135 ಸೀಟುಗಳ ಅಮಲಿನಲ್ಲಿ ರಾಜ್ಯ ಕಾಂಗ್ರೆಸ್​ ಪಕ್ಷ ತೇಲುತ್ತಿದೆ: ಕಾಂಗ್ರೆಸ್​ ವಿರುದ್ಧ ಟ್ವೀಟ್​​​ ವಾರ್​​ಗಿಳಿದ ಜೆಡಿಎಸ್

135 ಸೀಟುಗಳ ಅಮಲಿನಲ್ಲಿ ರಾಜ್ಯ ಕಾಂಗ್ರೆಸ್​ ಪಕ್ಷ ತೇಲುತ್ತಿದೆ. ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಹುಚ್ಚಾಟ ಆಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಸಾಲು ಸಾಲು​ ಟ್ವೀಟ್​ ಮೂಲಕ ವಾಗ್ದಾಳಿ ಮಾಡಿದೆ.​

135 ಸೀಟುಗಳ ಅಮಲಿನಲ್ಲಿ ರಾಜ್ಯ ಕಾಂಗ್ರೆಸ್​ ಪಕ್ಷ ತೇಲುತ್ತಿದೆ: ಕಾಂಗ್ರೆಸ್​ ವಿರುದ್ಧ ಟ್ವೀಟ್​​​ ವಾರ್​​ಗಿಳಿದ ಜೆಡಿಎಸ್
ಪ್ರಾತಿನಿಧಿಕ ಚಿತ್ರ

Updated on: Jun 14, 2023 | 8:35 PM

ಬೆಂಗಳೂರು: 135 ಸೀಟುಗಳ ಅಮಲಿನಲ್ಲಿ ರಾಜ್ಯ ಕಾಂಗ್ರೆಸ್​ ಪಕ್ಷ ತೇಲುತ್ತಿದೆ. ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಹುಚ್ಚಾಟ ಆಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ (JdS) ಟ್ವೀಟ್​ ಮೂಲಕ ವಾಗ್ದಾಳಿ ಮಾಡಿದೆ.​ ಕಳೆದೆರಡು ಲೋಕಸಭೆ ಚುನಾವಣೆಗಳಲ್ಲಿ ಕಂಡ ಅತಿ ಅಪಮಾನಕರ ಸೋಲನ್ನು ಮರೆತು, ಈಗ ಜಗತ್ತನ್ನೇ ಗೆದ್ದೆ ಎಂದು ಗದೆ ತಿರುಗಿಸುತ್ತಿರುವುದು ವಿಕೃತಿಯ ಪರಮಾವಧಿ ಎಂದು ಕಿಡಿಕಾರಿದೆ.

ಜಾತಿ, ಧರ್ಮ ಒಡೆದು, ಮನಸ್ಸುಗಳ ನಡುವೆ ದ್ವೇಷದಬೆಂಕಿ ಭಿತ್ತಿ, ಪರಸ್ವರ ವ್ಯವಹಾರದ ಪರಿಣಾಮವೇ ಈ 135 ಸೀಟು. ಶಿಗ್ಗಾಂವಿ, ವರುಣಾ, ಶಿಕಾರಿಪುರ, ಚಿಕ್ಕಮಗಳೂರು, ಕನಕಪುರ ಕ್ಷೇತ್ರ ಸೇರಿ ಆಯ್ದ ಜಿಲ್ಲೆಗಳಲ್ಲಿ ನಡೆದ ಅಡ್ಜಸ್ಟ್ ಮೆಂಟ್ ಆಟ ಎರಡೂ ರಾಷ್ಟ್ರೀಯ ಪಕ್ಷಗಳ ನೀತಿಗೆಟ್ಟ ರಾಜಕಾರಣಕ್ಕೆ ಹಿಡಿದ ಕನ್ನಡಿ ಆಗಿದೆ ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಂಸದ ಪ್ರತಾಪ್​ ಸಿಂಹ ಮತ್ತು ಡಾ. ಪರಮೇಶ್ವರ್​ ಅವರು ಎತ್ತಿರುವ ಪ್ರಶ್ನೆಗಳಿಗೆ ಉತ್ತರ ಕೊಡುವ ದಮ್ಮು, ತಾಕತ್ತು ಮುಖ ಮೂತಿಗೆಲ್ಲ ಒಳ ರಾಜಕೀಯದ ಗಲೀಜು ಮೆತ್ತಿಕೊಂಡ ಎರಡೂ ಪಕ್ಷಗಳ ನಾಯಕರಿಗೆ ಇದೆಯಾ? ಹಗಲಲ್ಲಿ ಹಾರಾಟ, ಕತ್ತಲಾದರೆ ಕಳ್ಳಾಟ!! ಕಾರ್ಯಕರ್ತರೇ ಹಾದಿಬೀದಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಿಂತಿಸಬೇಡಿ ಬಿಜೆಪಿ ಮಾಡಿದ ಲೂಟಿಗಳನ್ನು ವಾಪಸ್ ಕಕ್ಕಿಸುತ್ತೇವೆ: ಪ್ರತಾಪ್ ಸಿಂಹಗೆ ಭರವಸೆ ನೀಡಿದ ಕಾಂಗ್ರೆಸ್​

