Explainer: ಕೋಲಾರದಲ್ಲಿ ಸಿದ್ದರಾಮಯ್ಯಗೆ ಸಿಗಲಿದ್ಯಾ ಗೋಲ್ಡನ್ ಲೈಫ್? ಫಾರ್ಮೂಲಾ ಮೂಲಕ ಗೇಮ್ ಗೆಲ್ತಾರಾ ಸಿದ್ದು..?
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ಅವರಿಗೆ ಏನು ಪ್ಲಸ್? ಇನ್ನು ಮೈನಸ್ ಏನು? ಚಿನ್ನದ ನಾಡಲ್ಲಿ ಸಿದ್ದರಾಮಯ್ಯಗೆ ಸಿಗಲಿದ್ಯಾ ಗೋಲ್ಡನ್ ಲೈಫ್? ಪ್ಲಸ್, ಮೈನಸ್, ಸರ್ಚ್, ಫೈರ್ - ಫಾರ್ಮೂಲಾ ಮೂಲಕ ಗೇಮ್ ಗೆಲ್ತಾರಾ ಸಿದ್ದು..?
ಬೆಂಗಳೂರು/ಕೋಲಾರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddarmaiah) 2021ರ ಡಿಸೆಂಬರ್ ನಿಂದ ಹೊಸ ವಿಧಾನಸಭಾ ಕ್ಷೇತ್ರದ ಹುಡುಕಾಟದಲ್ಲಿದ್ದರು. ಮೊದಲು ನಮ್ಮ ಕ್ಷೇತ್ರಕ್ಕೆ ಬನ್ನಿ ಎಂದು ಕೈ ಹಿಡಿದು ಎಳೆದಿದ್ದೇ ಚಾಮರಾಜಪೇಟೆಯ ಜಮೀರ್ ಅಹಮದ್ ಖಾನ್. ಅದ್ಯಾಕೋ ಏನೋ ಖಾನ್ ಸಾಹೇಬ್ರು ಬನ್ನೀ ಅಂದದ್ದು ಸಿದ್ದರಾಮಯ್ಯ ನೋಡೋಣ ಅಂದಿದ್ದೇ ತಡ ಹತ್ತಾರು ಕ್ಷೇತ್ರದ ಶಾಸಕರು ಸಿದ್ದರಾಮಯ್ಯಗೆ ದುಂಬಾಲು ಬಿದ್ದರು. ಆ ಕ್ಷೇತ್ರ ಈ ಕ್ಷೇತ್ರ ಅಂತ ಹುಡುಕಾಟದ ಬಳಿಕ ಬಹುತೇಕ ಚಿನ್ನದ ನಾಡು ಕೋಲಾರದಲ್ಲಿ(Kolar) ಸಿದ್ದರಾಮಯ್ಯ ಹುಡುಕಾಟಕ್ಕೆ ಫುಲ್ ಸ್ಟಾಪ್ ಬಿದ್ದಂತೆ ಕಾಣ್ತಿದೆ.
ಹೌದು… ಸಿದ್ದರಾಮಯ್ಯ ಈಗ ಬಹುತೇಕ ಕೋಲಾರದಲ್ಲಿ ಕಣಕ್ಕಿಳಿದು ಸ್ಪರ್ಧಿಸೋದು ಫಿಕ್ಸ್ ಆದಂತಿದೆ. ಸಿದ್ದರಾಮಯ್ಯ ಎದುರು ಬನ್ನಿ ಬನ್ನಿ ಎಂದು ಸ್ವಾಗತಿಸಿದ್ದು, ಕೇವಲ ಕೋಲಾರ ಕ್ಷೇತ್ರ ಮಾತ್ರವಲ್ಲ. ಸಿದ್ದರಾಮಯ್ಯ ಪುತ್ರ ಯತೀಂದ್ರ ಶಾಸಕರಾಗಿರುವ ವರುಣಾ, ಸಿದ್ದು ಹಾಲಿ ಶಾಸಕರಾಗಿರುವ ಬಾದಾಮಿ, ಕೊಪ್ಪಳ, ಚಾಮರಾಜಪೇಟೆ, ಹುಣಸೂರು, ಚಿಕ್ಕಮಗಳೂರು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಿದ್ದುಗೆ ಈಗಲೂ ಸ್ಪರ್ಧೆ ಮಾಡುವಂತೆ ಒತ್ತಾಯವಿದೆ, ಒತ್ತಡವೂ ಇದೆ. ಅದರಲ್ಲೂ ವರುಣ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಿದರೆ ಎಲ್ಲದಕ್ಕಿಂತ ಸೇಫ್ ಎಂಬ ಮಾತನ್ನೂ ಸಿದ್ದರಾಮಯ್ಯ ಆಪ್ತ ವರ್ಗವೇ ಹೇಳುತ್ತಿದೆ. ಆದರೂ ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಕಡೆ ಮುಖ ಮಾಡಲು ಹತ್ತಾರು ಕಾರಣಗಳಿವೆ.
