ಪೆನ್​​ಡ್ರೈವ್‌ ಬಿಡುಗಡೆ ಮಾಡಿದರೆ ಅದರಲ್ಲಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು: ಎಂಬಿ ಪಾಟೀಲ್

| Updated By: Rakesh Nayak Manchi

Updated on: Jul 09, 2023 | 5:37 PM

ಹೆಚ್​ಡಿ ಕುಮಾರಸ್ವಾಮಿ ಅವರು ಪೆನ್​ಡ್ರೈವ್ ಬಿಡುಗಡೆ ಮಾಡಿದರೆ ಅದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ಮಠಮಾನ್ಯಗಳ ಅನುದಾನ ಕಡಿತ ಮಾಡಿದ್ದಾರೆ ಎಂದು ಸಿಸಿ ಪಾಟೀಲ್ ಆರೋಪವಾಗಿ ಮಾತನಾಡಿದ ಅವರು, ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ ಎಂದರು.

ಪೆನ್​​ಡ್ರೈವ್‌ ಬಿಡುಗಡೆ ಮಾಡಿದರೆ ಅದರಲ್ಲಿನ ಸತ್ಯಾಸತ್ಯತೆ ಬಗ್ಗೆ ತನಿಖೆ ನಡೆಸಲಾಗುವುದು: ಎಂಬಿ ಪಾಟೀಲ್
ಎಂಬಿ ಪಾಟೀಲ್ ಮತ್ತು ಹೆಚ್​ಡಿ ಕುಮಾರಸ್ವಾಮಿ
Follow us on

ವಿಜಯಪುರ: ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಪೆನ್​ಡ್ರೈವ್ ಬಿಡುಗಡೆ ಮಾಡಿದರೆ ಅದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಸಚಿವ ಎಂಬಿ ಪಾಟೀಲ್ (MB Patil) ಹೇಳಿದರು. ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಮಾತನಾಡಿದ ಅವರು, ಪೆನ್​​ಡ್ರೈವ್‌ನಲ್ಲಿರುವ ಸತ್ಯಾಸತ್ಯತೆ ಬಗ್ಗೆ ತಿಳಿದುಕೊಳ್ಳಬೇಕಾದರೆ ಪೆನ್​​ಡ್ರೈವ್ ಬಗ್ಗೆ ತನಿಖೆ ಮಾಡಬೇಕು. ಪೆನ್​​ಡ್ರೈವ್​ನಲ್ಲಿ ಸತ್ಯವಾದದ್ದು ಇದ್ದರೆ ಅದನ್ನೂ ತನಿಖೆ ಮಾಡಬೇಕಾಗುತ್ತದೆ ಎಂದರು.

ಪೆನ್​​ಡ್ರೈವ್‌ನಲ್ಲಿರುವ ಧ್ವನಿ ಯಾರದು ಎಂಬುದನ್ನು ಪರಿಶೀಲಿಸಬೇಕು. ಯಾರು ಮಾತನಾಡಿದ್ದಾರೆ, ಯಾವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಲ್ಲದರ ಬಗ್ಗೆಯೂ ತನಿಖೆಯಾಗಬೇಕಾಗುತ್ತದೆ. ಏಕೆಂದರೆ, ಈಗೆಲ್ಲ ಮಿಮಿಕ್ರಿ ಬೇರೆ ಮಾಡುತ್ತಾರೆ. ಕುಮಾರಸ್ವಾಮಿ ಅವರು ಪೆನ್​ಡ್ರೈವ್​​​ ಬಿಡುಗಡೆ ಮಾಡಿದಾಗ ಅದಕ್ಕೆ ಉತ್ತರ ಕೊಡುತ್ತೇವೆ ಎಂದರು.

ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ: ಎಂಬಿ ಪಾಟೀಲ್

ಮಠಮಾನ್ಯಗಳ ಅನುದಾನ ಕಡಿತ ಮಾಡಿದ್ದಾರೆ ಎಂಬ ಮಾಜಿ ಸಚಿವ ಸಿಸಿ ಪಾಟೀಲ್ ಆರೋಪದ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ಮುಂದಿನ ವರ್ಷ ಎಲ್ಲ ಮಠ ಮಾನ್ಯಗಳಿಗೆ ಅನುದಾನ ಕೊಡುತ್ತೇವೆ. ಮಠ ಮಾನ್ಯಗಳ ಬಗ್ಗೆ ಅಪಾರ ಗೌರವ ಇದೆ. ಸಿ.ಸಿ.ಪಾಟೀಲ್ ಮಠ ಇದ್ದರೂ ಹೇಳಲಿ, ಅವರಿಗೂ ಹಣ ಕೊಡುತ್ತೇವೆ. ನಾವು ಭೇದ ಭಾವ ಮಾಡಲ್ಲ. ಹಿಂದೂ ಮಠಗಳು, ಕ್ರಿಶ್ಚಿಯನ್ ಚರ್ಚಗಳಿಗೆ, ಮುಸ್ಲಿಂ ಮಸೀದಿ, ಜೈನರ ಬಸದಿ, ಬೌದ್ಧ ವಿಹಾರಗಳನ್ನ ಸಮಾನವಾಗಿ ಕಾಣುತ್ತೇವೆ. ಎಲ್ಲರಿಗೂ ಅನುದಾನ‌ ಕೊಡುತ್ತೇವೆ ಎಂದರು.

ಇದನ್ನೂ ಓದಿ: ಕುಮಾರಸ್ವಾಮಿ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ

ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ ಎಂಬಿ ಪಾಟೀಲ್

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಲವಾರು ಕಾಮಗಾರಿಯಲ್ಲಿ‌ ನಿಗದಿತ ಮೊತ್ತಕ್ಕಿಂತ ಹೆಚ್ಚು ಮೊತ್ತ ಬಿಡುಗಡೆ ಮಾಡಿಸಿದ್ದಾರೆ ಎಂದು ಎಂಬಿ ಪಾಟೀಲ್ ಆರೋಪಿಸಿದ್ದಾರೆ. ಸಿಸಿ ಪಾಟೀಲರು ತಮ್ಮ ಬಜೆಟ್​ಗಿಂತ ನಾಲ್ಕೈದು ಸಾವಿರ ಕೋಟಿ ಜಾಸ್ತಿ ಖರ್ಚು ಮಾಡಿದ್ದಾರೆ. ಸಿಸಿ ಪಾಟೀಲರು ಯಾಕೆ ಹೆಚ್ಚು ಖರ್ಚು ಮಾಡಿದರು, ಗೊತ್ತಲ್ಲ ಎಂದು ಟಾಂಗ್ ನೀಡಿದರು.

ನೀರಾವರಿ ಇಲಾಖೆಯಲ್ಲಿ 10-15 ಸಾವಿರ ಕೋಟಿ ಹೆಚ್ಚು ಖರ್ಚು ಮಾಡಿದ್ದಾರೆ. ಬಜೆಟ್​​ಗಿಂತ ಹೆಚ್ಚು ಯಾಕೆ ಖರ್ಚು ಮಾಡಿದ್ದೀರಿ? ಜನರನ್ನ ಯಾಕೆ ಮರಳು ಮಾಡಿದ್ದೀರಿ? ಇದರ‌ ಹಿಂದಿನ ಉದ್ದೇಶ ಏನು? ಎಂದು ಪ್ರಶ್ನಿಸಿದ ಎಂಬಿ ಪಾಟೀಲ್, ಬಿಬಿಎಂಪಿಯಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಲೂಟಿ ಹೊಡೆಯಲು ಬಜೆಟ್​ಗಿಂತ ಹೆಚ್ಚಿನ ಅನುದಾನ ಖರ್ಚು ಮಾಡಿದ್ದಾರೆ. ಬಜೆಟ್​ಗಿಂತ ಹೆಚ್ಚು ಖರ್ಚು ಮಾಡುವಾಗ ನಿಮ್ಮ ಶಿಸ್ತು ಎಲ್ಲಿತ್ತು ? ನೀವು ಮಾಡಿದ ಅಕ್ರಮಗಳನ್ನ, ಅಶಿಸ್ತನ್ನ ಎಳೆ-ಎಳೆಯಾಗಿ ನಮ್ಮ ಸಿಎಂ ಬಜೆಟ್ ಪುಸ್ತಕದಲ್ಲಿಯೆ ಹೇಳಿ ಬಿಟ್ಟಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