ವರುಣಾ ಅಖಾಡದಲ್ಲಿ ಬಿ.ವೈ ವಿಜಯೇಂದ್ರ ಸಂಚಲನ, ಮುಂದಿನ ಮುಖ್ಯಮಂತ್ರಿ ಎಂದು ಕೂಗಿದ ಅಭಿಮಾನಿಗಳು
ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.
ಮೈಸೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ (BS Yadiyurappa) ಅವರ ಉತ್ತರಾಧಿಕಾರಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ (B. Y. Vijayendra) ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವರುಣಾ (Varuna) ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ ಟಿಕೆಟ್ ಕೈ ತಪ್ಪಿತ್ತು. ಈಗ ಬರುವ ವಿಧಾನಸಭಾ ಚುನಾವಣೆಯಲ್ಲಿ ತಂದೆ ಯಡಿಯೂರಪ್ಪ, ಮಗ ಬಿ ವೈ ವಿಜಯೇಂದ್ರರಿಗೆ ತಮ್ಮ ಶಿಕಾರಿಪುರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದಾರೆ. ಇದಾದ ನಂತರ ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ಆಸೆಗೆ ವಿಜಯೇಂದ್ರ ಯಳ್ಳುನೀರು ಬಿಟ್ಟಿದ್ದರು. ಆದರೆ ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಸ್ಪರ್ಧಿಸುವಂತೆ ಕಾರ್ಯಕರ್ತರು ದುಂಬಾಲು ಬಿದ್ದಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯವರೊಂದಿಗೆ ಮಾತನಾಡಿದ ಅವರು ಪಕ್ಷ ಯಾವುದೇ ಸವಾಲು ಕೊಟ್ಟರು ನಾನು ನಿಭಾಯಿಸುತ್ತೇನೆ. ವರುಣಾ ಮಾತ್ರವಲ್ಲ ಎಲ್ಲಾ ಕ್ಷೇತ್ರಗಳಲ್ಲೂ ಸಂಘಟನೆ ಮಾಡಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಂಘಟನೆ ಮಾಡುತ್ತಿದ್ದೇನೆ. ನರೇಂದ್ರ ಮೋದಿ ಎಂಬುದು ಬರೀ ಅಲೆ ಅಲ್ಲ, ಅದೊಂದು ಸುನಾಮಿ. ಕಾಂಗ್ರೆಸ್ನವರಿಗೆ ಇದು ಅರ್ಥವಾಗಿಲ್ಲ, ಕಾಂಗ್ರೆಸ್ ಭ್ರಮೆಯಲ್ಲಿದೆ ಎಂದು ವ್ಯಂಗ್ಯವಾಡಿದರು.
ಗುಜರಾತ್ ಫಲಿತಾಂಶ ಕರ್ನಾಟಕದ ಮೇಲೆ ಪರಿಣಾಮ ಬೀರಲ್ಲ ಅಂತಿದ್ದಾರೆ. ಇದರ ಉತ್ತರ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ಗೆ ಸಿಗಲಿದೆ ಎಂದರು.
ಬಿ.ವೈ ವಿಜಯೇಂದ್ರಗೆ ಮೈಸೂರಿನಲ್ಲಿ ಭರ್ಜರಿ ಸ್ವಾಗತ ದೊರೆತಿದೆ. ಅಭಿಮಾನಿಗಳು ಪಟಾಕಿ ಸಿಡಿಸಿ, ರಾಜಾ ಹುಲಿಗೆ ಜೈ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ವಿಜಯೇಂದ್ರ ಎಂದು ಘೋಷಣೆ ಕೂಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