ಕುಮಾರಸ್ವಾಮಿ ಬಳಿ ದಾಖಲೆ ಇದ್ದರೆ ಬಿಡುಗಡೆ ಮಾಡಲಿ: ಚಲುವರಾಯಸ್ವಾಮಿ
ರಾಜ್ಯ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿರುವ ವಿಚಾರವಾಗಿ ಹೆಚ್ಡಿ ಕುಮಾರಸ್ವಾಮಿ ಅವರಿಗೆ ಸವಾಲು ಹಾಕಿದ ಸಚಿವ ಎನ್ ಚಲುವರಾಯಸ್ವಾಮಿ, ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದರು.
ಹಾಸನ: ಎಲ್ಲವೂ ನನಗೆ ಗೊತ್ತು ಎನ್ನುವ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರ ಬಳಿ ಕಮಿಷನ್ ಆರೋಪದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ (N Chaluvaraya Swamy) ಸವಾಲು ಹಾಕಿದರು. ರಾಜ್ಯ ಸರ್ಕಾರದ ವಿರುದ್ಧ ಹೆಚ್ಡಿಕೆ ಕಮಿಷನ್ ಆರೋಪ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಅವರು, ಫೈಲ್, ಸಿಡಿ, ಪೆನ್ಡ್ರೈವ್ ಇದೆ ಎಂದು ಹೊಸದಾಗಿ ಹೇಳಿದ್ದಾರಾ? ಅವರು ಹೀಗೆ ಹೇಳಿದ್ದನ್ನು ಬಹಳ ದಿನದಿಂದ ನಾನು ನೋಡಿದ್ದೇನೆ ಎಂದರು.
ಅಧಿಕಾರ ಇಲ್ಲದಿದ್ದಾಗ ಯಾವಾಗ ಸಮಾಧಾನದಿಂದ ಕೆಲಸ ಮಾಡಿದ್ದಾರೆ? ಬಜೆಟ್ ಮಂಡಿಸುವಾಗ ವಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಬಂದಿದ್ದಾರಾ? ಬಜೆಟ್ ಅಧಿವೇಶನಕ್ಕೆ ಬರದೆ ಆ ಬಗ್ಗೆ ಮಾತಾಡಲು ನೈತಿಕತೆ ಅವರಿಗೆ ಇದೆಯಾ ಎಂದು ಪ್ರಶ್ನಿಸಿದ ಸಚಿವರು, ಕುಮಾರಸ್ವಾಮಿ ಎಲ್ಲವೂ ನನಗೆ ಗೊತ್ತು ಅಂತಾರೆ. ಅವರ ಬಳಿ ಏನೂ ಇರಲ್ಲ ಆದರೂ ಇದೆ ಎಂದು ಹೇಳುತ್ತಾರೆ. ಒಂದು ವೇಳೆ ಏನಾದರೂ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದರು.
ವೈಯಕ್ತಿಕವಾಗಿ ಒಳ್ಳೆಯ ಬಜೆಟ್ ಎಂದ ಬಿಜೆಪಿ
ರಾಜ್ಯ ಬಜೆಟ್ ಬಗ್ಗೆ ಬಿಜೆಪಿ ನಾಯಕರಿಂದ ಟೀಕೆ ವಿಚಾರವಾಗಿ ಮಾತನಾಡಿದ ಚಲುವರಾಯಸ್ವಾಮಿ, ಯಾವುದಾದರು ವಿರೋಧ ಪಕ್ಷ ಬಜೆಟ್ ಒಪ್ಪಿಕೊಂಡಿದ್ದು ಇದೆಯಾ ಎಂದು ಪ್ರಶ್ನಿಸಿದರು. ಇಂತಹ ಬಜೆಟ್ ಯಾರೂ ಮಾಡಲು ಆಗಲ್ಲ. ಬಿಜೆಪಿ ಅಧಿಕಾರದಲ್ಲಿದ್ದರೆ ಯೋಜನೆ ಜಾರಿ ಮಾಡಲು ಆಗುತ್ತಿರಲಿಲ್ಲ. ಪ್ರಣಾಳಿಕೆಯಲ್ಲಿ ಕೊಟ್ಟ ಯೋಜನೆ ಜಾರಿಗೆ ಕ್ರಮ ಕೈಗೊಂಡಿದ್ದೇವೆ. ಹಂತ ಹಂತವಾಗಿ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇವೆ. ವಾಸ್ತವ ಹೇಳಿದರೆ ಬಿಜೆಪಿಯವರಿಗೆ ಅರಗಿಸಿಕೊಕೊಳ್ಳಲು ಆಗುತ್ತಿಲ್ಲ. ವೈಯಕ್ತಿಕವಾಗಿ ಬಿಜೆಪಿಯ ಅನೇಕರು ಒಳ್ಳೆಯ ಬಜೆಟ್ ಎಂದಿದ್ದಾರೆ
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಾಗಿದೆ. ಹೀಗಾಗಿ ನಾಡಿನ ಜನತೆಗಾಗಿ ಶೃಂಗೇರಿಗೆ ಹೋಗಿ ಪೂಜೆ ಮಾಡಿದ್ದೇನೆ ಎಂದು ಹೇಳಿದ ಕೃಷಿ ಸಚಿವರು, ಬಿತ್ತನೆ ಶುರುವಾಗಿದೆ, ಇದೇ ರೀತಿ ಮಳೆಯಾದರೆ ಎಲ್ಲವೂ ಸರಿಯಾಗಲಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