ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?

Rajya Sabha Election 2024:ಕರ್ನಾಟಕ ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಕಾಂಗ್ರೆಸ್‌ ಶಾಸಕರನ್ನು ತನ್ನತ್ತ ಸೆಳೆಯಲು ಜೆಡಿಎಸ್‌-ಬಿಜೆಪಿ ಚಿಂತನೆ ನಡೆಸಿದ್ದರೆ, ಜೆಡಿಎಸ್‌ನ ಇನ್ನಷ್ಟು ಶಾಸಕರ ಅಡ್ಡಮತದಾನಕ್ಕೆ ಪ್ರೇರಣೆಯಾಗಲು ಕಾಂಗ್ರೆಸ್‌ ಕೂಡ ಪ್ರಯತ್ನ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಮ್ಯಾಜಿಕ್‌ ನಂಬರ್‌ಗಾಗಿ ಕುದುರೆ ವ್ಯಾಪಾರದ ಸುಳಿವು ದೊರೆತಿದೆ. ಅಲ್ಲದೇ ಕುಮಾರಸ್ವಾಮಿ, ಬಿಜೆಪಿ ಬೆಂಬಲದೊಂದಿಗೆ ಕಾಂಗ್ರೆಸ್​​ ವಿರುದ್ಧ 8 ವರ್ಷದ ಹಿಂದಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಏನಿದು ಗೇಮ್​ ಪ್ಲ್ಯಾನ್?

ರಾಜ್ಯಸಭೆಗೆ ಐದನೇ ಅಭ್ಯರ್ಥಿ ಸ್ಪರ್ಧೆ: 8 ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ತಾರಾ ಕುಮಾರಸ್ವಾಮಿ?
5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ
Follow us
|

Updated on: Feb 15, 2024 | 7:24 PM

ಬೆಂಗಳೂರು, (ಫೆಬ್ರವರಿ 15): ಕರ್ನಾಟಕ ರಾಜ್ಯಸಭಾ ಚುನಾವಣೆಗೆ (Rajya Sabha Election) ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಖಾಲಿ ಇರುವ ನಾಲ್ಕು ಸ್ಥಾನಕ್ಕೆ ಜೆಡಿಎಸ್​​ನ ಕುಪೇಂದ್ರ ರೆಡ್ಡಿ (Kupendra Reddy) ಅವರು 5ನೇ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ ಲೆಕ್ಕಾಚಾರ ಶುರುವಾಗಿದೆ. ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಹಲವು ತಂತ್ರಗಳೊಂದಿಗೆ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇದರೊಂದಿಗೆ ಎಂಟು ವರ್ಷಗಳ ಹಿಂದಿನ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದರಿಂದ ಆಡಳಿತರೂಢ ಕಾಂಗ್ರೆಸ್​​ಗೆ ಅಡ್ಡಮತದಾನದ ಭೀತಿ ಶುರುವಾಗಿದೆ.

ಹಳೇ ಸೇಡು ತೀರಿಸಿಕೊಳ್ಳಲು ಮುಂದಾದ ಎಚ್​ಡಿಕೆ

ಹೌದು… 8 ವರ್ಷಗಳ ಹಿಂದೆ ಆಗಿರುವ ಮುಖಭಂಗಕ್ಕೆ ಕಾಂಗ್ರೆಸ್‌ ವಿರುದ್ಧ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ 5ನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಅಗತ್ಯ ಸಂಖ್ಯಾಬಲ ಇಲ್ಲದಿದ್ದರೂ ಕುಪೇಂದ್ರ ರೆಡ್ಡಿ ಅವರನ್ನು ಚುನಾವಣಾ ಕಣಕ್ಕೆ ಇಳಿಸಿದ್ದು, ಕಾಂಗ್ರೆಸ್‌ಗೆ ಶಾಕ್‌ ನೀಡಲು ಬಿಜೆಪಿ ಹಾಗೂ ಜೆಡಿಎಸ್‌ ನಾಯಕರು ಮುಂದಾಗಿದ್ದಾರೆ. 2016ರಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಎಂಟು ಮಂದಿ ಜೆಡಿಎಸ್‌ ಶಾಸಕರು ಕಾಂಗ್ರೆಸ್‌ ಪರ ಅಡ್ಡ ಮತದಾನ ಮಾಡಿದ್ದರು. ಇದರಿಂದ ಜೆಡಿಎಸ್‌ ಅಭ್ಯರ್ಥಿ ಬಿಎಂ ಫಾರೂಕ್‌ ಸೋಲು ಅನುಭವಿಸಿದ್ದರು. ಆಗ ಎಚ್‌ಡಿ ಕುಮಾರಸ್ವಾಮಿ ಅವರಿಗೆ ಭಾರೀ ಮುಖಭಂಗವಾಗಿತ್ತು. ಆ ಸೇಡನ್ನು ತೀರಿಸಿಕೊಳ್ಳಲು ಈಗ ಹಲವು ಲೆಕ್ಕಾಚಾರಗಳೊಂದಿಗೆ ಐದನೇ ಅಭ್ಯರ್ಥಿಯನ್ನು ದಳಪತಿಗಳು ಕಣಕ್ಕಿಳಿಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭೆ ಚುನಾವಣೆ: ಬಿಜೆಪಿ ಸಲಹೆ ಮೇರೆಗೆ ಕುಪೇಂದ್ರ ರೆಡ್ಡಿ ಕಣಕ್ಕೆ, ಕಾಂಗ್ರೆಸ್​ಗೆ ಅಡ್ಡಮತದಾನದ ಆತಂಕ

