ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ: ಕುತೂಹಲ ಹೆಚ್ಚಿಸಿದ ಜನಾರ್ದನ ರೆಡ್ಡಿ ಮಾತುಗಳು
ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ. ಅಲ್ಲದೇ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ.
ಕೊಪ್ಪಳ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಸದ್ದು-ಗದ್ದಲದ ಮಧ್ಯೆ ಮಾಜಿ ಸಚಿವ ಗಾಲಿ ಜನಾದರ್ನನ ರೆಡ್ಡಿ (janardhana reddy )ಅವರ ರಾಜಕೀಯ ನಡೆ ತೀವ್ರ ಕುತೂಹಲ ಮೂಡಿಸಿದೆ. ಇದರ ಮಧ್ಯೆ ಇಂದು(ಡಿ.22) ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಧಣಿ, ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ ಎಂದು ಹೇಳುವ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮಾತ್ರವಲ್ಲದೇ ವಿವಿಧ ಪಕ್ಷಗಳ ನಾಯಕರ ಹಾಗೂ ಕಾರ್ಯಕರ್ತರಲ್ಲಿ ಕುತೂಲ ಹೆಚ್ಚಿಸಿದ್ದಾರೆ.
ರೆಡ್ಡಿ ಬಿಜೆಪಿಯಲ್ಲೇ ಇರ್ತಾರೆ ಎಂದು ಬಿಎಸ್ವೈ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ರೆಡ್ಡಿ, ಇನ್ನೆರಡು ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತೆ. ಭಾನುವಾರ ಎಲ್ಲರೂ ಟಿವಿ ಮುಂದೆ ಕುತ್ಕೊಂಡ್ರೆ ಎಲ್ಲವೂ ಗೊತ್ತಾಗುತ್ತೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದರು.
ನನ್ನ ರಾಜಕೀಯ ಜೀವನದ ಬಗ್ಗೆ ಡಿ.25 ರಂದು ಗೊತ್ತಾಗುತ್ತೆ. ಯಾರು ಏನು ಅಂದ್ರು ಅಂದೆ ಗೊತ್ತಾಗುತ್ತೆ. ಅಂದೇ ಎಲ್ಲವನ್ನ ಹೇಳುತ್ತೇನೆ. ಆವತ್ತೆ ನನ್ನ ಜೊತೆ ಯಾರು ಬರ್ತಾರೆ ಬರಲ್ವೋ ಎನ್ನುವುದು ಗೊತ್ತಾಗುತ್ತೆ. ಇನ್ನು ಇನ್ನೇರಡು ದಿನ ಕಾಯಿರಿ ಎಲ್ಲವೂ ಗೊತ್ತಾಗುತ್ತೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ರೆಡ್ಡಿ ಸಂಚಲನ ಮೂಡಿಸಿದ್ದಾರೆ.
ಡಿಸೆಂಬರ್ 25ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್ನಲ್ಲಿ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದು, ತಮ್ಮ ರಾಜಕೀಯ ನಿಲುವು ಬಗ್ಗೆ ಮಹತ್ವದ ಘೋಷಣೆ ಮಾಡಲಿದ್ದಾರೆ. ಮತ್ತೊಂದೆಡೆ ಹೊಸ ಪಕ್ಷ ಘೋಷಣೆ ಮಾಡ್ತಾರಾ ಎನ್ನುವ ಕುತೂಹಲ ಮೂಡಿಸಿದೆ. ಇನ್ನು ಮುಖ್ಯವಾಗಿ ಮುಂದಿನ ಚುನಾವಣೆಯಲ್ಲಿ ತಾವು ಸ್ಪರ್ಧೆ ಮಾಡುವ ಕ್ಷೇತ್ರವನ್ನು ಸಹ ಘೋಷಣೆ ಮಾಡುತ್ತಾರಾ ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಡಿಸೆಂಬರ್ 25ರಂದು ಸುದ್ದಿಗೋಷ್ಠಿಗೂ ಮುನ್ನ ರೆಡ್ಡಿ ಅವರು ವಿವಿಧ ಮಠಗಳಿಗೆ ಭೇಟಿ ನೀಡಲಿದ್ದಾರೆ. ಮಠಗಳು ಹಾಗೂ ಪ್ರಮುಖ ಮುಖಂಡರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದಾರೆ.
ಇದನ್ನೂ ಓದಿ: ಗಂಗಾವತಿ ಅಖಾಡಕ್ಕೆ ರೆಡ್ಡಿ ಎಂಟ್ರಿಯಿಂದ ಆತಂಕ, ಜೋಶಿ ಮೊರೆ ಹೋದ ಬಿಜೆಪಿ ಶಾಸಕ ಪರಣ್ಣ
ದೆಹಲಿಯಿಂದ ಬಂದ ಬಳಿಕ ಡಿಸೆಂಬರ್ 18 ಕ್ಕೆ ಬಹಿರಂಗವಾಗಿ ಮಾತಾಡುವೆ ಎಂದು ಹೇಳಿದ್ದ ರೆಡ್ಡಿ, ಮತ್ತೆ ಕಮಲ ಪಕ್ಷ ಸೇರಲು ಉತ್ಸಾಹದಲ್ಲಿದ್ದಾರೆ. ಆದ್ರೆ, ಬಿಜೆಪಿ ಹೈಕಮಾಂಡ್ ಏನು ಹೇಳಿದೆ ಎನ್ನುವುದೇ ನಿಗೂಢವಾಗಿದೆ. ಆದರೆ ಮೂಲಗಳ ಪ್ರಕಾರ ಜನಾರ್ದನ ರೆಡ್ಡಿ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಸುತರಾಂ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆಯೂ ಸಹ ಸುದ್ದಿಗೋಷ್ಠಿಯಲ್ಲಿ ಏನೆಲ್ಲಾ ಬೆಳವಣಿಗೆಗಗಳ ನಡೆದವು ಎನ್ನುವ ಬಗ್ಗೆ ವಿವರಿಸಲಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಜನಾರ್ದನ ರೆಡ್ಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಭಾನುವಾರದ ಸುದ್ದಿಗೋಷ್ಠಿಯತ್ತ ಎಲ್ಲರ ಚಿತ್ತ ನೆಟ್ಟಿದೆ.