ಸಾಲು ಸಾಲು ಪ್ರಶ್ನೆ

ಮಂಡ್ಯ ಜಿಲ್ಲೆ ಒಂದರಲ್ಲಿಯೇ ಪ್ರತಿ ಕ್ಷೇತ್ರಕ್ಕೆ ಕಮ್ಮಿ ಎಂದರೂ 10-20 ಕೋಟಿ ವ್ಯಯಿಸಿ ಮತ ವಿಭಜನೆ ಮಾಡಿದ್ದು ಯಾರು? ಒಬ್ಬರನ್ನು ಒಬ್ಬರು ಮೀರಿಸುವಂತೆ ಹಣದ ಹೊಳೆ ಹರಿಸಿದ್ದು ಯಾರು? ಪ್ರಾದೇಶಿಕ ಪಕ್ಷದ ಕತ್ತು ಕೊಯ್ಯಲು ನೀಚ, ನಿಕೃಷ್ಟ ರಾಜಕೀಯ ಮಾಡಿದ್ದು ಯಾರು? ಈಗ ನೀವೇ ಸತ್ಯ ಹೇಳುತ್ತಿದ್ದೀರಿ, ಸತ್ಯದ ಕತ್ತು ಕೊಯ್ಯುವುದು ಸಾಧ್ಯವೇ ಎಂದು ಸಾಲು ಪ್ರಶ್ನೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರನ್ನು ಎಟಿಎಂ ಮಾಡಿಕೊಳ್ಳಲು ಇವರೇ ಫೀಲ್ಡಿಗಿಳಿದಿದ್ದಾರೆ: ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ್ ಕಿಡಿ

ಕಾಂಗ್ರೆಸ್​ಗೆ ಧೈರ್ಯ ಇದೆಯಾ?

ಅಡ್ಜಸ್ಟ್ ಮೆಂಟ್ ಇಲ್ಲದಿದ್ದರೆ ಕಳೆದ ಬಾರಿ ಡಾ.ಜಿ.ಪರಮೇಶ್ವರ ಅವರು ಕೊರಟಗೆರೆಯಲ್ಲಿ, ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರ್ಗಿಯಲ್ಲಿ ಸೋತಿದ್ದೇಕೆ? ದಲಿತೋದ್ಧಾರ, ಆಹಿಂದೋದ್ಧಾರ ಎನ್ನುವರು, ಈ ಇಬ್ಬರನ್ನು ಸೋಲಿಸಲು ಹೂಡಿದ ತಂತ್ರಗಳ ಬಗ್ಗೆ, ಆಡಿದ ಸದಾರಮೆ ಆಟಗಳ ಬಗ್ಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಧೈರ್ಯ ಈ ಕಾಂಗ್ರೆಸ್​ಗೆ ಇದೆಯಾ?

ಆಪರೇಶನ್ ಕಮಲ; ಇಬ್ಬರ ನಾಯಕರ ಜಂಟಿ ಆಪರೇಶನ್ ಎನ್ನುವುದು ಯಾರಿಗೆ ಗೊತ್ತಿಲ್ಲ? ಇದರ ಅಸಲಿ ಕಥೆ ಗೊತ್ತಿಲ್ಲದಷ್ಟು ಮುಗ್ಧರಾ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು? ಆ ಹೇಸಿಗೆಯಲ್ಲಿ ಬಿದ್ದು ಹೊರಳುತ್ತಿರುವ ರಾಜ್ಯ ಕಾಂಗ್ರೆಸ್​ ಆ ಗಲೀಜನ್ನೆಲ್ಲ ಮುಖಕ್ಕೆ ಮೆತ್ತಿಕೊಂಡು ಇತರರಿಗೂ ಮೆತ್ತಲು ಹವಣಿಸುತ್ತಿದೆ! ಛೇ, ಅಸಹ್ಯ!! ವಿಕೃತಿ ವಿನಾಶಕ್ಕೆ ದಾರಿ ಎಂದು ತೀವ್ರ ವಾಗ್ದಾಳಿ ಮಾಡಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us