ಕನಕಪುರದಲ್ಲಿ ಒಂದು ಲೋಡ್ ಮೇವು ಹಂಚುವಾಗ ಹೊಡೆದಾಟಗಳೇ ಆಯ್ತು: ಡಿಕೆ ಶಿವಕುಮಾರ್ಗೆ ಹೆಚ್ಡಿ ಕುಮಾರಸ್ವಾಮಿ ಟಾಂಗ್
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆ ಮುಂದುವರಿಸಿ ಮಾತನಾಡಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕನಕಪುರದಲ್ಲಿ ಒಂದು ಲೋಡ್ ಮೇವು ತರುತ್ತಾರೆ. ಅದನ್ನು ರೈತರಿಗೆ ಹಂಚುವಾಗ ಹೊಡೆದಾಟಗಳೇ ಆದವು, ಬರ ಹಿನ್ನೆಲೆಯಲ್ಲಿ ಈ ತರಹದ ಪರಿಸ್ಥಿತಿ ಇದೆ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೆ ಸರ್ಕಾರದ ಜೊತೆ ನಿಲ್ತೇವೆ ಎಂದು ಹೇಳಿದ್ದಾರೆ.
ವಿಧಾನಸಭೆ, ಫೆಬ್ರವರಿ 15: ಡಿಸಿಎಂ ಡಿಕೆ ಶಿವಕುಮಾರ್ ಕ್ಷೇತ್ರ ಕನಕಪುರದಲ್ಲಿ ಒಂದು ಲೋಡ್ ಮೇವು ತರುತ್ತಾರೆ. ಅದನ್ನು ರೈತರಿಗೆ ಹಂಚುವಾಗ ಹೊಡೆದಾಟಗಳೇ ಆಯ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾರ್ಪಣಾ ಪ್ರಸ್ತಾವದ ಮೇಲೆ ಚರ್ಚೆ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆಯಲ್ಲಿ ಈ ರೀತಿಯ ಪರಿಸ್ಥಿತಿ ಇದೆ. ರಾಜ್ಯದ 7,612 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಬೆಂಗಳೂರಿನಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಟ್ಯಾಂಕರ್ ಮಾಫಿಯಾ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೆ ಸರ್ಕಾರದ ಜೊತೆ ನಿಲ್ತೇವೆ: ಕುಮಾರಸ್ವಾಮಿ
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾದರೆ ಸರ್ಕಾರದ ಜೊತೆ ನಿಲ್ತೇವೆ. 15ನೇ ಹಣಕಾಸು ಆಯೋಗದಲ್ಲಿ ಶೇಕಡಾ 10ರಷ್ಟು ಪಾಲು ಸಿಗುತ್ತಿದೆ. 14ನೇ ಹಣಕಾಸು ಆಯೋಗಕ್ಕಿಂತಲೂ ಶೇ. 2.5ರಷ್ಟು ಹೆಚ್ಚಿಗೆ ಸಿಕ್ಕಿದೆ. ಇದು ಎಲ್ಲ ರಾಜ್ಯಗಳಿಗೂ ಅನುಕೂಲ, ಪ್ರೋತ್ಸಾಹ ಕೊಡುವ ಅಂಶ. ಪದೇಪದೆ ಅನ್ಯಾಯವಾಗಿದೆ ಅಂತಾ ಕಾಲು ಕೆರೆದುಕೊಂಡು ಹೋಗ್ತಾರೆ. ಹೀಗಿದ್ದಾಗ ಎಲ್ಲಿಂದ ಸಹಕಾರ ಪಡೆಯಲು ಸಾಧ್ಯ ಎಂದಿದ್ದಾರೆ.
ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಮಾಹಿತಿಯಲ್ಲಿ ಸುಳ್ಳಿದ್ದರೆ ರಾಜಕೀಯ ನಿವೃತ್ತಿ ಎಂದು ಸಿಎಂ ಹೇಳಿದ್ದಾರೆ. ನೀವು ರಾಜಕೀಯ ನಿವೃತ್ತಿ ಪಡೆಯಿರಿ ಅಂತಾ ಹೇಳುತ್ತಿಲ್ಲ. ವಾಸ್ತವಾಂಶ ಚರ್ಚಿಸೋಣ, ಅನ್ಯಾಯ ಆಗಿದ್ದರೆ ನಿಮ್ಮ ಜೊತೆ ನಿಲ್ಲುತ್ತೇವೆ. ಕೇಂದ್ರ ಸರ್ಕಾರದಿಂದ ಅನ್ಯಾಯ ಆಗಿದ್ದರೆ ಅಂಕಿ ಅಂಶ ಮುಂದಿಡಿ ಎಂದರು. ಈ ವೇಳೆ ಕುಮಾರಸ್ವಾಮಿ ಮಾತಿಗೆ ಪ್ರಿಯಾಂಕ್ ಖರ್ಗೆ, ಕೆ.ಜೆ.ಜಾರ್ಜ್ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸುಳ್ಳು ಹೇಳುತ್ತಿದ್ದೀರಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದು, ನೀವೆಲ್ಲ ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳು ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸರ್ಕಾರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಕಿಡಿ
ಮಕ್ಕಳ ಕೈಯಲ್ಲಿ ಶೌಚಾಲಯ ಕ್ಲೀನ್ ಮಾಡಿಸಿದ್ದೀರಿ. ಕೇಂದ್ರ ಸರ್ಕಾರದ ಶಿಕ್ಷಣ ನೀತಿ ರದ್ದು ಮಾಡ್ತಿದ್ದೀರಿ. ಅತಿಥಿ ಶಿಕ್ಷಕರು ಕೆಲಸ ಕಾಯಂಮಾಡಿ ಅಂತಿದ್ದಾರೆ. 8 ತಿಂಗಳ ನಿಮ್ಮ ಸಾಧನೆ ಹೇಳಿದರೆ ನಿಮಗೆ ಬೇಸರ ಆಗುತ್ತದೆ. ಗ್ಯಾರಂಟಿ ಯೋಜನೆ ಬಗ್ಗೆ ಮಾತಾಡಿದ್ದರೆ ಕಠಿಣ ಆಗುತ್ತೆ.
ಇದನ್ನೂ ಓದಿ: ಏನು ಗೂಂಡಾಗಿರಿ ಮಾಡ್ತೀರಾ ಎಂದ ಸಿಎಂ: ಸದನದಲ್ಲಿ ಭುಗಿಲೆದ್ದ ‘ಗೂಂಡಾಗಿರಿ’ ಗದ್ದಲ!
ಈ ಲೋಕಸಭಾ ಚುನಾವಣೆಗೆ ಇನ್ನೂ 5 ಗ್ಯಾರಂಟಿ ಘೋಷಣೆ ಮಾಡಿ. ರಾಜ್ಯದ ಖಜಾನೆ ಖಾಲಿ ಆಗಿದೆ ಅಂತಾ ನಾನು ಹೇಳಲ್ಲ. ನಮ್ಮ ರಾಜ್ಯದ ಸಂಪತ್ತು ಉತ್ತಮವಾಗಿದೆ. 17 ಸಾವಿರ ರೂ. ನೌಕರಿ ನೀಡಿದ್ದೇವೆ ಎಂದಿದ್ದೀರಿ. 2 ಲಕ್ಷ ಉದ್ಯೋಗ ಖಾಲಿ ಇದೆ. ನೀವು ಗ್ಯಾರಂಟಿಗೆ ಕಂಡೀಶನ್ ಹಾಕಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗ್ಯಾರಂಟಿಗಳು ತಲುಪಿಲ್ಲ ಎಂದು ಜನರೇ ಹೇಳಿದ್ದಾರೆ