ಸಿದ್ದರಾಮಯ್ಯಗೆ ಪ್ಲಸ್ ಏನು: – ಅಹಿಂದ ಅಲ್ಪ ಸಂಖ್ಯಾತ ಒಕ್ಕಲಿಗ ಮತಗಳು ದೊಡ್ಡ ಪ್ರಮಾಣದಲ್ಲಿವೆ
– ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ, ಕಾಂಗ್ರೆಸ್ ಗೆ ಶಕ್ತಿ ಇದೆ
– ಕೋಲಾರ ಭಾಗದ ಹಲವು ಜೆಡಿಎಸ್ ನಾಯಕರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ
– ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಾರೆ ಅಂದ್ರೆ ಮತ್ತಷ್ಟು ಮಂದಿ ಕಾಂಗ್ರೆಸ್ ಸೇರ್ಪಡೆ ಆಗುವ ಸಾಧ್ಯತೆ ಇದೆ
– ಕೋಲಾರದಲ್ಲಿ ಸಿದ್ದು ಅಖಾಡಕ್ಕೆ ಇಳಿದರೆ ಉಳಿದ ಸುತ್ತಮುತ್ತಲ ಹತ್ತು ಕ್ಷೇತ್ರಗಳಲ್ಲೂ ಗೆಲುವು ಸುಲಭ
– ಖಾಸಗಿ ಸರ್ವೆಯಲ್ಲಿ ೬೦% ಸಿದ್ದರಾಮಯ್ಯಗೆ ಜನ ಮನ್ನಣೆ ಸಿಗುವ ವಿಶ್ವಾಸ ದೊರಕಿದೆ
– ಬೆಂಗಳೂರಿಗೆ ಹತ್ತಿರವಿರುವ ಕ್ಷೇತ್ರವಾದ್ದರಿಂದ ಹಳೆ ಮೈಸೂರು ಭಾಗದಲ್ಲಿ ಪ್ರಚಾರ ಮಾಡಲು ಅನುಕೂಲ
– ಸಿದ್ದರಾಮಯ್ಯ ತಾವು ಗೆಲ್ಲುವ ಕ್ಷೇತ್ರದ ಜನರಿಗೆ ಸಮಯ ಹೆಚ್ಚು ಮೀಸಲಿಡಲು ಅವಕಾಶ
– ಕೋಲಾರ ಸೇಫ್ ಅಂತ ಅನಿಸಿದರೆ ಸಿದ್ದರಾಮಯ್ಯ ಉಳಿದ ಜಿಲ್ಲೆಗಳಿಗೆ ಪ್ರಚಾರಕ್ಕೆ ಹೆಚ್ಚು ಓಡಾಡಬಹುದು
ಸಿದ್ದರಾಮಯ್ಯಗೆ ಮೈನಸ್ ಏನೇನು..?
