Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿ ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ಮಾತಾಡುತ್ತಿದ್ದಾರೆ: ಸಿಎಂ ಸಿದ್ಧರಾಮಯ್ಯ ಕಿಡಿ

ನಿಮ್ಮ ಕಾಲದಲ್ಲಿ ವರ್ಗಾವಣೆಗಳು ನಡೆದೇ ಇಲ್ವಾ ಎಂದು ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿಗೆ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದ್ದಾರೆ. ಹೆಚ್​​.ಡಿ.ಕುಮಾರಸ್ವಾಮಿ ಬಿಜೆಪಿ ವಕ್ತಾರರಂತೆ ಮಾತಾಡುತ್ತಿದ್ದಾರೆ ಎಂದು ಕೆಪಿಸಿಸಿ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಸರ್ವ ಸದಸ್ಯರ ಸಭೆಯಲ್ಲಿ ವಾಗ್ದಾಳಿ ಮಾಡಿದ್ದಾರೆ. ಜತೆಗೆ, ಕರ್ನಾಟಕದಲ್ಲಿ ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ (ಎಸ್​​​ಇಪಿ) ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.

Follow us
ಪ್ರಸನ್ನ ಗಾಂವ್ಕರ್​
| Updated By: Ganapathi Sharma

Updated on:Aug 14, 2023 | 5:52 PM

ಬೆಂಗಳೂರು, ಆಗಸ್ಟ್​ 14: ಮಾಜಿ ಸಿಎಂ ಹೆಚ್​​.ಡಿ.ಕುಮಾರಸ್ವಾಮಿ (HD Kumaraswamy) ಬಿಜೆಪಿ ವಕ್ತಾರರಂತೆ ಮಾತಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕೆಪಿಸಿಸಿ ನೂತನ ಕಟ್ಟಡದಲ್ಲಿ ನಡೆಯುತ್ತಿರುವ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಪೆನ್​​ಡ್ರೈವ್ ಇದೆ ಅಂತಾ ತೋರಿಸುವುದು, ಒಳಗಿಟ್ಟುಕೊಳ್ಳುವುದು. ನಮ್ಮ ಸರ್ಕಾರ ಬಂದ ಕೂಡಲೇ ವರ್ಗಾವಣೆ ದಂಧೆ ಆರೋಪ ಮಾಡಿದರು. ಯಾಕೆ ನಿಮ್ಮ ಕಾಲದಲ್ಲಿ ವರ್ಗಾವಣೆಗಳು ನಡೆದೇ ಇಲ್ವಾ ಎಂದು ಪ್ರಶ್ನಿಸಿದರು. ಸಚಿವ ಚಲುವರಾಯಸ್ವಾಮಿ ಸದನದಲ್ಲೇ ಹೆಚ್​​ಡಿ ಕುಮಾರಸ್ವಾಮಿ ಅವರ ಅವಧಿಯಲ್ಲಿನ ವರ್ಗಾವಣೆ ಬಗ್ಗೆ ಎಲ್ಲಾ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅವರು ಯಾವಾಗಲೂ ಹಿಟ್​ ಆ್ಯಂಡ್​ ರನ್​​ ಹೇಳಿಕೆ ನೀಡುತ್ತಾರೆ ಎಂದು ಹೇಳಿದರು.

ಬಿಜೆಪಿಯವರಿಗೆ ತನಿಖೆಗಳಿಂದ ನಡುಕ ಶುರುವಾಗಿದೆ. ಭಂಡತನದಿಂದ ಮಾತನಾಡುತ್ತಿದ್ದವರಿಗೆ ಈಗ ಭಯ ಶುರುವಾಗಿದೆ. ತನಿಖಾ ವರದಿಗಳು ಬರಲಿ ಗೊತ್ತಾಗಲಿದೆ ಎಂದರು.

ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ಸಿಎಂ ಸಿದ್ಧರಾಮಯ್ಯ

ನಮಗೆ ಆಶೀರ್ವಾದ ಮಾಡಿದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. 3 ದಶಕದ ಬಳಿಕ ದೊಡ್ಡಮಟ್ಟದಲ್ಲಿ ಜನರು ಆಶೀರ್ವಾದ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಗೆಲುವಿಗೆ ಜಿಲ್ಲಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಪಕ್ಷದ ಎಲ್ಲರೂ ಶ್ರಮಿಸಿದ್ದೀರಿ. ಪ್ರತಿಯೊಬ್ಬರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮಗೆ ಪ್ರತಿಬಾರಿಯೂ ಶೇಕಡಾವಾರು ಮತಗಳು ಹೆಚ್ಚಾಗುತ್ತಿದೆ. ವಿಧಾನಸಭೆ ಚುನಾವಣೆಯಲ್ಲಿ ನಮಗೆ 42.88% ಮತ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ: ಗುತ್ತಿಗೆದಾರರನ್ನು ಬಿಜೆಪಿ ನಾಯಕರು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಾಕ್ಷ್ಯವಿದೆ ಎಂದ ಡಿಕೆ ಶಿವಕುಮಾರ್; ಏನದು?

