ಸರ್ವಪಲ್ಲಿ ರಾಧಾಕೃಷ್ಣನ್ ಮಾತನ್ನ ಉಲ್ಲೇಖಿಸಿದ್ದಕ್ಕೆ ಬಿಜೆಪಿ ಬೊಬ್ಬೆ ಹಾಕುತ್ತಿದೆ: ಜಿ. ಪರಮೇಶ್ವರ್
ಹಿಂದೂ ಧರ್ಮದ ಹುಟ್ಟಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ ಅವರು ಎರಡು ಮೂರು ದಿನಗಳ ನಂತರ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ವಿವಾದಾತ್ಮಕ ಹೇಳಿಕೆ ನೀಡುವಾಗ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಹೆಸರುನ್ನು ಉಲ್ಲೇಖಿಸಿದೆ ನೇರವಾಗಿ ಆರೋಪಿಸಿದ್ದ ಅವರು, ಇದೀಗ, ತಾನು ರಾಧಕೃಷ್ಣನ್ ಅವರ ಹೇಳಿಕೆಯನ್ನು ಹೇಳಿದ್ದಕ್ಕೆ ಬಿಜೆಪಿಯವರು ಬೊಬ್ಬೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು, ಸೆ.7: ಸರ್ವಪಲ್ಲಿ ರಾಧಾಕೃಷ್ಣನ್ ಮಾತನ್ನ ಉಲ್ಲೇಖಿಸಿದ್ದಕ್ಕೆ ಬಿಜೆಪಿ ಬೊಬ್ಬೆ ಹಾಕುತ್ತಿದೆ ಎಂದು ಹೇಳುವ ಮೂಲಕ ಹಿಂದೂ ಧರ್ಮದ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗೆ ಗೃಹಚಿವ ಡಾ.ಜಿ.ಪರಮೇಶ್ವರ (Dr.G.Parameshwara) ಸ್ಪಷ್ಟನೆ ನೀಡಿದ್ದಾರೆ. ನಾನು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿಲ್ಲ. ಹಿಂದೂ ಧರ್ಮದ ಮೇಲೆ ನಮಗೆ ಗೌರವವಿದೆ, ಬಿಜೆಪಿಗೆ ಇದೆಯಾ? ಎಂದು ಪ್ರಶ್ನಿಸಿದ್ದಾರೆ.
ಹಿಂದೂ ಧರ್ಮದ ಬಗ್ಗೆ ನಾನು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಹಿಂದೂ ಧರ್ಮವನ್ನು ಬೇರೆ ರೀತಿ ಅರ್ಥೈಸುವ ಕೆಲಸ ನಾನು ಮಾಡಿಲ್ಲ. ನಾವೆಲ್ಲಾ ಹಿಂದೂಗಳು, ಬೆಳಗ್ಗೆ ಎದ್ದರೆ ಗಣಪತಿಗೆ ಪ್ರಾರ್ಥಿಸುತ್ತೇನೆ. ನಾನು ಬೆಳಗ್ಗೆ ಎದ್ದ ಕೂಡಲೇ ಲಕ್ಷ್ಮೀ ಶ್ಲೋಕ ಹೇಳುತ್ತೇನೆ. ರಾತ್ರಿ ಮಲಗುವ ಮುಂಚೆ ಹನುಮನ ಶ್ಲೋಕ ಹೇಳುತ್ತೇನೆ ಎಂದು ಹೇಳಿ ಎರಡು ಶ್ಲೋಕಗಳನ್ನು ಹೇಳಿದರು.
