
ಬೆಂಗಳೂರು: ನಾನು ಸಿದ್ದರಾಮಣ್ಣನಷ್ಟು ಬುದ್ದಿವಂತನಲ್ಲ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಇತಿಹಾಸವನ್ನು ನಾನೂ ಕೂಡಾ ಅಧ್ಯಯನ ಮಾಡಿದ್ದೇನೆ. ನಾನು ಏನೇ ಮಾತಾಡಿದರೂ ವಿಚಾರ ಮಾಡಿಯೇ ಮಾತಾಡುತ್ತೇನೆ. ಪಿ.ವಿ. ನರಸಿಂಹರಾವ್, ಯಡಿಯೂರಪ್ಪ ಅವರಿಗೆ ಕಾಂಗ್ರೆಸ್ ಏನು ಮಾಡಿತು? ನಾನು ದಡ್ಡನೇ, ನಾನು ಮೂರ್ಖನೇ ಅಂತಾ ಹೇಳಿಕೊಳ್ಳೋಣ. ನಾನು ಇಂದು ಹೇಳಿರುವುದಕ್ಕೆ ಕಾಂಗ್ರೆಸ್ ಉತ್ತರ ಕೊಡಲಿ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ (Health Minister Dr K Sudhakar) ಮಾರ್ಮಿಕವಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ (Siddaramaiah) ತಿರುಗೇಟು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಅವಕಾಶ ಕೊಡದೇ ಅವರನ್ನು ಬಿಜೆಪಿ ತುಳಿಯುತ್ತಿದೆ ಎಂಬ ಕಾಂಗ್ರೆಸ್ ಟ್ವೀಟ್ ಮಾಡಿರುವ ವಿಚಾರವಾಗಿ, ಯಾರು ಯಾರಿಗೆ ಯಾವ ಸಂದರ್ಭದಲ್ಲಿ ಏನೇನು ಸ್ಥಾನಮಾನ ಕೊಡಬೇಕೋ ಬಿಜೆಪಿ ಪಕ್ಷ ಕೊಟ್ಟಿದೆ. ಈಗಾಗಲೇ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಅಂತಾ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದಾರೆ. ನಮ್ಮ ಪಕ್ಷದಲ್ಲಿ ಜಾತಿ ನೋಡಿ ಮಣೆ ಹಾಕಲ್ಲ. ಜಾತಿಯನ್ನು ಟಾರ್ಗೆಟ್ ಕೂಡಾ ಮಾಡಲ್ಲ. ಯಾರು ಸಮರ್ಥರಿದ್ದಾರೋ ಆ ಸಮಯಕ್ಕೆ ಪಕ್ಷ ಆಯ್ಕೆ ಮಾಡುತ್ತದೆ, ಪುರಸ್ಕಾರ ಮಾಡುತ್ತದೆ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ವಿಶ್ಲೇಷಣಾತ್ಮಕವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಭ್ರಷ್ಟಾಚಾರಕ್ಕೂ ಜಾತಿಗೂ ಸಂಬಂಧ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಯಾರು ಮೇಲ್ವರ್ಗದ ಸಿಎಂ ಇರುತ್ತಾರೋ ಅವರನ್ನು ನೇರವಾಗಿ ಟಾರ್ಗೆಟ್ ಮಾಡುವುದು ಕಾಂಗ್ರೆಸ್ ಸಂಪ್ರದಾಯ ಎಂದು ಹೇಳಿದ್ದೇನೆ. ಕಾಂಗ್ರೆಸ್ ಮೇಲ್ವರ್ಗದ ವಿರೋಧಿ. ಇದಕ್ಕೆ ಅವರು ಉತ್ತರ ಕೊಡಲಿ. ಯಾಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತಾ ಡಿ.ಕೆ. ಶಿವಕುಮಾರ್ ಹೇಳಲಿ. ಒಂದೂವರೆ ವರ್ಷದಲ್ಲಿ ಬೊಮ್ಮಾಯಿ ಏನು ಭ್ರಷ್ಟಾಚಾರ ಮಾಡಿದ್ದಾರೆ? ಸಮರ್ಥವಾಗಿ ಆಡಳಿತ ಕೊಡುತ್ತಿದ್ದಾರೆ, ಹಾಗಾಗಿ ಇವರ ನಾಯಕತ್ವದಲ್ಲಿ ಹೋದರೆ ಉಳಿಗಾಲ ಇಲ್ಲ ಅಂತಾ ಬೊಮ್ಮಾಯಿ ಅವರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿದೆ. ಆದರೆ ಜನರು ಮೂರ್ಖರಲ್ಲ ಎಂದು ಮುಂದಿನ ಅಸೆಂಬ್ಲಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಹೇಳಿದರು.
Published On - 2:38 pm, Mon, 26 September 22