ಬೆಂಗಳೂರು, ಜನವರಿ 8: ಅಯೋಧ್ಯೆಯ ರಾಮ ಮಂದಿರದ ಆಹ್ವಾನದ ಮಂತ್ರಾಕ್ಷತೆಯನ್ನು ‘ಅನ್ನಭಾಗ್ಯ’ ಅಕ್ಕಿಯಲ್ಲೇ ಮಂತ್ರಾಕ್ಷತೆ ಕೊಡುತ್ತಿದ್ದಾರೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಜೆಡಿಎಸ್ ಸಭೆಯ ಬಳಿಕ ಮಾತನಾಡಿದ ಅವರು, ಅಕ್ಕಿಯನ್ನು ದೊಡ್ಡ ಆಲಹಳ್ಳಿಯಲ್ಲಿ ಬೆಳೆದು ಕಳುಹಿಸಿರುವುದಾ? ರಾಮಮಂದಿರಕ್ಕೆ ಹೋಗಲು ಆಹ್ವಾನ ಕೊಡಬೇಕಾ ಎಂದು ಪ್ರಶ್ನಿಸಿದರು.
ರಾಮಮಂದಿರಕ್ಕೆ ಎಲ್ಲರೂ ಬರಬಹುದು ಎಂದು ಪ್ರಧಾನಿ ಹೇಳಿದ್ದಾರೆ. ಕಾರ್ಯಕ್ರಮ ನಡೆಯುವ ದಿನ ದೊಡ್ಡಮಟ್ಟದಲ್ಲಿ ಜನರು ಸೇರುತ್ತಾರೆ. ಮುಂದೆ ಸಾರ್ವಜನಿಕರಿಗೂ ಅವಕಾಶ ಇದೆ, ಆಗ ಹೋಗಬಹುದು. ರಾಮನ ಮೇಲೆ ಭಕ್ತಿ ಇರುವವರು ಹೋಗಬಹುದು ಎಂದು ಕುಮಾರಸ್ವಾಮಿ ಹೇಳಿದರು.
ಡಿಕೆ ಶಿವಕುಮಾರ್ ಮನೆಯಲ್ಲಿ ಬರೀ ದೇವರ ಫೋಟೊಗಳೇ ಇವೆ. ದೇವರ ರಕ್ಷಣೆ ಇಲ್ಲ ಎಂದರೆ ಉಳಿಯಬೇಕಲ್ಲ. ಪಾಪ ಅದಕ್ಕೆ ಈಗ ದೇವರನ್ನು ನೆನೆಪಿಸಿಕೊಳ್ಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ಇವತ್ತಿನ ಜೆಡಿಎಸ್ ಸಭೆ ಮಹತ್ವ ಪಡೆದಿದೆ. ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುವ ಕ್ಷೇತ್ರದ ಜೊತೆಗೆ ಬಿಜೆಪಿ ಅಭ್ಯರ್ಥಿಗಳನ್ನೂ ಗೆಲ್ಲಿಸಬೇಕೆಂಬುದು ನಮ್ಮ ಉದ್ದೇಶ. 28 ಕ್ಕೆ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲಬೇಕು. ರಾಯಚೂರು, ಚಿತ್ರದುರ್ಗ, ಬೀದರ್, ಬಿಜಾಪುರ, ಕೊಪ್ಪಳ ಭಾಗದಲ್ಲಿ ಕನಿಷ್ಠ ಒಂದೂವರೆಯಿಂದ ಎರಡು ಲಕ್ಷ ಓಟು ನಮ್ಮ ಪಕ್ಷಕ್ಕೆ ಇದೆ. ಕಳೆದ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದ ಮುಖಂಡರ ಸಭೆ ಕರೆದಿದ್ದೇನೆ. ಸಭೆಯಲ್ಲಿ ಚುನಾವಣೆ ತಯಾರಿ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಇತ್ತೀಚೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ. ಇದನ್ನು ನಾನು ಹೇಳುತ್ತಿಲ್ಲ. ಸಿಎಂ ಅವರ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರೇ ಹೇಳ್ತಿದ್ದಾರೆ. ಸರ್ಕಾರ ಬಂದು 8 ತಿಂಗಳಾಗಿದೆ. ಬರ ಪರಿಹಾರ ವಿಚಾರದಲ್ಲಿ ಯಾವ ರೀತಿ ನಡೆದುಕೊಳ್ತಿದೆ ಗೊತ್ತಿದೆ. 2 ಸಾವಿರ ರೂಪಾಯಿ ಎಷ್ಟು ಜನಕ್ಕೆ ಹೋಗಿದೆ ಅನ್ನೋದು ಗೊತ್ತಿದೆ. ಮಂತ್ರಿಗಳು ಅಧಿಕಾರದ ವ್ಯಾಮೋಹದಿಂದ ಇನ್ನು ದೂರ ಬಂದಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಜವಾಬ್ದಾರಿಯುತ ಸ್ಥಾನದಲ್ಲಿ ಈ ರೀತಿ ಮಾತನಾಡಿದರೆ ಸಮಸ್ಯೆ ಹೆಚ್ಚಿಸಿದಂತಾಗುವುದಿಲ್ಲವೇ? ಮುಖ್ಯಮಂತ್ರಿಗಳಿಗೆ ಮಂತ್ರಿಗಳ ಬಗ್ಗೆ ಹಿಡಿತ ಇದ್ರೆ ಸರಿಯಾಗಿ ಬುದ್ಧಿ ಹೇಳುವುದು ಒಳ್ಳೆಯದು ಎಂದು ಅವರು ಹೇಳಿದರು.