ಕೋಲಾರ ಸ್ಥಳೀಯ ನಾಯಕರ ಆಂತರಿಕ ಮುನಿಸು
– ಸಿದ್ದರಾಮಯ್ಯ ಆಪ್ತರ ಪರ ಕೆಎಚ್ ಮುನಿಯಪ್ಪ ವಿಶ್ವಾಸ ಹೊಂದಿಲ್ಲ
– ನಿರ್ಣಾಯಕವಾಗಿರುವ ಒಕ್ಕಲಿಗ ಸಮುದಾಯ ಅಹಿಂದ ನಾಯಕ ಸಿದ್ದರಾಮಯ್ಯ ಕೈ ಹಿಡಿಯುತ್ತದೆ ಎಂಬ ವಿಶ್ವಾಸ ಕಡಿಮೆ
– ಒಕ್ಕಲಿಗ ಮತ ಬ್ಯಾಂಕ್ ಕೈ ಕೊಟ್ಟರೆ ಸಿದ್ದರಾಮಯ್ಯ ಗೆ ಟಫ್
– ಬಿಜೆಪಿಯಿಂದ ಕುರುಬ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಸಮಯದಾಯದ ಮತ ಡಿವೈಡ್ ಮಾಡುವ ಸಾಧ್ಯತೆ
– ಜೆಡಿಎಸ್ ನಿಂದ ಅಲ್ಪ ಸಂಖ್ಯಾತ ಅಥವಾ ಒಕ್ಕಲಿಗ ಅಭ್ಯರ್ಥಿ ಕಣಕ್ಕಿಳಿಸಿದರೆ ತೀವ್ರ ಸ್ಪರ್ಧೆ
– ಬಿಜೆಪಿ ಜೆಡಿಎಸ್ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಓಟು ಡಿವೈಡ್ ಆಗಲಿದೆ
– ಮುನಿಯಪ್ಪ ರಮೇಶ್ ಕುಮಾರ್ ಕಚ್ಚಾಟ ಮತ್ತೆ ತಾರಕಕ್ಕೆ ಏರಿದರೆ ಸಂಕಷ್ಟ
– ಕ್ಲಾಕ್ ಟವರ್ ಗದ್ದಲದ ಸಂದರ್ಭ ಕಾಂಗ್ರೆಸ್ ನಾಯಕರು ಅಲ್ಪ ಸಂಖ್ಯಾತ ಸಮಯದಾಯ ಬೆನ್ನಿಗೆ ನಿಲ್ಲಲಿಲ್ಲ
– ಹೀಗಾಗಿ ಅಲ್ಪಸಂಖ್ಯಾತ ಸಮುದಾಯ ಎಷ್ಟರ ಮಟ್ಟಿಗೆ ಸಿದ್ದರಾಮಯ್ಯ ಪರ ನಿಲ್ಲಬಹುದು ಎಂಬ ಪ್ರಶ್ನೆ ಇದೆ
– ಟಿಪ್ಪು ವಿವಾದ, ಹಿಜಾಬ್ ಗೊಂದಲ ಗಳ ಸಂದರ್ಭದಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ನಾಯಕರ ಬಗ್ಗೆ ಸಮುದಾಯದ ಬೇಸರ
– ಕೋಲಾರ ಮೂಲದ ಕುರುಬ ನಾಯಕರು ಬಿಜೆಪಿ ಪರ ಬ್ಯಾಟ್ ಬೀಸುತ್ತಿರುವುದು.