ಇದನ್ನೂ ಓದಿ: ಹಿಂದೂ ಧರ್ಮವನ್ನ ಯಾರು ಹುಟ್ಟಿಸಿದರೆಂದು ಪ್ರಶ್ನಿಸಿದ ಪರಮೇಶ್ವರ್ಗೆ ಅಜ್ಜ, ಮುತ್ತಜ್ಜನ ಹೆಸರೇಳುವಂತೆ ಈಶ್ವರಪ್ಪ ಸವಾಲ್
ಅಲ್ಲದೆ, ತಾನು ಹೇಳಿದ ಈ ಶ್ಲೋಕ ಬಿಜೆಪಿ ನಾಯಕರಿಗೆ ಹೇಳಲು ಬರುವುದಿಲ್ಲ. ಶ್ಲೋಕ ಹೇಳುತ್ತಾ ಅಂತ ಬಿಜೆಪಿಯವರಿಗೆ ಕೇಳಿ ನೋಡಿ ಎಂದರಲ್ಲದೆ, ಶ್ಲೋಕ ಹೇಳುವಂತೆ ಸವಾಲೂ ಹಾಕಿದರು. ಹಿಂದೂ ಧರ್ಮ ಯಾವಾಗ ಹುಟ್ಟಿತು ಎಂದು ನಾನು ಪ್ರಶ್ನೆ ಮಾಡಿಲ್ಲ. ನಾನು ಸರ್ವಪಲ್ಲಿ ರಾಧಾಕೃಷ್ಣನ್ ವಿಚಾರದ ಬಗ್ಗೆ ಮಾತಾಡಿದ್ದು. ಜೈನ, ಬುದ್ಧ, ಮುಸ್ಲಿಂ ಧರ್ಮಕ್ಕೆ ಸ್ಥಾಪಕರು ಇದ್ದಾರೆ. ಆದರೆ ಹಿಂದೂ ಧರ್ಮಕ್ಕೆ ಸ್ಥಾಪಕರು ಇಲ್ಲ ಎಂದು ಹೇಳಿದ್ದಾಗಿ ತಿಳಿದರು.
ನಾನು ಅವಹೇಳನಕಾರಿಯ ಮಾತು ಆಡಿಲ್ಲ
ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಕ್ರೋಶ ಹೊರಹಾಕಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, ಯಡಿಯೂರಪ್ಪ ಅವರ ಟ್ವೀಟ್ ನೋಡಿದೆ. ಅವರಿಗೂ ಇತ್ತು ಒಂದು ಕಾಲದಲ್ಲಿ ಹಾಗೆ. ಅವರು ದೊಡ್ಡವರು, ಹಿರಿಯರು ಇದ್ದಾರೆ. ನಾನು ಅವರ ಬಗ್ಗೆ ಮಾತಾಡುವುದಿಲ್ಲ. ನಾನು ಅವಹೇಳನಕಾರಿಯ ಮಾತು ಆಡಿಲ್ಲ. ಮುಂದೆ ಮತ್ತೆ ಅದನ್ನ ವಿಶ್ಲೇಷಣೆ ಮಾಡೋದು ಅರ್ಥವಿಲ್ಲ ಎಂದರು.
ಮರುನಾಮಕರಣದಲ್ಲಿ ರಾಜಕಾರಣ ಇದೆ ಅಷ್ಟೆ
ದೇಶವನ್ನು ಇಂಡಿಯಾ ಬದಲು ರಿಪಬ್ಲಿಕ್ ಆಫ್ ಭಾರತ ಎಂದು ಮರುನಾಮಕರಣ ಮಾಡುವ ಸಾಧ್ಯತೆ ವಿಚಾರವಾಗಿ ಮಾತನಾಡಿದ ಪರಮೇಶ್ವರ, ಇವರೆಲ್ಲ ಯುನೈಟೆಡ್ ನೇಷನ್ಸ್ಗೆ ಹೋಗಿ ನೋಡಲಿ. ಪ್ರಧಾನಿ, ವಿದೇಶಾಂಗ ಸಚಿವರು ಹೋಗುತ್ತಾರೆ. ಇವರ ಆ ದೇಶವನ್ನು ಮೊದಲು ನೋಡಲಿ. ಅಲ್ಲಿರುವ ಬೋರ್ಡ್ನಲ್ಲಿ ಇಂಡಿಯಾ ಅಂತಾ ಹೆಸರು ಇಟ್ಟಿದ್ದಾರೆ ಎಂದರು.
