ಭಗವಂತ ಖೂಬಾ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಪ್ರಭು ಚೌಹಾಣ್

ತನ್ನನ್ನು ಹತ್ಯೆ ಮಾಡಿ ಉಪ ಚುನಾವಣೆ ನಡೆಸುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಪ್ರಭು ಚೌಹಾಣ್ ಅವರು ಭಗವಂತ ಖೂಬಾ ವಿರುದ್ಧ ಆರೋಪ ಮಾಡಿದ್ದರು. ಇದನ್ನು ಅಳ್ಳಗಳೆದಿದ್ದ ಖಾಬಾ ವಿರುದ್ಧ ಚೌಹಾಣ್ ಮತ್ತೆ ಗುಡುಗಿದ್ದಾರೆ.

ಭಗವಂತ ಖೂಬಾ ವಿರುದ್ಧ 200 ಕೋಟಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಪ್ರಭು ಚೌಹಾಣ್
ಪ್ರಭು ಚೌಹಾಣ್ ಮತ್ತು ಭಗವಂತ ಖೂಬಾ
Follow us
ಸುರೇಶ ನಾಯಕ
| Updated By: Rakesh Nayak Manchi

Updated on: Aug 14, 2023 | 9:23 PM

ಬೀದರ್, ಆಗಸ್ಟ್ 14: ಕೇಂದ್ರದ ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ (Bhagwanth Ghuba) ಅವರು ಹೊಂದಾಣಿ ರಾಜಕಾರಣದಲ್ಲಿ ಎಕ್ಸ್​ಪರ್ಟ್ ಎಂದು ಮಾಜಿ ಸಚಿವ ಪ್ರಭು ಚೌಹಾಣ್ (Prabhu Chauhan) ವಾಗ್ದಾಳಿ ನಡೆಸಿದ್ದಾರೆ. ತನ್ನನ್ನು ಹತ್ಯೆ ಮಾಡಿ ಉಪ ಚುನಾವಣೆ ನಡೆಸುವ ಪ್ಲಾನ್ ಮಾಡುತ್ತಿದ್ದಾರೆ ಎಂದು ಪ್ರಭು ಚೌಹಾಣ್ ಅವರು ಭಗವಂತ ಖೂಬಾ ವಿರುದ್ಧ ಆರೋಪ ಮಾಡಿದ್ದರು. ಇದನ್ನು ಅಳ್ಳಗಳೆದಿದ್ದ ಖಾಬಾ ವಿರುದ್ಧ ಚೌಹಾಣ್ ಮತ್ತೆ ಗುಡುಗಿದ್ದಾರೆ. ಅಲ್ಲದೆ, ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಹೇಳಿದ್ದಾರೆ.

ಖೂಬಾ ಅವರು ಸ್ವತಃ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದು ಬಹಿರಂಗವಾಗಿದೆ. ಹೀಗಿರುವಾಗ ನಾನು ಕಾಂಗ್ರೆಸ್ ನಾಯಕರ ಜೊತೆಗೆ ಸೇರಿಕೊಂಡು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದೇನೆ ಎಂದು ಆರೋಪಿಸಿರುವುದು ಗಮನಿಸಿದರೆ “ಉಲ್ಟಾ ಚೋರ್ ಕೋತ್ವಾಲ್ ಕೊ ಡಾಟೆ” ಎಂಬಂತಾಗಿದೆ. ಇತ್ತೀಚೆಗೆ ಭಗವಂತ ಖೂಬಾ ತಲೆಬುಡವಿಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರ ಬಗ್ಗೆ ಎಲ್ಲೆಡೆಯಿಂದ ಬರುತ್ತಿರುವ ಅತೃಪ್ತಿ, ಅಸಮಾಧಗಳನ್ನು ಕಂಡು ಹತಾಶರಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ ಎನಿಸುತ್ತದೆ ಎಂದರು.