ಇಂಥ ಕಾರಣಗಳನ್ನೂ ಕೂಡ ಮುಂದಿಡುತ್ತಿರುವ ರಾಜಕೀಯ ವಿಶ್ಲೇಷಕರ ಮಾತುಗಳಿಂದ ಸಿದ್ದರಾಮಯ್ಯಗೆ ಕೋಲಾರ ಕೇಕ್ ಆಫ್ ದಿ ವಾಕ್ ಅಂತ ಭಾವಿಸುವ ಅಗತ್ಯವಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ವರುಣ ಕ್ಷೇತ್ರವನ್ನು ಬೇಡವೇ ಬೇಡ ಅಂತ ಈ ಕ್ಷಣಕ್ಕೂ ನಿರಾಕರಣೆ ಮಾಡಿಲ್ಲ. ಅಕಸ್ಮಾತ್ ಎರಡನೇ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಸಿದ್ದರಾಮಯ್ಯ ಕೋಲಾರದ ಜೊತೆಗೆ ವರುಣ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ವರುಣಾ ಕ್ಷೇತ್ರ ಹಾಗೂ ಕೋಲಾರ ಎರಡೂ ಕ್ಷೇತ್ರವನ್ನು ಇಟ್ಟುಕೊಂಡು ಸ್ಪರ್ಧೆ ಮಾಡಿದರೆ ಇನ್ನಷ್ಟು ಸೇಫ್ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಸಿದ್ದರಾಮಯ್ಯ ಪುತ್ರ ಯತೀಂದ್ರ ಕೂಡ ತನ್ನ ತಂದೆಗಾಗಿ ವರುಣ ಕ್ಷೇತ್ರವನ್ನು ಬಿಟ್ಟುಕೊಡುತ್ತೀನಿ ಅಂದಿದ್ದಾರೆ. ಈಗಲೂ ಹಲವರಿಗೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದಲೇ ಕಣಕ್ಕೆ ಇಳಿಯುತ್ತಾರೆ ಎಂಬ ವಿಶ್ವಾಸವಿದ್ದು ಸಿದ್ದರಾಮಯ್ಯ ಕೂಡ ವರುಣದ ಬಾಗಿಲು ದಢಾರ್ ಅಂತ ಮುಚ್ಚಿಲ್ಲ. ವರುಣ ಕ್ಷೇತ್ರದ ಆಯ್ಕೆಯನ್ನು ಈಗಲೂ ತೆರೆದಿಟ್ಟಿಕೊಂಡಿರುವ ಸಿದ್ದರಾಮಯ್ಯ ಕೋಲಾರ ಬಿಟ್ಟು ಬೇರೆ ಕಡೆ ಗಮನ ಹರಿಸದೇ ಇರುವುದಕ್ಕೆ ಹಲವು ಕಾರಣಗಳಿವೆ.
ಉಳಿದ ಕ್ಷೇತ್ರದಲ್ಲಿ ಯಾಕೆ ಎಂಟ್ರಿ ಕೊಡ್ತಿಲ್ಲ ಸಿದ್ದು..?
ಈ ಬಾರಿಯೂ ಸಿದ್ದರಾಮಯ್ಯ ಕೈ ಹಿಡಿಯಬೇಕಿರುವುದು ಅಲ್ಪ ಸಂಖ್ಯಾತ, ಹಿಂದುಳಿದ ವರ್ಗ, ದಲಿತ ಮತಗಳೇ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಅಹಿಂದ ಮತ ಬ್ಯಾಂಕ್ ಕೋಲಾರದಲ್ಲಿ ಗಟ್ಟಿಯಾಗಿದೆ. ತಮ್ಮ ಜೀವ ಕಾಪಾಡಿದ ಬಾದಾಮಿಯಲ್ಲೇ ಮತ್ತೆ ಸ್ಪರ್ಧಿಸುವುದು ಸೇಫ್ ಅಲ್ಲ ಎಂಬ ಸಲಹೆ ಸಿಕ್ಕಿರುವುದು ಬಾದಾಮಿಯಲ್ಲಿ ಕಳೆದ ಬಾರಿ ಗೆದ್ದಿದ್ದು ಕೇವಲ 1696 ಮತಗಳ ಅಂತರದಿಂದ ಮಾತ್ರ, ಮತ್ತೆ ಈ ಬಾರಿಯೂ ಅಲ್ಲಿ ರಿಸ್ಕ್ ತೆಗೆದುಕೊಳ್ಳಲು ಸಿದ್ದು ಆ್ಯಂಡ್ ಟಿಂ ರೆಡಿ ಇಲ್ಲ. ಬಾದಾಮಿಗೂ ಸಿದ್ದರಾಮಯ್ಯಗೂ ಒಮ್ಮೆ ಗೆದ್ದಿದ್ದು ಬಿಟ್ಟರೆ ಭಾವನಾತ್ಮಕ ಸಂಬಂಧವೇನೂ ಬಾಕಿ ಉಳಿದಿಲ್ಲ. ಚಾಮರಾಜಪೇಟೆ ಕ್ಷೇತ್ರದಲ್ಲಿ ಹಾಲಿ ಶಾಸಕರಾಗಿರುವುದು ಅಲ್ಪ ಸಂಖ್ಯಾತ ಸಮುದಾಯದ ಜಮೀರ್ ಖಾನ್ ತಾವು ಚಾಮರಾಜಪೇಟೆಗೆ ತೆರಳಿದರೆ ಅಲ್ಪ ಸಂಖ್ಯಾತರ ಮೊರೆ ಹೋದರು ಎನ್ನೋ ಅಪಪ್ರಚಾರದ ಭೀತಿ.
