ಹಾಸನ, ಜುಲೈ 28: ಐನೂರು ಅಲ್ಲ, ಸಾವಿರ ಅಧಿಕಾರಿಗಳನ್ನು ವರ್ಗಾವಣೆ ಮಾಡಲಿ, ನನಗೆ ಯಾವುದೇ ಹತಾಶೆ ಇಲ್ಲ ಎಂದು ಮಾಜಿ ಸಚಿವ ಹೆಚ್ಡಿ ರೇವಣ್ಣ (HD Revanna) ಹೇಳಿದ್ದಾರೆ. ಪಿಡಿಒಗಳ ವರ್ಗಾವಣೆ ದಂಧೆ ನಡೆಯುತ್ತಿದೆ ಎಂದು ರೇವಣ್ಣ ಅವರು ಆರೋಪ ಮಾಡಿದ್ದರು. ಈ ಬಗ್ಗೆ ತಿರುಗೇಟು ನೀಡಿದ್ದ ಸಚಿವ ಪ್ರಿಯಾಂಕ್ ಖರ್ಗೆ (Priyank Kharge), ಅವರು ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದಿದ್ದರು.
ಇದೀಗ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ರೇವಣ್ಣ, ನಾನೇನು ಪ್ರಿಯಾಂಕ್ ಖರ್ಗೆ ದುಡ್ಡು ಹೊಡೆದಿದ್ದಾರೆ ಅಂತಾ ಹೇಳುತ್ತಿಲ್ಲ. ಮಧ್ಯವರ್ತಿಗಳು ಏನು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆ ಹೇಳಿದ್ದೇನೆ. ಪ್ರಿಯಾಂಕ್ ಹೆಸರು ಹೇಳಿ ಹಣ ಪಡೆಯುತ್ತಿದ್ದಾರೆ ಅಂತಾ ಹೇಳಿದ್ದೇನೆ. ಅದನ್ನ ಸಮರ್ಥನೆ ಮಾಡಿಕೊಳ್ಳುತ್ತೇನೆ ಅಂದರೆ ಮಾಡಿಕೊಳ್ಳಲಿ ಎಂದರು.
ಇದನ್ನೂ ಓದಿ: Officers Transfer: ಅಧಿಕಾರಿಗಳ ವರ್ಗಾವಣೆ ದಂಧೆಗೆ ಪುಷ್ಟಿ ನೀಡಿದ ಹಾಲಿ-ಮಾಜಿ ಶಾಸಕರ ಶಿಫಾರಸ್ಸು ಪತ್ರ
ಹಂಗರಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ಕುಸಿತ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ರೇವಣ್ಣ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಹಂಗರಹಳ್ಳಿ ಮೇಲ್ಸೇತುವೆ ಗುಣಮಟ್ಟದಿಂದ ನಿರ್ಮಿಸಿಲ್ಲ. 40 ಅಡಿ ಎತ್ತರವಿದೆ, ಗುತ್ತಿಗೆದಾರನಿಗೆ ಅನುಭವ ಇದೆಯೋ ಇಲ್ಲವೋ ಗೊತ್ತಿಲ್ಲ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೇಲ್ಸೇತುವೆಯನ್ನು ಸಂಪೂರ್ಣ ನೆಲಸಮ ಮಾಡಿ ಹೊಸದಾಗಿ ನಿರ್ಮಿಸಬೇಕು. ಇಲ್ಲದಿದ್ದರೆ ಯಾವತ್ತಾದರೂ ಒಂದು ದಿನ ಅನಾಹುತ ಸಂಭವಿಸಬಹುದು ಎಂದರು.
ಮೇಲ್ಸೇತುವೆ ಸಂಬಂಧ ಕೂಡಲೇ ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡುತ್ತೇನೆ. ಮೇಲ್ಸೇತುವೆಗೆ ಎನ್‌ಹೆಚ್‌ಎಐ ಈವರೆಗೂ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಟ್ಟಿಲ್ಲ. ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ, ತೆರವುಗೊಳಿಸಲು ತಜ್ಞರು ವರದಿ ನೀಡಿದ್ದಾರೆ. ಕೂಡಲೇ ರೈಲ್ವೆ ಗೇಟ್ ಓಪನ್ ಮಾಡಿ ಜನರು ಓಡಾಡಲು ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಬಹಳ ತೊಂದರೆಯಾಗುತ್ತದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