ನಾನು ಮೂರು ದಶಕದಿಂದ ಬಿಜೆಪಿ ನಿಷ್ಠ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷವನ್ನೇ ನನ್ನ ತಾಯಿ ಎಂದು ಭಾವಿಸಿ ನಿಷ್ಟೆಯಿಂದ ದುಡಿಯುತ್ತಿದ್ದೇನೆ. ಜನರ ಸೇವೆ, ಸಮಾಜದ ಸೇವೆಗೆ ಸಮರ್ಪಿಸಿಕೊಂಡು ಹಗಲಿರುಳು ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ಔರಾದ್ ವಿಧಾನಸಭೆ ಕ್ಷೇತ್ರದ ಜನರು ನನಗೆ ನಾಲ್ಕನೇ ಬಾರಿ ಆಶೀರ್ವಾದ ಮಾಡಿ ವಿಧಾನಸಭೆಗೆ ಕಳಿಸಿದ್ದಾರೆ ಎಂದರು.

ಪಕ್ಷದ ವರಿಷ್ಠರು ನನ್ನ ಸೇವೆಗೆ ಗುರುತಿಸಿ ಎರಡು ಬಾರಿ ಮಂತ್ರಿ ಸ್ಥಾನ ಸಹ ಕೊಟ್ಟಿದ್ದಾರೆ. ಕ್ಷೇತ್ರದ ಜನರ ಋಣ, ಪಕ್ಷದ ಋಣ ತೀರಿಸಲು ಕೊನೆಯುಸಿರು ಇರುವವರೆಗೂ ದುಡಿಯುವ ಸಂಕಲ್ಪ ಮಾಡಿ ಕೆಲಸ ಮಾಡುತ್ತಿದ್ದೇನೆ. ಆದರೆ ಸದಾ ಪಕ್ಷದವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿರುವ ಭಗವಂತ ಖೂಬಾ ಅವರು ನಾನು ಹೊಂದಾಣಿಕೆ ರಾಜಕಾರಣ ಮಾಡುತ್ತಿರುವೆ ಎಂದು ಹೇಳಿ ನನ್ನ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಚೌಹಾಣ್ ಆರೋಪಿಸಿದ್ದಾರೆ.

ಖೂಬಾ ಅವರ ಹೇಳಿಕೆ ನಾನು ಖಂಡಿಸುತ್ತೇನೆ. ಅವರಿಗೆ ದಮ್ ಇದ್ದರೆ ನಾನು ಹೊಂದಾಣಿಕೆ ರಾಜಕಾರಣ ಮಾಡಿರುವುದನ್ನು ಸಾಬೀತುಪಡಿಸಲಿ. ಖೂಬಾ ನನ್ನ ವಿರುದ್ಧ ಸುಳ್ಳು, ಅರ್ಥಹೀನ ಆರೋಪ ಮಾಡಿದ್ದಾರೆ. ಈ ಬಗ್ಗೆ ವರಿಷ್ಠರ ಜೊತೆಗೆ ಮಾತನಾಡುವೆ. ವರಿಷ್ಠರು ಒಪ್ಪಿಗೆ ನೀಡಿದರೆ ಖೂಬಾ ವಿರುದ್ಧ 200 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದರು.

ಇದನ್ನೂ ಓದಿ: ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನನಷ್ಟ ಪ್ರಕರಣ ದಾಖಲಿಸಲು ನಿರ್ಧಾರ: ಭಗವಂತ ಖೂಬಾ

ಭಗವಂತ ಖೂಬಾ ಅವರ ಹೇಳಿಕೆ ನೋಡಿದರೆ “ಬೇಲಿಯೇ ಎದ್ದು ಹೊಲ ಮೇಯ್ದಂತೆ” ಎಂಬ ಮಾತು ನೆನಪಿಗೆ ಬರುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಗೆದ್ದಿರುವ ಖೂಬಾ ಲಕ್ಕಿಮ್ಯಾನ್. ಅವರಿಗೆ ಪಕ್ಷ, ಸಂಘಟನೆ ಏನೂ ಗೊತ್ತಿಲ್ಲ. ಪಕ್ಷದ ಯಾವೊಬ್ಬ ಕಾರ್ಯಕರ್ತರಿಗೂ ಬೆಳೆಸಿಲ್ಲ. ಏನಿದ್ದರೂ ಅವರ ಪರಿವಾರ ಬೆಳೆಸುವ ಕೆಲಸ ಮಾಡಿದ್ದಾರೆ ಎಂದು ಚೌಹಾಣ್ ವಾಗ್ದಾಳಿ ನಡೆಸಿದರು.

