ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಮೊದಲ ಮಾತು, ಪಕ್ಷ ಸಂಘಟಿಸಲು ಪಣ
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಲಾಗಿದೆ. ತಮಗೆ ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟ ನೀಡಿರುವ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ಬೆಂಗಳೂರು ಅ.19: ಇಂದು ನಡೆದ ಸಭೆಯಲ್ಲಿ ಜೆಡಿಎಸ್ನ 19 ಶಾಸಕರ ಪೈಕಿ 18 ಶಾಸಕರು ಭಾಗಿಯಾಗಿದ್ದರು. 18 ಶಾಸಕರ ಮತ್ತು ಪಕ್ಷದ ಪದಾಧಿಕಾರಿಗಳ ಅಭಿಪ್ರಾಯ ಪಡೆದಿದ್ದೇವೆ. ಪಕ್ಷ ಸಂಘಟನೆ ದೃಷ್ಟಿಯಿಂದ ದಸರಾ ನಂತರ ಹಲವಾರು ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಸಭೆಗೆ ಆಗಮಿಸಿ ಸಲಹೆ ನೀಡಿದರು. ಸರ್ವ ಸದಸ್ಯರ ಸಲಹೆ ಆಧರಿಸಿ ರಾಜ್ಯಾಧ್ಯಕ್ಷ ಸ್ಥಾನ ನಿರ್ವಹಿಸುವೆ. ವಿಧಾನಸಭಾ ಚುನಾವಣೆಯಲ್ಲಿ ಸೋಲಿನಿಂದ ಆಘಾತಕ್ಕೊಳಗಿದ್ದೆವು. ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧರಿಸಿದ್ದೇವೆ ಜೆಡಿಎಸ್ನ (JDS) ನೂತನ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ (H. D. Kumaraswamy) ಹೇಳಿದರು.
ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ನೇತೃತ್ವದಲ್ಲಿ ಇಂದು (ಅ.19) ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಲೋಪಗಳ ವಿರುದ್ಧ ಸಮರ್ಥವಾಗಿ ಹೋರಾಟ ಮಾಡುವೆ. ಸದನದ ಒಳಗೆ, ಹೊರಗೆ ಜೆಡಿಎಸ್ ಸಮರ್ಥವಾಗಿ ಹೋರಾಡಲಿದೆ ಎಂದರು.
ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿರುವುದು ಸಂಘಟನೆಗೆ ಸಹಾಯ ಆಗುತ್ತೆ
ಹೆಚ್.ಡಿ.ಕುಮಾರಸ್ವಾಮಿ ರಾಜ್ಯಾಧ್ಯಕ್ಷರಾಗಿರುವುದು ಸಂಘಟನೆಗೆ ಸಹಾಯ ಆಗುತ್ತೆ. ಇದು ಕುಟುಂಬದ್ದಲ್ಲ. ಇವತ್ತು ನಮಗೆ ಅನಿವಾರ್ಯತೆ ಇದೆ. ಅದೃಷ್ಟ ಯಾವಾಗ ಯಾರ ಬಾಗಿಲಿಗೆ ಹೋಗಿ ನಿಲ್ಲುತ್ತೆ ರಾಜಕಾರಣದಲ್ಲಿ ಗೊತ್ತಿಲ್ಲ. ಕಾದು ನೋಡೋಣ. ಕುಟುಂಬ ರಾಜಕಾರಣದ ಬಗ್ಗೆ ಮಾತಾಡೋಕೆ ಕಾಂಗ್ರೆಸ್ಗೆ ಯಾವುದೇ ನೈತಿಕತೆ ಇಲ್ಲ. ನಮ್ಮ ಪಕ್ಷ ಬಹಳ ಸದೃಢವಾಗಿದೆ. ಬಿಜೆಪಿ, ಕಾಂಗ್ರೆಸ್ನಲ್ಲಿ ಅರ್ಧಕ್ಕಿಂತ ಜಾಸ್ತಿ ನಮ್ಮವರೇ ಇದ್ದಾರೆ ಎಂದು ಶಾಸಕ ಬಂಡೆಪ್ಪ ಕಾಶಂಪೂರ್ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Thu, 19 October 23