ಮಂಡ್ಯ ಸಂಸದೆ ಸುಮಲತಾ ಭೇಟಿ ವಿಚಾರವಾಗಿ ಪ್ರತಿಕ್ರಿಯಿಸಿ, ಅವರೇನು ನನಗೆ ಶತ್ರುವೇ? ಅವರು ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ. ನಾವು ಇಗ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ಅದು ಹೊರತು ಪಡಿಸಿ ಬೇರೆ ಏನೂ ಇಲ್ಲ ಎಂದು ಅವರು ತಿಳಿಸಿದರು.
ರಾಮಮಂದಿರ ಉದ್ಘಾಟನೆಗೆ ಹೆಚ್ಡಿ ದೇವೇಗೌಡರು ಹೋಗುವ ವಿಚಾರವಾಗಿ ಮಾಹಿತಿ ನೀಡಿ, ಅವರ ಅರೋಗ್ಯದ ಪರಿಸ್ಥಿತಿ ಮೇಲೆ ತೀರ್ಮಾನ ಮಾಡುತ್ತೇವೆ ಎಂದರು.
ಇದನ್ನೂ ಓದಿ: ಜೆಡಿಎಸ್ ಶಾಸಕರಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ರಿಂದ ಆಮಿಷ: ಹೆಚ್ಡಿ ಕುಮಾರಸ್ವಾಮಿ ಆರೋಪ
ಮರಗಳ್ಳರನ್ನು ಹೆಚ್ಡಿಕೆ ಬೆಂಬಲಿಸುತ್ತಿದ್ದಾರೆ ಎಂಬ ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿಕೆಗೆ ಪ್ರತಿಕ್ರಿಯಿಸಿ, ಮರ ಕಡಿಯುವವರು, ಅಕ್ರಮ ಮಾಡುವವರಿಗೆ ಬೆಂಬಲ ನೀಡಿಲ್ಲ. ಎಫ್ಐಆರ್ನಲ್ಲಿರುವ ಎ1, ಎ2 ಆರೋಪಿಯನ್ನು ಅರೆಸ್ಟ್ ಮಾಡಿಲ್ಲ. ಎಫ್ಐಆರ್ನಲ್ಲೇ ಇಲ್ಲದ ವಿಕ್ರಮ ಸಿಂಹರನ್ನು ಅರೆಸ್ಟ್ ಮಾಡಿದರು. ಈಶ್ವರ ಖಂಡ್ರೆ ಕರೆದ ಸಭೆಯಲ್ಲಿ ಅಧಿಕಾರಿಗಳು ಏನು ಸಲಹೆ ಕೊಟ್ರು? ಅಮಾನತಾದ ಅಧಿಕಾರಿಗಳ ಪರ ಯಾರು ನಿಂತರು ಎಂಬುದು ಗೊತ್ತಿದೆ. ನೀವು ಕ್ರಮ ತೆಗೆದುಕೊಳ್ಳುವುದಾದರೆ ಅಕ್ರಮದ ಬಗ್ಗೆ ಮಾಹಿತಿ ನೀಡುತ್ತೇನೆ. ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಅಕ್ರಮವಾಗಿ ಮರ ಕಡಿದಿದ್ದಾರೆ. ಆ ಅಕ್ರಮದ ಮರ ಯಾವ ಶಾಸಕರ ಮನೆಗೆ ಹೋಗಿದೆ ಗೊತ್ತಿದೆ. ನಾನು ದಾಖಲೆ ಇಲ್ಲದೆ ಮಾತನಾಡುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