ಪೊಲೀಸರು ಹಣೆಗೆ ತಿಲಕ ಇಡಬಾರದು ಅಂತಾ ನಾನು ಎಲ್ಲೂ ಹೇಳಿಲ್ಲ: ಗೃಹ ಸಚಿವ ಡಾ ಜಿ ಪರಮೇಶ್ವರ್ ಸ್ಪಷ್ಟನೆ
ಹಣೆ ಮೇಲೆ ಕುಂಕುಮ ಇಡಬಾರದು ಎಂದು ಎಲ್ಲೂ ಹೇಳಿಲ್ಲ. ಆದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಬೆಂಗಳೂರು: ಪೊಲೀಸರು ಹಣೆಗೆ ಕುಂಕುಮ ಇಡಬಾರದು ಎಂದು ಎಲ್ಲೂ ಹೇಳಿಲ್ಲ. ಬೊಟ್ಟು, ವಿಭೂತಿ ಏನು ಬೇಕಾದರೂ ಇಟ್ಟುಕೊಳ್ಳಬಹುದು. ಆದರೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಣೆಗೆ ತಿಲಕ ಇಡಬಾರದು ಅಂತಾ ನಾನು ಎಲ್ಲೂ ಹೇಳಿಲ್ಲ. ಆದ್ರೆ ಪೊಲೀಸರಿಗೆ ಯೂನಿಫಾರ್ಮ್ ಇರುತ್ತೆ. ಅವರಿಗೆ ತನ್ನದೇ ಆದ ನಿಯಮ ಇವೆ. ಆ ನಿಯಮಗಳ ವ್ಯಾಪ್ತಿಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಬಹುದು. ಇದರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಹೇಳಿದರು.
ಕೋಮುವಾದ ಒಂದು ಸಮುದಾಯಕ್ಕೆ ಸೇರಿದಲ್ಲ
ಕಾಂಗ್ರೆಸ್ ಹಿಂದೂಗಳನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕೋಮುವಾದ ಒಂದು ಸಮುದಾಯಕ್ಕೆ ಸೇರಿದಲ್ಲ. ಎಲ್ಲಾ ಸಮುದಾಯದಲ್ಲೂ ಇದೆ. ಕೋಮುವಾದ ತಡೆಗೆ ಪೋಲಿಸ್ ಇಲಾಖೆಯಲ್ಲಿ ವಿಂಗ್ ಮಾಡುತ್ತೇವೆ. ಅವರು ಯಾರು ಪ್ರಚೋದನೆ ಮಾಡುತ್ತಾರೋ ಅದನ್ನ ಗಮನಿಸುತ್ತಾರೆ. ಮಂಗಳೂರು ಭಾಗದಲ್ಲಿ ಬೇಡಿಕೆ ಬಂದಿದೆ. ಅದಕ್ಕಾಗಿ ಅಲ್ಲಿ ಮಾಡಲಾಗುತ್ತಿದೆ. ಹೀಗಾಗಿ ಬೇರೆ ಕಡೆ ಇದನ್ನ ಮಾಡೋ ಅಗತ್ಯತೆ ಬರೋದಿಲ್ಲ ಎಂದಿದ್ದಾರೆ.
ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ
ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ ಮಾಡುವುದಾಗಿ ಇತ್ತೀಚೆಗೆ ಮಂಗಳೂರಿನಲ್ಲಿ ಡಾ.ಜಿ.ಪರಮೇಶ್ವರ್ ಹೇಳಿದ್ದರು. ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಹೊಸ ಘಟಕ ಆರಂಭಿಸ್ತೇವೆ ಎಂದಿದ್ದರು.
ಆ್ಯಂಟಿ ಕಮ್ಯುನಲ್ ವಿಂಗ್ನಲ್ಲಿ ಸಮರ್ಥ ಅಧಿಕಾರಿಗಳು ಇರಲಿದ್ದಾರೆ. ಕರಾವಳಿ ಭಾಗದಲ್ಲಿ ಒಳ್ಳೆಯ ಜನರು ಇದ್ದಾರೆ ಅಂತಾ ನಂಬಿದ್ದೇವೆ. ಈ ಭಾಗದಲ್ಲಿ ಭಯದ ವಾತಾವರಣವಿದೆ ಅಂತಾ ಜನ ಮಾತಾಡ್ತಿದ್ದಾರೆ. ಕೋಮು ಸೌಹಾರ್ದತೆಯನ್ನು ತರಲು ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: ನೈತಿಕ ಪೊಲೀಸ್ಗಿರಿ ತಡೆಯಲು ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪನೆ: ಗೃಹ ಸಚಿವ ಡಾ ಜಿ ಪರಮೇಶ್ವರ್
ನೈತಿಕ ಪೊಲೀಸ್ಗಿರಿ ತಡೆಯದಿದ್ರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು
ಸಮಸ್ಯೆಗಳು ಸವಾಲುಗಳ ಬಗ್ಗೆ ವಿಚಾರಿಸಿದ್ದೇನೆ. ನನಗೆ ಇದು ಹೊಸದಲ್ಲ. ನಾನು ಮೂರನೇ ಭಾರೀ ಗೃಹ ಸಚಿವನಾಗಿದ್ದೇನೆ. ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ಗಿರಿ ತುಂಬಾ ನಡೆಯುತ್ತಿದೆ. ಇದನ್ನು ತಡೆಯದಿದ್ರೆ ಇಲಾಖೆ, ರಾಜ್ಯಕ್ಕೆ ಕೆಟ್ಟ ಹೆಸರು. ಹಾಗಾಗಿ ನೈತಿಕ ಪೊಲೀಸ್ಗಿರಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಆಗಸ್ಟ್ 15ರೊಳಗೆ ಕರಾವಳಿ ಭಾಗ ಡ್ರಗ್ಸ್ ಮುಕ್ತ ಪ್ರದೇಶವಾಗಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:47 pm, Thu, 8 June 23