ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಅಧಿಕಾರವೇ ತಮಗಿರಲಿಲ್ಲ ಎಂದ ಕುಮಾರಸ್ವಾಮಿ; ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು

| Updated By: Ganapathi Sharma

Updated on: Jul 13, 2023 | 9:44 PM

7 ಬಾರಿ ವರ್ಗಾವಣೆ ಮಾಡಿದ್ದಾರೆ ಅನ್ನೋ ವಿಷಯ ನನಗೆ ಗೊತ್ತಿಲ್ಲ. ನಾನು ನಿರ್ಣಯ ತೆಗೆದುಕೊಂಡಿದ್ನಾ ಅಥವಾ ಸಚಿವರೇ ತೆಗೆದುಕೊಳ್ತಿದ್ರಾ? ಈ ಬಗ್ಗೆಯೂ ತನಿಖೆ ಆಗಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಅಧಿಕಾರವೇ ತಮಗಿರಲಿಲ್ಲ ಎಂದ ಕುಮಾರಸ್ವಾಮಿ; ಚಲುವರಾಯಸ್ವಾಮಿ ಆರೋಪಕ್ಕೆ ತಿರುಗೇಟು
ಹೆಚ್​​ಡಿ ಕುಮಾರಸ್ವಾಮಿ
Image Credit source: PTI
Follow us on

ಬೆಂಗಳೂರು: ವರ್ಗಾವಣೆ ವಿಚಾರವಾಗಿ ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಆಡಳಿತಾರೂಢ ಕಾಂಗ್ರೆಸ್ ನಾಯಕರ ಮಧ್ಯೆ ಗುರುವಾರವೂ ವಿಧಾನಸಭೆಯಲ್ಲಿ ವಾಕ್ಸಮರ ನಡೆಯಿತು. ಸಚಿವ ಚಲುವರಾಯಸ್ವಾಮಿ (Chaluvarayaswamy) ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ನಾನು ಮುಖ್ಯಮಂತ್ರಿ ಆಗಿದ್ದಾಗ ರೇಟ್ ಕಾರ್ಡ್ ಅಂತಾ ಹೇಳ್ತಿದ್ದಾರೆ. ಅವತ್ತೂ ಸಹ ನನಗೆ ವರ್ಗಾವಣೆ ಮಾಡುವ ಅಧಿಕಾರವೇ ಇರಲಿಲ್ಲ. ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಮಂತ್ರಿಗಳೇ ಎಲ್ಲವನ್ನೂ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

7 ಬಾರಿ ವರ್ಗಾವಣೆ ಮಾಡಿದ್ದಾರೆ ಅನ್ನೋ ವಿಷಯ ನನಗೆ ಗೊತ್ತಿಲ್ಲ. ನಾನು ನಿರ್ಣಯ ತೆಗೆದುಕೊಂಡಿದ್ನಾ ಅಥವಾ ಸಚಿವರೇ ತೆಗೆದುಕೊಳ್ತಿದ್ರಾ? ಈ ಬಗ್ಗೆಯೂ ತನಿಖೆ ಆಗಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ವರ್ಗಾವಣೆಗೆ ಹಣ ಪಡೆದಿಲ್ಲ. ಹಣ ತೆಗೆದುಕೊಂಡಿದ್ದೇನೆ ಎಂಬ ಆರೋಪಕ್ಕೆ ದಾಖಲೆ ತೋರಿಸಲಿ. ದಾಖಲೆ ತೋರಿಸಿದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಅವತ್ತೇನಾದರೂ ನನ್ನಿಂದ ಒಂದು ವರ್ಗಾವಣೆಯಾಗಿದ್ದರೆ ಆ ಕುರಿತ ಮಾಹಿತಿ ತೋರಿಸಿ. ರಾಜಕೀಯ ನಿವೃತ್ತಿ ತೆಗೆದುಕೊಳ್ಳೋದಕ್ಕೆ ರೆಡಿ ಇದ್ದೇನೆಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಬುಧವಾರ ಬಿಡುಗಡೆಯಾದ ರೇಟ್ ಕಾರ್ಡ್ ನಾನು ರೆಡಿ ಮಾಡಿದ್ದಾ? ಈ ತರಹದ ಮಾಹಿತಿ ಇದೆ, ಸರಿಪಡಿಸಿಕೊಳ್ಳುವುದಾದ್ರೆ ಸರಿಪಡಿಸಿಕೊಳ್ಳಿ. ಇಲ್ಲದಿದ್ದರೆ ಜನರೇ ತೀರ್ಮಾನ ಮಾಡ್ತಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಸೋಲಿನಿಂದ ನಾನು ಹತಾಶನಾಗಿದ್ದೇನೆ ಎಂದು ಕೆಲವರು ಹೇಳುತ್ತಿದ್ದಾರೆ. ದೇವೇಗೌಡರ ಕುಟುಂಬ ಇಂತಹ ಹಲವಾರು ಸೋಲು ನೋಡಿದೆ. ದೇವರ ಅನುಗ್ರಹ ಇದ್ದರೆ ನಮಗೆ ಅಧಿಕಾರ ಸಿಕ್ಕೇ ಸಿಗುತ್ತೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಮಾತು ಕೇಳಿದ್ದರೆ 5 ವರ್ಷ ಸಿಎಂ ಆಗಿರುತ್ತಿದ್ದೆ; 2019ರ ರಹಸ್ಯ ಬಿಚ್ಚಿಟ್ಟ ಹೆಚ್​​ಡಿ ಕುಮಾರಸ್ವಾಮಿ

ಈ ಮಧ್ಯೆ, ಕುಮಾರಸ್ವಾಮಿ ಅವರ ರೇಟ್‌ ಕಾರ್ಡ್‌ ಬಗ್ಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ. ಹೆಚ್​ಡಿಕೆ ಯಾವುದೋ ಪತ್ರ ತೋರಿಸಿದ್ರು, ಅದನ್ನು ಅವರೇ ತಗೊಂಡು ಹೋದ್ರು. ಇದನ್ನು ನಮಗೆ ತೋರಿಸಿಯೇ ಇಲ್ಲವೆಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ನೀವು ಕೇಳಿಲ್ಲ, ಹೀಗಾಗಿ ನಾನು ಕೊಟ್ಟಿಲ್ಲ ಎಂದಿದ್ದಾರೆ. ಹಾಗಾದರೆ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗಿದೆಯಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಇದಕ್ಕುತ್ತರಿಸಿದ ಕುಮಾರಸ್ವಾಮಿ ಮಾಧ್ಯಮಗಳು ವರದಿ ಮಾಡಿದ್ರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