ಅಲ್ಪ ಸಂಖ್ಯಾತರ ಕ್ಷೇತ್ರಕ್ಕೆ ಹೋದರೆ ಅದು ಇಡೀ ರಾಜ್ಯದ ಬಹುಸಂಖ್ಯಾತ ಮತದಾರರ ಮೇಲೆ ದುಷ್ಪರಿಣಾಮ ಬೀರಬಹುದು ಎನ್ನುವ ಆಂತಕ ಕೊಪ್ಪಳದಲ್ಲಿ ಹಿಂದೆ ಲೋಕಸಭೆ ಚುನಾವಣೆ ಸೋತಿರುವ ಕಹಿ ನೆನಪು ಸಿದ್ದರಾಮಯ್ಯ ನೆನಪಿನಿಂದ ಮಾಸಿದಂತಿಲ್ಲ ಚಿಕ್ಕಬಳ್ಳಾಪುರ ಸೇರಿ ಉಳಿದ ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ ಮತ್ತೆ ಬಾದಾಮಿ ಕ್ಷೇತ್ರದಲ್ಲಿಯಾದಂತೆ ರಾಜಧಾನಿಯಿಂದ ದೂರ ಎಂಬ ಹಳೆಯ ಸಮಸ್ಯೆ ಎದುರಾಗುತ್ತದೆ.
ಬಾದಾಮಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಪದೇ ಪದೇ ತಮ್ಮನ್ನು ಗೆಲ್ಲಿಸಿದ ಕ್ಷೇತ್ರಕ್ಕೆ ಈ ವಯಸ್ಸಲ್ಲಿ ಓಡಾಡುವುದಕ್ಕೆ ಸಾದ್ಯವಾಗ್ತಿಲ್ಲ ಎಂಬ ನೋವೂ ಇದೆ. ಇದನ್ನೇ ಹಲವು ಬಾರಿ ಹೇಳಿಕೊಂಡಿರುವ ಸಿದ್ದರಾಮಯ್ಯ ಬಾದಾಮಿಯ ಜನರ ಕಷ್ಟ ಸುಖಗಳಿಗೆ ಸ್ಪಂದಿಸೋಕೆ ಆಗ್ತಿಲ್ಲ ಅಂತಿದ್ದಾರೆ. ಹೀಗೆ ಸಿದ್ದರಾಮಯ್ಯ ಮುಂದೆ ತೆರೆದುಕೊಂಡಿರುವ ಆಯ್ಕೆಗಳು ಹತ್ತಾರಿದ್ದರೂ ಸಿದ್ದರಾಮಯ್ಯ ಸುಭದ್ರ ತಾಣವೊಂದರ ಹುಡುಕಾಟದಲ್ಲಿದ್ದರು. ಚಿನ್ನದ ನಾಡಿನಲ್ಲಿ ಸಂಚಾರ ಮಾಡುವ ಮೂಲಕ ಆ ಹುಡುಕಾಟಕ್ಕೆ ಹೊಸ ತಿರುವು ಸಿಕ್ಕಂತಿದೆ.
