ಕಾಂಗ್ರೆಸ್-ಬಿಜೆಪಿ ಪರ್ಸೆಂಟೇಜ್ ವಾರ್ ಮಧ್ಯೆ ಜೆಡಿಎಸ್ ಎಂಟ್ರಿ, ರಾಷ್ಟ್ರೀಯ ಪಕ್ಷಗಳಿಗೆ ಠಕ್ಕರ್ ಕೊಟ್ಟ ದಳಪತಿ
ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಾಟದ ಮಧ್ಯೆ ಜೆಡಿಎಸ್ ಎಂಟ್ರಿ ಕೊಟ್ಟಿದ್ದು, ಎರಡು ರಾಷ್ರೀಯ ಪಕ್ಷಗಳಿಗೆ ಠಕ್ಕರ್ ಕೊಟ್ಟಿದೆ.
ರಾಯಚೂರು: ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನೇನು ಹತ್ತಿರವಾಗುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಲೇ ಇವೆ. ಅದರಲ್ಲೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪರ್ಸೆಂಟೇಜ್ ವಾರ್ ತಾರಕಕ್ಕೇರಿದೆ.
ಭ್ರಷ್ಟಾಚಾರದ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಕೆಸರೆರಚಿಕೊಳ್ಳುತ್ತಿರುವುದು ಮುಂದುವರೆದಿದೆ. 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಬಿಜೆಪಿ ಸರ್ಕಾರವನ್ನು ನಿರಂತರ ಟೀಕಿಸಲು ಶುರು ಮಾಡಿದೆ. ಇದಕ್ಕೆ ಬಿಜೆಪಿ ಸಹ ಈ ಹಿಂದೆ ಕಾಂಗ್ರೆಸ್ ಮಾಡಿರುವ ಹಗರಣಗಳನ್ನ ಜನರ ಮುಂದಿಡುವ ಪ್ರಯತ್ನಗಳನ್ನ ಮಾಡುತ್ತಿದೆ. ಇದರ ಮಧ್ಯೆ ಇದೀಗ ಜೆಡಿಎಸ್ ಎಂಟ್ರಿ ಕೊಟ್ಟಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಗೆ ಠಕ್ಕರ್ ಕೊಟ್ಟಿದೆ.
ಬೊಮ್ಮಾಯಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಕ್ಯಾಂಪೆನ್ ಗೆ ಜೆಡಿಎಸ್ ಹೊಸ ಮಾದರಿಯ ಕ್ಯಾಂಪೇನ್ ಶುರುಮಾಡಿದೆ. ಪಬ್ಲಿಕ್ ಪೋಸ್ಟರ್ ಅಭಿಯಾನ ಶುರುಮಾಡುವ ಮೂಲಕ ಎಡು ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ಕೊಟ್ಟಿದೆ.
ಇದನ್ನೂ ಓದಿ: ಪೇ ಸಿಎಂ ತರಹ ಬೇರೆ ಬೇರೆ ಸಚಿವರ ಕ್ಯೂ ಆರ್ಕೋಡ್ ರಿಲೀಸ್ ಮಾಡಿದ ಕಾಂಗ್ರೆಸ್
ರಾಯಚೂರಿನಲ್ಲಿ ಪಬ್ಲಿಕ್ ಪೋಸ್ಟರ್ ಕ್ಯಾಂಪೇನ್ಗೆ ಜೆಡಿಎಸ್ ಚಾಲನೆ ಕೊಟ್ಟಿದೆ. ಪಬ್ಲಿಕ್ ಪೋಸ್ಟರ್ ಮೂಲಕ ಕ್ಯೂ ಆರ್ ಕೋಡ್ ಮಾಡಿದ್ದು, ಅದರಲ್ಲಿ ಕುಮಾರಸ್ವಾಮಿ ಆಡಳಿತ ಅವಧಿಯ ಸಾಧನೆಗಳು ಹಾಗೂ ಮುಂಬರುವ ಚುನಾವಣೆಯ ಯೋಜನೆಗಳ ಮಾಹಿತಿಗಳನ್ನ ನೀಡಲಾಗಿದೆ. ಅಲ್ಲದೇ ಎರಡು ರಾಷ್ಟ್ರೀಯ ಪಕ್ಷಗಳ ಹಗರಣಗಳ ಬಗ್ಗೆಯೂ ಕ್ಯುಆರ್ ಕೋಡ್ ನಲ್ಲಿ ಮಾಹಿತಿ ಇದೆ. ಈ ಮೂಲಕ ಬಿಜೆಪಿ,ಕಾಂಗ್ರೆಸ್ ವಿರುದ್ಧ ಜೆಡಿಎಸ್ ಹೊಸ ಮಾದರಿಯ ಹೋರಾಟಕ್ಕೆ ಮುಂದಾಗಿದೆ.