ಅಲ್ಲದೆ, ಬಿಜೆಪಿಯವರು ಮೇಕ್ ಇನ್ ಇಂಡಿಯಾ ಅಂತಾ ಮಾಡಿರಲಿಲ್ವಾ? ಆಗ ಮೇಕ್ ಇನ್ ಭಾರತ ಅಂತಾ ಹೇಳಬಹುದಿತ್ತು ಅಲ್ಲವಾ? ಇಂಡಿಯಾ ಹೆಸರಿನಲ್ಲಿ ಏನಾದ್ರು ತಪ್ಪು ಇದ್ದರೆ, ಬಹಳ ಕೆಟ್ಟದಾಗಿ ಇದೆ ಅಂತಿದ್ದರೆ, ದೇಶಕ್ಕೆ ಕೆಟ್ಟದಾಗುತ್ತಿದೆ ಅಂತಾ ಇದ್ದರೆ ಅರ್ಥ ಮಾಡಿಕೊಳ್ಳೋಣ. ಇಂಡಿಯಾ ಮೈತ್ರಿಕೂಟ ಮಾಡಿದ್ದಕ್ಕೆ ಭಾರತ್ ಹೆಸರಿಡಲು ಹೊರಟಿದ್ದಾರೆ. ಇದರಲ್ಲಿ ರಾಜಕಾರಣ ಇದೆ ಅಷ್ಟೇ, ಬೇರೆ ಏನೂ ಇಲ್ಲ ಎಂದರು.
ದೂರು ಆಧರಿಸಿ ಎಫ್ಐಆರ್ ದಾಖಲಿಸಿ ತನಿಖೆ
ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಡಿಜಿಪಿಗೆ ದೂರು ನೀಡಿದ ವಿಚಾರವಾಗಿ ಮಾತನಾಡಿದ ಪರಮೇಶ್ವರ, ನಾವು ಅನಗತ್ಯವಾಗಿ ಯಾರ ಖಾಸಗಿ ಜೀವನದಲ್ಲಿ ಎಂಟ್ರಿ ಆಗಲ್ಲ. ದೂರು ಆಧರಿಸಿ ಎಫ್ಐಆರ್ ದಾಖಲಿಸಿ ತನಿಖೆ ಮಾಡುತ್ತಾರೆ. ಚಾರ್ಜ್ಶೀಟ್ ಹಾಕುವ ಹಂತವಿದ್ದರೆ ಹಾಕುತ್ತಾರೆ, ಕಾನೂನು ವಿರುದ್ಧವಾಗಿ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗುತ್ತದೆ. ಇಲ್ಲದಿದ್ದರೆ ಕೈ ಬಿಡುತ್ತಾರೆ. ಅದನ್ನು ಮಾಡಬೇಡಿ ಅಂದರೆ ಪೊಲೀಸ್ ಇಲಾಖೆ ಯಾಕೆ ಇರಬೇಕು? ನ್ಯೂನತೆ ಇದ್ದರೆ ನಮ್ಮ ಗಮನಕ್ಕೆ ತರಲಿ, ಅದನ್ನು ಸರಿಪಡಿಸೋಣ. ಎಂದರು.
