ಹಾಸನ, ಫೆ.18: ನಾವು ಬಿಜೆಪಿ ಜೊತೆ ವಿಲೀನ ಆಗುತ್ತೇವೆ ಎಂದು ಹೇಳುವ ಸಿದ್ದರಾಮಯ್ಯ (Siddaramaiah) ಅವರು ಏನು ಮಾಡುತ್ತಿದ್ದಾರೆ? ಕಾಂಗ್ರೆಸ್ನಲ್ಲಿರುವ ಮಾಜಿ ಮುಖ್ಯಮಂತ್ರಿ ಸೇರಿ ಎಲ್ಲರನ್ನು ಬಿಜೆಪಿಗೆ ಕಳುಹಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆಗಿಲ್ಲ, ವಿಲೀನವಾಗಿದೆ. ರಾಜ್ಯದಲ್ಲಿರುವುದು ಒಂದೇ ವಿರೋಧ ಪಕ್ಷ, ಸೋಲಿನ ಭಯ ಶುರುವಾಗಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು.
ಈ ಬಗ್ಗೆ ಹಾಸನ ತಾಲೂಕಿನ ಮಾರನಾಯಕನಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಾವು ವಿಲೀನ ಆಗುತ್ತೇವೆ ಅಂತಾ ಹೇಳುತ್ತಿದ್ದೀರಲ್ಲ, ನೀವು ಏನ್ ಮಾಡುತ್ತಿದ್ದೀರಿ? ಕಾಂಗ್ರೆಸ್‌ನಲ್ಲಿದ್ದವರನ್ನು ಟೆಂಟ್, ಗಳಗಳ ಸಮೇತ ಕಿತ್ತು ಕಳಿಸುತ್ತಿದ್ದೀರಿ. ಕಾಂಗ್ರೆಸ್‌ನಲ್ಲಿದ್ದ ಮಾಜಿ ಸಿಎಂ ಸೇರಿ ಎಲ್ಲರನ್ನೂ ಬಿಜೆಪಿಗೆ ಕಳಿಸುತ್ತಿದ್ದೀರಿ ಎಂದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ದೇವೇಗೌಡರೇ ಹೇಳಿ ಕಳುಹಿಸಿದ್ದಾರೆ ಅಂತ ನೀವು ಹೇಳುತ್ತಿದ್ದೀರಿ. ಏತಕ್ಕೆ ಹೋಗಲು ದೇವೇಗೌಡರು ಹೇಳಿದರು? ಅವರ 60 ವರ್ಷ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ನಂಬಿ, ಕಾಂಗ್ರೆಸ್ ಸಂಕಷ್ಟದಲ್ಲಿದ್ದಾಗ ಧ್ವನಿಗೂಡಿಸಿ ಕೆಲಸ ಮಾಡಿದ್ದರು. 2018 ರಲ್ಲಿ ನಿಮ್ಮ ಜೊತೆ ಸಂಬಂಧ ಬೆಳೆಸಿದ್ದೆವಲ್ಲ? ನೀವು ಕೊಟ್ಟ ಕೊಡುಗೆ ಏನು? ಎಂದು ಪ್ರಶ್ನಿಸಿದರು.
