ಬೆಂಗಳೂರು, ಅಕ್ಟೋಬರ್ 05: ಪಾಕಿಸ್ತಾನ ಪ್ರಜೆ (Pakistan Citizen) ಸೇರಿದಂತೆ ವಿದೇಶಿಗರು ಬೆಂಗಳೂರಿಗೆ ಬಂದು ಪಾಸ್ಪೋರ್ಟ್ ಮಾಡಿಕೊಳ್ಳುತ್ತಾರೆ ಅಂದ್ರೆ ಎಲ್ಲೋ ಒಂದು ಕಡೆ ಕೇಂದ್ರ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ (G Parameshwara) ಆರೋಪ ಮಾಡಿದರು. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಪ್ರಜೆ ಬೆಂಗಳೂರಿನಲ್ಲಿ ವಾಸವಾಗಿರುವ ವಿಷಯ ತಿಳಿದ ಕೂಡಲೇ ನಮ್ಮ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ, ಉಳಿದವರನ್ನು ಪತ್ತೆ ಹಚ್ಚುತ್ತೇವೆ ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ದೆಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ ಸಂಸದೆಯಾಗಿದ್ದಾರೆ. ಪುತ್ರಿಗೆ ಕ್ವಾರ್ಟರ್ಸ್ ಬೇಕು ಅನ್ನೋ ಕಾರಣಕ್ಕೆ ದೆಹಲಿಗೆ ಹೋಗಿದ್ದರು. ಇದೇ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಹ ಭೇಟಿ ಮಾಡಿದ್ದಾರೆ. ಜಮ್ಮು-ಕಾಶ್ಮೀರ ಚುನಾವಣಾ ಱಲಿಯಲ್ಲಿ ಖರ್ಗೆ ಕುಸಿದು ಬಿದ್ದಿದ್ದರು. ಆರೋಗ್ಯ ವಿಚಾರಿಸಲು ಖರ್ಗೆ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಂಧಿತನಾದ ಪಾಕಿಸ್ತಾನ ಪ್ರಜೆ ಬಳಿ ಇದೆ ಭಾರತದ ಪಾಸ್ಪೋರ್ಟ್!
ಮುಡಾ ಹಗರಣ ಸಂಬಂಧ ಬಿಜೆಪಿ ಎರಡನೇ ಹಂತದ ಹೋರಾಟ ನಡೆಸಲು ಮುಂದಾಗಿದೆ ಎಂಬ ವಿಚಾರವಾಗಿ ಮಾತನಾಡಿದ ಅವರು ಪ್ರತಿಪಕ್ಷದವರು ಸರ್ಕಾರಕ್ಕೆ ಸಲಹೆ ಸೂಚನೆ ಕೊಡಬೇಕು. ಇದನ್ನು ಬಿಟ್ಟು ಅವರು ರಾಜಕಾರಣ ಮಾಡುತ್ತಿದ್ದಾರೆ. ಮುಡಾ ಹಗರಣ ತನಿಖೆಗೆ ನ್ಯಾಯಾಲಯ ಆದೇಶ ನೀಡಿದೆ, ತನಿಖೆ ನಡೆಯುತ್ತಿದೆ. ಇಡಿ ನೋಟಿಸ್ ಕೊಟ್ಟಿದೆ. ಇದನ್ನು ರಾಜಕಾರಣಕ್ಕೆ ಉಪಯೋಗಿಸುತ್ತಿದ್ದಾರೆ. ಸರ್ಕಾರ ಸಮರ್ಥವಾಗಿದೆ ಪ್ರತ್ಯುತ್ತರ ಕೊಡ್ತೇವೆ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 am, Sat, 5 October 24