ಬೆಂಗಳೂರು: ಜೆಡಿಎಸ್ ಬಿಟ್ಟು ಹೋದ ಹಲವರು ಪಕ್ಷದ ಬಗ್ಗೆ ಸದ್ಭಾವನೆ ವ್ಯಕ್ತಪಡಿಸುತ್ತಿದ್ದಾರೆ. ಜೆಡಿಎಸ್ನಿಂದಲೇ (JDS) ನಮಗೆ ಶಕ್ತಿ ಸಿಕ್ಕಿದೆ. ನೀವೇ ನಮಗೆ ಶಕ್ತಿ ಕೊಟ್ಟಿದ್ದೀರಿ ಎಂದು ಹೇಳುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಪಂಚರತ್ನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟಿದ್ದಾರೆ ಎಂದು ಜೆಡಿಎಸ್ ರಾಷ್ಟ್ರೀಯ ಘಟಕದ ಅಧ್ಯಕ್ಷ ಎಚ್.ಡಿ.ದೇವೇಗೌಡ (HD Devegowda) ಹೇಳಿದರು. ಜೆಡಿಎಸ್ನ ಬೆಂಗಳೂರು ಕಚೇರಿಯಲ್ಲಿ ಚಾಮರಾಜಪೇಟೆ ಕ್ಷೇತ್ರದ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಮುಂದಿನ ಹೆಜ್ಜೆ ಇರಿಸುವಾಗ ದೇಶದ ಇತರ ರಾಜ್ಯಗಳಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು. ಎಚ್.ಡಿ.ಕುಮಾರಸ್ವಾಮಿ ಅವರು ಹಲವು ಜಿಲ್ಲೆಗಳಲ್ಲಿ ಸಂಚರಿಸಿದ್ದಾರೆ. ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಚಾಮರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದರಾಜು, ಮಾಜಿ ಉಪಮೇಯರ್ ಶ್ರೀರಾಮೇಗೌಡ, ಬಿಬಿಎಂಪಿ ಮಾಜಿ ಸದಸ್ಯೆ ಗೌರಮ್ಮ, ಮುಖಂಡರಾದ ಶೇಖರ್, ದೊರೆ ಸೇರಿದಂತೆ ಹಲವರು ಜೆಡಿಎಸ್ಗೆ ಸೇರ್ಪಡೆಯಾದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಚಾಮರಾಜಪೇಟೆಯು ಹಿಂದೆ ಯಾವ ಥರ ಇತ್ತು. ದೇವೇಗೌಡರು ಹೇಗೆ ಅದರ ಸುಧಾರಣೆಗೆ ಶ್ರಮಿಸಿದರು ಎಂಬ ಬಗ್ಗೆ ಸಾಕಷ್ಟು ವಿಚಾರಗಳಿವೆ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಮತ್ತೊಮ್ಮೆ ಗೆಲ್ಲಬೇಕಿದೆ. ಹಣ ಹಂಚುವುದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಎಂದು ಗಮನಿಸಬೇಕು. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಚಾಮರಾಜಪೇಟೆ ಜೆಡಿಎಸ್ ಗೆಲ್ಲುವ ಮೊದಲ ಕ್ಷೇತ್ರ ಆಗಲಿದೆ ಎಂದರು.
