ಹೈದರಾಬಾದ್ನ ಖ್ಯಾತ ಜ್ಯೋತಿಷ್ಯರನ್ನು ಭೇಟಿಯಾದ ಹೆಚ್ಡಿ ರೇವಣ್ಣ ಕುಟುಂಬ
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹೀನಾಯ ಸೋಲಿನ ನಂತರ ಮೌನವಾಗಿದ್ದ ಹೆಚ್ಡಿ ರೇವಣ್ಣ ಮತ್ತು ಪತ್ನಿ ಭವಾನಿ ಇದೀಗ ಸದ್ದಿಲ್ಲದೆ ಹೈದರಾಬಾದ್ಗೆ ತೆರಳಿ ಖ್ಯಾತ ಜ್ಯೋತಿಷ್ಯರನ್ನು ಭೇಟಿಯಾಗಿ ಪೂಜೆ ಸಲ್ಲಿಸಿದ್ದಾರೆ.
ಹೈದರಾಬಾದ್, ಜುಲೈ 29: ಕರ್ನಾಟಕದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (HD Deve Gowda) ಅವರ ಕುಟುಂಬವು ಪೂಜೆ ಪುನಸ್ಕಾರ ವಿಷಯದಲ್ಲಿ ಸಾಕಷ್ಟು ನಂಬಿಕೆ ಇಟ್ಟವರು. ಅದರಲ್ಲೂ ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಅವರು ನಿಂಬೆ ಹಣ್ಣನ್ನು ತಮ್ಮ ಬಳಿ ಇಟ್ಟುಕೊಂಡಿರುತ್ತಾರೆ. ಇದೀಗ ಚುನಾವಣೆಯಲ್ಲಿ ಜೆಡಿಎಸ್ನ ಹೀನಾಯ ಸೋಲಿನ ಬೆನ್ನಲ್ಲೇ ರೇವಣ್ಣ ಅವರು ಕುಟುಂಬ ಸಮೇತರಾಗಿ ಸದ್ದಿಲ್ಲದೆ ಹೈದರಾಬಾದ್ಗೆ (Hyderabad) ತೆರಳಿ ಖ್ಯಾತ ಜ್ಯೋತಿಷಿ ವೇಣುಸ್ವಾಮಿ ಅವರನ್ನು ಭೇಟಿಯಾಗಿದ್ದಾರೆ.
ರೇವಣ್ಣ ದಂಪತಿ ಭೇಟಿ ವೇಳೆ ವೇಣು ಸ್ವಾಮಿ ಮಾರ್ಗದರ್ಶನದಲ್ಲಿ ಕೆಲವೊಂದು ವಾಮಾಚಾರದ ಪೂಜೆಗಳು ನಡೆದವು ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕರ್ನಾಟಕದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಅನ್ನು ಕಟ್ಟಿಹಾಕಲು ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಬಿಜೆಪಿ ಜೊತೆ ಮೈತ್ರಿಗೆ ಜೆಡಿಎಸ್ನಲ್ಲಿ ಒಮ್ಮತ ಮೂಡಿಬಂದಿಲ್ಲ. ಈ ನಡುವೆ ರೇವಣ್ಣ ಅವರು ಜ್ಯೋತಿಷ್ಯರನ್ನು ಭೇಟಿಯಾಗಿ ಪೂಜೆಗಳನ್ನು ನಡೆಸಿರುವುದು ಕುತೂಹಲ ಮೂಡಿಸಿದೆ.
ಸದಾ ನಿಂಬೆ ಹಣ್ಣನ್ನು ತಮ್ಮ ಬಳಿ ಇಟ್ಟುಕೊಳ್ಳುವ ರೇವಣ್ಣ, ಇತ್ತೀಚೆಗೆ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕೊಬ್ಬರಿ ಬೆಲೆ ಏರಿಕೆ ಒತ್ತಾಯಿಸಿ ಎರಡು ಕೊಬ್ಬರಿಗಳನ್ನು ತಂದು ಗಮನಸೆಳೆದಿದ್ದರು. ಈ ವೇಳೆ, ನಿಂಬೆ ಹಣ್ಣು ಹಿಡಿಯುವ ಕೈಯಲ್ಲಿ ಕೊಬ್ಬರಿ ಹಿಡಿದಿದ್ದೀಯಲ್ಲಾ ಎಂದು ಸಿಎಂ ಸಿದ್ದರಾಮಯ್ಯ ಅವರು ಕಿಚಾಯಿಸಿದ್ದರು. ಅಷ್ಟೇ ಅಲ್ಲದೆ, ಚುನಾವಣೆಯಲ್ಲಿ ಜೆಡಿಎಸ್ ಸ್ಥಾನ ಕುಸಿದ ಬಗ್ಗೆ ಮಾತನಾಡಿದ್ದ ಬಿಜೆಪಿಯ ಆರ್.ಅಶೋಕ್, ರೇವಣ್ಣ ಅವರು ಚುನಾವಣೆ ಸಂದರ್ಭದಲ್ಲಿ ನಿಂಬೆಹಣ್ಣು ಸರಿಯಾಗಿ ಮಂತ್ರಿಸಿಲ್ಲ. ಒಂದೊಮ್ಮೆ ಅವರು ಸರಿಯಾಗಿ ಮಂತ್ರಿಸಿದ್ದಿದ್ದರೆ 40 ಸ್ಥಾನ ಗೆಲ್ಲುತ್ತಿದ್ದರೆಂದು ಹೇಳಿ ರೇವಣ್ಣ ಅವರ ಕಾಲೆಳೆದಿದ್ದರು.