ನಾನು ವಿಧಾನಸೌಧದಲ್ಲಿ ಜನಸ್ಪಂದನ ಮಾಡಿದ್ದೇನೆ. ಆದರೆ, ನಾನು ಎಲ್ಲೂ ಬಸ್ ಕಳಿಸಿ ಜನರನ್ನ ಕರೆಸಿಲ್ಲ. ಎಲ್ಲೂ ಜಾಹೀರಾತು ನೀಡಿರಲಿಲ್ಲ. ರಾತ್ರಿ 1ಗಂಟೆವರೆಗೆ ಜನರ ಅಹವಾಲು ಆಲಿಸಿದ್ದೇನೆ. ಬರೀ ನೀರು ಕುಡಿದು ಜನರ ಸಮಸ್ಯೆ ಆಲಿಸಿದ್ದೇನೆ. ಅಧಿಕಾರಿಗಳಿಗೆ ಹೇಳಿ ಹಣ ನೀಡಿ ಜನರನ್ನ ಕರೆಸಿಲ್ಲ. ಜನಸ್ಪಂದನದಲ್ಲಿ ಗ್ಯಾರಂಟಿ ತಲುಪಿಲ್ಲ ಎಂದಿದ್ದಾರೆ. ಗ್ಯಾರಂಟಿಗಳು ತಲುಪಿಲ್ಲ ಎಂದು ಜನರೇ ಹೇಳಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
34 ರೂ. ಅಕ್ಕಿ ನೀಡುವಾಗ ಬೊಕ್ಕಸಕ್ಕೆ ನಷ್ಟ ಆಗೋದಿಲ್ವೇ? ಹೆಚ್.ಡಿ.ಕುಮಾರಸ್ವಾಮಿ ಪ್ರಶ್ನೆ
ಇದು ಸರ್ಕಾರದ ಗ್ಯಾರಂಟಿ ಲೂಟಿ ಜಾತ್ರೆ. ಪ್ರಧಾನಿ ಮೋದಿ ಅಕ್ಕಿ ಕೊಟ್ಟಿದ್ದು ನಿಮಗೆ ಅನುಕೂಲ ಆಗಿದೆ. 29 ರೂಪಾಯಿಗೆ ಅಕ್ಕಿ ನೀಡಿದರೆ ಸರ್ಕಾರ ಬೊಕ್ಕಸ ಖಾಲಿ ಆಗುತ್ತದೆ ಎಂದು ಕಾಂಗ್ರೆಸ್ನವರು ಹೇಳುತ್ತಿದ್ದಾರೆ. ಹಾಗಾದರೆ ನೀವು 34 ರೂಪಾಯಿಗೆ ಕೆಜಿ ಅಕ್ಕಿ ತಂದು ನೀಡುವಾಗ ಬೊಕ್ಕಸಕ್ಕೆ ನಷ್ಟ ಆಗೋದಿಲ್ವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ನೆರವು ಪಡೆಯಲು ರಾಜ್ಯ ಸರ್ಕಾರದ ಅಪ್ರೋಚ್ ಸರಿಯಿರಬೇಕು: ಹೆಚ್ ಡಿ ಕುಮಾರಸ್ವಾಮಿ
ಕಾಂಗ್ರೆಸ್‌ನವರ ಶ್ರಮಕ್ಕೆ ಅಭಿನಂದಿಸಬೇಕು. ಸರ್ಕಾರಗಳು ಭರವಸೆ ಕೊಡುತ್ತಾ ಬಂದಿದ್ದಾರೆ. ಆ ಭರವಸೆಗಳ ಮೇಲೆಯೇ ನಾಡಿನ ಜನ ಬದುಕುತ್ತಿದ್ದಾರೆ. ಕಾಂಗ್ರೆಸ್ ಭರವಸೆಗಳ ಬಗ್ಗೆ ವಿಪಕ್ಷಗಳ ಟೀಕೆ ಅವಹೇಳನ ಅಂತ ಅಂದುಕೊಂಡರೆ ಹೇಗೆ? ವಿಪಕ್ಷಗಳು ಹಾಗಾದರೆ ಮಾತೇ ಆಡಬಾರದಾ? ನಿಮಗೆ ಶ್ಲಾಘನೆ ಮಾಡಬೇಕಾ ನಾವು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:43 pm, Thu, 15 February 24