ಜೂನ್‌ 2016ರಲ್ಲಿ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್‌ನ 8 ಶಾಸಕರ ಅಡ್ಡಮತದಾನದ ಮೂಲಕ ಕಾಂಗ್ರೆಸ್‌ 3ನೇ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಆಯ್ಕೆ ಸುಸೂತ್ರವಾಗಿತ್ತು. ಇದೇ ತಂತ್ರಗಾರಿಕೆಯನ್ನು ಈಗ ಜೆಡಿಎಸ್​-ಬಿಜೆಪಿ ಪ್ರಯೋಗಿಸಿ ಕಾಂಗ್ರೆಸ್​ ಶಾಸಕರ ಅಡ್ಡಮತದಾನಕ್ಕೆ ‘ವೇದಿಕೆ’ ಅಣಿಗೊಳಿಸುವ ತಂತ್ರಗಾರಿಕೆಯಲ್ಲಿ ಮೈತ್ರಿ ಪಕ್ಷಗಳು ತೊಡಗಿವೆ. ಇದರೊಂದಿಗೆ, ರಾಜ್ಯಸಭೆ ಚುನಾವಣೆಯಲ್ಲಿ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ದಟ್ಟವಾಗಿದ್ದು, ಫಲಿತಾಂಶ ಕುರಿತಾದ ಕುತೂಹಲ ಹೆಚ್ಚಿದೆ

ಮತಗಳ ಲೆಕ್ಕಾಚಾರ

ಒಟ್ಟು ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಓರ್ವ ರಾಜ್ಯಸಭಾ ಅಭ್ಯರ್ಥಿ ಗೆಲ್ಲಲು 45 ಮತಗಳು ಬೇಕು. ವಿಧಾನಸಭೆಯಲ್ಲಿ ಕಾಂಗ್ರೆಸ್ 135, ಬಿಜೆಪಿ 66 ಹಾಗೂ ಜೆಡಿಎಸ್ 19 ಸದಸ್ಯರನ್ನು ಹೊಂದಿದೆ. ಈ ಸಂಖ್ಯಾಬಲ ಆಧಾರದ ಮೇಲೆ ಕಾಂಗ್ರೆಸ್‌ ಮೂರು ಹಾಗೂ ಬಿಜೆಪಿ ಒಂದು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ. ಆದ್ರೆ, ಜೆಡಿಎಸ್​​ ಬಳಿ ಸಂಖ್ಯಾಬಲ ಇಲ್ಲದಿದ್ದರೂ ಸಹ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಜೆಡಿಎಸ್​ ತನ್ನ 19 ಮತಗಲೊಂದಿಗೆ ಹಾಗೂ ಬಿಜೆಪಿ ಬಳಿ ಉಳಿಯುವ 21 ಹೆಚ್ಚುವರಿ ಮತಗಳ ಬೆಂಬಲದೊಂದೊಗೆ ಕುಪೇಂದ್ರ ರೆಡ್ಡಿ ಅವರು ಸ್ಪರ್ಧೆ ಮಾಡಿದ್ದಾರೆ. ಆದ್ರೆ, ಬಿಜೆಪಿಯ ಹೆಚ್ಚುವರಿ ಮತ ಹಾಗೂ ಜೆಡಿಎಸ್​ನ ಮತಗಳ ಒಟ್ಟಾಗಿ ಸೇರಿಸಿದರೆ 40 ಮತಗಳು ಆಗಲಿವೆ. ಆದರೂ ಕುಪೇಂದ್ರ ರೆಡ್ಡಿ ಗೆಲ್ಲಲು ಇನ್ನೂ 5 ಮತಗಳು ಬೇಕಾಗುತ್ತವೆ. ಇನ್ನು ಮೇಲುಕೋಟೆಯ ದರ್ಶನ್ ಪುಟ್ಟಣ್ಣಯ್ಯ, ಹರಪನಹಳ್ಳಿಯ ಲತಾ ಮಲ್ಲಿಕಾರ್ಜುನ್, ಗೌರಿಬಿದನೂರಿನ ಪುಟ್ಟಸ್ವಾಮಿಗೌಡ, ಗಂಗಾವತಿಯ ಜನಾರ್ದನ ರೆಡ್ಡಿ ಅವರು ಪಕ್ಷೇತರ ಶಾಸಕರಿದ್ದು, ಇದರಲ್ಲಿ ಮೂವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ರೆಡ್ಡಿ ಬಿಜೆಪಿಗೆ ಬೆಂಬಲಿಸುವುದು ಬಹುತೇಕ ಖಚಿತವಾದರೂ ಅಲ್ಲಿಗೆ 41 ಮತಗಳು ಆದವು.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ತಂತ್ರ, ಮೈಸೂರಿನಲ್ಲಿ ಚುರುಕಾದ ಬಿಜೆಪಿ