ಪ್ರಧಾಮಂತ್ರಿ ರಾಜೀನಾಮೆ ಕೊಟ್ಟು ಬಾ ಮುಂದಿನ ಮೂರು ವರ್ಷ ಮುಖ್ಯಮಂತ್ರಿ ಆಗು ಎಂದಿದ್ದರು. ನಿಮ್ಮನ್ನು ನಂಬಿದ್ದಕ್ಕೆ ನಮ್ಮ ಕುತ್ತಿಗೆ ಕುಯ್ದಿರಲ್ಲಾ, ಚಾಕು ಹಾಕಿಸಿಕೊಳ್ಳಲು ನಿಮ್ಮ ಜೊತೆ ಇರಬೇಕಾ? ಈ ಚುನಾವಣೆ ಆಗಲಿ ಆಮೇಲೆ ಉತ್ತರ ಕೊಡೋಣ ಎಂದರು.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಜನಗಳ ಅಭಿಪ್ರಾಯ ಏನಿದೆ, ಜನ ಏನು ಬಯಸುತ್ತಾರೆ ಅದನ್ನು ಮಾಡುತ್ತೇವೆ. ಜನಾಭಿಪ್ರಾಯಕ್ಕೆ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ವಿರೋಧ ವಿಚಾರವಾಗಿ ಮಾತನಾಡಿದ ಅವರು, ಪ್ರೀತಂಗೌಡ ಅವರು ತಮ್ಮ ಭಾವನೆ ಹೇಳಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ: ಡಿಕೆ ಸುರೇಶ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸಿದರೂ ಚಿಂತಿಲ್ಲ: ಮಂಗಳೂರಿನಲ್ಲಿ ಡಿಕೆ ಶಿವಕುಮಾರ್ ಖಡಕ್ ನುಡಿ
ದೆಹಲಿ ಮಟ್ಟದಲ್ಲಿ ಮೈತ್ರಿ ಆಗಿದೆ. ಹಿರಿಯ ನಾಯಕರು ಸೇರಿ ಮೈತ್ರಿ ಆಗಬೇಕು ಎಂಬ ಭಾವನೆಗಳಿಂದ ತೀರ್ಮಾನ ಆಗಿದೆ. ಸಣ್ಣಪುಟ್ಟ ಸಮಸ್ಯೆಗಳಿದ್ದಾವೆ, ಅವೆಲ್ಲವನ್ನೂ ಬಗೆಹರಿಸುತ್ತೇವೆ. ನೋಡೋಣ ಸಮಾಜದಲ್ಲಿ ಅಸಾಧ್ಯ ಎನ್ನುವುದು ಯಾವುದು ಇಲ್ಲ. ಏನು ಬೇಕಾದರೂ ಆಗಬಹದು, ಸಮಯ, ಕಾಲ ಉತ್ತರ ಕೊಡುತ್ತದೆ ಎಂದರು.
ಮಂಡ್ಯದಿಂದ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಎಲ್ಲಾ ಕಡೆ ಪ್ರೀತಿಯಿಂದ ಹೇಳುತ್ತಾರೆ. ನಾನು ಕರ್ನಾಟಕ ಬಿಟ್ಟು ಹೋಗಲ್ಲ, ಕರ್ನಾಟಕದಲ್ಲೇ ಇರುತ್ತೇನೆ. ಸದ್ಯಕ್ಕೆ ರಾಜ್ಯದ ಕೆಲಸ ಮುಗಿಯಲಿ. ರಾಜ್ಯದ ಜನತೆಯ ಹಲವಾರು ಸಮಸ್ಯೆಗಳಿವೆ. ಆ ಸಮಸ್ಯೆಗಳಿಗೆ ಮೊದಲು ಪರಿಹಾರ ದೊರಕಬೇಕು ಎಂದರು.
ಹಾಸನದಲ್ಲಿ ಜನತಾದಳದ ಅಭ್ಯರ್ಥಿ, ಮೈತ್ರಿಯ ಎನ್‌ಡಿಎ ಅಭ್ಯರ್ಥಿಯೇ ಇರುತ್ತಾರೆ. ದೆಹಲಿಯ ಹೈಕಮಾಂಡ್ ನಾವೆಲ್ಲಾ ಕುಳಿತು ಚರ್ಚೆ ಮಾಡುತ್ತೇವೆ. ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ದೇವೇಗೌಡರು ನಮ್ಮ ಪಕ್ಷದ ಹೈಕಮಾಂಡ್. ಅವರು ಈಗಾಗಲೇ ಅವರ ಭಾವನೆ ಹೇಳಿದ್ದಾರೆ. ಹೀಗೆ ಆಗುತ್ತೆ, ಹಾಗೇ ಆಗುತ್ತೆ ಅಂತ ಹೇಳಲು ಆಗಲ್ಲ. ಈಗ ಮೈತ್ರಿಯ ವಾತಾವರಣ ಏನಿದೆ ಎಲ್ಲರ ಅಭಿಪ್ರಾಯ ತಗೊಂಡು ತೀರ್ಮಾನ ಮಾಡುತ್ತೇವೆ ಎಂದರು.
ಹಾಸನದಿಂದ ಹಾಲಿ ಸಂಸದ ಪ್ರಜ್ವಲ್ ಅಭ್ಯರ್ಥಿ ಎಂದು ಮಾಜಿ ಪ್ರದಾನಿ ದೇವೇಗೌಡರು ಹೇಳಿದ್ದರು. ಆದರೆ ಹಾಸನದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ದೆ ಮಾಡುತ್ತಾರೆ. ಅಭ್ಯರ್ಥಿ ಯಾರೆಂದು ಎಲ್ಲರೂ ಕೂತು ತೀರ್ಮಾನ ಮಾಡುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಹೆಸರು ಹಾಸನ ಲೋಕಸಭಾ ಕ್ಷೇತ್ರಕ್ಕೆ ಅಂತಿಮ ಆಗಿಲ್ಲ ಎಂದರು.