ಇಲಾಖೆಗೊಬ್ಬ ಗುತ್ತಿಗೆದಾರರನ್ನು ತಮ್ಮ ಪರಿವಾರದವರಿಗೆ ನಿಯೋಜಿಸಿ ಹಣ ಗಳಿಸುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ವಿರುದ್ಧ ಕೆಲಸ ಮಾಡುತ್ತ ಸ್ವತಃ ಕಾಂಗ್ರೆಸ್ ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ತಾನು ತಪ್ಪು ಮಾಡಿ ಮತ್ತೊಬ್ಬರ ಮೇಲೆ ಆರೋಪ ಹೊರಿಸುತ್ತಿರುವುದು ಸಹಿಸಲಾಗದು ಎಂದು ಎಚ್ಚರಿಕೆ ನೀಡುತ್ತೇನೆ ಎಂದರು.

ಖೂಬಾ ಅವರನ್ನು ರಾಜಕೀಯಕ್ಕೆ ಕರೆತಂದವನು ನಾನು ಎಂದ ಚೌಹಾಣ್

ಭಗವಂತ ಖೂಬಾಗೆ ರಾಜಕೀಯಕ್ಕೆ ಕರೆತಂದು ಎಲ್ಲರಿಗೂ ಪರಿಚಯಿಸಿದ್ದವನೇ ನಾನು. 2008 ರಲ್ಲಿ ನಾನು ಮೊದಲ ಬಾರಿ ಔರಾದ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಖೂಬಾ ಅವರಿಗೆ ಕ್ಷೇತ್ರದ ಚುನಾವಣೆ ಉಸ್ತುವಾರಿ ಮಾಡಲಾಯಿತು. ನಂತರ ಇತರೆ ಜವಾಬ್ದಾರಿ ಕೊಡಲಾಯಿತು. 2010 ರಲ್ಲಿ ಸುಭಾಷ ಕಲ್ಲೂರ್ ಜಿಲ್ಲಾ ಅಧ್ಯಕ್ಷರಿದ್ದಾಗ ನಾನೇ ಖೂಬಾ ಅವರಿಗೆ ಜಿಲ್ಲಾ ಉಪಾಧ್ಯಕ್ಷ ಮಾಡಿಸಿದ್ದೇನೆ. ಇನ್ನು 2014 ರಲ್ಲಿ ಲೋಕಸಭೆ ಚುನಾವಣೆ ವೇಳೆ ಇವರಿಗೆ ಬಿಜೆಪಿ ಟಿಕೆಟ್ ಕೊಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ ಮುಂಚೂಣಿಯಲ್ಲಿ ನಾನೇ ಇದ್ದೇನೆ ಎಂದರು.

ಖೂಬಾಗೆ ಟಿಕೆಟ್ ಕೊಡದಿದ್ದರೆ ನಾನು ವಿಷ ಸೇವಿಸುವೆ ಎಂದು ವರಿಷ್ಠರಿಗೆ ಹೇಳಿದ್ದೇನೆ. ಖೂಬಾ ಅವರಿಗೆ ಟಿಕೆಟ್ ಸಿಕ್ಕಿದ ನಂತರ ಅವರ ಗೆಲುವಿಗಾಗಿ ತನು-ಮನ-ಧನದಿಂದ ದುಡಿದಿದ್ದೇನೆ. ಆದರೆ ಗೆದ್ದ ಬಳಿಕ ಭಗವಂತ ಖೂಬಾ ಅಧಿಕಾರದ ದರ್ಪ, ಅಹಂಕಾರದಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಲು ಆರಂಭಿಸಿದ್ದಾರೆ. ಆರೇಳು ವರ್ಷಗಳಿಂದ ನನಗೆ ನನಗೆ ಎಲ್ಲಿಲ್ಲದ ಟಾರ್ಚರ್ ಕೊಡುತ್ತಿದ್ದಾರೆ. ಇವರಿಗೆ ಪಕ್ಷ, ಪಕ್ಷದ ಕಾರ್ಯಕರ್ತರು, ನಾಯಕರ ಬಗ್ಗೆ ಕಿಂಚಿತ್ತು ಕಾಳಜಿ, ಕಳಕಳಿ ಇಲ್ಲ ಎಂಬುದಕ್ಕೆ ನಾನೇ ಉದಾಹರಣೆ ಆಗಿದ್ದೇನೆ ಎಂದರು.