ಗುಜರಾತ್ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ಯಾವ ತಂತ್ರ ಮಾಡುತ್ತಿದ್ದಾರೆ ಎಂಬುದನ್ನು ಟಿವಿಗಳಲ್ಲಿ ಕಳೆದ ಎರಡು ಮೂರು ದಿನಗಳಿಂದ ತೋರಿಸುತ್ತಲೇ ಇದ್ದಾರೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷ ಇದೆ ಅನ್ನೋದನ್ನೇ ಎಲ್ಲರೂ ಮರೆತಿದ್ದಾರೆ. ಆದರೂ ನನಗೆ ಬೇಸರ ಇಲ್ಲ. ಬಿಜೆಪಿ, ಕಾಂಗ್ರೆಸ್ ಪಕ್ಷಕ್ಕಿಂತ ಜೆಡಿಎಸ್ ಗ್ರಾಫ್ ಮೇಲೆ ಏಳುತ್ತಿದೆ. ಪಂಚರತ್ನ ಕಾರ್ಯಕ್ರಮದ ಮೂಲಕ ಅದು ಗೊತ್ತಾಗಿದೆ. ಬೆಂಗಳೂರಿನಲ್ಲಿ ಜನರಿಗೆ ರಕ್ಷಣೆ ಇಲ್ಲ ಎಂಬುದು ಜನರಿಗೆ ಗೊತ್ತಾಗಿದೆ. ಇಂದು ಬಿಜೆಪಿ, ಕಾಂಗ್ರೆಸ್ ಆಂತರಿಕ ಸಮೀಕ್ಷೆ ನಡೆಸುತ್ತಿವೆ. ಪ್ರತಿ ಎರಡು ತಿಂಗಳಿಗೆ ಒಂದು ಕಾರ್ಯತಂತ್ರ ಮಾಡುತ್ತಿವೆ. ಇವರು ಏನೇ ಮಾಡಿದರೂ ಚಾಮರಾಜಪೇಟೆ ಚುನಾವಣೆಯಲ್ಲಿ ನಾವು ಗೆಲ್ಲುವುದು ಹಾಗೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವುದು ಶತಃ ಸಿದ್ಧ ಎಂದು ಘೋಷಿಸಿದರು.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿ, ಪಂಚರತ್ನ ಯೋಜನೆ ರೂಪಿಸಲು ದೇವೇಗೌಡರ ಮಾರ್ಗದರ್ಶನ ಬಹಳ ಸಹಾಯ ಮಾಡಿತು. ನಾವು ಗುರಿ ಮುಟ್ಟಬೇಕಾದರೆ ಹೋರಾಡಲೇ ಬೇಕು. ಈ ಹಟವನ್ನು ನನಗೆ ದೇವೇಗೌಡರೇ ಕಲಿಸಿದ್ದು. ಶಿಕಾರಿಪುರದ ಮಾಜಿ ಶಾಸಕರು, ಅಥಣಿ ಮಾಜಿ ಶಾಸಕರು ಪಕ್ಷಕ್ಕೆ ಸೇರುತ್ತಿದ್ದಾರೆ. ನಮ್ಮ ಎಲ್ಲ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ನೀಡುತ್ತೇವೆ. ನಾವು ಬೆಳೆಯಬೇಕಾದರೆ ಗೊಬ್ಬರ ಹಾಕಬೇಕು. ಹೆಚ್ಚುವರಿ ಗೊಬ್ಬರ ಬೇಕಾದರೆ ತರಬೇಕಾಗುತ್ತದೆ. ಸೊಸೆ ಬರಬೇಕಾದರೆ ಹೊಸ ಸೊಸೆಯೇ ಬರೋದು. ನಮ್ಮ ಗುರಿ 123 ಮುಟ್ಟಬೇಕು. ವಿಧಾನಸೌಧಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಯಬೇಕು. ದೇವೇಗೌಡರು ಆ ಕಾರ್ಯಕ್ರಮ ನೋಡಬೇಕು. ನಾವು ಅಧಿಕಾರಕ್ಕೆ ಬಂದ ಮೇಲೆ ಕೆಂಪೇಗೌಡ ಪ್ರತಿಮೆಯನ್ನು ವಿಧಾನಸೌಧದಲ್ಲಿ ಸ್ಥಾಪನೆ ಮಾಡುತ್ತೇವೆ ಎಂದು ಘೋಷಿಸಿದರು.
ಇದನ್ನೂ ಓದಿ: ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರಿದ ಮಳೆ; ಬಿಜೆಪಿ, ಜೆಡಿಎಸ್ ಕಾರ್ಯಕ್ರಮಗಳು ಮೂಂದೂಡಿಕೆ
ಕರ್ನಾಟಕ ರಾಜಕಾರಣದ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:53 pm, Sun, 11 December 22