ರಾಜಕೀಯ ಶತ್ರುಗಳ ಸಂಖ್ಯೆ ಹೇರಳ
ರಾಜಕೀಯದ ಚದುರಂಗದಾಟವೇ ಹಾಗೆ- ಇಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರೂ ಅಲ್ಲ. ಪರಿಸ್ಥಿತಿಗೆ ತಕ್ಕಂತೆ ಎಲ್ಲರೂ ಹೇಗೆ ಬೇಕಾದರೂ ಬದಲಾಗಬಹುದು. ಮಿತ್ರ ಶತ್ರುವಾಗಬಹುದು, ಶತ್ರು ಪರಮಾತ್ಮನೂ ಆಗಬಹುದು. ಇದೀಗ ಚಿನ್ನದ ನಾಡಿನ ಕಡೆ ಬಸ್ಸು ಹತ್ತಿರುವ ಸಿದ್ದರಾಮಯ್ಯ ಮೈ ಎಲ್ಲ ಕಣ್ಣಾಗಿರಲೇಕಾದ ಪರಿಸ್ಥಿತಿ. ಮುಂಬರುವ ಚುನಾವಣೆಯಲ್ಲಿ ವಿರೋಧಿಗಳ್ಯಾರು..? ಪರಮಾಪ್ತರು ಯಾರು..? ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯ ತಮಗೆ ತಾವೇ ಕೇಳಿಕೊಳ್ಳಬೇಕು.
ರಾಜಕೀಯ ಸಮುದ್ರದಲ್ಲಿ ಈಜುತ್ತಿರುವ ಸಿದ್ದರಾಮಯ್ಯ ಅಜಾತ ಶತ್ರುವೇನೂ ಅಲ್ಲ. ಸತತ ಹೋರಾಟಗಳಿಂದಲೇ ಅಖಾಡದಲ್ಲಿ ತೊಡೆ ತಟ್ಟುವ ಸಿದ್ದರಾಮಯ್ಯಗೆ ಎಷ್ಟು ಆಪ್ತರು, ಪರಮಾಪ್ತರಿದ್ದಾರೋ ಅಷ್ಟೇ ಸಂಖ್ಯೆಯ ಕಡು ವಿರೋಧಿಗಳೂ ಇದ್ದಾರೆ. ಸಿದ್ದರಾಮಯ್ಯ ಇದೀಗ ಕ್ಷೇತ್ರ ಬಿಟ್ಟು ಪರ ಕ್ಷೇತ್ರದ ಕಡೆ ಮತ್ತೆ ಮುಖ ಮಾಡಿದ್ದಾರೆ. ಹೊಸ ಕ್ಷೇತ್ರದ ಹುಡುಕಾಟದಲ್ಲಿರುವ ಸಿದ್ದರಾಮಯ್ಯಗೆ ಎಲ್ಲೇ ನಿಂತುಕೊಂಡರೂ ಸುತ್ತಮುತ್ತ ರಾಜಕೀಯ ಶತ್ರುಗಳ ಸಂಖ್ಯೆ ಹೇರಳವಾಗಿದೆ.
ಸಿದ್ದುಗೆ ವೈರಿ ನಂ.1ಕಾಂಗ್ರೆಸ್ ಪಕ್ಷದ ಆಂತರಿಕ ವಿರೋಧಿಗಳು
ಸಿದ್ದರಾಮಯ್ಯ ಇದೀಗ ಎಷ್ಟೇ ಕಾಂಗ್ರೆಸ್ ಹೈಕಮಾಂಡ್ ದೊಡ್ಡವರೂ ಅಂತ ಹಾಡಿ ಹೊಗಳಲಿ, ಸಿದ್ದರಾಮಯ್ಯ ಬೆನ್ನಿಗೆ ನಲವತ್ತು ಶಾಸಕರ ಪಡೆಯೇ ಇರಲಿ, ಆದರೆ ಸಿದ್ದರಾಮಯ್ಯಗೆ ಪಕ್ಷದೊಳಗಿನ ಆಂತರಿಕ ವಿರೋಧಿಗಳ ಸಂಖ್ಯೆ ಕಾಲಿಗೊಂದು ಕೈಗೊಂದು ಎಂಬಂತಿದೆ. ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕೆ ಕಚ್ಚಾಟಗಳಿಗೆ ಕಾರಣವಾದವರು ಸಿದ್ದರಾಮಯ್ಯ ವಿರುದ್ದ ತೊಡೆ ತಟ್ಟಲು ಸಜ್ಜಾಗಿ ನಿಂತಿದ್ದಾರೆ. ಕೋಲಾರದಲ್ಲಿಯೇ ತೆಗೆದುಕೊಂಡರೆ ಸಿದ್ದರಾಮಯ್ಯ ಆಪ್ತ ರಮೇಶ್ ಕುಮಾರ್ ಕಂಡರೆ ಉರಿದು ಬೀಳುವ ಬೆಂಕಿಯುಂಡೆಗಳ ಸಂಖ್ಯೆ ಹತ್ತಾರು. ಇವರೆಲ್ಲ ಸಿದ್ದರಾಮಯ್ಯರನ್ನು ಹಣಿಯಲು ಪಣತೊಟ್ಟು ನಿಲ್ಲುವುದಿಲ್ವಾ?
