ಬಂಡೆ ಕಲ್ಲಿನಂತ ಹೃದಯದವರಿಗೆ ಜನರ ಕಷ್ಟ ಅರ್ಥವಾಗಲ್ಲ: ಜೆಡಿಎಸ್​ ಕಿಡಿ

ಸಿಎಂ ಡಿ.ಕೆ. ಶಿವಕುಮಾರ್​ ಅವರ ಬೆಂಗಳೂರು ನಡಿಗೆ ಕಾರ್ಯಕ್ರಮದ ಬಗ್ಗೆ ಜೆಡಿಎಸ್​ ಟೀಕಾಪ್ರಹಾರ ನಡೆಸಿದೆ. ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿಕೆಶಿ, ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕಿತ್ತು. ಅವರಿಗೆ ಸಾಂತ್ವನ ಹೇಳಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಬೇಕಿತ್ತು. ಅದರ ಬದಲು ನಡಿಗೆ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆಯೇ ? ಎಂದು ಜೆಡಿಎಸ್​  ಪ್ರಶ್ನಿಸಿದೆ.

ಬಂಡೆ ಕಲ್ಲಿನಂತ ಹೃದಯದವರಿಗೆ ಜನರ ಕಷ್ಟ ಅರ್ಥವಾಗಲ್ಲ: ಜೆಡಿಎಸ್​ ಕಿಡಿ
ಡಿಸಿಎಂ ಡಿಕೆಶಿ
Updated By: ಪ್ರಸನ್ನ ಹೆಗಡೆ

Updated on: Oct 12, 2025 | 12:03 PM

ಬೆಂಗಳೂರು, ಅಕ್ಟೋಬರ್​ 12: ಡಿಸಿಎಂ ಡಿ.ಕೆ. ಶಿವಕುಮಾರ್ (D.K. Shivakumar)​ ಅವರ ಬೆಂಗಳೂರು ನಡಿಗೆ ಕಾರ್ಯಕ್ರಮವನ್ನ ಜೆಡಿಎಸ್​ ಟೀಕಿಸಿದೆ. ಡಿಕೆಶಿಗೆ ಪ್ರಚಾರದ ಹುಚ್ಚು ವಿಪರೀತ ತಲೆಗೇರಿದೆ. ಬೆಳಗ್ಗೆ ಎದ್ದೊಡನೆ ದಿನಪತ್ರಿಕೆಗಳನ್ನು ಒಮ್ಮೆ ನೋಡಿ. ಆಗಲಾದರೂ ಜನರ ಸಂಕಷ್ಟ ನಿಮಗೆ ಅರ್ಥ ಆಗಬಹುದು. ಮಳೆಯಿಂದ ಬೆಂಗಳೂರಿನ ಬಹುತೇಕ ಪ್ರದೇಶಗಳು ನೀರಿನಲ್ಲಿ ಮುಳುಗಿದ್ದು, ರಸ್ತೆಗಳು ಹಾಳಾಗಿ ಜನರು ನರಕ ಅನುಭವಿಸುತ್ತಿದ್ದಾರೆ. ಹೀಗಿರುವಾಗ ಜನರ ಕಷ್ಟ ಆಲಿಸುವ ಬದಲು ಹಳೆ ಬೆಂಗಳೂರು ಪ್ರದೇಶಗಳಲ್ಲಿ ನಡಿಗೆ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ? ಎಂದು ಜೆಡಿಎಸ್​ ಪ್ರಶ್ನಿಸಿದೆ.