ಇದನ್ನೂ ಓದಿ: ಮಂಡ್ಯ ಲೋಕಸಭಾ ಕಣದಿಂದ ಹಿಂದೆ ಸರಿದಿದ್ದ ನಿಖಿಲ್ ಕುಮಾರಸ್ವಾಮಿ ಯೂಟರ್ನ್
ಬಿಜೆಪಿ ನಾಯಕ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮೈತ್ರಿ ಬಗ್ಗೆ ಅಸಮಾಧಾನ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಅವರ ಬಗ್ಗೆ ಏಕೆ ಚರ್ಚೆ ಮಾಡೋಣ. ಅವರು ನಮಗಿಂತ ದೊಡ್ಡವರಿದ್ದಾರೆ, ಬುದ್ಧಿವಂತರಿದ್ದಾರೆ. ಅವರು ಹೇಳುತ್ತಾರೆ. ಅದನ್ನು ಸರಿಪಡಿಸುವುದು ಹೇಗೆ ಅಂತ ನೋಡೋಣ. ಅವರಿಗೆ ಏಕೆ ಉತ್ತರ ಕೊಡಬೇಕು, ಅವಶ್ಯಕತೆ ಏನಿದೆ? ಎಂದರು.
ಮೈತ್ರಿ ನಾನು ಮಾಡಿಕೊಳ್ಳಬೇಕು ಎಂದು ಹೋಗಿಲ್ಲ. ಕಳೆದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯರೆಲ್ಲಾ ಸೇರಿ ತೀರ್ಮಾನ ಮಾಡಿಕೊಂಡಿದ್ದಾರೆ. ನಮ್ಮ ವೈಯುಕ್ತಿಕ ಲಾಭಕ್ಕೆ ಮೈತ್ರಿ ಮಾಡಿಕೊಂಡಿಲ್ಲ. ಅವರಿಗೆಲ್ಲಾ ನಾನು ಉತ್ತರ ಕೊಡಲ್ಲ. ಹಾಸನ ಜಿಲ್ಲೆಯಲ್ಲಿ ಜನ ಎಂದು ನಮ್ಮನ್ನು ಕೈಬಿಟ್ಟಿಲ್ಲ. ಮೈತ್ರಿ ಇರುತ್ತೋ ಮೈತ್ರಿ ಇರಲ್ಲವೋ, ಎಲ್ಲಾ ಸಂದರ್ಭದಲ್ಲೂ ಈ ಜಿಲ್ಲೆಯ ಜನ ಜನತಾದಳವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಜನತಾದಳದ ಅಭಿಮಾನಿಗಳಿದ್ದಾರೆ, ಅವರ ಶ್ರಮ ಇದೆ ಎಂದರು.
ರಾಜ್ಯದಲ್ಲಿ 20 ಸ್ಥಾನ ಗೆಲ್ಲುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಕುಮಾರಸ್ವಾಮಿ, ದೇಶದಲ್ಲಿ ಇಪ್ಪತ್ತು ಸೀಟ್ ಗೆದ್ದುಕೊಳ್ಳಲಿ ಬನ್ನಿ ಎಂದರು. ಶಾಸಕ ಮುನಿರತ್ನ, ಎಸ್.ಟಿ.ಸೋಮಶೇಖರ್ ಡಿಸಿಎಂ ಡಿ.ಕೆ.ಶಿವಕುಮಾರ್ ಹೊಗಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರವರು ವೈಯುಕ್ತಿಕವಾಗಿ ಹೇಳುತ್ತಾರೆ, ಅದಕ್ಕೆ ಏಕೆ ತಲೆಕೆಡಿಸಿಕೊಳ್ಳಬೇಕು ಎಂದರು.
