ಪ್ರಧಾನಿ ಮೋದಿ ಮಾತು ಕೇಳಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ; 2019ರ ರಹಸ್ಯ ಬಿಚ್ಚಿಟ್ಟ ಹೆಚ್​​ಡಿ ಕುಮಾರಸ್ವಾಮಿ

ಪ್ರಧಾನಿ ಮಾತು ಕೇಳಿ ತೀರ್ಮಾನ ಕೈಗೊಂಡಿದ್ದರೆ ನಾನು ಕಳೆದ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಿದ್ದೆ. ಪದೇ ಪದೇ ಬಿಜೆಪಿ ಬಿ ಟೀಂ ಎಂದು ಹೇಳುತ್ತಾ ನೀವೇ ಬಿಜೆಪಿ ಕಡೆ ತಳ್ಳುತ್ತೀರಿ. ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವಾ? ಕುಮಾರಸ್ವಾಮಿ ಪ್ರಶ್ನೆ

ಪ್ರಧಾನಿ ಮೋದಿ ಮಾತು ಕೇಳಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ; 2019ರ ರಹಸ್ಯ ಬಿಚ್ಚಿಟ್ಟ ಹೆಚ್​​ಡಿ ಕುಮಾರಸ್ವಾಮಿ
ಹೆಚ್​​ಡಿ ಕುಮಾರಸ್ವಾಮಿ
Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on: Jul 13, 2023 | 6:01 PM

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾತನ್ನು ಅಂದು ಕೇಳಿದ್ದರೆ 5 ವರ್ಷ ಮುಖ್ಯಮಂತ್ರಿಯಾಗಿ ಇರುತ್ತಿದ್ದೆ. ಪದೇ ಪದೇ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್​​ ಅನ್ನು ಟೀಕಿಸುವ ಮುನ್ನ ಈ ವಿಚಾರ ತಿಳಿದಿರಲಿ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಆಡಳಿತಾರೂಢ ಕಾಂಗ್ರೆಸ್ ನಾಯಕರನ್ನು ಉದ್ದೇಶಿಸಿ ಹೇಳಿದರು.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲದ ಪ್ರಸ್ತಾಪವಾಯಿತು. ಅಷ್ಟರಲ್ಲಿ ಮಧ್ಯಪ್ರವೇಶ ಮಾಡಿ ಮಾತನಾಡಿದ ಕುಮಾರಸ್ವಾಮಿ, ಆಪರೇಷನ್ ಕಮಲ ಎಂಬುದು ಇತ್ತು‌. ಆದರೆ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಏಕೆ ಅವರ ಜೊತೆ ಸೇರಿಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ‌ ಅವರು 2019ರಲ್ಲಿ ನನ್ನ ಜೊತೆ ಒಂದೂವರೆ ಗಂಟೆ ಚರ್ಚೆ ಮಾಡಿದ್ದರು‌. ಅವರ ಮಾತು ಕೇಳಿದ್ದರೆ ಐದು ವರ್ಷ ಸಿಎಂ ಆಗಿರುತ್ತಿದ್ದೆ ಎಂದು ಹೇಳಿದರು.

ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ಮೋದಿ ಅವರು ನನ್ನನ್ನು ಕರೆದು ಚರ್ಚಿಸಿದ್ದರು. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ‌‌ ನೀಡಿದ್ದರು. ಅವರ ಮಾತು ಕೇಳಿದ್ದರೆ ಕಳೆದ ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಆಗಿರುತ್ತಿದ್ದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಲೋಕಸಭಾ ಚುನಾವಣೆಗಿಂತ 15 ದಿನ ಮೊದಲು ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚೆಯಾಗಿತ್ತು. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ‌. ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮುಂದುವರಿದೆ‌ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ವರ್ಗಾವಣೆಯಲ್ಲಿ ವ್ಯಾಪಾರದ ಆರೋಪ ಹಾಸ್ಯಾಸ್ಪದ, ಅವರ ಕಾಲದಲ್ಲೂ ನಡೆದಿತ್ತೇ; ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಪ್ರಧಾನಿ ಮಾತು ಕೇಳಿ ತೀರ್ಮಾನ ಕೈಗೊಂಡಿದ್ದರೆ ನಾನು ಕಳೆದ ಐದು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿರುತ್ತಿದ್ದೆ. ಪದೇ ಪದೇ ಬಿಜೆಪಿ ಬಿ ಟೀಂ ಎಂದು ಹೇಳುತ್ತಾ ನೀವೇ ಬಿಜೆಪಿ ಕಡೆ ತಳ್ಳುತ್ತೀರಿ. ನಾವೂ ರಾಜಕೀಯದಲ್ಲಿ ಉಳಿಯಬೇಕಲ್ವಾ? ನಾವು ಆ ರೀತಿಯ ರಾಜಕೀಯ ಮಾಡೋದಾದರೆ ನೇರವಾಗಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