ಖೂಬಾ ಸಚಿವರಾಗಿರುವುದು ನೋವು ತಂದಿದೆ: ಚೌಹಾಣ್

ಭಾರತವನ್ನು ವಿಶ್ವ ಗುರುವಾಗಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಹಗಲಿರುಳು ದುಡಿಯುತ್ತಿದ್ದಾರೆ. ವಿಶ್ವ ಮೆಚ್ಚಿದ ನಾಯಕರಾಗಿದ್ದಾರೆ. ಆದರೆ ಇಂಥ ಮಹಾನ್ ನಾಯಕರಿರುವ ಕೇಂದ್ರ ಸಚಿವ ಸಂಪುಟದಲ್ಲಿ ಬಿಜೆಪಿಗೇ ದ್ರೋಹ ಬಗೆಯುತ್ತಿರುವ ಭಗವಂತ ಖೂಬಾ ಅವರು ಸಚಿವರಾಗಿರುವುದು ಅತ್ಯಂತ ನೋವು ತಂದಿದೆ ಎಂದು ಚೌಹಾಣ್ ಹೇಳಿದರು.

ತಾಯಿಗೆ ಸಮಾನ ಎಂದು ತಿಳಿದು ನಾವೆಲ್ಲ ಬಿಜೆಪಿಯಲ್ಲಿ ಸಕ್ರಿಯವಾಗಿದ್ದೇವೆ. ಆದರೆ ಬಿಜೆಪಿಯಲ್ಲೇ ಇದ್ದುಕೊಂಡು, ಬಿಜೆಪಿಯ ವಿರುದ್ಧವಾಗಿ ಕೆಲಸ ಮಾಡುವ ಮೂಲಕ ಭಗವಂತ ಖೂಬಾ ಅವರು ತಾಯಿಗೆ ಧೋಖಾ ಮಾಡಿದ್ದಾರೆ. ಇಂಥವರು ಸರ್ಕಾರದ ಉನ್ನತ ಸ್ಥಾನದಲ್ಲಿ ಇದ್ದಿರುವುದು ಸೋಜಿಗದ ಸಂಗತಿ ಎನಿಸಿದೆ. ಇದು ಬಿಜೆಪಿಯ ನಿಷ್ಠಾವಂತ ಅಸಂಖ್ಯಾತ ಕಾರ್ಯಕರ್ತರಿಗೆ ಆಘಾತ ತಂದಿದೆ ಎಂದರು.

ಭಗವಂತ ಖೂಬಾ ಅವರಿಗೆ ಸ್ವಂತ ವರ್ಚಸ್ಸು ಇಲ್ಲ. ಸಂಘಟನಾ ಶಕ್ತಿ ಇಲ್ಲವೇ ಇಲ್ಲ. ಮೋದಿ ಅಲೆಯಲ್ಲಿ ಗೆದ್ದಿದ್ದೇನೆ. ಇನ್ನು ಮುಂದೆ ನನಗ್ಯಾರೂ ಕೈಹಿಡಿಯುವವರಿಲ್ಲ ಎಂದು ದರ್ಪದ ರಾಜಕೀಯ ಮಾಡುತ್ತಿದ್ದಾರೆ. ತಮ್ಮ ರಾಜಕೀಯ ಸ್ವಾರ್ಥ, ವೈಯಕ್ತಿಕ ಸ್ವಾರ್ಥಕ್ಕಾಗಿ ತಮ್ಮದೇ ಗುಂಪು ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅನೇಕರ ತ್ಯಾಗ, ಶ್ರಮದಿಂದ ಬೀದರ್ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲಾಗಿದೆ. ಆದರೆ ಖೂಬಾ ಸಂಸದ, ಸಚಿವರಾದ ಮೇಲೆ ಬೀದರ್ ಬಿಜೆಪಿ ಒಡೆದು ಹೋಳಾಗಿದೆ. ನಿತ್ಯ ಗುಂಪುಗಾರಿಕೆ ಮಾಡುವ ಮೂಲಕ ಖೂಬಾ ಅವರು ಜಿಲ್ಲೆಯಲ್ಲಿ ಬಿಜೆಪಿ ಹಾಳು ಮಾಡಲು ಮುಂದಾಗಿದ್ದಾರೆ ಎಂದು ಚೌಹಾಣ್ ಹೇಳಿದರು.

