ಜೆಪಿ ಪಾರ್ಕ್ನಲ್ಲಿ ಹೈಡ್ರಾಮಾ; ಆರ್ಎಸ್ಎಸ್ ಉಡುಗೆಯಲ್ಲೇ ಡಿಕೆ ಶಿವಕುಮಾರ್ ಮುಂದೆ ಮುನಿರತ್ನ ಪ್ರತಿಭಟನೆ
ಬೆಂಗಳೂರು ನಡಿಗೆ ಕಾರ್ಯಕ್ರಮ ಅಂಗವಾಗಿ ಇಂದು ಮುಂಜಾನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಜೆಪಿ ಪಾರ್ಕ್ಗೆ ಆಗಮಿಸಿದ್ದರು. ಈ ವೇಳೆ ಅವರೊಂದಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಕೂಡ ಇದ್ದರು. ವಾಯುವಿಹಾರಕ್ಕೆ ಬಂದಿದ್ದ ಜನರೊಂದಿಗೆ ಡಿಕೆಶಿ ಸಂವಾದ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಅಲ್ಲಿಗೆ ಬಂದ ಶಾಸಕ ಮುನಿರತ್ನ ಗದ್ದಲ ಸೃಷ್ಟಿಸಿದರು.

ಬೆಂಗಳೂರು, ಅಕ್ಟೋಬರ್ 12: ಬೆಂಗಳೂರು ನಡಿಗೆ (Bengaluru Nadige) ಕಾರ್ಯಕ್ರಮದ ಪ್ರಯುಕ್ತ ನಿನ್ನೆ ಲಾಲ್ಬಾಗ್ಗೆ ತೆರಳಿದ್ದ ಡಿಕೆ ಶಿವಕುಮಾರ್ (DK Shivakumar) ಇಂದು ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಜನರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಜೆಪಿ ಪಾರ್ಕ್ನಲ್ಲಿ ಹೈಡ್ರಾಮಾ ನಡೆದಿದೆ. ಆರ್ಎಸ್ಎಸ್ ಡ್ರೆಸ್, ಟೋಪಿ ಧರಿಸಿ ಜೆಪಿ ಪಾರ್ಕ್ಗೆ ಬಂದ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಡಿಕೆ ಶಿವಕುಮಾರ್ ನಿರ್ಲಕ್ಷ್ಯಿಸಿದರು. ಡಿಕೆಶಿ ವೇದಿಕೆಯಲ್ಲಿ ಕುಳಿತಾಗಲೂ ಶಾಸಕ ಮುನಿರತ್ನ ಕೆಳಗೆ ಜನರ ಮಧ್ಯೆ ಕುರ್ಚಿಯಲ್ಲಿ ಕುಳಿತರು. ಆಗ ಡಿಸಿಎಂ ‘ಹೇಯ್, ಕಪ್ಪು ಟೋಪಿ ಎಂಎಲ್ಎ ಬಾರಯ್ಯ’ ಎಂದು ಕರೆದರು. ಆದರೆ, ಅದಕ್ಕೆ ಒಪ್ಪದ ಮುನಿರತ್ನ ‘ನಾನು ಜನರ ಮಧ್ಯದಲ್ಲೇ ಕೂರುತ್ತೇನೆ’ ಎಂದು ಹೇಳಿದರು. ಇದಾದ ನಂತರ ಇದ್ದಕ್ಕಿದ್ದಂತೆ ಎದ್ದು ನಿಂತು ಡಿಕೆ ಶಿವಕುಮಾರ್ ಅವರ ವಿರುದ್ಧ ಮುನಿರತ್ನ ಪ್ರತಿಭಟನೆ ನಡೆಸಿದರು.
‘ಬೆಂಗಳೂರು ನಡಿಗೆ ಸರ್ಕಾರದ ಕಾರ್ಯಕ್ರಮವಾದರೂ ಶಾಸಕನಾದ ನನಗೆ ಆಹ್ವಾನ ನೀಡದೆ ಅಗೌರವ ತೋರಿದ್ದಾರೆ. ಈ ಕಾರ್ಯಕ್ರಮದಲ್ಲೆಲ್ಲೂ ಶಾಸಕನ ಒಂದು ಫೋಟೋ ಕೂಡ ಹಾಕಿಲ್ಲ, ನನಗೆ ಆಹ್ವಾನ ನೀಡಿಲ್ಲ’ ಎಂದು ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮತ್ತಿಕೆರೆಯ ಜೆಪಿ ಪಾರ್ಕ್ನಲ್ಲಿ ಡಿಸಿಎಂ ವಾಯುವಿಹಾರ; ಜನರ ಸಮಸ್ಯೆ ಆಲಿಸಿದ ಡಿಕೆ ಶಿವಕುಮಾರ್
‘ಸರ್ಕಾರದ ಕಾರ್ಯಕ್ರಮಕ್ಕೆ ಸಂಸದರು, ಶಾಸಕರಿಗೆ ಆಹ್ವಾನ ನೀಡದಿರುವುದು ತಪ್ಪು. ಸರ್ಕಾರದ ಕಾರ್ಯಕ್ರಮದಲ್ಲಿ ಸಂಸದ, ಶಾಸಕರ ಫೋಟೋ ಇಲ್ಲ. ಇದು ಸಾರ್ವಜನಿಕ ಕಾರ್ಯಕ್ರಮ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮ’ ಎಂದು ಮುನಿರತ್ನ ಆರೋಪಿಸಿದ್ದಾರೆ. ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ ಬೆಂಬಲಿಗರು ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು. ವೇದಿಕೆಯಲ್ಲೇ ಗಲಾಟೆ ನಡೆಸಿದ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರಿಂದಾಗಿ ಹೈಡ್ರಾಮಾ ಸೃಷ್ಟಿಯಾಯಿತು. ಅಲ್ಲಿ ಸೇರಿದ್ದ ಜನರು ಮೂಕಪ್ರೇಕ್ಷಕರಾಗಿ ನೋಡುತ್ತಾ ನಿಂತರು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಲಾಲ್ಬಾಗ್ ನಡಿಗೆ; ಜನರ ಸಮಸ್ಯೆಗೆ ಕಿವಿಕೊಟ್ಟ ಡಿಸಿಎಂ
ರಾಜಕೀಯ ಮಾಡಲು ಇಲ್ಲಿಗೆ ಬರಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಮುನಿರತ್ನ ಬೆಂಬಲಿಗರಿಗೆ ಎಚ್ಚರಿಕೆ ನೀಡಿದರು. ಕಾರ್ಯಕರ್ತರು ಪರಸ್ಪರ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ‘ರೇಪಿಸ್ಟ್ ಮುನಿರತ್ನ’ ಎಂದು ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ ಮುನಿರತ್ನ ಅವರನ್ನು ಪೊಲೀಸರು ಜೆಪಿ ಪಾರ್ಕ್ನಿಂದ ಕರೆದೊಯ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Sun, 12 October 25