ಬೆಂಗಳೂರು ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಡಿಕೆಶಿ, ಮಳೆ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಬೇಕಿತ್ತು. ಅವರಿಗೆ ಸಾಂತ್ವನ ಹೇಳಿ, ಶಾಶ್ವತ ಪರಿಹಾರ ಕಲ್ಪಿಸುವ ಭರವಸೆ ನೀಡಬೇಕಿತ್ತು. ಅದರ ಬದಲು ಲಾಲ್​ಬಾಗ್, ಜೆಪಿ ಪಾರ್ಕ್, ಕಬ್ಬನ್ ಪಾರ್ಕ್, ಕೋರಮಂಗಲ, ನಾಗರಬಾವಿ, ಕೆ.ಆರ್. ಪುರಂ ಪಾರ್ಕ್​ಗಳಲ್ಲಿ ನಡಿಗೆ ಮಾಡಿದರೆ ವಾಸ್ತವ ಪರಿಸ್ಥಿತಿ ಅರ್ಥವಾಗುತ್ತದೆಯೇ ? ಬೆಂಗಳೂರಿನಲ್ಲಿ ಜನಸಾಮಾನ್ಯರು ಪಡಬಾರದ ಕಷ್ಟಪಡುತ್ತಿದ್ದಾರೆ. ರಸ್ತೆಗಳು ಯಮಗುಂಡಿಗಳಿಂದ ಕೂಡಿದ್ದು ಜನರನ್ನು ಬಲಿ ಪಡಿಯುತ್ತಿವೆ. ಒಂದೇ ವಾರದಲ್ಲಿ ಬಿಎಂಟಿಸಿಗೆ ನಾಲ್ವರು ಬಲಿಯಾಗಿದ್ದಾರೆ. ಇವೆಲ್ಲವೂ ನಿಮ್ಮ ಕಾಂಗ್ರೆಸ್​ ಸರ್ಕಾರದ ದುರಾಡಳಿತಕ್ಕೆ ಪ್ರತ್ಯಕ್ಷ ಸಾಕ್ಷಿ. ಇದೇನಾ ನೀವು ಬೆಂಗಳೂರಿನ ನಾಗರಿಕರಿಗೆ ಸ್ಪಂದಿಸುವ ಪರಿ? ಜನಸ್ನೇಹಿ, ಮಾತೃ ಹೃದಯಿಗಳಿಗಷ್ಟೇ ಜನಪರ ಆಡಳಿತ ನೀಡಲು ಸಾಧ್ಯ. ಬಂಡೆ ಕಲ್ಲಿನಂತ ಹೃದಯ ಇರುವ ನಿಮಗೆ ಜನರ ಸಂಕಷ್ಟ ಹೇಗೆ ತಾನೆ ಅರ್ಥವಾಗುತ್ತದೆ? ಎಂದು ಜೆಡಿಎಸ್​ ಕಿಡಿ ಕಾರಿದೆ.

ಇದನ್ನೂ ಓದಿ: ಜೆಪಿ ಪಾರ್ಕ್​ನಲ್ಲಿ ಹೈಡ್ರಾಮಾ; ಆರ್​ಎಸ್​ಎಸ್​ ಉಡುಗೆಯಲ್ಲೇ ಡಿಕೆ ಶಿವಕುಮಾರ್ ಮುಂದೆ ಮುನಿರತ್ನ ಪ್ರತಿಭಟನೆ

ಮುನಿರತ್ನ ಬೆಂಬಲಕ್ಕೆ ನಿಂತ ಅಶ್ವತ್ಥ್​ ನಾರಾಯಣ್​

ಡಿಸಿಎಂ ‘ಬೆಂಗಳೂರು ನಡಿಗೆ’ ಕಾರ್ಯಕ್ರಮದ ಬಗ್ಗೆ ಬಿಜೆಪಿ ಶಾಸಕ ಡಾ.ಸಿ.ಎನ್​. ಅಶ್ವತ್ಥ್​ ನಾರಾಯಣ್​ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನರ ಮಧ್ಯದಲ್ಲಿ ಹೋಗುತ್ತಿರುವುದು ಒಳ್ಳೆಯದು ಬೆಳವಣಿಗೆ. ಆದರೆ ಸರಕಾರಿ ಕಾರ್ಯಕ್ರಮಗಳಲ್ಲಿ ವೈಮನಸ್ಸು ತೋರಿಸಬಾರದು. ಚುನಾಯಿತ ಪ್ರತಿನಿಧಿ ಹಕ್ಕು ಕಸಿಯಬಾರದು ಎಂದಿದ್ದಾರೆ. ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ಮತ್ತಿಕೆರೆಯ ಜೆಪಿ ಪಾರ್ಕ್​ನಲ್ಲಿ ನಡೆದ ಹೈಡ್ರಾಮಾ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಅವರು, ಶಾಸಕ ಮುನಿರತ್ನ ಮೇಲೆ ದಾಳಿಗೆ ಯತ್ನಿಸಿದವರನ್ನು ತಕ್ಷಣ ಬಂಧಿಸಬೇಕು. ಕಾಂಗ್ರೆಸ್ ಪಕ್ಷದ ದೌರ್ಜನ್ಯ, ಅಟ್ಟಾಹಾಸ ಮಿತಿ ಮೀರುತ್ತಿದೆ. ಗೂಂಡಾಗಿರಿ ಮಾಡುವ ಪ್ರವೃತ್ತಿಯನ್ನು ನಾವು ಒಪ್ಪುವುದಿಲ್ಲ. ಚುನಾಯಿತ ಪ್ರತಿನಿಧಿ ಮೇಲೆ ಹಲ್ಲೆ ಯತ್ನ ನಡೆಸಲಾಗುತ್ತೆ ಎಂದರೆ ಸರಕಾರ ಬದುಕಿದೆಯೋ, ಇಲ್ಲವೋ ಎಂಬ ಪ್ರಶ್ನೆ ಮೂಡುತ್ತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.