ಸಿದ್ದುಗೆ ವೈರಿ ನಂ 2: ಸಿಎಂ ಖುರ್ಚಿಯ ಪೈಪೋಟಿ
ಸಿದ್ದರಾಮಯ್ಯ ಅಭೂತಪೂರ್ವ ಗೆಲುವು ಸಾಧಿಸಿದರೆ ಸಿಎಂ ಖುರ್ಚಿಗೆ ಮತ್ತೆ ಏರುವ ಸಾಧ್ಯತೆ ಹೆಚ್ಚು. ಸಹಜವಾಗಿಯೇ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಲವಿದೆ ಎಂಬ ಕಾರಣಕ್ಕೆ ಸಿಎಂ ಆಗುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಾಯಕರು ಹಲವಾರು ಮಂದಿ. ಪ್ರಬಲ ಸಮುದಾಯಗಳ ನಾಯಕರು ತಮ್ಮ ತಮ್ಮ ಸಮುದಾಯಗಳ ಶಕ್ತಿ ಆಧರಿಸಿ ಸಿಎಂ ಖುರ್ಚಿ ಮೇಲೆ ಕಣ್ಣು ನೆಟ್ಟಿದ್ದಾರೆ. ಹಳೆ ಮೈಸೂರು ಭಾಗದ ಪ್ರಬಲ ಒಕ್ಕಲಿಗ ನಾಯಕರು ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದು ಸಿಎಂ ಸ್ಥಾನಕ್ಕಾಗಿ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಇಂಥ ಪರಿಸ್ಥಿತಿಯಲ್ಲಿ ಸಿಎಂ ಆಕಾಂಕ್ಷಿಗಳನ್ನು ವೈರಿಗಳಲ್ಲ ಮಿತ್ರರು ಅಂತ ಸಿದ್ದರಾಮಯ್ಯ ಭಾವಿಸುವುದಕ್ಕೆ ಕಾರಣವೇ ಉಳಿದಿಲ್ಲ
ಸಿದ್ದುಗೆ ವೈರಿ ನಂ 3: ಹಿಂದುತ್ವವಾದಿ ಬಿಜೆಪಿ
ಸಿದ್ದರಾಮಯ್ಯಗೆ ಬಿಜೆಪಿ ವಿರೋಧಿ ಎನ್ನುವುದಕ್ಕಿಂತ ಬಿಜೆಪಿಗೇ ಸಿದ್ದರಾಮಯ್ಯ ಪರಮ ಶತ್ರು. ಹೋದಲ್ಲಿ ಬಂದಲ್ಲಿ ಬಿಜೆಪಿಯನ್ನು ಮಖಾಡೆ ಮಲಗಿಸುವಂತೆ ಟೀಕೆ ಮಾಡುವ ಸಿದ್ದರಾಮಯ್ಯ ಮೇಲೆ ಬಿಜೆಪಿ ಪದೇ ಪದೇ ಮುಗಿಬೀಳುತ್ತದೆ. ಕಳೆದ ಬಾರಿಯೂ ಬಾದಾಮಿಯಲ್ಲಿ ಸಿದ್ದು ಗೆಲುವಿನ ಅಂತರವನ್ನು ಕಡಿಮೆ ಮಾಡಿದ್ದ ಬಿಜೆಪಿ ಈ ಬಾರಿಯೂ ಸಿದ್ದರಾಮಯ್ಯರನ್ನು ಮಣ್ಣು ಮುಕ್ಕಿಸಲು ಸಜ್ಜಾಗಿದೆ. ಅದರಲ್ಲೂ ಹಿಂದುತ್ವದ ವಿಚಾರ ಬಂದಾಗಲೆಲ್ಲ ಸೆಣಸಾಡುವ ಸಿದ್ದರಾಮಯ್ಯರನ್ನು ಸೋಲಿಸಲೇಬೇಕು ಅಂತ ಬಿಜೆಪಿ ಪಣ ತೊಟ್ಟಂತೆ ಕಾಣುತ್ತಿದೆ. ಹೀಗಾಗಿ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ಕೂಡ ಸಿದ್ದರಾಮಯ್ಯ ವಿರುದ್ದ ಬಿಜೆಪಿ ಚಕ್ರವ್ಯೂಹ ಹೆಣೆಯುವುದು ನಿಶ್ಚಿತ.
ಸಿದ್ದುಗೆ ವೈರಿ ನಂಬರ್4: ಎಚ್ಡಿ ಕುಮಾರಸ್ವಾಮಿ
ಸಿದ್ದರಾಮಯ್ಯರನ್ನು ಹೋದಲ್ಲಿ ಬಂದಲ್ಲಿ ರಾಜಕೀಯವಾಗಿ ಕಟ್ಟಿ ಹಾಕಲು ಪ್ರಯತ್ನಿಸುತ್ತಿರುವ ಪ್ರಬಲ ನಾಯಕ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ. ಎಚ್ಡಿಕೆ ಹಾಗೂ ಸಿದ್ದರಾಮಯ್ಯ ನಡುವಿನ ಕೋಪತಾಪ ಪ್ರತಾಪಕ್ಕೆ ದಶಕಗಳ ಇತಿಹಾಸವೇ ಇದೆ. ಇದೀಗ ಒಳತಂತ್ರಗಾರಿಕೆಗೆ ಹೆಸರುವಾಸಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಕೋಲಾರದಿಂದಲೇ ಸಿದ್ದರಾಮಯ್ಯಗೆ ಪಾಠ ಕಲಿಸುವುದಿಲ್ಲ ಅಂತ ಗ್ಯಾರಂಟಿ ಇಲ್ಲ. ಯಾವುದೇ ಸಂದರ್ಭದಲ್ಲೂ ಸಿದ್ದರಾಮಯ್ಯರನ್ನು ಸೋಲಿನ ರುಚಿ ತೋರಿಸಲು ಎಚ್ಡಿಕೆ ಭಾರೀ ತಂತ್ರಗಾರಿಕೆ ಹೆಣೆಯಬಹುದು.
ಹೀಗೆ ಕ್ಷೇತ್ರ ಬಿಟ್ಟು ಕ್ಷೇತ್ರಕ್ಕೆ ಹೊರಟಿರುವ ಸಿದ್ದರಾಮಯ್ಯ ಸುತ್ತ ಸಹಜವಾಗಿಯೇ ರಾಜಕೀಯ ಕಡು ವೈರಿಗಳ ದೊಡ್ಡ ಪಡೆಯೇ ಕತ್ತಿ ಮಸೆಯುತ್ತಿದೆ. ಆಪ್ತರಂತೆ ಕಾಣುವವರಿಂದಲೇ ಚಾಮುಂಡೇಶ್ಚರಿಯಲ್ಲಿ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ ಕೂಡ ಈ ಬಾರಿ ಭಾರೀ ಎಚ್ಚರಿಕೆಯಿಂದ ಇರಬಹುದು.
ಪ್ಲಸ್, ಮೈನಸ್, ಸರ್ಚ್, ಫೈರ್ ಎಂಬ ಫಾರ್ಮೂಲಾ ಮೂಲಕ ಸಿದ್ದರಾಮಯ್ಯ ಹೇಗೆ ಎಲ್ಲವನ್ನೂ ಮೀರಿ ಗೆಲ್ಲುತ್ತಾರೆ ಎಂಬುದಕ್ಕೆ ಮೇ ತಿಂಗಳಲ್ಲಿಯೇ ಉತ್ತರ ಸಿಗಲಿದೆ.
ವರದಿ: ಪ್ರಸನ್ನ ಗಾಂವ್ಕರ್, ಟಿವಿ9, ಬೆಂಗಳೂರು
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