ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡ ಇಬ್ರಾಹಿಂ ಮುಂದಿನ ನಡೆ ಏನು? ಇಲ್ಲಿದೆ ವಿವರ
CM Ibrahim: ಇಂದು ನಡೆದ ಜೆಡಿಎಸ್ ಕೋರ್ ಕಮಿಯ ಸಭೆಯಲ್ಲಿರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಎಲ್ಲರ ಒಪ್ಪಿಗೆಯನ್ನು ಪಡೆದು ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಜೆಡಿಎಸ್ ವರಿಷ್ಠರ ವಿರುದ್ಧ ಗುಡುಗಿದ್ದ ಇಬ್ರಾಹಿಂದ ಅವರನ್ನೇ ರಾಜ್ಯಾಧ್ಯಕ್ಷ ಸ್ಥಾನವನ್ನು ಕಿತ್ತುಕೊಂಡಿದ್ದು, ಕುಮಾರಸ್ವಾಮಿಯನ್ನು ಹಂಗಾಮಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇದೀಗ ಸಿಎಂ ಇಬ್ರಾಹಿಂ ಅವರ ಮುಂದಿನ ನಡೆ ಹೇಗಿರಲಿದೆ ಎಂಬ ಕುತೂಹಲ ಮೂಡಿಸಿದೆ. ಹಾಗಾದ್ರೆ, ಇಬ್ರಾಹಿಂ ಮುಂದಿರುವ ಮಾರ್ಗಗಳೇನು ? ಇಲ್ಲಿದೆ ನೋಡಿ.
ಬೆಂಗಳೂರು, (ಅಕ್ಟೋಬರ್ 19): ಜೆಡಿಎಸ್ (JDS) ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವಿಸರ್ಜಿಸಿ ಹೆಚ್ಡಿ ದೇವೇಗೌಡ ಆದೇಶ ಹೊರಡಿಸಿದ್ದಾರೆ. ಅಲ್ಲದೇ ತಾತ್ಕಾಲಿಕವಾಗಿ ಹೆಚ್ಡಿ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ ಜತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದನ್ನು ವಿರೋಧಿಸಿ, ಪ್ರತ್ಯೇಕ ಸಭೆ ನಡೆಸುವುದರೊಂದಿಗೆ ತೀವ್ರ ಅಸಮಾಧಾನ ಹೊರಹಾಕಿದ್ದ ಸಿಎಂ ಇಬ್ರಾಹಿಂ (CM Ibrahim) ಇದೀಗ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಜೆಡಿಎಸ್-ಬಿಜೆಪಿ ಮೈತ್ರಿ ಘೋಷಣೆಯಾದ ಬಳಿಕ ಇಬ್ರಾಹಿಂ ನೀಡಿದ್ದ ಹೇಳಿಕೆಗಳು ಪಕ್ಷಕ್ಕೆ ಇರುಸು-ಮುರುಸು ತಂದಿತ್ತು. ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ, ನಮ್ಮದೇ ಒರಿಜಿನಲ್ ಜೆಡಿಎಸ್ ಎಂದಿದ್ದರು. ರಾಜ್ಯಾಧ್ಯಕ್ಷನಾಗಿದ್ದರೂ ನನ್ನ ಗಮನಕ್ಕೆ ತರದೇ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದರು. ಇಂಡಿಯಾ ಒಕ್ಕೂಟಕ್ಕೆ ನನ್ನ ಬೆಂಬಲ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದರು. ಇದರ ನಡುವೆ ಎಚ್ಡಿಕೆ ಮತ್ತು ನಿಖಿಲ್ ಕುಮಾಸ್ವಾಮಿ ಅವರನ್ನು ಇಬ್ರಾಹಿಂ ಪಕ್ಷದಿಂದ ಉಚ್ಛಾಟನೆ ಮಾಡಿದ್ದಾರೆ ಎಂಬ ಪತ್ರವೂ ವೈರಲ್ ಆಗಿತ್ತು. ಆದರೆ, ಅದು ನಕಲಿ ಪತ್ರ ಎಂದು ಹೇಳಿ ಸ್ವತಃ ಇಬ್ರಾಹಿಂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಎಲ್ಲ ಬೆಳವಣಿಗೆಗಳ ಬಳಿಕ ಇಂದು(ಅಕ್ಟೋಬರ್ 19) ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಯಿತು. ಜೆಡಿಎಸ್ ಪಕ್ಷದ ರಾಜ್ಯ ಘಟಕವನ್ನೇ ವಿಸರ್ಜಿಸಿದ್ದರಿಂದ ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಕಾದು ನೋಡಿ: ಸಿಎಂ ಇಬ್ರಾಹಿಂ
ಇಬ್ರಾಹಿಂ ಮುಂದಿರುವ ಮಾರ್ಗಗಳೇನು?
- ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಉಚ್ಛಾಟನೆಗೊಂಡಿರುವ ಸಿಎಂ ಇಬ್ರಾಹಿಂ ಮುಂದಿರುವ ಮಾರ್ಗಗಳೇನು ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಅವರ ಮುಂದಿನ ನಡೆ ಏನು ಎಂದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಮೊದಲನೆಯದಾಗಿ ಪಕ್ಷದ ಸದಸ್ಯತ್ವವನ್ನು ಒಪ್ಪಿಕೊಂಡು ಪಕ್ಷದಲ್ಲೇ ಮುಂದುವರಿಯಬಹುದು. ಆದ್ರೆ, ಇಬ್ರಾಹಿಂ ವರ್ತನೆಗಳನ್ನು ನೋಡಿದರೆ ಅವರು ಜೆಡಿಎಸ್ನಲ್ಲಿ ಮುಂದುವರೆಯಲು ಸಾಧ್ಯವಿಲ್ಲ. ಬದಲಿಗೆ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಹೊರಬರಬಹುದು.
- ಒಂದು ವೇಳೆ ಪಕ್ಷದಿಂದ ಹೊರಬಂದರೆ ಬೇರೆ ಪಕ್ಷ ಸೇರಲು ಅವರಿಗೆ ಅವಕಾಶ ಸೃಷ್ಟಿಯಾಗುತ್ತದೆ. ಮರಳಿ ಕಾಂಗ್ರೆಸ್ ಸೇರಿದರೂ ಅಚ್ಚರಿಪಡಬೇಕಿಲ್ಲ. ಯಾಕಂದ್ರೆ ಈಗಾಗಲೇ ಇಂಡಿಯಾ ಒಕ್ಕೂಟಕ್ಕೆ ಬೆಂಬಲ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಕಾಂಗ್ರೆಸ್ ಸಹ ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರನ್ನು ವಾಪಸ್ ಪಕ್ಷಕ್ಕೆ ಸೇರಿಸಿಕೊಳ್ಳಬಹುದು.
- ಇನ್ನು ಇಬ್ರಾಹಿಂ ಮುಂದಿರುವ ಮತ್ತೊಂದು ಮಾರ್ಗವೆಂದರೆ, ಈ ಎಲ್ಲಾ ಜಂಜಾಟಗಳನ್ನು ಬಿಟ್ಟು, ಇದ್ಯಾವುದನ್ನು ಮಾಡದೇ ರಾಜಕೀಯ ಸಾಕು ಎಂದು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬಹುದು.
- ಜನತಾದಳ ವಿಸರ್ಜನೆ ಮಾಡಲು ಆಗುವುದೇ ಇಲ್ಲ. ನಮ್ಮದೇ ಒರಿಜಿನಲ್ ಜನತಾದಳ ಮೆಜಾರಿಟಿ ಶಾಸಕರು ನನ್ನ ಜೊತೆ ಇದ್ದಾರೆ. ಮುಂದಿನ ನಡೆಯೇ ಜನತಾದಳ. ಕಾನೂನು ಹೋರಾಟ ಮತ್ತು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದಿದ್ದಾರೆ. ಇದರೊಂದಿಗೆ ಜೆಡಿಎಸ್ ಇಬ್ಭಾಗಗೊಳಿಸುವ ಮಾತುಗಳಾನ್ನಾಡಿದ್ದು, ಮಹಾರಾಷ್ಟ್ರದಲ್ಲಿ ಶಿವಸೇನೆ ರೀತಿಯಲ್ಲಿ ಇಬ್ರಾಹಿಂ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಇಷ್ಟು ಇಬ್ರಾಹಿಂ ಮುಂದಿರುವ ಮಾರ್ಗಗಳು. ಆದ್ರೆ, ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:17 pm, Thu, 19 October 23