NCP MLA Disqualification: ಅಜಿತ್ ಪವಾರ್ ಬಣದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿ ತಿರಸ್ಕರಿಸಿದ ಮಹಾರಾಷ್ಟ್ರ ಸ್ಪೀಕರ್
ಅಜಿತ್ ಪವಾರ್ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿಯನ್ನು ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಗುರುವಾರ ವಜಾಗೊಳಿಸಿದ್ದು, ಅವರ ಬಣವು ರಾಜ್ಯ ವಿಧಾನಸಭೆಯಲ್ಲಿ ಶರದ್ ಪವಾರ್ ಬಣವನ್ನು ಗಣನೀಯವಾಗಿ ಮೀರಿಸಿದೆ ಎಂದು ತೀರ್ಪು ನೀಡಿದ್ದಾರೆ.

ಮುಂಬೈ ಫೆಬ್ರುವರಿ 15: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ (Rahul Narwekar) ಗುರುವಾರ ಅಜಿತ್ ಪವಾರ್ (Ajit Pawar) ಅವರ ಬಣಕ್ಕೆ ಸೇರಿದ ಶಾಸಕರನ್ನು ಅನರ್ಹಗೊಳಿಸುವ ಅರ್ಜಿಯನ್ನು ವಜಾಗೊಳಿಸಿದ್ದು, ಅವರ ಬಣವು ರಾಜ್ಯ ವಿಧಾನಸಭೆಯಲ್ಲಿ ಶರದ್ ಪವಾರ್ (Sharad Pawar) ಬಣವನ್ನು ಗಣನೀಯವಾಗಿ ಮೀರಿಸಿದೆ ಎಂದು ತೀರ್ಪು ನೀಡಿದ್ದಾರೆ. ಎನ್‌ಸಿಪಿಯೊಳಗೆ ಅಜಿತ್ ಪವಾರ್ ಬಣಕ್ಕೆ ಹೆಚ್ಚಿನ ಬಹುಮತವಿದೆ ಎಂದು ನಾನು ಭಾವಿಸುತ್ತೇನೆ ಎಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಎರಡು ಬಣಗಳು ಪರಸ್ಪರ ವಿರುದ್ಧವಾಗಿ ಸಲ್ಲಿಸಿರುವ ಅನರ್ಹತೆ ಅರ್ಜಿಗಳ ತೀರ್ಪು ನೀಡಿದ ನಾರ್ವೇಕರ್ ಹೇಳಿದ್ದಾರೆ.
ಕಳೆದ ವರ್ಷ ಜೂನ್ 30 ಮತ್ತು ಜುಲೈ 2 ರ ನಡುವೆ ಅಜಿತ್ ಪವಾರ್ ಅವರ ಬಣದ ಕ್ರಮಗಳು ಮತ್ತು ಹೇಳಿಕೆಗಳು ಪಕ್ಷಾಂತರದ ಕೃತ್ಯಗಳಲ್ಲ, ಆದರೆ ಪಕ್ಷದೊಳಗಿನ ಭಿನ್ನಾಭಿಪ್ರಾಯ ಎಂದು ಸ್ಪೀಕರ್ ತೀರ್ಪು ನೀಡಿದ್ದರು. ಪಕ್ಷಾಂತರದ ಆಧಾರದ ಮೇಲೆ ಶಾಸಕರ ಅನರ್ಹತೆಗೆ ಸಂಬಂಧಿಸಿದ ಭಾರತದ ಸಂವಿಧಾನದ ಹತ್ತನೇ ಶೆಡ್ಯೂಲ್‌ನ ನಿಬಂಧನೆಯನ್ನು ಸದಸ್ಯರ ಬಾಯಿ ಮುಚ್ಚಿಸಲು ಅಥವಾ ಪ್ರತಿಪಕ್ಷಗಳನ್ನು ಹತ್ತಿಕ್ಕಲು ಬಳಸಬಾರದು. ಅದು ಕಾನೂನಿನ ಸಂಪೂರ್ಣ ದುರುಪಯೋಗವಾಗುತ್ತದೆ ಮತ್ತು ಕಾನೂನಿನ ವಾದಕ್ಕೆ ವಿರುದ್ಧವಾಗಿರುತ್ತದೆ ಎಂದು ನಾರ್ವೇಕರ್ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ಎನ್‌ಸಿಪಿಯ ಹೆಸರು ಮತ್ತು ಅದರ ಗಡಿಯಾರದ ಚಿಹ್ನೆಯನ್ನು ಪಡೆಯುತ್ತದೆ ಎಂದು ಭಾರತದ ಚುನಾವಣಾ ಆಯೋಗವು ತೀರ್ಪು ನೀಡಿತ್ತು. ಚುನವಾಣಾ ಆಯೋಗ ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದು ಘೋಷಿಸಿದ್ದು ಲೋಕಸಭಾ ಚುನಾವಣೆಗಳಿಗೆ ಕೆಲವೇ ತಿಂಗಳುಗಳ ಮೊದಲು ಶರದ್ ಪವಾರ್ಗೆ ಇದು ದೊಡ್ಡ ಹೊಡೆತವಾಗಿದೆ.
ಅರ್ಜಿದಾರರಾದ ಅಜಿತ್ ಅನಂತರಾವ್ ಪವಾರ್ ನೇತೃತ್ವದ ಬಣವು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮತ್ತು ಚುನಾವಣಾ ಚಿಹ್ನೆಗಳ (ಮೀಸಲಾತಿ ಮತ್ತು ಹಂಚಿಕೆ) , 1968,” ಆದೇಶದ ಉದ್ದೇಶಗಳಿಗಾಗಿ ಅದರ ಹೆಸರು ಮತ್ತು ಮೀಸಲು ಚಿಹ್ನೆ ‘ಗಡಿಯಾರ’ವನ್ನು ಬಳಸಲು ಅರ್ಹವಾಗಿದೆ ಎಂದು 140 ಪುಟಗಳ ಆದೇಶವು ಹೇಳಿದೆ.
ಇದನ್ನೂ ಓದಿ: Mimi Chakraborty: ಸಂಸತ್ ಸ್ಥಾನಕ್ಕೆ ಟಿಎಂಸಿಯ ಮಿಮಿ ಚಕ್ರವರ್ತಿ ರಾಜೀನಾಮೆ
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು 53 ಎನ್‌ಸಿಪಿ ಶಾಸಕರಿದ್ದಾರೆ. ಅಜಿತ್ ಪವಾರ್ ನೇತೃತ್ವದ ಬಣ 41 ಶಾಸಕರೊಂದಿಗೆ ಬಹುಮತ ಹೊಂದಿದ್ದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ 12 ಶಾಸಕರ ಬೆಂಬಲವನ್ನು ಹೊಂದಿದೆ.
ಅಜಿತ್ ಪವಾರ್ ಶರದ್ ಪವಾರ್ ವಿರುದ್ಧ ಬಂಡಾಯವೆದ್ದು ಮಹಾರಾಷ್ಟ್ರದ ಆಡಳಿತಾರೂಢ ಬಿಜೆಪಿ-ಶಿವಸೇನಾ ಸರ್ಕಾರಕ್ಕೆ ಸೇರ್ಪಡೆಗೊಂಡ ನಂತರ 2023ರ ಜುಲೈನಿಂದ ಇಬ್ಬರು ನಾಯಕರು ಬಣ ವಿವಾದದಲ್ಲಿದ್ದು, ಎನ್‌ಸಿಪಿಯಲ್ಲಿ ಒಡಕು ಉಂಟಾಗಿತ್ತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:39 pm, Thu, 15 February 24