ಈಗ ಕುಪೇಂದ್ರ ರೆಡ್ಡಿಗೆ ಬೇಕಿರುವುದು ಇನ್ನೂ 4 ಮತಗಳು. ಈ ನಾಲ್ಕು ಮತಗಳನ್ನು ಆಡಳಿತರೂಢ ಕಾಂಗ್ರೆಸ್​​ನಿಂದಲೇ ಸೆಳೆಯಬೇಕು. ಹೀಗಾಗಿ ಶತಾಯಗತಾಯ ಕುಪೇಂದ್ರ ರೆಡ್ಡಿಯನ್ನು ಗೆಲ್ಲಿಸಿಕೊಳ್ಳುವ ಇರಾದೆಯಲ್ಲಿರುವ ಮೈತ್ರಿ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಇದರಿಂದ ಕಾಂಗ್ರೆಸ್​ಗೆ ಅಡ್ಡಮತದಾನ ಭೀತಿ ಶುರುವಾಗಿದೆ.

ಕುಪೇಂದ್ರ ರೆಡ್ಡಿ ಗೆದ್ದರೂ ಅಚ್ಚರಿಪಡಬೇಕಿಲ್ಲ

ಬಿಜೆಪಿ ಮತ್ತು ಜೆಡಿಎಸ್ ಮತ ಸೇರಿದರೆ 85 (66+19) ಆಗಲಿದೆ. ಬಿಜೆಪಿ ಅಭ್ಯರ್ಥಿಗೆ 45 ಮತ ಹಾಕಿದರೆ, ಜೆಡಿಎಸ್ ಕುಪೇಂದ್ರ ರೆಡ್ಡಿಗೆ 40 ಮತ ಫಿಕ್ಸ್ ಆಗಲಿದೆ. ಒಂದು ವೇಳೆ ಜನಾರ್ದನ ರೆಡ್ಡಿ, ಪುಟ್ಟಸ್ವಾಮಿ ಗೌಡ, ದರ್ಶನ ಪುಟ್ಟಣ್ಣಯ್ಯ ಅವರ ಮತಗಳನ್ನು ಸೆಳೆದರೆ ಇನ್ನೂ ಎರಡು ಮತಗಳ ಕೊರತೆ ಎದುರಾಗುತ್ತದೆ. ಹೀಗಾಗಿ ಕಾಂಗ್ರೆಸ್‌ನ ಎರಡು ಶಾಸಕರ ಮತ ಗಳಿಸುವಲ್ಲಿ ಕುಪೇಂದ್ರ ರೆಡ್ಡಿ ಯಶಸ್ವಿಯಾದರೆ ಗೆಲುವು ಸುಲಭವಾಗುತ್ತದೆ. ಹೀಗಾಗಿ ಅಚ್ಚರಿ ರೂಪದಲ್ಲಿ ಕುಪೇಂದ್ರ ರೆಡ್ಡಿ ಗೆದ್ದು ಬೀಗಲೂಬಹುದಾಗಿದೆ.