ತುಮಕೂರಿನಲ್ಲಿ ಸಮಾಜಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ಗಳಿಗೆ ಶಾಲೆಗಳಿಗೆ ಅಕ್ಕಿ ಪೂರೈಕೆಯಾಗದೆ ಸಿದ್ಧಗಂಗಾ ಮಠದಿಂದ ಅಕ್ಕಿ ಸಾಲ ತಂದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ತುಮಕೂರಿನಲ್ಲಿ ಮಾತ್ರವಲ್ಲದೆ, ಇಡೀ ರಾಜ್ಯದಲ್ಲಿ ಸರಿಯಾದ ರೀತಿ ಯಾವುದೇ ವ್ಯವಸ್ಥೆಗಳಿಲ್ಲ. ಮಕ್ಕಳಿಗೆ ಕೊಡಬೇಕಾದ ಕಿಟ್‌ಗಳನ್ನು ಕೊಟ್ಟಿಲ್ಲ, ಆ ಪರಿಸ್ಥಿತಿಯಲ್ಲಿದ್ದೇವೆ ಎಂದರು.
ಸುಪ್ರೀಂ ಕೋರ್ಟ್ ಹೇಳಿದ ಸ್ಥಳದಲ್ಲಿ ಅಯೋಧ್ಯೆ ರಾಮಮಂದಿರ ಕಟ್ಟಿಲ್ಲ ಎಂಬ ಸಚಿವ ಸಂತೋಷ್ ಲಾಡ್ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ರಾಮಮಂದಿರವನ್ನು ಜನರ ತೆರಿಗೆಯ ದುಡ್ಡಿನಿಂದ, ಕೇಂದ್ರ ಸರ್ಕಾರದ ಖಜಾನೆ ದುಡ್ಡು ತೆಗೆದುಕೊಂಡು ಹೋಗಿ ಕಟ್ಟಿಲ್ಲ. ರಾಮಮಂದಿರ ಕಟ್ಟಿರುವುದು ಕೋಟ್ಯಾಂತರ ಜನ ಕೊಟ್ಟಿರುವ ದೇಣಿಗೆಯಿಂದ. ಅದರಿಂದ ದೇಶದ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.
ಮೈತ್ರಿ ಸೀಟು ಹಂಚಿಕೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಇನ್ನೊಂದು ವಾರದಲ್ಲೇ ಎಲ್ಲಾ ಮುಗಿಯುತ್ತದೆ ಎಂದರು. ಬೆಂಗಳೂರು ಗ್ರಾಮದಲ್ಲಿ ದೇವೇಗೌಡರು, ಕುಮಾರಸ್ವಾಮಿ ಎದುರಿಸಿ ಚುನಾವಣೆ ಗೆದ್ದಿದ್ದೇವೆ ಎಂಬ ಡಿಕೆ ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಈಗಲೂ ಎದುರಿಸಲು ತಯಾರಾಗಿ. ಚುನಾವಣೆಯಲ್ಲಿ ನಾವು ಎದುರಿಸಲು ಸಿದ್ಧವಾಗಿದ್ದೇವೆ. ಅವರ ಘರ್ಜನೆಗೆ ಹೆದರಿಕೊಂಡು ಓಡಿ ಹೋಗಲ್ಲ ಎಂದರು.
ಬಡವರ ವಿರೋಧಿಗಳಿಗೆ ನಮ್ಮ ಬಜೆಟ್ ಅರ್ಥ ಆಗಲ್ಲವೆಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ನೀವು ಹಗಲು ದರೋಡೆ ಮಾಡುವವರ ಪರವಾಗಿ ಇದ್ದೀರಿ. ಬಡವರ ಪರವೂ ಇಲ್ಲ, ರೈತರ ಪರವೂ ಇಲ್ಲ, ನಾಡಿನ ಜನರ ಪರವೂ ಇಲ್ಲ. 2 ಸಾವಿರ ರೂಪಾಯಿ ಯಾರಪ್ಪನ ಮನೆಯ ದುಡ್ಡು ಕೊಡುತ್ತಿದ್ದೀರಿ? ರಾಜ್ಯದ ಜನತೆಯ ದುಡ್ಡೇ ಅದು, ಇದಕ್ಕಾಗಿ ಎಷ್ಟು ಸಾಲ ಮಾಡಿದ್ದೀರಿ? ಹಣ ಸಂಗ್ರಹಣೆ ಮಾಡಲು ಅಂತಿಮವಾಗಿ ಜನರ ಜೇಬಿಗೆ ಕೈ ಹಾಕಬೇಕು. ಇದನ್ನು ಬಡವರ ಕಾರ್ಯಕ್ರಮ ಅಂತಾ ಹೇಳುತ್ತೀರಾ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