ಜೆಡಿಎಸ್ ಕುಟುಂಬದ ಸ್ವತ್ತಲ್ಲ: ದೇವೇಗೌಡ, ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದ ಸಿಎಂ ಇಬ್ರಾಹಿಂ
ತಮ್ಮನ್ನು ಕಡೆಗಣಿಸಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಬಗ್ಗೆ ಅಸಮಾಧಾನಗೊಂಡ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪಕ್ಷದ ವರಿಷ್ಠರಾಗಿರುವ ಹೆಚ್ಡಿ ದೇವೇಗೌಡ ಹಾಗೂ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ತಿರುಗಿಬಿದ್ದಿದ್ದಾರೆ. ಅಲ್ಲದೆ, ನಾನು ಜೆಡಿಎಸ್ ಅಧ್ಯಕ್ಷ, ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಪಕ್ಷ ಕುಟುಂಬದ ಸ್ವತ್ತಲ್ಲ ಎಂದು ಹೇಳಿದ್ದಾರೆ.
ಬೆಂಗಳೂರು, ಅ.16: ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ವಿರುದ್ಧ ತಿರುಗಿಬಿದ್ದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim), ನಾನು ಅಧ್ಯಕ್ಷ, ನನ್ನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಪಕ್ಷ ಕುಟುಂಬದ ಸ್ವತ್ತಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ಪಕ್ಷದ್ದು ಜಾತ್ಯತೀತ ಸಿದ್ಧಾಂತ. ಬಿಜೆಪಿ ಸಿದ್ಧಾಂತವೇ ಬೇರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಸೋಲಬೇಕಿದೆ. ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಂತಾನೂ ಹೇಳಿದ್ದಾರೆ.
ಜೆಡಿಎಸ್ ಕರ್ನಾಟಕ ಚಿಂತನ ಮಂಥನ ಸಭೆಯಲ್ಲಿ ಮಾತನಾಡಿದ ಅವರು, ಒರಿಜಿನಲ್ ಜೆಡಿಎಸ್ ನಮ್ಮದೇ, ಅಧ್ಯಕ್ಷ ಸ್ಥಾನದಿಂದ ತೆಗೆಯಲು ಆಗಲ್ಲ. ಚನ್ನಪಟ್ಟಣ ಕ್ಷೇತ್ರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗೆದ್ದಿದ್ದು ಹೇಗೆ? ಕುಮಾರಸ್ವಾಮಿ ಎಂಎಲ್ಎ ಆಗಿದ್ದಕ್ಕೆ ಅಮಿಶ್ ಶಾ ಕರೆದಿದ್ದು. ಮುಸ್ಲಿಮರ ಮತ ಹಾಕದಿದ್ದರೆ ನೀವು ಸೋತು ಮನೆಯಲ್ಲಿ ಇರಬೇಕಿತ್ತು ಎಂದರು.
ಕುಮಾರಸ್ವಾಮಿ ಬಗ್ಗೆ ವೈಯಕ್ತಿಕ ಟೀಕೆ ಮಾಡಲ್ಲ, ಈಗಲೂ ಅವಕಾಶ ಇದೆ. ನಾವು ಬಿಜೆಪಿ ಜೊತೆ ಹೋಗಲ್ಲ, ಕೋರ್ ಕಮಿಟಿ ರಚನೆ ಮಾಡುತ್ತೇವೆ. ಜೆಡಿಎಸ್ನ ಎಲ್ಲಾ ಶಾಸಕರನ್ನು ಸಂಪರ್ಕ ಮಾಡುತ್ತೇನೆ. ಪಕ್ಷ ಕುಟುಂಬದ ಸ್ವತ್ತು ಅಲ್ಲ, ಸರ್ವರ ಅಭಿಪ್ರಾಯ ಬಹಳ ಮುಖ್ಯ ಎಂದರು.