ಕುಮಾರಸ್ವಾಮಿ ತಂತ್ರಕ್ಕೆ ಕೈ ಪ್ರತಿತಂತ್ರ

ಕಾಂಗ್ರೆಸ್​ ಶಾಸಕ ಮತಗಳ ಮೇಲೆ ಮೈತ್ರಿ ನಾಯಕರು ಕಣ್ಣಿಟ್ಟಿದ್ದು, ಇದಕ್ಕೆ ಮುಂಜಾಗ್ರತವಾಗಿ ಕುಮಾರಸ್ವಾಮಿ ತಂತ್ರಕ್ಕೆ ಕಾಂಗ್ರೆಸ್​​ ಪ್ರತಿ ತಂತ್ರ ಹೆಣೆದಿದೆ. ಜೆಡಿಎಸ್​​ ಹಾಗೂ ಬಿಜೆಪಿ ಅಸಮಾಧಾನಿತರ ಶಾಸಕರ ಮತಗಳ ಮೇಲೆ ಕಣ್ಣಿಟ್ಟಿದೆ. ಅಸಮಾಧಾನಗೊಂಡಿರುವ ಎಸ್.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಹಾಗೂ ಜೆಡಿಎಸ್‌ನ ಶರಣಗೌಡ ಕಂದಕೂರ ಅವರ ಮತಗಳನ್ನು ಸೆಳೆಯಲು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇದು ಚುನಾವಣೆ ಕುತೂಹಲವನ್ನು ಹೆಚ್ಚಿಸಿದೆ.

ಕುದುರೆ ವ್ಯಾಪಾರ ಹೊಸತಲ್ಲ

ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಆಪರೇಷನ್ ಕಮಲ, ಆಪರೇಷನ್ ಹಸ್ತ ನೋಡಿದ್ದೇವೆ. ಹಾಗೇ ಈ ಕುದುರೆ ವ್ಯಾಪರ ಹೊಸದೇನಲ್ಲ.  ಈ ಹಿಂದೆ ಬಿಜೆಪಿ ಸರಕಾರದ ಅಧಿಕಾರಾವಧಿಯಲ್ಲಿ ನಡೆದ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅಡ್ಡಮತದಾನ ನಡೆದು ಕಾಂಗ್ರೆಸ್‌ ಅಧಿಕೃತ ಅಭ್ಯರ್ಥಿ ಇಕ್ಬಾಲ್‌ ಅಹ್ಮದ್‌ ಸರಡಗಿ ಪರಾಭವಗೊಂಡು, ಪಕ್ಷೇತರ ಅಭ್ಯರ್ಥಿ ಬೈರತಿ ಸುರೇಶ್‌ ಅನಿರೀಕ್ಷಿತವಾಗಿ ಆಯ್ಕೆಯಾಗಿದ್ದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಅವಧಿಯಲ್ಲಿ ನಡೆದ ಈ ಅಡ್ಡಮತದಾನ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ಸೃಷ್ಟಿಸಿತ್ತು. ಈ ಸಂಬಂಧ ವಿ.ಆರ್‌.ಸುದರ್ಶನ್‌ ಅಧ್ಯಕ್ಷತೆಯ ಸತ್ಯಶೋಧನಾ ಸಮಿತಿ ರಚಿಸಿ ವರದಿ ಪಡೆಯಲಾಗಿತ್ತು. ಆದರೆ, ಪಕ್ಷದ ಆಂತರಿಕ ವಿದ್ಯಮಾನಗಳು ಬಯಲಾಗಬಾರದು ಎಂಬ ಕಾರಣಕ್ಕೆ ಎಐಸಿಸಿ ಈ ವರದಿಯನ್ನು ಗೌಪ್ಯವಾಗಿಟ್ಟಿತ್ತು.

ಇದಾದ ಬಳಿಕ 2016ರ ಜೂ. 11ರಂದು ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿ.ಎಂ.ಫಾರೂಕ್‌ ಅವರೇ ಜೆಡಿಎಸ್‌ ಅಭ್ಯರ್ಥಿಯಾಗಿದ್ದರು. ಗೆಲ್ಲುವ ಎಲ್ಲ ಅವಕಾಶಗಳಿದ್ದರೂ ಜೆಡಿಎಸ್‌ ಪಕ್ಷದೊಳಗೇ ಬಂಡಾಯ ಸೃಷ್ಟಿಸಿ ಎಂಟು ಶಾಸಕರ ಅಡ್ಡಮತದಾನಕ್ಕೆ ಪ್ರೇರಣೆಯಾಗುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿತ್ತು. ಇದೀಗ ಜೆಡಿಎಸ್​ ಹಾಗೂ ಬಿಜೆಪಿ ನಾಯಕರು ಕಾಂಗ್ರೆಸ್‌ ಬುಟ್ಟಿಗೇ ಕೈಹಾಕುವ ಪ್ರಯತ್ನದ ಮೂಲಕ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದ್ದಾರೆ. ಈ ಬೆಳವಣಿಗೆಯಿಂದಾಗಿ, ನಂಬರ್‌ಗೇಮ್‌ ಲೆಕ್ಕಾಚಾರದೊಂದಿಗೆ ರಾಜ್ಯಸಭೆ ಚುನಾವಣೆ ಮತ್ತೊಮ್ಮೆ ಕುದುರೆ ವ್ಯಾಪಾರಕ್ಕೆ ಸಾಕ್ಷಿಯಾಗುವ ಸಾಧ್ಯತೆಗಳಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