CM Ibrahim: ಇಬ್ರಾಹಿಂನ ಯಾರೂ ತಬ್ಬಲಿ ಮಾಡಿಲ್ಲ, ಮನವೊಲಿಕೆಗೆ ಪ್ರಯತ್ನಿಸುವೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

DK Shivakumar: ಸಿ.ಎಂ.ಇಬ್ರಾಹಿಂ ಅವರು ಮೊದಲಿನಿಂದಲೂ ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ನನಗೆ ಒಳ್ಳೇ ಸ್ನೇಹಿತರೂ ಹೌದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

CM Ibrahim: ಇಬ್ರಾಹಿಂನ ಯಾರೂ ತಬ್ಬಲಿ ಮಾಡಿಲ್ಲ, ಮನವೊಲಿಕೆಗೆ ಪ್ರಯತ್ನಿಸುವೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಎಂಎಲ್​ಸಿ ಸಿ.ಎಂ.ಇಬ್ರಾಹಿಂ
Edited By:

Updated on: Jan 27, 2022 | 3:42 PM

ಬೆಂಗಳೂರು: ಪ್ರಸ್ತುತ ಕಾಂಗ್ರೆಸ್ (Karnataka Congress) ಪಕ್ಷದಲ್ಲಿರುವ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ  (CM Ibrahim) ಅವರು ಪಕ್ಷ ತೊರೆಯುತ್ತಾರೆ ಎಂಬ ಮಾತುಗಳು ಪ್ರಬಲವಾಗಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President DK Shivakumar) ಪ್ರತಿಕ್ರಿಯಿಸಿದ್ದಾರೆ. ಇಬ್ರಾಹಿಂ ಅವರೊಂದಿಗೆ ಮಾತನಾಡಿ, ಅವರ ಮನವೊಲಿಸಲು ಪ್ರಯತ್ನಿಸುತ್ತೇನೆ’ ಎಂದು ಅವರು ವಿವರಿಸಿದ್ದಾರೆ. ‘ಸಿ.ಎಂ.ಇಬ್ರಾಹಿಂ ನಮ್ಮ ಪಕ್ಷದ ಹಿರಿಯ ನಾಯಕರು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಅವರು ಮಂತ್ರಿ ಆಗಿದ್ದರು. ಸಿದ್ದರಾಮಯ್ಯ ಅವರು ಹಾಲಿ ಶಾಸಕನಿಗೆ ಟಿಕೆಟ್ ತಪ್ಪಿಸಿ, ಇಬ್ರಾಹಿಂ ಅವರಿಗೆ ಟಿಕೆಟ್ ಕೊಡಿಸಿದ್ದರು. ಚುನಾವಣೆಯಲ್ಲಿ ಅವರು ಸೋತ ಮೇಲೆಯೂ ಅವರನ್ನು ಯೋಜನಾ ಆಯೋಗದ ಅಧ್ಯಕ್ಷರನ್ನಾಗಿ ಮಾಡಲಾಯಿತು. ಇಬ್ರಾಹಿಂ ಅವರು ಮೊದಲಿನಿಂದಲೂ ಪಕ್ಷಕ್ಕೆ ಕೆಲಸ ಮಾಡಿದ್ದಾರೆ. ನನಗೆ ಒಳ್ಳೇ ಸ್ನೇಹಿತರೂ ಹೌದು’ ಎಂದರು.

‘ನಮ್ಮ ಪಕ್ಷದಲ್ಲಿ ಯಾರೂ ತಬ್ಬಲಿ ಅಲ್ಲ. ಸಿದ್ದರಾಮಯ್ಯ ಅಥವಾ ಇಬ್ರಾಹಿಂ ಅವರನ್ನು ತಬ್ಬಲಿ ಎನ್ನಲು ಆಗುವುದಿಲ್ಲ. ಸಿ.ಎಂ.ಇಬ್ರಾಹಿಂಗೆ ಸ್ವಲ್ಪ ಮುನಿಸು ಇರುತ್ತೆ. ನಾನು ಇಬ್ರಾಹಿಂ ಜತೆ ಮಾತನಾಡುತ್ತೇನೆ. ನೋವಿನಲ್ಲಿ ಇಬ್ರಾಹಿಂದ ಏನಾದರೂ ಹೇಳಿರಬಹುದು. ಅದನ್ನೆಲ್ಲಾ ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಕಾಂಗ್ರೆಸ್ ಪಕ್ಷ ತೊರೆಯುತ್ತೇನೆ ಎಂಬ ಇಬ್ರಾಹಿಂ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ‘ನೀವೆಲ್ಲಾ ಸುದ್ದಿ ಮಾಡೋಕೆ ಬರಲ್ಲ, ಕಾಂಟ್ರವರ್ಸಿನೇ ಹುಡುಕ್ತಾ ಇರ್ತೀರಿ. ನಾನು ಇಬ್ರಾಹಿಂ ಜೊತೆ ಮಾತಾಡ್ತೀನಿ’ ಎಂದು ಮಾಧ್ಯಮ ಪ್ರತಿನಿಧಿಗಳ ವಿರುದ್ಧವೇ ಬೇಸರ ವ್ಯಕ್ತಪಡಿಸಿದರು. ‘ಇಬ್ರಾಹಿಂ ಫ್ರೆಂಡ್ ಅಲ್ಲವೇ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ನೀವು ನನ್ನ ಫ್ರೆಂಡ್ಸ್’ ಅಂತಷ್ಟೇ ಉತ್ತರಿಸಿದರು.

ಡರ್ಬಿ ರೇಸ್​: ಸರ್ಕಾರದ ವಿರುದ್ಧ ಡಿಕೆಶಿ ವ್ಯಂಗ್ಯ
ಕೊರೊನಾ ಆರ್ಭಟದ ಮಧ್ಯೆ ಡರ್ಬಿ ರೇಸ್‌ ನಡೆಸಿದ ಬೆಳವಣಿಗೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಖಂಡಿಸಿದ್ದಾರೆ. ‘ಜನರಿಗೆ ತೊಂದರೆಯಾಗುತ್ತದೆ ಎಂದು ನಮ್ಮ ಪಾದಯಾತ್ರೆ ತಡೆದವರು, ಇದೀಗ ಡರ್ಬಿ ರೇಸ್ ನಡೆಸಿದ್ದಾರೆ. ಸಾವಿರಾರು ಜನರು ಡರ್ಬಿ ರೇಸ್‌ನಲ್ಲಿ ಭಾಗಿಯಾಗಿದ್ದರು. ಬಿಜೆಪಿ ಹೊನ್ನಾಳಿ, ಕಲಬುರಗಿಯಲ್ಲಿ ರಾಜಕೀಯ ಕಾರ್ಯಕ್ರಮಗಳನ್ನು ನಡೆಸಿದೆ. ಸರ್ಕಾರಕ್ಕೆ ಕಣ್ಣು-ಕಿವಿ ಇದೆಯೋ ಇಲ್ಲವೋ ಗೊತ್ತಿಲ್ಲ. ಈ ವಿಚಾರವನ್ನು ಬಗ್ಗೆ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಮೇಲೆ ಕೇಸ್ ಹಾಕಿದ್ದರು. ಬಿಜೆಪಿ ನಾಯಕರ ವಿರುದ್ಧ ಏನು ಕ್ರಮ ತೆಗೆದುಕೊಳ್ಳುತ್ತಾರೋ ನೋಡೋಣ’ ಎಂದರು.

ಇದನ್ನೂ ಓದಿ: ಸಿಎಂ ಇಬ್ರಾಹಿಂ ಜೆಡಿಎಸ್​​ಗೆ ಬರುವುದಾದರೆ ಅವರಿಗೆ ಸ್ವಾಗತವಿದೆ: ಮಾಜಿ ಮುಖ್ಯಮಂತ್ರಿ ಹೆಚ್​​ಡಿ ಕುಮಾರಸ್ವಾಮಿ ಹೇಳಿಕೆ

ಇದನ್ನೂ ಓದಿ: ಕಾಂಗ್ರೆಸ್‌ಗೂ ನಮಗೂ ಇನ್ನು ಮುಗಿದ ಅಧ್ಯಾಯ; ರಾಜೀನಾಮೆ ನೀಡಲು ಎಮ್ಎಲ್​ಸಿ ಸಿಎಂ ಇಬ್ರಾಹಿಂ ನಿರ್ಧಾರ