ಇದನ್ನೂ ಓದಿ: ಹೆಚ್ಡಿ ಕುಮಾರಸ್ವಾಮಿ, ನಿಖಿಲ್ ಉಚ್ಚಾಟನೆಗೆ ಆಗ್ರಹ: ಸಿ.ಎಂ ಇಬ್ರಾಹಿಂ ಚಿಂತನ ಮಂಥನ ಸಭೆಯಲ್ಲಿ ಅಚ್ಚರಿ ಬೆಳವಣಿಗೆ
ಪ್ರಧಾನಿ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಆದರೆ ತತ್ವ ಸಿದ್ಧಾಂತ, ತತ್ವ ಬೇರೆ ಇದೆ, ಅದಕ್ಕೆ ನಾವು ವಿರೋಧ ಮಾಡುತ್ತೇವೆ ಎಂದ ಇಬ್ರಾಹಿಂ, ಮುಂದೆ ಎನು ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇನೆ. ಯಾರನ್ನ ನೀವು ನಂಬಿದ್ದೀರಿ ಅವರೇ ನಿಮ್ಮ ಕೈ ಕೊಟ್ಟರು. ನಮ್ಮ ಮನೆಯಲ್ಲಿ ನಾವು ಇದ್ದೇವೆ. ಮುಂದೆ ಎನಾಗುತ್ತೆ ಪರದೆ ಮೇಲೆ ನೋಡಬೇಕು. ನಾನು ಹೆದರುವನು ಅಲ್ಲ, ಬೆದರಿಕೆ ಹಾಕಲ್ಲ ಎಂದರು.
1995 ರಲ್ಲಿ ಜೆಡಿಎಸ್ ಅಧ್ಯಕ್ಷನಾಗಿ 16 ಲೋಕಸಭೆ ಸದಸ್ಯರನ್ನ ಗೆಲ್ಲಿಸಿ ದೇವೇಗೌಡರನ್ನ ಪ್ರಧಾನಿ ಮಾಡಿದ್ದ ಕೀರ್ತಿ ಇದೆ. ಇವತ್ತು ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು. ಅಂಬೇಡ್ಕರ್ ದೇಶದಕ್ಕೆ ಸಂವಿಧಾನ ಬರೆದ ವ್ಯಕ್ತಿ. ಇದೇ ಸಂದೇಶವನ್ನು 800 ವರ್ಷಗಳ ಹಿಂದೆ ಬಸವಣ್ಣ ಕೊಟ್ಟರು. ಇವತ್ತು ಏಕಾಏಕಿ ಅಮಿಶ್ ಶಾ ಭೇಟಿ ಮಾಡಿ ಪೋಟೋ ತೆಗೆಸಿಕೊಂಡು ಮೈತ್ರಿ ಅಂತ ಹೇಳಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.
ಪಕ್ಷ ಕುಟುಂಬದ ಸ್ವತ್ತು ಅಲ್ಲ. ಸರ್ವರ ಅಭಿಪ್ರಾಯ ಬಹಳ ಮುಖ್ಯ. ಜಿಲ್ಲಾ ಅಧ್ಯಕ್ಷರು ಕರೆಯಲಿಲ್ಲ. ನನ್ನ ಸಂಪರ್ಕದಲ್ಲಿ ಶಾಸಕರು ಇದ್ದಾರೆ. ಕೋರ್ ಕಮಿಟಿ ಮಾಡಿ ಸಾಧಕ ಭಾದಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ನಾವು ಮೈತ್ರಿ ಮಾಡಿಕೊಂಡರೆ ನಾಲ್ಕು ಸೀಟು ಸಿಗುತ್ತದೆ. ನಾವು ಶಕ್ತಿ ಪ್ರದರ್ಶನ ಮಾಡಬಹುದಿತ್ತು. ನಾನು ಕೋರ್ ಕಮಿಟಿ ರಚನೆ ಮಾಡಿ ರಾಜ್ಯ ಪ್ರವಾಸ ಮಾಡುತ್ತೇನೆ ಎಂದರು.
ತಪ್ಪು ಸಂದೇಶ ಕೊಡಬೇಡಿ ಎಂದು ನಾನು ದೇವೇಗೌಡರಿಗೆ ಮನವಿ ಮಾಡುತ್ತೇನೆ. ನಿಮ್ಮನ ಪ್ರಧಾನಮಂತ್ರಿ ಮಾಡಿದ್ದು ಜಾತ್ಯಾತೀತ ತತ್ವ. ಆದರೆ, ಸೀತಾರಾಮ್ ಕೇಸರ್ ಬೆಂಬಲ ವಾಪಸ್ ಪಡೆದಿದ್ದಕ್ಕೆ ಸರ್ಕಾರ ಬಿತ್ತು. ಅದಕ್ಕೆ ಬಿಜೆಪಿಗೆ ಶಕ್ತಿ ಬಂತು ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