ಟಿಕೆಟ್ ತಪ್ಪಿಸಲು ಖಾಬಾ ಪ್ರಯತ್ನ

2018ರ ಚುನಾವಣೆ ವೇಳೆ ಭಗವಂತ ಖೂಬಾ ಅವರು ನನಗೆ ಟಿಕೆಟ್ ಸಿಗದಂತೆ ಮಾಡಲು ಸಾಕಷ್ಟು ಪ್ರಯತ್ನಿಸಿದ್ದರು. ಆದರೆ ಪಕ್ಷದ ವರಿಷ್ಠರು ನನ್ನ ಕಾರ್ಯ, ಪಕ್ಷನಿಷ್ಠೆ ಮನ್ನಿಸಿ ಟಿಕೆಟ್ ಕೊಟ್ಟರು. ನನಗೆ ಸೋಲಿಸುವ ದುರುದ್ದೇಶದಿಂದ ಭಗವಂತ ಖೂಬಾ ಅವರು ಕ್ಷೇತ್ರದಲ್ಲಿ ಸಾಕಷ್ಟು ಕುತಂತ್ರಗಳು ಮಾಡಿದರು. ಆದರೆ ಜನರು ನನಗೆ ಭರ್ಜರಿ ಜಯ ತಂದುಕೊಟ್ಟರು. ನಾನು ಸಚಿವನಾಗಿದ್ದಾಗ ಉತ್ತಮವಾಗಿ ಕೆಲಸ ಮಾಡದಂತೆ ಟಾರ್ಚರ್ ನೀಡಿದ್ದರು ಎಂದು ಆರೋಪಿಸಿದರು.

2023ರ ಚುನಾವಣೆ ಸಂದರ್ಭದಲ್ಲಿ ಸಹ ಭಗವಂತ ಖೂಬಾ ಅವರು ನನ್ನ ಟಿಕೆಟ್ ಕಟ್ ಮಾಡಲು ಸಾಕಷ್ಟು ಯತ್ನಿಸಿದ್ದರು. ಖೂಬಾ ಅವರ ನಿರ್ದೇಶನದಂತೆಯೇ ಅವರ ಕೆಲ ಚೇಲಾಗಳು ನನ್ನ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ನೀಡಿ ಟಿಕೆಟ್ ಕೊಡದಂತೆ ಒತ್ತಾಯಿಸಿದ್ದರು. ಖೂಬಾ ಮತ್ತವರ ತಂಡ ಮಾಡಿದ ಷಡ್ಯಂತ್ರಕ್ಕೆ ವರಿಷ್ಠರು ತಲೆಕೆಡಿಸಿಕೊಳ್ಳದೇ ನನಗೆ ಮತ್ತೆ ಟಿಕೆಟ್ ಕೊಟ್ಟರು. ಜನರ ಆಶೀರ್ವಾದಿಂದ ಈ ಚುನಾವಣೆಯಲ್ಲಿ ಸಹ ಗೆದ್ದು ಬಂದಿದ್ದೇನೆ ಎಂದು ಚೌಹಾಣ್ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಸೋಲಿಸಲು ಭಗವಂತ ಖೂಬಾ ಭಾರಿ ಪ್ರಯತ್ನ ಮಾಡಿದರು. 33 ಬೆಂಬಲಿಗರಿಗೆ ಪಕ್ಷ ವಿರೋಧಿ ಕೆಲಸಕ್ಕೆ ಸಜ್ಜುಗೊಳಿಸಿದ್ದರು. 300 ಜನರ ಗುಂಪು ಕಟ್ಟಿಸಿ ನನ್ನ ವಿರುದ್ಧ ಪ್ರಚಾರ ಮಾಡಿಸಿದರು. ಕಾಂಗ್ರೆಸ್ ಅಭ್ಯರ್ಥಿಗೆ ಎಲ್ಲ ರೀತಿಯಿಂದ ಗೆಲ್ಲಿಸಲು ಸಹಕಾರ ನೀಡಿರುವುದು ರಹಸ್ಯವಾಗಿ ಉಳಿದಿಲ್ಲ. ಇವತ್ತು ಅದೇ ಪಕ್ಷ ವಿರೋಧಿಗಳನ್ನು ತಮ್ಮ ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ ಇದು ಪಕ್ಷನಿಷ್ಟೆನಾ ಎಂದು ಪ್ರಶ್ನಿಸಿದರು.

ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ವಿರುದ್ಧ ಕೇಂದ್ರ ಸಚಿವರೇ ಕೆಲಸ ಮಾಡುವುದೆಂದರೆ ಪಕ್ಷಕ್ಕೆ, ಸಮಾಜಕ್ಕೆ ಇವರು ಏನು ಸಂದೇಶ ಕೊಡುತ್ತಿದ್ದಾರೆ? ಎಂಬ ಪ್ರಶ್ನೆ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಗೆ ಕಾಡುತ್ತಿದೆ. ಬಿಜೆಪಿ ವರಿಷ್ಠರು ಭಗವಂತ ಖೂಬಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರು ಹಾಕಿದ್ದರು. ಆದರೆ ಖೂಬಾ ಅವರು ಔರಾದ್ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರಲೇ ಇಲ್ಲ. ಹೈಕಮಾಂಡ್‌ಗಿಂತ ಖೂಬಾ ದೊಡ್ಡವರಾ? ಎಂದು ಪ್ರಶ್ನಿಸಿದರು.

ಖೂಬಾ ಅವರಂಥ ಪಕ್ಷ ವಿರೋಧಿಗಳ ಮೇಲೆ ಕೂಡಲೇ ಕ್ರಮ ಜರುಗಿಸುವ ಅಗತ್ಯವಿದೆ. ಇಲ್ಲದಿದ್ದರೆ ಬರುವ ಕೆಲವೇ ದಿನಗಳಲ್ಲಿ ಬೀದರ್ ಜಿಲ್ಲೆಯ ಬಿಜೆಪಿಗೆ ಬಹುದೊಡ್ಡ ಡ್ಯಾಮೇಜ್ ಆಗುವುದು ಖಚಿತವೆನಿಸುತ್ತಿದೆ ಎಂದು ಚೌಹಾಣ್ ಹೇಳಿದರು.

ಗುತ್ತಿಗೆದಾರರೊಂದಿಗೆ ಖೂಬಾ ಡೀಲ್

ಬೀದರ್ ಜಿಲ್ಲೆಯಲ್ಲಿ ನಡೆದಿರುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕೆಲಸ ಸಂಪೂರ್ಣ ಕಳಪೆಯಾಗಿವೆ. ನೂರಾರು ಕೋಟಿ ಖರ್ಚು ಮಾಡಿದರೂ ಹೆದ್ದಾರಿ ಸರಿಯಾಗಿ ಮಾಡಿಲ್ಲ. ಈ ಬಗ್ಗೆ ಖೂಬಾ ಅವರು ಒಮ್ಮೆಯೂ ಚಕಾರ ಎತ್ತಿಲ್ಲ. ಇವರು ಸುಮ್ಮನಿರುವುದು ನೋಡಿದರೆ ಗುತ್ತಿಗೆ ಸಂಸ್ಥೆಯವರೊಂದಿಗೆ ಏನಾದರೂ ಡೀಲ್ ಮಾಡಿಕೊಂಡಿದ್ದಾರಾ? ಎಂಬ ಪ್ರಶ್ನೆ, ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ ಎಂದು ಚೌಹಾಣ್ ಹೇಳಿದರು.