IPS ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲ
IPS ಅಧಿಕಾರಿಗಳ ವರ್ಗಾವಣೆಯಲ್ಲಿ ಗೊಂದಲ ವಿಚಾರವಾಗಿ ಮಾತನಾಡಿದ ಪರಮೇಶ್ವರ, ಆದೇಶ ಮಾಡಿದ ಮೇಲೆ ಎಲಿಜಬಲಿಟಿ ಎಲ್ಲಾ ಮತ್ತೆ ನೋಡಬೇಕಾಯಿತು. ಹೀಗಾಗಿ ಒಂದೆರೆಡು ಬದಲಾವಣೆ ಮಾಡಿದ್ದಾರೆ. ಇದು ಸಾಮಾನ್ಯವಾಗಿ ನಡೆಯುವ ವಿದ್ಯಮಾನವಾಗಿದೆ. ಒಂದೊಂದು ಸಾರಿ ಹೀಗೆ ಆಗುತ್ತದೆ. ನಾವು ಮಾನವರು ತಪ್ಪು ಮಾಡುತ್ತೇವೆ ಎಂದರು.
ವರ್ಗಾವಣೆ ವಿಚಾರದಲ್ಲಿ ಡಿಸಿಎಂ ಡಿಕೆಶಿವಕುಮಾರ್ ಕೈವಾಡ ಇದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಅತರಹ ಏನು ಇಲ್ಲ. ಪಾಪ ಅವರ ಹೆಸರು ಯಾಕೆ ತರುತ್ತೀರಿ. ಅವರು ಬೆಂಗಳೂರು ಅಭಿವೃದ್ಧಿ ಮಾಡಲು ಅನೇಕ ಯೋಜನೆ ಹಮ್ಮಿಕೊಂಡಿದ್ದಾರೆ. ಅವರನ್ನು ಇದಕ್ಕೆ ಎಳೆಯುವುದು ಬೇಡ. ಅವರ ಕೈವಾಡ ವರ್ಗಾವಣೆಯಲ್ಲಿ ಇಲ್ಲ ಎಂದರು.
ಪ್ರಿಯಾಂಕ್ ಖರ್ಗೆ ಏನ್ ಹೇಳಿದ್ದಾರೆ?
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರವಾಗಿ ಮಾತನಾಡಿದ ಪರಮೇಶ್ವರ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡಲ್ಲ. ಅವರು ಏನೋ ಹೇಳಿದಾಗ ನಾವು ಏನೋ ಪ್ರತಿಕ್ರಿಯೆ ಕೊಟ್ಟಿರುತ್ತೇವೆ. ನಮ್ಮ ಅಭಿಪ್ರಾಯ ಹೇಳುತ್ತೇವೆ. ಅಷ್ಟಕ್ಕೆ ಓಡಿ ಹೋಗಿ ಎಫ್ಐಆರ್ ದಾಖಲು ಮಾಡುತ್ತಾರೆ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಪ್ರಿಯಾಂಕ್ ಖರ್ಗೆ ಏನ್ ಹೇಳಿದ್ದಾರೆ. ಯಾವುದೇ ಧರ್ಮ ಎಲ್ಲರಿಗೂ ಸಮಾನವಾಗಿ ಪ್ರತಿಪಾದನೆ ಮಾಡುವ ಧರ್ಮ ಆಗಿರಬೇಕು. ಹಿಂದೂ ಧರ್ಮವೂ ಅಷ್ಟೇ ಸಮಾನತೆ ಪ್ರತಿಪಾದನೆ ಮಾಡಬೇಕು ಅಂತ ಹೇಳಿದ್ದಾರೆ. ನಾವು ಅದನ್ನೆ ಕೇಳುವುದು. ಭಾರತದಲ್ಲಿ ನಾವು ಸಂವಿಧಾನ ಕೊಟ್ಟ ಮೇಲೆ ಪೀಠಿಕೆಯಲ್ಲಿ ಇದು ಇದೆ. ಅಂಬೇಡ್ಕರ್ ಅವರು ಸಮಾನತೆ ಬಗ್ಗೆ ಬರೆದಿಟ್ಟಿದ್ದರು. ಸಮಾನತೆ ಬಿಜೆಪಿ ಅವರಿಗೆ ಸರಿಯಲ್ಲ ಅನ್ನಿಸುತ್ತೆ. ಅದಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:19 pm, Thu, 7 September 23