ಬಲಿಷ್ಠ ಬಿಜೆಪಿ ಐಟಿ ಸೆಲ್ಗೆ ಕೈ ಶಾಕ್ ಹೌದು….2012 ರಿಂದಲೂ ಬಿಜೆಪಿ ಐಟಿ ಸೆಲ್ ಎಲ್ಲ ಚುನಾವಣೆಗಳಿಗೂ ಮಾದರಿ ಎನ್ನುವಂತೆಯೇ ಇತ್ತು. ಅವತ್ತು ಕಾಂಗ್ರೆಸ್ನ ಗಾಂಧಿ ಕುಟುಂಬಕ್ಕೂ ಅಳತೆ ಸಿಗದ ಮಟ್ಟಿಗೆ ಬಿಜೆಪಿ ಐಟಿ ಸೆಲ್ ಬೆಳೆದು ನಿಂತಿತ್ತು. ಬಿಜೆಪಿಯ ಸ್ಟ್ರಾಟಜಿಗಳನ್ನು ಕ್ಷಣ ಮಾತ್ರದಲ್ಲಿ ಲಕ್ಷಾಂತರ ಜನರಿಗೆ ತಲುಪಿಸುವ ಕೆಲಸವನ್ನು ಊಹೆಗೂ ನಿಲುಕದ ಸ್ಪೀಡ್ನಲ್ಲಿ ಬಿಜೆಪಿ ಮಾಡುತ್ತಿತ್ತು. ಕರ್ನಾಟಕದಲ್ಲೂ ಅಷ್ಟೇ 2014 ರಿಂದ 2020 ರವರಗೆ ಬಿಜೆಪಿ ಸಾಮಾಜಿಕ ಜಾಲತಾಣಗಳನ್ನು ಯಾರೂ ಕಲ್ಪನೆ ಮಾಡಿಕೊಳ್ಳದ ರೀತಿ ಬಳಸಿ ಬಿಸಾಡಿದೆ. ಕಾಂಗ್ರೆಸ್ ನಾಯಕರಿಗೆ ಬಿಜೆಪಿ ಸೋಷಿಯಲ್ ಮೀಡಿಯಾ ಕೊಟ್ಟಷ್ಟು ಶಾಕ್ ಇನ್ಯಾರೂ ಕೊಟ್ಟಿರಲಿಲ್ಲ.
ಅದರೆ ಇತ್ತಿಚೆಗೆ ಯಾಕೋ ಬಿಜೆಪಿ ಐಟಿ ಸೆಲ್ ಕೊಂಚ ಮಂಕಾಗುವ ರೀತಿಯಲ್ಲಿ ಕಾಂಗ್ರೆಸ್ ಬೆಳೆದು ನಿಂತು ಸ್ಟ್ರಾಟಜಿಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಐಟಿ ಸೆಲ್, ಕಾಂಗ್ರೆಸ್ನ ಮಾಧ್ಯಮ ಘಟಕ, ಕಾಂಗ್ರೆಸ್ನ ಸ್ಟ್ರಾಟಜಿ ಟೀಂ ಬಹುಶಃ ಬಿಜೆಪಿಯನ್ನೂ ಮೀರಿಸುವ ಮಟ್ಟಕ್ಕೆ ಸ್ಪೀಡ್ ಪಡೆದುಕೊಂಡಿದೆ. ಆದ್ರೆ, ಇದೀಗ ಈ ಎರಡು ಪಕ್ಷಗಳ ಮಧ್ಯೆ ಜೆಡಿಎಸ್ ಎಂಟ್ರಿಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Mon, 26 September 22