ನಮ್ಮ ಕೆಲಸದಲ್ಲಿ ಮೂಗು ತೂರಿಸುವ ಖೂಬಾ ಅವರು ಕೇಂದ್ರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನದಲ್ಲಿ ಆದ್ಯತೆ ನೀಡಿಲ್ಲ. ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿ, ಬೀದರ್-ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ಕಳಪೆ ನಡೆದಿದೆ. ಏಕೆ ಖೂಬಾ ಸುಮ್ಮನಿದ್ದಾರೆ ಹೇಳಲಿ? ನನ್ನ ಹೆಸರು ಹಾಳು ಮಾಡಲು ರಾಜ್ಯ ಸರ್ಕಾರದ ಹಲವು ಯೋಜನೆಗಳ ಅನುಷ್ಠಾನಕ್ಕೆ ಖೂಬಾ ಅಡ್ಡಗಾಲು ಹಾಕಿದ್ದಾರೆ. ಔರಾದ್ ತಾಲೂಕಿನ 200 ಕೋಟಿ ರೂ. ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಅಡ್ಡಿ ಮಾಡಿದ್ದಾರೆ. ಈ ಕಾಮಗಾರಿ ಟೆಂಡರ್‌ಗಳನ್ನು ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಐದಾರು ಬಾರಿ ರೀ ಟೆಂಡರ್ ಮಾಡಿಸಿದ್ದಾರೆ. ನಾನು ಕೆಲಸ ಮಾಡಿಲ್ಲ ಎಂದು ಗೂಬೆ ಕೂರಿಸಲು ಈ ರೀತಿ ಖೂಬಾ ಮಾಡಿದ್ದಾರೆ ಎಂದು ಆರೋಪಿಸಿದರು.

ಭಗವಂತ ಖೂಬಾ ಅವರ ಜೊತೆಗಿರುವ ಜನರು ಸರಿಯಿಲ್ಲ. ಕೆಲ ಗುಂಡಾಗಳನ್ನು ಖೂಬಾ ಅವರು ಇಟ್ಟುಕೊಂಡು ಎಲ್ಲ ಕಡೆ ಸುತ್ತಾಡುತ್ತಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಇವರಿಂದ ನನ್ನ ಜೀವಕ್ಕೂ ಅಪಾಯ ಬರಬಹುದಾಗಿದೆ. ಈ ಆತಂಕ ನನಗೆ ಕಾಡುತ್ತಿದೆ. ಖೂಬಾ ಅವರು ನೀಚ ಮನಸ್ಥಿತಿ ಹೊಂದಿದ್ದಾರೆ. ಅವರಲ್ಲಿ ಬಿಜೆಪಿ ತತ್ವ, ಸಿದ್ಧಾಂತಗಳೇ ಇಲ್ಲ. ಅವರಲ್ಲಿ ಕಾಂಗ್ರೆಸ್ ಸಂಸ್ಕೃತಿ ಹಾಸುಹೊಕ್ಕಿವೆ. ಇವರ ಕುಟುಂಬ ಮೂಲತಃ ಕಾಂಗ್ರೆಸ್ ನಿಂದ ಬಂದಿರುವುದೇ ಇದಕ್ಕೆ ಕಾರಣ. ಬೀದರ್ ಕ್ಷೇತ್ರದಿಂದ ಮತ್ತೆ ಬಿಜೆಪಿ ಗೆಲ್ಲಬೇಕು, ಮೋದಿಜೀ ಅವರ ಕೈ ಬಲಪಡಿಸಬೇಕು ಎಂದಾದರೆ ಯಾವುದೇ ಕಾರಣಕ್ಕೂ 2024ರ ಚುನಾವಣೆಯಲ್ಲಿ ಭಗವಂತ ಖೂಬಾ ಅವರಿಗೆ ಟಿಕೆಟ್ ನೀಡಬಾರದು ಎಂದು ಚೌಹಾಣ್ ಹೇಳಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು