ಎಂಎಲ್ಸಿ ಸಿ.ಎಂ.ಇಬ್ರಾಹಿಂ (CM Ibrahim) ಜೊತೆ ನಾನು ಮಾತನಾಡಿದ್ದೇನೆ. ಅವರು ಪಕ್ಷಕ್ಕೆ ಬಂದರೆ ಸ್ವಾಗತವಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿಕೆ ನೀಡಿದ್ದಾರೆ. ಇಬ್ರಾಹಿಂ ಅವರು ದೇವೇಗೌಡರ ಜತೆ ಹಲವು ವರ್ಷಗಳ ಕಾಲ ಇದ್ದವರು. ಇತ್ತೀಚೆಗೆ ಇಬ್ರಾಹಿಂ ಜತೆ ಹಲವು ಬಾರಿ ಚರ್ಚಿಸಿದ್ದೇನೆ. ಪರಿಷತ್ ವಿಪಕ್ಷ ಸ್ಥಾನ ಕೊಟ್ಟರೆ ಬಳಸಿಕೊಳ್ಳಿ ಎಂದು ಸಲಹೆ ನೀಡಿದ್ದೆ. ಸಿ.ಎಂ.ಇಬ್ರಾಹಿಂಗೆ ಜೆಡಿಎಸ್ ಮೇಲೆ ವ್ಯಾಮೋಹವಿದೆ. ಅವರು ಪಕ್ಷಕ್ಕೆ ಬರುವುದಾದರೆ ಮುಕ್ತ ಆಹ್ವಾನವಿದೆ. ಇಂದು ಬೆಳಗ್ಗೆಯೂ ಸಿ.ಎಂ.ಇಬ್ರಾಹಿಂ ಜತೆ ಚರ್ಚಿಸಿದ್ದೇನೆ ಎಂದು ಕುಮಾರಸ್ವಾಮಿ ನುಡಿದಿದ್ದಾರೆ. ಇಂದು ಮಾತನಾಡಿದ್ದ ಸಿಎಂ ಇಬ್ರಾಹಿಂ ಕಾಂಗ್ರೆಸ್ನಿಂದ ದೂರಾಗುತ್ತಿರುವುದಾಗಿ ಘೋಷಿಸಿದ್ದರು. ಜನತಾ ಪರಿವಾರದ ನಾಯಕರು ಬಿಜೆಪಿ, ಕಾಂಗ್ರೆಸ್‌ನಲ್ಲಿ ಸೆಟಲ್ ಆಗಿಬಿಟ್ಟಿದ್ದಾರೆ. ಅವರನ್ನು ಕರೆತರುವ ಪ್ರಯತ್ನ ನಾನು ಮಾಡುವುದಿಲ್ಲ ಎಂದು ಇದೇ ವೇಳೆ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ:
‘ಅತಂತ್ರ ಪರಿಸ್ಥಿತಿ ಬಂದರೆ JDSಗೆ ಸ್ವತಂತ್ರ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ಬಗ್ಗೆ ಸಿಎಂ ಬೊಮ್ಮಾಯಿಯವರು ನೋಡಿಕೊಳ್ಳಲಿ, ನಮ್ಮ ಪಕ್ಷದ ಬಗ್ಗೆ ಸಿಎಂ ಯೋಜನೆ ಮಾಡೋದು ಬೇಡ. ಬಿಜೆಪಿ ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ. ಕೆಲವೊಂದು ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ತಮ್ಮ ಪಕ್ಷದವರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲಿ. ನಮ್ಮ ಪಕ್ಷದವರ ಬಗ್ಗೆ ಅವರು ಚಿಂತನೆ ಮಾಡುವುದು ಬೇಡ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇದೇ ವೇಳೆ ಅವರು, ರಾಷ್ಟ್ರೀಯ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಎರಡು ರಾಷ್ಟ್ರೀಯ ಪಕ್ಷಗಳು ಏನು ಅಭಿವೃದ್ಧಿ ಮಾಡಿವೆ? ಎಲ್ಲದರ ಬಗ್ಗೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದ್ದಾರೆ.
2023ಕ್ಕೆ ನಮ್ಮ ಶಕ್ತಿ ಸಾಬೀತು ಮಾಡುತ್ತೇವೆ:
2023ಕ್ಕೆ ನಮ್ಮ ಶಕ್ತಿ ಏನೆಂದು ಸಾಬೀತು ಮಾಡುತ್ತೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 14-15 ತಿಂಗಳು ಪಕ್ಷ ಸಂಘಟನೆ ಕೆಲಸ ಮಾಡುತ್ತೇವೆ. ಕೊವಿಡ್‌ನಿಂದಾಗಿ ಪಕ್ಷ ಸಂಘಟನೆಗೆ ಅವಕಾಶ ಸಿಕ್ಕಿಲ್ಲ. ಜನಸಾಮಾನ್ಯರಿಗೆ ತೊಂದರೆ ಆಗಬಾರದೆಂದು ಸುಮ್ಮನಿದ್ದೇವೆ. ಕೆಲ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ನಾನು ಯಾವುದೇ ರಾಜಕೀಯ ಪಕ್ಷಗಳ ಬಳಿ ಹೋಗಲ್ಲ. ಯಾರ ಜೊತೆಯೂ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಈವರೆಗೂ ಜೆಡಿಎಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿಲ್ಲ. ಇನ್ನುಮುಂದೆಯೂ ನಾವು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:
ಕಾಂಗ್ರೆಸ್‌ಗೂ ನಮಗೂ ಇನ್ನು ಮುಗಿದ ಅಧ್ಯಾಯ; ರಾಜೀನಾಮೆ ನೀಡಲು ಎಮ್ಎಲ್ಸಿ ಸಿಎಂ ಇಬ್ರಾಹಿಂ ನಿರ್ಧಾರ
Published On - 12:58 pm, Thu, 27 January 22