ಜಮ್ಮು: ಕಾಂಗ್ರೆಸ್ ಪಕ್ಷಕ್ಕೆ ಇತ್ತೀಚೆಗೆ ರಾಜೀನಾಮೆ ನೀಡಿದ ಮಾಜಿ ಕೇಂದ್ರ ಸಚಿವ ಗುಲಾಂ ನಬಿ ಆಜಾದ್ ಭಾನುವಾರ ಹೊಸ ಪಕ್ಷ ರಚಿಸುವ ಘೋಷಣೆ ಮಾಡಿದರು. ಜಮ್ಮುವಿನ ಸೈನಿಕ್ ಕಾಲೊನಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದ ಹೆಸರನ್ನು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಜನರು ಪಕ್ಷದ ಹೆಸರು ಮತ್ತು ಧ್ವಜದ ಬಗ್ಗೆ ತೀರ್ಮಾನಿಸುತ್ತಾರೆ. ನಾನು ನನ್ನ ಪಕ್ಷವು ಎಲ್ಲರಿಗೂ ಅರ್ಥವಾಗುವ, ಹಿಂದೂಸ್ತಾನಿ ಹೆಸರು ಹೊಂದಿರಬೇಕು ಎಂದು ಬಯಸುತ್ತೇನೆ ಎಂದು ಆಜಾದ್ ಹೇಳಿದರು.
ಜಮ್ಮು ವಿಮಾನ ನಿಲ್ದಾಣದಿಂದ ಸಮಾವೇಶದ ಸ್ಥಳಕ್ಕೆ ಮೆರವಣಿಗೆಯಲ್ಲಿ ತೆರಳಿದ ಅವರು, ಸ್ಥಳೀಯ ಜಮ್ಮು ನಿವಾಸಿಗಳ ಡೋಗ್ರಾ ಶೈಲಿಯ ರುಮಾಲು ಧರಿಸಿದ್ದರು. ಗುಲಾಮ್ ನಬಿ ಆಜಾದ್ 2005ರಿಂದ 2008ರವರೆಗೆ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದರು. ನಾನು ಸದಾ ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಇದ್ದೇನೆ. ಇಂದು ನಾನು ಮುಖ್ಯಮಂತ್ರಿ ಅಥವಾ ಸಚಿವ ಆಗಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯನಾಗಿ ನಿಮ್ಮೆದುರು ಬಂದಿದ್ದೇನೆ. ಕಳೆದ ಒಂದು ವಾರದಲ್ಲಿ ಹಲವು ಜನರು ಕಾಂಗ್ರೆಸ್ಗೆ ರಾಜೀನಾಮೆ ಕೊಟ್ಟು ನನ್ನನ್ನು ಬೆಂಬಲಿಸಿದ್ದಾರೆ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು.
ತಮ್ಮೊಂದಿಗೆ ಕೈಜೋಡಿಸಿದ ಐವರು ಮಾಜಿ ಸಚಿವರನ್ನು ಆಜಾದ್ ಹೊಗಳಿದರು. ಸಭೆಯಲ್ಲಿ ಜಮ್ಮು ಕಾಶ್ಮೀರದ ಮುಂದಿನ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಎಂದು ಘೋಷಿಸಲಾಯಿತು. ‘ಈ ವೇದಿಕೆಯ ಮೇಲೆ ಇಂದು ಪಿಡಿಪಿ, ಬಿಜೆಪಿ ಮತ್ತ ನ್ಯಾಷನಲ್ ಕಾನ್ಫರೆನ್ಸ್ನ ನಾಯಕರಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜನರು ಕೈಜೋಡಿಸಲಿದ್ದಾರೆ’ ಎಂದು ಮಾಜಿ ಸಚಿವ ಹಾಗೂ ಆಜಾದ್ ಆಪ್ತ ಜುಗಲ್ ಕಿಶೋರ್ ಹೇಳಿದರು.
ಕಾಂಗ್ರೆಸ್ನೊಂದಿಗಿನ ತಮ್ಮ 50 ವರ್ಷಗಳ ಸುದೀರ್ಘ ನಂಟು ಮುರಿದುಕೊಂಡ ನಂತರ ಗುಲಾಂ ನಬಿ ಆಜಾದ್ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ. ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ನನ್ನ ಹೊಸ ಪಕ್ಷವು ಸ್ಪರ್ಧಿಸಲಿದೆ ಎಂದು ಆಜಾದ್ ಘೋಷಿಸಿದರು. ಆಜಾದ್ ಅವರು ಹೊಸ ಪಕ್ಷ ಆರಂಭಿಸುವ ಸೂಚನೆ ನೀಡಿದ ನಂತರ ಹಲವು ನಾಯಕರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಕೊಟ್ಟು ಆಜಾದ್ ಅವರೊಂದಿಗೆ ಕೈಜೋಡಿಸಿದರು.
Published On - 2:20 pm, Sun, 4 September 22