ರಾಜ್ಯದ ಜನರು ಸಂಪೂರ್ಣವಾಗಿ ಬಿಜೆಪಿ, JDS ತಿರಸ್ಕರಿಸಿದ್ದಾರೆ. ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿದರೆ ಗೆಲ್ಲುತ್ತೇವೆಂಬ ಭ್ರಮೆಯಲ್ಲಿದ್ದರು. ಬಿಜೆಪಿಯವರ ಎಲ್ಲಾ ಲೆಕ್ಕಾಚಾರ ತಲೆಕೆಳಗಾಗಿದೆ. ಮೋದಿ ಎಲ್ಲೆಲ್ಲಿ ಪ್ರಚಾರ ಮಾಡಿದರೋ ಅಲ್ಲೆಲ್ಲಾ ಸೋತಿದ್ದಾರೆ. ರಾಹುಲ್ ಪಾದಯಾತ್ರೆ ಮಾಡಿದ ಕಡೆ ಗೆಲುವು ಸಾಧಿಸಿದ್ದೇವೆ. ಬಿಜೆಪಿಯ ಅವನತಿ ಕರ್ನಾಟಕದಿಂದಲೇ ಆರಂಭವಾಗಿದೆ ಎಂದು ಕಿಡಿಕಾರಿದರು.

ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿ

ರಾಜ್ಯದಲ್ಲಿ ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿ ಮಾಡಲಾಗುವುದು. ಈ ವರ್ಷ ಶಿಕ್ಷಣ ನೀತಿ ಜಾರಿಗೊಳಿಸಲು ಸ್ವಲ್ಪ ತಡವಾಯಿತು. ಹಾಗಾಗಿ ಮುಂದಿನ ವರ್ಷದಿಂದ ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​​​ ವಾಗ್ದಾಳಿ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ವಿಪಕ್ಷಗಳಿಗೆ ತಡೆಯಲಾಗುತ್ತಿಲ್ಲ. ಬಿಜೆಪಿಯವರಿಗೆ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಈಗ ಬಿಜೆಪಿಯವರು ನಮ್ಮ ಮೇಲೆ ಕಮಿಷನ್​ ಆರೋಪ ಮಾಡುತ್ತಿದ್ದಾರೆ. ಕಾಮಗಾರಿಗಳ ನೈಜತೆ ನೋಡಬೇಕಲ್ವಾ ಎಂದು ಪ್ರಶ್ನಿಸಿದರು.​​​

ಇದನ್ನೂ ಓದಿ: ತಮ್ಮ ವಿರುದ್ಧದ ಕಮಿಷನ್​ ಆರೋಪಕ್ಕೆ ಕಾಂಗ್ರೆಸ್ ಸರ್ವ ಸದಸ್ಯರ ಸಭೆಯಲ್ಲೇ ಖಡಕ್ ಸಂದೇಶ ರವಾನಿಸಿದ ​ಡಿಕೆ ಶಿವಕುಮಾರ್

ಯಾರನ್ನೋ ಹೆದರಿಸಿದಂತೆ ಡಿ.ಕೆ.ಶಿವಕುಮಾರ್​​ರನ್ನ ಹೆದರಿಸಲು ಆಗುತ್ತಾ? ನಾನು ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ. ಹಾಗೆ ಮಾಡಿದರೆ ನನ್ನ ನೋಡಲು ಸೋನಿಯಾ ಗಾಂಧಿ ಜೈಲಿಗೆ ಬರುತ್ತಿದ್ದರು. ಶಾಸಕನಾಗಿದ್ದರೂ ಸೋನಿಯಾಗಾಂಧಿ ಬಂದು ಧೈರ್ಯ ತುಂಬಿದರು. ಪಕ್ಷದ ಸ್ವಾಭಿಮಾನಕ್ಕೆ ಧಕ್ಕೆ ತರುವ ಕೆಲಸ ಮಾಡೋದಿಲ್ಲ. ಬಿಜೆಪಿಯವರು ಲೂಟಿ ಹೊಡೆದರಲ್ಲಾ? ಎಲ್ಲವನ್ನೂ ಪತ್ತೆ ಹಚ್ಚಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:55 pm, Mon, 14 August 23