ಇದನ್ನೂ ಓದಿ: Assembly Session: ಹೆಚ್ ಡಿ ರೇವಣ್ಣ ಕೈಯಲ್ಲಿ ನಿಂಬೆಹಣ್ಣು ಬದಲು ಕೊಬ್ಬರಿ ಕಂಡ ಸಿದ್ದರಾಮಯ್ಯ ಛೇಡಿಸಿದರು!
ಅದೇನೇ ಇರಲಿ, ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 19 ಸ್ಥಾನಗಳನ್ನು ಗಳಿಸಿದೆ. ಹಿಂದಿನ ಚುನಾವಣೆಗೆ ಹೋಲಿ ಮಾಡಿದರೆ ಸ್ಥಾನಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಇದೇ ಕಾರಣಕ್ಕೆ ಪಕ್ಷದ ವರಿಷ್ಠ ಹೆಚ್ಡಿ ದೇವೇಗೌಡ ಅವರು ತಮ್ಮ ವಯೋಸಹಜ ಅನಾರೋಗ್ಯದ ನಡುವೆಯೂ ಪಕ್ಷವನ್ನು ಮರುಸಂಘಟಿಸಲು ಯತ್ನಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ರೇವಣ್ಣ ಅವರು ಮೌನಕ್ಕೆ ಜಾರಿದ್ದಾರೆ. ಪಕ್ಷದ ಮೇಲೆ ತಮ್ಮ ಕಿರಿಯ ಸಹೋದರ ಹೆಚ್ಡಿ ಕುಮಾರಸ್ವಾಮಿ ಅವರ ಪ್ರಾಬಲ್ಯವನ್ನು ನಿಭಾಯಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ಅವರ ಆಪ್ತ ಮೂಲಗಳು ತಿಳಿಸಿವೆ. ತನ್ನ ಪತ್ನಿ ಭವಾನಿ ಅವರಿಗೆ ಹಾಸನ ಕ್ಷೇತ್ರದ ಟಿಕೆಟ್ ನೀಡಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆದರೆ ಪಕ್ಷದ ಮೇಲೆ ಕುಮಾರಸ್ವಾಮಿ ಹಿಡಿತ ಹೆಚ್ಚಿದ್ದಿದ್ದರಿಂದ ಭವಾನಿ ಅವರಿಗೆ ಟಿಕೆಟ್ ಕೈತಪ್ಪಿತ್ತು.
ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ನಡೆಯುವ ಸಂಭವ ಇದೆ ಎನ್ನಲಾಗುತ್ತಿದೆ. ಜೆಡಿಎಸ್ ವರಿಷ್ಠರಿಗೆ ಬಿಜೆಪಿ ಜೊತೆ ಮೈತ್ರಿ ಬೆಳೆಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಮನಸ್ಸಿದ್ದರೂ ಸ್ವಪಕ್ಷದ ಕೆಲವು ಶಾಸಕರು ಹಾಗೂ ಕಾರ್ಯಕರ್ತರ ಅಸಮಾಧಾನ ಎದುರಿಸಬೇಕಾಗಬಹುದು ಎಂಬ ಆತಂಕ ವರಿಷ್ಠರನ್ನು ಕಾಡುತ್ತಿದೆ. ಹೀಗಾಗಿ ಇತ್ತೀಚೆಗೆ ರಾಷ್ಟ್ರೀಯ ವಿರೋಧ ಪಕ್ಷಗಳ ಸಭೆ ಮತ್ತು ಆಡಳಿತ ಪಕ್ಷ ಎನ್ಡಿಎ ಸಭೆಗಳ ಬೆನ್ನಲ್ಲೇ ಜೆಡಿಎಸ್ ಸಭೆ ಕೂಡ ನಡೆದಿತ್ತು. ಈ ಸಭೆಯಲ್ಲಿ ಮೈತ್ರಿ ಬಗ್ಗೆ ಚರ್ಚಿಸಲಾಗಿತ್ತು ಎನ್ನಲಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