಾಮಿ ವಿರುದ್ಧ ಜಮೀರ್ ವಾಗ್ದಾಳಿ

ಇದನ್ನೂ ಓದಿ: ಅತ್ಯಂತ ಅಸಹಾಯಕ ಅಧ್ಯಕ್ಷ ಎಂಬ ಪಟ್ಟ ಡಿಕೆ ಶಿವಕುಮಾರ್​ಗೆ: ಟ್ವೀಟ್ ಮೂಲಕ ಟಾಂಗ್ ಕೊಟ್ಟ ಬಿಜೆಪಿ

Published On - 2:48 pm, Sun, 24 October 21